ADVERTISEMENT

Aero India 2021: ಭಾರತಕ್ಕೆ ಮತ್ತೆ ಬಂದ ಅಮೆರಿಕ ವಾಯುಪಡೆಯ ಬಾಂಬರ್‌!

ಅಭಿಲಾಷ್ ಪಿ.ಎಸ್‌.
Published 6 ಫೆಬ್ರುವರಿ 2021, 19:30 IST
Last Updated 6 ಫೆಬ್ರುವರಿ 2021, 19:30 IST
ಏರೋ ಇಂಡಿಯಾದಲ್ಲಿ ತೇಜಸ್‌ ಹಾಗೂ ಬಿ–1ಬಿ ಲ್ಯಾನ್ಸರ್‌ ‘ಫ್ಲೈ ಬೈ’
ಏರೋ ಇಂಡಿಯಾದಲ್ಲಿ ತೇಜಸ್‌ ಹಾಗೂ ಬಿ–1ಬಿ ಲ್ಯಾನ್ಸರ್‌ ‘ಫ್ಲೈ ಬೈ’   

ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಅಮೆರಿಕದ ವಾಯುಪಡೆಯ ಬಾಂಬರ್‌ ವಿಮಾನ 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿತ್ತು. ಬೆಂಗಳೂರಿನಲ್ಲಿ ನಡೆದ ಏರ್‌ ಶೋದಲ್ಲಿ ತೇಜಸ್‌ ಜತೆ ಫ್ಲೈ–ಬೈ ನಡೆಸುವ ಮೂಲಕ ಗಮನವನ್ನೂ ಸೆಳೆಯಿತು. ಈ ಬಾಂಬರ್‌ ವಿಮಾನವನ್ನು ಹಾರಿಸಿದ ಲೆ. ಕರ್ನಲ್‌ ಮೈಕೆಲ್‌ ಫೆಸ್ಲರ್‌ ಜತೆ ಹೀಗೊಂದು ಮಾತುಕತೆ...

ಸುಮಾರು ಏಳು ದಶಕಗಳ ಬಳಿಕ ಅಮೆರಿಕ ವಾಯುಪಡೆಯ ಬಾಂಬರ್‌ ವಿಮಾನವೊಂದು ಭಾರತದಲ್ಲಿ ಭೂಸ್ಪರ್ಶ ಮಾಡಿದೆ. ಇದೇ ಮೊದಲ ಬಾರಿಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸ್ವದೇಶಿ ಯುದ್ಧ ವಿಮಾನ ತೇಜಸ್‌ ಜೊತೆಗೂಡಿ ‘ಫ್ಲೈಬೈ’ ಮಾಡಿದ ಅಮೆರಿಕದ ಬಿ–1ಬಿ ಲ್ಯಾನ್ಸರ್‌ ಹಲವರ ಹುಬ್ಬೇರಿಸಿದೆ. ‘ಓಲ್ಡ್‌ ಈಸ್‌ ಗೋಲ್ಡ್‌’ ಎಂಬಂತೆ ಅಮೆರಿಕದ ವಾಯುಪಡೆಯಲ್ಲಿ 1980ರಿಂದ ಸೇವೆಯಲ್ಲಿರುವ ಈ ಬಾಂಬರ್‌ ಇಂದಿಗೂ ಶತ್ರು ರಾಷ್ಟ್ರಗಳ ಎದೆಯಲ್ಲಿ ಭಯ ಹುಟ್ಟಿಸುವ ಸಾಮರ್ಥ್ಯ ಹೊಂದಿದೆ.

146 ಅಡಿ ಉದ್ದ, 34 ಅಡಿ ಎತ್ತರವಿರುವ ಈ ಬೃಹತ್‌ ಸೂಪರ್‌ಸಾನಿಕ್‌ ಬಾಂಬರ್‌, ಬೇರೆ ಯಾವುದೇ ಯುದ್ಧ ವಿಮಾನ ಮತ್ತು ಬಾಂಬರ್‌ಗಳಲ್ಲಿ ಇಲ್ಲದ ವಿಶೇಷ ರೆಕ್ಕೆಯನ್ನು(ವೇರಿಯೇಬರ್‌‌‌ ಜಿಯೊಮೆಟ್ರಿ ವಿಂಗ್‌) ಹೊಂದಿದೆ. ಅಗತ್ಯಕ್ಕೆ ತಕ್ಕಂತೆ ಶತ್ರು ರಾಷ್ಟ್ರಗಳ ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ಅತಿ ವೇಗದಲ್ಲಿ ಹಾರಾಡಲು ಈ ರೆಕ್ಕೆಗಳು ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ವಿಮಾನವನ್ನು ಏರೋ ಇಂಡಿಯಾದಲ್ಲಿ ಏರೋ ಇಂಡಿಯಾದಲ್ಲಿ ಈ ವಿಮಾನದ ಹಾರಾಟ ನಡೆಸಿದ 34ನೇ ಎಕ್ಸ್‌ಪಿಡಿಷನರಿ ಬಾಂಬ್‌ ಸ್ಕ್ವಾಡ್ರನ್‌ ಕಮಾಂಡರ್‌ ಲೆ.ಕರ್ನಲ್‌ ಮೈಕಲ್‌ ಫೆಸ್ಲರ್‌ ‘ಭಾನುವಾರದ ಪುರವಣಿ’ ಜತೆ ಮಾತಿಗೆ ಸಿಕ್ಕರು.

