ADVERTISEMENT

ಬುಲೆಟ್ ಪ್ರೂಫ್ ಜಾಕೆಟ್

​ಪ್ರಜಾವಾಣಿ ವಾರ್ತೆ
Published 2 ಮೇ 2020, 19:30 IST
Last Updated 2 ಮೇ 2020, 19:30 IST
bullet proof jacket
bullet proof jacket   

ಟೆನಿಸ್ ಬ್ಯಾಟ್‌ ನೋಡಿದ್ದೀರಲ್ಲ? ಎದುರಾಳಿಯ ಕಡೆಯಿಂದ ಬಂದ ಟೆನಿಸ್ ಬಾಲ್, ಟೆನಿಸ್ ಬ್ಯಾಟ್ ಮೇಲೆ ಅಪ್ಪಳಿಸುತ್ತದೆ. ಆ ಬ್ಯಾಟ್‌ನಲ್ಲಿ ಇರುವ ನೂಲಿನ ಬಲೆಯ ಮೇಲೆ ಬಿದ್ದು, ಮತ್ತೆ ತಾನು ಬಂದ ದಿಕ್ಕಿನತ್ತ ಪುಟಿದು ಸಾಗುತ್ತದೆ ಚೆಂಡು. ಇದು ಟೆನಿಸ್ ಆಟವನ್ನು ನೋಡಿರುವ ಎಲ್ಲರಿಗೂ ಗೊತ್ತು. ಶಟಲ್ ಕಾಕ್ ಬ್ಯಾಟ್‌ ಕೂಡ ಇದೇ ರೀತಿ ಕೆಲಸ ಮಾಡುತ್ತದೆ.

ಯೋಧರು, ಸಶಸ್ತ್ರ ಪಡೆಗಳ ಸಿಬ್ಬಂದಿ ಬಳಕೆ ಮಾಡುವ ಬುಲೆಟ್ ಪ್ರೂಫ್ ಜಾಕೆಟ್‌ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ ಎಂಬುದು ಗೊತ್ತೇ?! ಗುಂಡು ನಿರೋಧಕ ಜಾಕೆಟ್‌ಗಳಲ್ಲಿ ಕೂಡ ಟೆನಿಸ್ ಅಥವಾ ಶಟಲ್ ಕಾಕ್‌ ಬ್ಯಾಟ್‌ಗಳಲ್ಲಿ ಇರುವಂತಹ ನೂಲಿನ ನೇಯ್ಗೆಯೇ ಇರುತ್ತದೆ! ಆದರೆ, ಇದರಲ್ಲಿ ಬಳಕೆ ಆಗುವ ಸಾಮಗ್ರಿ, ನೇಯ್ಗೆಯ ವಿಧಾನ ಇವೆಲ್ಲ ಬೇರೆ ಎಂಬುದು ನೆನಪಿರಲಿ.

ಎದುರಾಳಿಯ ಪಿಸ್ತೂಲಿನಿಂದ ಹಾರಿಬರುವ ಗುಂಡು, ಬುಲೆಟ್ ಪ್ರೂಫ್ ಜಾಕೆಟ್‌ ಮೇಲೆ ಬಿದ್ದಾಗ ಟೆನಿಸ್ ಬಾಲ್, ಟೆನಿಸ್ ಬ್ಯಾಟ್‌ ಮೇಲೆ ಬಿದ್ದಾಗ ಆಗುವಂತಹ ಕ್ರಿಯೆ ಒಂದಿಷ್ಟರಮಟ್ಟಿಗೆ ನಡೆಯುತ್ತದೆ. ಜಾಕೆಟ್‌ನಲ್ಲಿ ಇರುವ ಬಿಗಿ ನೇಯ್ಗೆಯು ಗುಂಡು ಒಳಗೆ ನುಗ್ಗದಂತೆ ನೋಡಿಕೊಳ್ಳುತ್ತದೆ. ಜಾಕೆಟ್‌ಗಳಲ್ಲಿ ಇರುವ ನೇಯ್ಗೆ ಅದೆಷ್ಟು ಬಲಿಷ್ಠವಾಗಿ ಇರುತ್ತದೆ ಅಂದರೆ, ಟೆನಿಸ್‌ ಬ್ಯಾಟುಗಳಲ್ಲಿ ಕಾಣಿಸುವ ನೇಯ್ಗೆಯನ್ನು ಒಂದರ ಮೇಲೆ ಒಂದರಂತೆ ನೂರಾರು ಸಂಖ್ಯೆಯಲ್ಲಿ ಇರಿಸಿದರೆ, ಎಷ್ಟು ಬಲಿಷ್ಠವಾಗಬಹುದೋ ಅಷ್ಟು.

ADVERTISEMENT

ಡ್ಯುಪಾಂಟ್‌ ಎನ್ನುವ ಕಂಪನಿಯು 1965ರ ಸುಮಾರಿಗೆ ಬಲಿಷ್ಠವಾದ, ಅತ್ಯಂತ ಹಗುರವಾದ, ರಾಸಾಯನಿಕ ನಿರೋಧಕ ಕೂಡ ಆಗಿರುವ ಸಿಂಥೆಟಿಕ್ ಫೈಬರ್‌ ಅನ್ನು ಅಭಿವೃದ್ಧಿಪಡಿಸಿತು. ಹರಿತವಾದ ವಸ್ತು ಬಳಸಿ ಇದನ್ನು ಸುಲಭಕ್ಕೆ ಹರಿಯಲು ಆಗುತ್ತಿರಲಿಲ್ಲ. ಬೆಂಕಿ ಕೂಡ ಇದನ್ನು ಸುಲಭಕ್ಕೆ ಸುಡುತ್ತಿರಲಿಲ್ಲ. ಈ ಸಿಂಥೆಟಿಕ್ ಫೈಬರ್‌ನ ಹೆಸರು ಕೆವ್ಲಾರ್. ಇದನ್ನು ಆ ಕಾಲದಲ್ಲಿ ಗುಂಡು ನಿರೋಧಕ ಜಾಕೆಟ್‌ ಮಾಡಲು ಬಳಸಲಾಯಿತು. ಇಂದು ಬಳಕೆಯಲ್ಲಿರುವ ಮಾಮೂಲಿ ಗುಂಡುನಿರೋಧಕ ಜಾಕೆಟ್‌ಗಳು ಅತ್ಯಾಧುನಿಕ ಬಂದೂಕುಗಳಿಂದ ಹಾರಿಬರುವ ಗುಂಡುಗಳನ್ನು ತಡೆಯುವುದಿಲ್ಲ. ಅಂತಹ ಗುಂಡುಗಳನ್ನು ತಡೆಯಲು ಬಲಿಷ್ಠವಾದ, ಸೆರಾಮಿಕ್‌ ಅಥವಾ ಲೋಹಗಳನ್ನು ಬಳಸಿ ಸಿದ್ಧಪಡಿಸಿದ ಜಾಕೆಟ್‌ಗಳೇ ಆಗಬೇಕು ಎಂದು ತಜ್ಞರು ಹೇಳುತ್ತಾರೆ.

(ಆಧಾರ: ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.