ADVERTISEMENT

ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ 'ಟೆಕ್‌ ಹಬ್'‌ ಬೆಂಗಳೂರು!

ಲಂಡನ್‌ನ ಹೊಸ ಸಂಶೋಧನಾ ವರದಿಯಲ್ಲಿ ಉಲ್ಲೇಖ

ಪಿಟಿಐ
Published 14 ಜನವರಿ 2021, 18:59 IST
Last Updated 14 ಜನವರಿ 2021, 18:59 IST
ಪ್ರಾತಿನಿಧಿಕ ಚಿತ್ರ (ಪಿಟಿಐ)
ಪ್ರಾತಿನಿಧಿಕ ಚಿತ್ರ (ಪಿಟಿಐ)   

ಲಂಡನ್‌: ಐ.ಟಿ. (ಮಾಹಿತಿ ತಂತ್ರಜ್ಞಾನ) ನಗರಿ ಎಂಬ ಹಿರಿಮೆ ಹೊಂದಿರುವ ಬೆಂಗಳೂರು ಇನ್ನೊಂದು ಗರಿಮೆಗೂ ಪಾತ್ರವಾಗಿದೆ. 2016ರಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಅತ್ಯಂತ ಪಕ್ವವಾದ ತಂತ್ರಜ್ಞಾನ (ಟೆಕ್‌) ನಗರ ಎಂಬ ಹೆಗ್ಗಳಿಕೆಯೂ ಬೆಂಗಳೂರಿಗೆ ಸಿಕ್ಕಿದೆ.

ನಂತರದ ಸ್ಥಾನಗಳಲ್ಲಿ ಯುರೋಪ್‌ನ ನಗರಗಳಾದ ಲಂಡನ್‌, ಮ್ಯೂನಿಕ್‌, ಬರ್ಲಿನ್‌ ಮತ್ತು ಪ್ಯಾರಿಸ್‌ ಇವೆ. ಭಾರತದ ವಾಣಿಜ್ಯ ನಗರಿ ಮುಂಬೈ,ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಲಂಡನ್‌ ಎಂಡ್‌ ಪಾರ್ಟ್‌ನರ್ಸ್‌ –ದಿ ಮೇಯರ್‌ ಆಫ್‌ ಲಂಡನ್ಸ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಎಂಡ್‌‌ ಇನ್‌ವೆಸ್ಟ್‌ಮೆಂಟ್‌ ಸಂಸ್ಥೆಯು ಡೀಲ್‌ರೂಮ್‌ ಡಾಟ್‌ಕಾಂ ಸಂಸ್ಥೆಯು ಒದಗಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿ ಈ ವರದಿ ತಯಾರಿಸಿದೆ. ಬೆಂಗಳೂರಿನಲ್ಲಿನ ಹೂಡಿಕೆಯು 2016ರಿಂದ 2020ರ ನಡುವೆ 5.4 ಪಟ್ಟು ಹೆಚ್ಚಾಗಿದೆ. 130 ಕೋಟಿ ಡಾಲರ್‌ನಿಂದ (ಸುಮಾರು ₹ 9,490 ಕೋಟಿ) 720 ಕೋಟಿ ಡಾಲರ್‌ಗೆ (ಸುಮಾರು ₹52,560 ಕೋಟಿ)ಜಿಗಿದಿದೆ. ಆರನೇಸ್ಥಾನದಲ್ಲಿರುವ ಮುಂಬೈನ ಹೂಡಿಕೆಯುಈ ಅವಧಿಯಲ್ಲಿ 1.7 ಪಟ್ಟು ಹೆಚ್ಚಳವಾಗಿದೆ. 2016ರಲ್ಲಿ ಈ ನಗರದಲ್ಲಿನ ಹೂಡಿಕೆಯು 70 ಕೋಟಿ ಡಾಲರ್‌ ಇತ್ತು. 2020ರಲ್ಲಿ ಅದು 120 ಕೋಟಿ ಡಾಲರ್‌ಗೆ ತಲುಪಿದೆ.