ADVERTISEMENT

ತೇಜಸ್‌ ಜೊತೆಗಿನ ಹಾರಾಟ ಅನುಭವ ಹೇಗಿತ್ತು?
ನಾನು ಕಳೆದ 20 ವರ್ಷಗಳಿಂದ ಅಮೆರಿಕದ ವಾಯುಪಡೆಯಲ್ಲಿದ್ದು, 17 ವರ್ಷಗಳಿಂದ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬಾಂಬರ್‌ನಲ್ಲೇ 3,500 ಗಂಟೆಗಳಿಗೂ ಅಧಿಕ ಕಾಲ ಹಾರಾಟ ನಡೆಸಿದ ಅನುಭವ ನನಗಿದೆ. ವಿಶ್ವದ ಹಲವು ರಾಷ್ಟ್ರಗಳ ವಾಯುಪಡೆಯ ಜೊತೆ ನಾನು ಕಾರ್ಯನಿರ್ವಹಿಸಿದ್ದೇನೆ. ಆದರೆ, ಏರೋ ಇಂಡಿಯಾದಲ್ಲಿ ತೇಜಸ್‌ ಜೊತೆ ಹಾರಾಟ ನಡೆಸಿದ್ದು ವಿಶೇಷ ಅನುಭವ. ಇದೇ ಮೊದಲ ಬಾರಿಗೆ ನಾನು ಭಾರತೀಯ ವಾಯುಪಡೆಯ ಜೊತೆ ಕಾರ್ಯನಿರ್ವಹಿಸಿದ್ದೇನೆ. ತೇಜಸ್‌ ಯುದ್ಧ ವಿಮಾನದ ಪೈಲಟ್‌ಗಳ ಸಾಮರ್ಥ್ಯವನ್ನು ನಾನು ಮೆಚ್ಚಿದ್ದೇನೆ. ಅವರ ನಾಯಕತ್ವ, ಕೌಶಲ ಅಚ್ಚರಿಗೊಳಿಸಿದೆ. ನಾನು ತೇಜಸ್‌ ಪೈಲಟ್‌ಗಳ ಜೊತೆ ಮುಖಾಮುಖಿಯಾಗಿಲ್ಲ. ಆದರೆ ಆಗಸದಲ್ಲಿ ನಾವು ಕೇವಲ 25 ಅಡಿ ದೂರವಿದ್ದೆವು. ಈ ಹಿಂದೆ ವಿಮಾನವ್ಯೂಹದಲ್ಲಿ ನಾವು ಹಾರಾಟ ನಡೆಸಿರಲಿಲ್ಲ. ಇದನ್ನು ರಚಿಸಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ನಮ್ಮ ನಡುವೆ ಕೇವಲ ಒಂದು ಯುದ್ಧ ವಿಮಾನದ ಅಂತರವಷ್ಟೇ ಇತ್ತು. ಜೊತೆಗೆ ವಾಯುನೆಲೆ ಪ್ರದೇಶದಲ್ಲಿ ಬೆಳಕಿನ ಪ್ರಮಾಣವೂ ಕಡಿಮೆ ಇತ್ತು. ಹೀಗಿದ್ದರೂ, ಸುರಕ್ಷಿತವಾಗಿ, ಜನರಿಗೆ ಮನರಂಜನೆ ನೀಡುವಂತೆ ಪ್ರದರ್ಶನ ನೀಡಿದೆವು.

