ADVERTISEMENT

ಪೋಲಾಗದಿರಲಿ ನೀರು ಇರಲಿ ಸ್ಮಾರ್ಟ್‌ ಮೀಟರು

ಸುಮನಾ ಕೆ
Published 20 ಮಾರ್ಚ್ 2020, 19:30 IST
Last Updated 20 ಮಾರ್ಚ್ 2020, 19:30 IST
special arrangement
special arrangement   

ದೊಡ್ಡ ಅಪಾರ್ಟ್‌ಮೆಂಟ್‌ವೊಂದರ ಮನೆಯಲ್ಲಿ ಗಂಡ – ಹೆಂಡತಿ ಇಬ್ಬರು ವಾಸ ಇರುತ್ತಾರೆ. ಪಕ್ಕದ ಮನೆಯಲ್ಲಿ ಗಂಡ– ಹೆಂಡತಿ, ಅಪ್ಪ– ಅಮ್ಮ, ಇಬ್ಬರು ಮಕ್ಕಳು ಸೇರಿ ಆರು ಮಂದಿ ಇರುತ್ತಾರೆ. ಆದರೂ, ಎರಡು ಮನೆಗಳವರು ಉಪಯೋಗಿಸುವ ನೀರಿನ ತಿಂಗಳ ಬಿಲ್‌ ಮಾತ್ರ ಒಂದೇ !

ಈ ಸಂಬಂಧ ಅಕ್ಕ–ಪಕ್ಕದವರಲ್ಲಿ ‘ಪಕ್ಕದ ಮನೆಯಲ್ಲಿ ಆರು ಜನರಿದ್ದಾರೆ. ನಾವಿರುವುದು ಇಬ್ಬರೇ. ಅವರಿಗಿಂತ ನಾವು ಕಡಿಮೆ ನೀರು ಖರ್ಚು ಮಾಡುತ್ತೇವೆ. ಆದರೂ ನಾವು ಏಕೆ ಅಷ್ಟು ಬಿಲ್‌ ತುಂಬಬೇಕು?’ ಎನ್ನುವುದು ಸಣ್ಣ ಜನಸಂಖ್ಯೆಯ ಕುಟುಂಬಗಳ ಆಕ್ಷೇಪ.

ಇಂಥ ಸಮಸ್ಯೆಗೆ ಪರಿಹಾರವಾಗಿ ಸ್ಮಾರ್ಟರ್‌ಹೋಮ್ಸ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯವರು ಸ್ಮಾರ್ಟ್‌ ವಾಟರ್‌ ಮೀಟರ್‌ ಎಂಬ ಉಪಕರಣವನ್ನು ತಯಾರಿಸಿ, ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಮೀಟರ್‌ನಿಂದ ನೀರು ಪೋಲಾಗುವುದನ್ನು ತಪ್ಪಿಸಬಹುದು. ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಅರಿಯಬಹುದು. ನಮ್ಮ ಮನೆಯಲ್ಲಿ ನೀರು ಬಳಸುವ (ವಾಟರ್‌ ಬಜೆಟ್‌) ಪ್ರಮಾಣವನ್ನೂ ತಿಳಿಯಬಹುದು.ಆರು ವರ್ಷಗಳ ಹಿಂದೆ ಎಂ.ಆರ್‌. ಕಸ್ತೂರಿರಂಗನ್‌ ಹಾಗೂ ವಿವೇಕ್ ಶುಕ್ಲಾ ಅವರು ಆರಂಭಿಸಿದ ಈ ಕಂಪನಿ ‘ವಾಟರ್‌ ಆನ್‌’ ಸ್ಮಾರ್ಟ್‌ ವಾಟರ್‌ ಮೀಟರ್‌ಗಳನ್ನು ತಯಾರಿಸುತ್ತಿದೆ.

ADVERTISEMENT

ಮೀಟರ್‌ ಬಳಕೆ ಹೇಗೆ?

ಅಪಾರ್ಟ್‌ಮೆಂಟ್‌ನ ಪ್ರತಿ ಮನೆಯಲ್ಲಿ ಸ್ಮಾರ್ಟ್‌ ವಾಟರ್‌ ಮೀಟರ್‌ ಮೆಷಿನ್‌ ಫಿಕ್ಸ್‌ ಮಾಡಲಾಗುತ್ತದೆ. ಇದರಲ್ಲಿ ಕಿಚನ್‌, ರೂಮ್‌, ಬಾತ್‌ರೂಮ್‌, ವಾಷಿಂಗ್‌ ಮೆಷಿನ್‌ನ ನೀರಿನ ಟ್ಯಾಪ್‌ಗಳನ್ನು ಒಂದೇ ಕೇಬಲ್‌ನಲ್ಲಿ ಕನೆಕ್ಟ್‌ ಮಾಡಲಾಗಿರುತ್ತದೆ. ಎಲ್ಲಾ ಕನೆಕ್ಟ್‌ಗಳಿಗೆ ಹೊಂದುವಂತೆ ಒಂದು ಕಡೆ ಗೇಟ್‌ವೇ ಆಳವಡಿಸಲಾಗಿರುತ್ತದೆ. ಇದರ ಬೋರ್ಡ್‌ನಲ್ಲಿ ಕಿಚನ್‌, ಅಡುಗೆ ಮನೆಯಲ್ಲಿ ಬಿಡಿ ಬಿಡಿಯಾಗಿ ಎಷ್ಟು ನೀರು ಬಳಕೆ ಮಾಡಲಾಗಿದೆ ಎಂದು ರೀಡಿಂಗ್‌ ಮೂಲಕ ತಿಳಿಸುತ್ತದೆ.

