ADVERTISEMENT

'ಸಿಂಪ್ಯೂಟರ್‌' ಈಗ ನೆನಪು; ಬಿಇಎಲ್‌ನಿಂದ ಹೊಸ ಟ್ಯಾಬ್ಲೆಟ್‌ ಅನಾವರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 6:50 IST
Last Updated 10 ಫೆಬ್ರುವರಿ 2020, 6:50 IST
ಬಿಇಎಲ್‌ ತಯಾರಿಸಿರುವ ಹೊಸ ಟ್ಯಾಬ್ಲೆಟ್‌
ಬಿಇಎಲ್‌ ತಯಾರಿಸಿರುವ ಹೊಸ ಟ್ಯಾಬ್ಲೆಟ್‌   
""

ಬೆಂಗಳೂರು: ಬಡವರ ಕೈಗಳಿಗೂ ತಲುಪಬಹುದಾದ ಭಾರತದ ಸರಳ ಕಂಪ್ಯೂಟರ್‌ ಎಂದೇ ಸುಮಾರು 18 ವರ್ಷಗಳ ಹಿಂದೆ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿತ್ತು 'ಸಿಂಪ್ಯೂಟರ್‌'. ಇದೀಗ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಅದರ ಮುಂದುವರಿದ ಭಾಗವಾಗಿ ಹೊಸ 'ಟ್ಯಾಬ್ಲೆಟ್' ಅನಾವರಣಗೊಳಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ರೂಪಿಸಿದ್ದ 'ಕೈಗಣಕ' ಜನಸಾಮಾನ್ಯರನ್ನು ತಲುಪುವ ಅಗತ್ಯ ಉತ್ತೇಜನ ಸಿಗದೆ ಅಭಿವೃದ್ಧಿ ಕಾಣಲಿಲ್ಲ. ಇಂದಿನ ಸ್ಮಾರ್ಟ್‌ಫೋನ್‌ಗಳ ಮೂಲಕ ನಿರ್ವಹಿಸುವ ಬಹುತೇಕ ಕಾರ್ಯಗಳನ್ನು ಆಗಿನ ಪುಟ್ಟ ಸಿಂಪ್ಯೂಟರ್‌ ಸಾಧ್ಯವಾಗಿಸಿತ್ತು. ಬಿಇಎಲ್‌ ಮತ್ತು ಐಐಎಸ್‌ಸಿ ಎಂಜಿನಿಯರ್‌ಗಳ ಶ್ರಮದಿಂದ ₹ 10,000ಕ್ಕೆ ಸಿಂಪ್ಯೂಟರ್‌ ಸಿದ್ಧಪಡಿಸಲಾಗಿತ್ತು.

ರಾಜ್ಯ ಸರ್ಕಾರದ 'ಭೂಮಿ' ಯೋಜನೆಗಾಗಿ ಗ್ರಾಮೀಣ ಭಾಗದಲ್ಲಿ ಮಾಹಿತಿ ಸಂಗ್ರಹಿಸಲು ನೆರವಾಗುವ ನಿಟ್ಟಿನಲ್ಲಿ ಸುಮಾರು 200 ಸಿಂಪ್ಯೂಟರ್‌ಗಳನ್ನು ತಯಾರಿಸಿ ಕೊಡಲಾಗಿತ್ತು. ಕೆಲವು ಸಾವಿರದ್ದು ಸಿಂಪ್ಯೂಟರ್‌ಗಳನ್ನಷ್ಟೇ ಮಾರಾಟ ಮಾಡಲಾಯಿತು. ಭಾರತೀಯ ರಕ್ಷಣಾ ಪಡೆಗೆ ಎಲೆಕ್ಟ್ರಾನಿಕ್ಸ್‌ ಸಹಕಾರ ನೀಡುತ್ತಿರುವ ಬಿಇಎಲ್‌ ಲಖನೌದಲ್ಲಿ ನಡೆದ 'ಡಿಫೆನ್ಸ್‌ಎಕ್ಸ್‌ಪೊ 2020' ಹೊಸ ಟ್ಯಾಬ್ಲೆಟ್‌ ಪ್ರದರ್ಶಿಸಿತು.

ADVERTISEMENT
ಸಿಂಪ್ಯೂಟರ್‌

ಹೊಸ ಟ್ಯಾಬ್ಲೆಟ್‌ ಹೇಗಿದೆ?