ಬಿ–1ಬಿ ಲ್ಯಾನ್ಸರ್‌ ಭಾರತಕ್ಕೆ ತಂದಿದ್ದರ ಹಿಂದಿನ ಉದ್ದೇಶ?
ನನಗಿರುವ ಮಾಹಿತಿಯಂತೆ 1945ರ ಅಕ್ಟೋಬರ್‌ನಲ್ಲಿ ಅಮೆರಿಕದ ಬಾಂಬರ್‌ ವಿಮಾನ ಭಾರತದಲ್ಲಿ ಭೂಸ್ಪರ್ಶ ಮಾಡಿತ್ತು. ಇದಾದ ನಂತರ ಇದೇ ಮೊದಲ ಬಾರಿಗೆ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಭೇಟಿಯ ಮುಖ್ಯ ಉದ್ದೇಶ ಭಾರತೀಯ ವಾಯುಪಡೆಯೊಂದಿಗೆ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವುದು. ಜೊತೆಗೆ ಇಂಡೊ–ಪೆಸಿಫಿಕ್‌ ಭಾಗದಲ್ಲಿನ ನಮ್ಮ ಪಾಲುದಾರಿಕೆಗೆ ಅಮೆರಿಕದ ಬದ್ಧತೆಯನ್ನು ಪ್ರದರ್ಶಿಸುವುದಕ್ಕೆ ಬಿ–1ಬಿ ಲ್ಯಾನ್ಸರ್‌ ತಂದಿದ್ದೇವೆ.

ಬಿ–1ಬಿ ವಿಶೇಷತೆ ಹಾಗೂ ಸಾಮರ್ಥ್ಯವೇನು?
ಅಮೆರಿಕ ವಾಯುಪಡೆಯ ಬಾಂಬರ್‌ ವಿಮಾನಗಳ ಪೈಕಿ ಬೆನ್ನೆಲುಬಾಗಿರುವ ಬಿ–1 ಲ್ಯಾನ್ಸರ್‌, 30 ಸಾವಿರ ಅಡಿ ಎತ್ತರದಲ್ಲಿ ಗಂಟೆಗೆ 1,480 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಇದೊಂದು ಬೃಹತ್‌ ವಿಮಾನ. ಆದರೂ, ಇದು ಶತ್ರು ರಾಷ್ಟ್ರಗಳ ಕಣ್ಣಿಗೆ ಕಾಣಿಸದ ವಿಮಾನ. ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ವೇರಿಯೇಬರ್‌ ಜಿಯೊಮೆಟ್ರಿ ವಿಂಗ್‌ ಇದರಲ್ಲಿದ್ದು, ವಿಮಾನದ ವೇಗವನ್ನು ನಿಯಂತ್ರಿಸುವ ರೆಕ್ಕೆಗಳನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಕೊಂಡೊಯ್ಯಬಹುದಾದ ವ್ಯವಸ್ಥೆ ಇದರಲ್ಲಿದೆ. ಇಂತಹ ವಿನ್ಯಾಸವಿರುವ ಕೊನೆಯ ಬಾಂಬರ್‌ ಇದಾಗಿದೆ. ಒಂದು ದಿನದೊಳಗೆ ಜಗತ್ತನ್ನೇ ಸುತ್ತುವ ಸಾಮರ್ಥ್ಯ ಇದಕ್ಕಿದ್ದು, ಇದನ್ನು ಪ್ರದರ್ಶಿಸಲೆಂದೇ ಏರೋ ಇಂಡಿಯಾಗೆ ತಂದಿದ್ದೇವೆ. ಪ್ರಸ್ತುತ,ಇಂತಹ ವಿಮಾನದ ನಿರ್ಮಾಣ ಸ್ಥಗಿತವಾಗಿದೆ. ದಕ್ಷಿಣ ಡಕೋಟಾದಿಂದ ಬೆಂಗಳೂರಿನವರೆಗೆ 26 ಗಂಟೆಯಲ್ಲಿ ನಾವು ಆಗಮಿಸಿದ್ದು, ನಾಲ್ಕು ಬಾರಿ ಹಾರಾಟದ ಸಂದರ್ಭದಲ್ಲೇ ವಿಮಾನಕ್ಕೆ ಇಂಧನ ಭರ್ತಿ ಮಾಡಲಾಗಿತ್ತು.