ADVERTISEMENT

ಎರಡನೇ ಸ್ಥಾನದಲ್ಲಿರುವ ಲಂಡನ್‌ ನಗರದಲ್ಲಿನ ಹೂಡಿಕೆಯು ಈ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ.

‘ಬೆಂಗಳೂರು ಮತ್ತು ಲಂಡನ್‌ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿರುವುದು ಬಹಳ ಸಂತಸದ ವಿಚಾರ. ನಮ್ಮ ಈ ಎರಡು ಅದ್ಭುತ ನಗರಗಳು ಉದ್ಯಮಶೀಲತೆ ಹಾಗೂ ನಾವೀನ್ಯತೆಯಲ್ಲಿ ಪರಸ್ಪರ ಪೂರಕವಾಗಿವೆ. ಎರಡೂ ನಗರಗಳು ತಂತ್ರಜ್ಞಾನ ಕ್ಷೇತ್ರದ ಹೂಡಿಕೆ ಮತ್ತು ವ್ಯಾಪಾರಕ್ಕೆ ಅಪಾರ ಅವಕಾಶಗಳನ್ನು ಒದಗಿಸುತ್ತಿವೆ’ ಎಂದು ಲಂಡನ್‌ ಎಂಡ್‌ ಪಾರ್ಟ್‌ನರ್ಸ್‌ನ ಭಾರತದ ಪ್ರತಿನಿಧಿ ಹೆಮಿನ್‌ ಭರೂಚ ಹೇಳಿದ್ದಾರೆ.

‘ಬೆಂಗಳೂರು ಸೇರಿದಂತೆ ಭಾರತದ ನಗರಗಳ ಜತೆಗೆ ಲಂಡನ್‌ ಉತ್ತಮವಾದ ವ್ಯಾಪಾರ ಮತ್ತು ಹೂಡಿಕೆ ನಂಟನ್ನು ಹೊಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಸಹಭಾಗಿತ್ವಕ್ಕೆ ಭಾರತ ಮತ್ತು ಬ್ರಿಟನ್‌ಗೆ ಅವಕಾಶ ಇದೆ. ಕೋವಿಡ್‌ ಪಿಡುಗಿನ ನಡುವೆಯೂ ಈ ಎರಡೂ ದೇಶಗಳು ಮುನ್ನಡೆಯನ್ನು ಕಾಯ್ದುಕೊಂಡಿವೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೆಂಚರ್‌ ಕ್ಯಾಪಿಟಲಿಸ್ಟ್‌ ಹೂಡಿಕೆ: 6ನೇ ಸ್ಥಾನ:ಜಗತ್ತಿನ ವೆಂಚರ್‌ ಕ್ಯಾಪಿಟಲಿಸ್ಟ್‌ ಹೂಡಿಕೆ ಪಟ್ಟಿಯಲ್ಲಿಯೂ ಬೆಂಗಳೂರು ಆರನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಬೀಜಿಂಗ್‌, ಸ್ಯಾನ್‌ಫ್ರಾನ್ಸಿಸ್ಕೊ, ನ್ಯೂಯಾರ್ಕ್‌, ಶಾಂಘೈ ಮತ್ತು ಲಂಡನ್‌ ಮೊದಲ ಐದು ಸ್ಥಾನಗಳಲ್ಲಿವೆ. ಮುಂಬೈಗೆ ಈ ಪಟ್ಟಿಯಲ್ಲಿ 21ನೇ ಸ್ಥಾನವಿದೆ.

ಕೋವಿಡ್‌ನಿಂದಾಗಿ ಹಲವು ಉದ್ಯಮಗಳು ತತ್ತರಿಸಿವೆ. ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯ ಮೇಲಿನ ಅವಲಂಬನೆ ಹೆಚ್ಚಳವಾಗಿದೆ. ಈ ಸಂದರ್ಭದಲ್ಲಿ ವೆಂಚರ್‌ ಕ್ಯಾಪಿಟಲಿಸ್ಟ್‌ ಹೂಡಿಕೆದಾರರು ಸಾಫ್ಟ್‌ವೇರ್‌ ತಂತ್ರಜ್ಞಾನ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.