ಬಿಇಎಲ್‌ ಮಾಹಿತಿ ಪ್ರಕಾರ, 10.1 ಇಂಚು ಟ್ಯಾಬ್ಲೆಟ್‌; ಕ್ವಾಡ್‌–ಕೋರ್‌ ಎಆರ್‌ಎಂ ಕಾರ್ಟೆಕ್ಸ್‌ ಎ9 1.2 ಗಿಗಾ ಹರ್ಟ್ಸ್‌ ಪ್ರೊಸೆಸರ್‌ ಒಳಗೊಂಡಿದೆ. 850 ಗ್ರಾಂ ತೂಕದ ಟ್ಯಾಬ್ಲೆಟ್‌ಗೆ ಇನ್ನೂ ನಾಮಕರಣ ಆಗಿಲ್ಲ. ಗ್ರಾಫಿಕ್ಸ್‌ ಅಪ್ಲಿಕೇಷನ್‌ಗಳಿಗಾಗಿಯೇ ಕ್ವಾಡ್‌ ಕೋರ್‌ ಮಾಲಿ 450 ಗ್ರಾಫಿಕ್ಸ್‌ ಪ್ರೊಸೆಸರ್‌ ಅಳವಡಿಸಲಾಗಿದೆ. ಇದು ಫುಲ್‌ ಎಚ್‌ಡಿ ಅನುಭವ ನೀಡುತ್ತದೆ. ಉಪಕರಣದ ಹೆಚ್ಚುವರಿ ಸುರಕ್ಷತೆಗಾಗಿ ಕ್ರಿಪ್ಟೊ ಪ್ರೊಸೆಸರ್‌ ತಂತ್ರಜ್ಞಾನವಿದೆ. ಬಿಇಎಲ್‌ ರೂಪಿಸಿರುವ ಸಿಸ್ಟಮ್‌ ಆನ್‌ ಚಿಪ್‌ (SoC) ಈ ಟ್ಯಾಬ್ಲೆಟ್‌ನ ಮತ್ತೊಂದು ವಿಶೇಷ.

2002ರಲ್ಲಿ ತಯಾರಿಸಿದ್ದ ಸಿಂಪ್ಯೂಟರ್‌, ಪ್ರಮುಖವಾಗಿ ಕೃಷಿ ವಲಯದ ಚಟುವಟಿಕೆಗಳಿಗೆ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿತ್ತು. ಹೊಸ ಟ್ಯಾಬ್ಲೆಟ್‌, ಪ್ರಮುಖವಾಗಿ ಮಿಲಿಟರಿ ಬಳಕೆಗಾಗಿ ಸಿದ್ಧಪಡಿಸಲಾಗಿದೆ ಎಂದು ಬಿಇಎಲ್‌ನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮಹೇಶ್‌ ವಿ, ತಿಳಿಸಿದ್ದಾರೆ. ರಕ್ಷಣಾ ವಲಯಕ್ಕೆ ಹೊರತಾದ ಆಯ್ಕೆಗಳನ್ನು ಟ್ಯಾಬ್ಲೆಟ್‌ ಒಳಗೊಂಡಿದೆ.

ಹಳೆಯ ಆ್ಯಂಡ್ರಾಯ್ಡ್‌ ಮಾರ್ಶ್‌ಮಲೋ ಆಪರೇಟಿಂಗ್‌ ಸಿಸ್ಟಮ್‌ನ್ನು (ಆರನೇ ಆವೃತ್ತಿ) ಟ್ಯಾಬ್ಲೆಟ್‌ ಹೊಂದಿದೆ. ಟ್ಯಾಬ್ಲೆಟ್‌ ಅಭಿವೃದ್ಧಿಯಲ್ಲಿ ವಿಪ್ರೊ ಮತ್ತು ಬೆಂಗಳೂರು ಮೂಲದಮತ್ತೊಂದು ಸಂಸ್ಥೆಯ ಸಹಕಾರವನ್ನು ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಇಎಲ್‌ನ ಸಿಸ್ಟಮ್‌ ಆನ್‌ ಚಿಪ್‌ ತಯಾರಿಕೆಯು ತೈವಾನ್‌ ಸೆಮಿಕಂಡಕ್ಟರ್‌ ತಯಾರಿಕಾ ಘಟಕದಲ್ಲಿ ನಡೆಸಲಾಗಿದೆ. ಇದರಲ್ಲಿ 40 ನ್ಯಾನೊ ಮೀಟರ್‌ ಎಲ್‌ಪಿ ಪ್ರೊಸೆಸರ್‌ ತಂತ್ರಜ್ಞಾನ ಬಳಕೆಯಾಗಿದೆ. ಅಭಿವೃದ್ಧಿ ಪಡಿಸಿರುವ ಚಿಪ್‌ಗಳನ್ನು ಸುರಕ್ಷಿತ ಫೋನ್‌ಗಳು, ವಿದ್ಯುನ್ಮಾನ ಮತ ಯಂತ್ರಗಳು, ರೇಡಿಯೊ ಮತ್ತು ಥರ್ಮಲ್‌ ಕ್ಯಾಮೆರಾಗಳಲ್ಲಿ ಬಳಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.