ಲೆ.ಕರ್ನಲ್‌ ಮೈಕಲ್‌ ಫೆಸ್ಲರ್‌

ಏರೋ ಇಂಡಿಯಾದ ಅನುಭವ?
ಭಾರತೀಯ ವಾಯುಪಡೆ(ಐಎಎಫ್‌) ಜೊತೆಗೆ ನಮ್ಮ ವೈಯಕ್ತಿಕ ಸಂಬಂಧವನ್ನು ವೃದ್ಧಿಸುವುದು ಭಾರತದ ಭೇಟಿ ಹಿಂದಿನ ಉದ್ದೇಶವಾಗಿತ್ತು. ಈ ಅವಕಾಶ ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದ. ಬೆಂಗಳೂರಿಗೆ ಇಲ್ಲಿನ ಜನರು ನಮ್ಮನ್ನು ಅಭೂತಪೂರ್ವವಾಗಿ ಸ್ವಾಗತಿಸಿದರು. ಇಲ್ಲಿನ ಆಹಾರ ನನಗೆ ಬಹಳ ಇಷ್ಟವಾಯಿತು. ಭಾರತಕ್ಕೆ ಭೇಟಿ ನೀಡುವುದು ಚಿನ್ನದ ಗಣಿಗೆ ಭೇಟಿ ನೀಡಿದಂತೆ. ಐಎಎಫ್‌ ಜೊತೆಗಿನ ಸಂಬಂಧದ ಮೊದಲ ಹೆಜ್ಜೆ ಇದಾಗಿದೆ. ಇದನ್ನು ವೃದ್ಧಿಸಲು ಮತ್ತಷ್ಟು ಅವಕಾಶ ದೊರೆತರೆ ನನಗಿಂತ ಖುಷಿ ಪಡುವವರು ಬೇರೆ ಯಾರೂ ಇಲ್ಲ.

ಬಿ–1ಬಿ ಇತಿಹಾಸ
ಬಾಂಬರ್‌–52 ಯುದ್ಧ ವಿಮಾನಕ್ಕೆ ಪರ್ಯಾಯವಾಗಿ ಬಿ–1ಎ ಬಾಂಬರ್‌ ಅನ್ನು 1970ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. 1975ರ ಸುಮಾರಿಗೆ ಪ್ರತಿ ಗಂಟೆಗೆ 2,778 ಕಿ.ಮೀ. ಕ್ರಮಿಸುವ ಸಾಮರ್ಥ್ಯವಿರುವ ನಾಲ್ಕು ಪ್ರಯೋಗ ಮಾದರಿ ವಿಮಾನಗಳನ್ನು ತಯಾರಿಸಲಾಗಿತ್ತು. ಆದರೆ ಈ ಯೋಜನೆಯು 1977ಕ್ಕೆ ರದ್ದುಗೊಂಡಿತು. ಆದರೆ ವಿಮಾನದ ಪರೀಕ್ಷೆಯು ಮುಂದುವರಿದಿತ್ತು. ಬಿ–1ಎಗಿಂತಲೂ ಅತ್ಯಾಧುನಿಕವಾದ ಬಿ–1ಬಿಯ ತಯಾರಿಕೆ ಆರಂಭವಾಗಿತ್ತು. 1985ರಲ್ಲಿ ಅಮೆರಿಕದ ವಾಯುಪಡೆಗೆ ಮೊದಲ ಬಿ–1ಬಿ ಸೇರ್ಪಡೆಗೊಂಡಿತು. 2007ರವರೆಗೆ ಅಣುಬಾಂಬ್‌ ಅಳವಡಿಕೆಯಾಗಿರುವ ವಿಶ್ವದ ಏಕೈಕ ಬಾಂಬರ್‌ ಎನ್ನುವ ಖ್ಯಾತಿಯನ್ನು ಈ ಯುದ್ಧ ವಿಮಾನ ಪಡೆದಿತ್ತು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿ–1ಬಿ ಸಿಬ್ಬಂದಿ

ಬಿ–1ಬಿ ಲ್ಯಾನ್ಸರ್‌ ವೈಶಿಷ್ಟ್ಯಗಳು

* ‘ದಿ ಬೋನ್‌’ ಎಂದೇ ಖ್ಯಾತವಾಗಿರುವ ಬಿ–1 ಲ್ಯಾನ್ಸರ್‌

*1,20,326 ಕೆ.ಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ

*86,183 ಕೆ.ಜಿ: ಬಾಂಬರ್‌ ತೂಕ

*ನಾಲ್ಕು ಜನರಲ್‌ ಎಲೆಕ್ಟ್ರಿಕ್‌ ಟರ್ಬೊಫ್ಯಾನ್‌ ಎಂಜಿನ್‌

*ವೇಗ, ಶಸ್ತ್ರ ಸಂಗ್ರಹ ಸಾಗಣೆ ಸಾಮರ್ಥ್ಯ, ಕ್ರಮಿಸುವ ದೂರದ ವಿಷಯದಲ್ಲಿ 50ರಷ್ಟು ವಿಶ್ವ ದಾಖಲೆಗಳನ್ನು ಹೊಂದಿದೆ

*ಪ್ರತಿ ಬಿ–1ಬಿ ವೆಚ್ಚ: ₹2,311 ಕೋಟಿ

*ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಬಿ–1ಬಿ: 62

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.