ಈ ಸ್ಮಾರ್ಟ್‌ವಾಟರ್‌ ಮೀಟರ್‌ ಅನ್ನು ಅಪಾರ್ಟ್‌ಮೆಂಟ್‌ನ ಎಲ್ಲಾ ಮನೆಗಳಲ್ಲಿ ಆಳವಡಿಸಿದರೆ, ಅಲ್ಲಿನ ಅಸೋಸಿಯೇಷನ್‌ಗೆ ಲಾಗಿನ್‌ ಪೋರ್ಟಲ್‌ ನೀಡಲಾಗಿರುತ್ತದೆ. ಅದರಲ್ಲಿ ಅವರು ಯಾವ ಮನೆಯಲ್ಲಿ ಆ ಹೊತ್ತಿಗೆ ಎಷ್ಟು ನೀರು ಬಳಕೆಯಾಗಿದೆ ಎಂಬುದನ್ನು ನೋಡಬಹುದು. ಬಳಸಿದ ನೀರಿಗೆ ಮಾತ್ರ ನೀರಿನ ಮೊತ್ತ ಪಾವತಿಸು ವಂತೆ ಸೂಚಿಸಬಹುದು. ‘ಇದರಿಂದ ಜನರಲ್ಲಿ ನೀರಿನ ಬಳಕೆ ಹಾಗೂ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಬಹುದು’ ಎಂದು ಹೇಳುತ್ತಾರೆ ಕಂಪೆನಿಯ ಮುಖ್ಯಸ್ಥ ಕಸ್ತೂರಿ ರಂಗನ್‌ ಎಂ.ಆರ್.

‘ವಾಟರ್‌ ಆನ್‌’ ಆ್ಯಪ್‌

ಈ ಸ್ಮಾರ್ಟ್‌ ವಾಟರ್‌ ಮೀಟರ್‌ ಜೊತೆಗೆ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ‘ವಾಟರ್‌ ಆನ್‌’ ಎಂಬ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಈ ಆ್ಯಪ್‌ ಹಾಗೂ ಮೀಟರ್‌ ಒಂದಕ್ಕೊಂದು ಸಂಪರ್ಕ ಕಲ್ಪಿಸಲಾಗಿರುತ್ತದೆ. ಆ ಆ್ಯಪ್‌ ಮೂಲಕ ಮನೆಯಲ್ಲಿ ಬಳಕೆಯಾದ ನೀರಿನ ವಿವರವನ್ನು ಕ್ಷಣಕ್ಷಣಕ್ಕೂ ನೋಡಬಹುದು. ಹಾಗೆಯೇ ಕಳೆದ ವಾರ ಹಾಗೂ ಒಂದು ತಿಂಗಳು ಉಪಯೋಗಿಸಿದ ನೀರಿನ ವಿವರವನ್ನು ಇದು ಒದಗಿಸುತ್ತದೆ. ಸ್ಮಾರ್ಟ್‌ವಾಟರ್‌ ಮೀಟರ್‌ ಆಳವಡಿಸಿದ ನಂತರ ಈ ಆ್ಯಪ್‌ ಬಳಕೆಗೆ ಸಿದ್ಧ. ಈ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆ್ಯಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ವಾಲ್ವ್‌ ಎಂಬ ಆಪದ್ಬಾಂಧವ

ಆ್ಯಪ್‌ನಲ್ಲಿ ವಾಲ್ವ್‌ ಎಂಬ ಮತ್ತೊಂದು ಆಯ್ಕೆ ಇದೆ. ನೀರು ಪೋಲಾಗುತ್ತಿದ್ದರೆ, ಪೈಪ್‌ ಒಡೆದು ನೀರು ಸೋರುತ್ತಿದ್ದರೆ, ಟಾಯ್ಲೆಟ್‌ ನಲ್ಲಿಯಲ್ಲಿ ನೀರು ಪೋಲಾಗುತ್ತಿದ್ದರೆ ವಾಲ್ವ್‌ನಿಂದ ಮೊಬೈಲ್‌ಗೆ ಅಲಾರಂ ಕಳಿಸುತ್ತದೆ. ಅಲಾರಂ ಆದಾಗ ನಾವಿರುವ ಸ್ಥಳದಿಂದಲೇ ವಾಲ್ವ್‌ ಆಯ್ಕೆ ಉಪಯೋಗಿಸಿಕೊಂಡು ಮೊಬೈಲ್‌ ಮೂಲಕವೇ ನೀರು ಪೋಲಾಗುವುದನ್ನು ನಿಲ್ಲಿಸಬಹುದು. ಇದು ನೀರು ಸೋರುವ ಪೈಪಿಗೆ ಮಾತ್ರ ನೀರು ಸರಬರಾಜಾಗುವುದನ್ನು ತಡೆಯುತ್ತದೆ.ಪೈಪ್‌ ಅಥವಾ ನಲ್ಲಿ ಸರಿಪಡಿಸಿದ ನಂತರ ನೀರು ಸರಬರಾಜು ಮುಂದುವರಿಸಬಹುದು.

ಈ ಆ್ಯಪ್‌ನ್ನು ಒಂದು ಮನೆಯ ನಾಲ್ಕು ಸದಸ್ಯರು ಬಳಸಬಹುದು‌. ಆ್ಯಪ್ ಮೂಲಕ ನೀವು ಎಲ್ಲಿಂದ ಬೇಕಾದರೂ (ಕಚೇರಿ, ಬೇರೆ ಬೇರೆ ಊರು, ಮನೆಯ ಹೊರಗಡೆ)ನೀರು ಸರಬರಾಜು ನಿಲ್ಲಿಸಿ, ಸೋರಿಕೆ ತಡೆಯಬಹುದು. ನೀರಿನ ಸಂಗ್ರಹದ ಮಾಹಿತಿ ತಿಳಿಯಬಹುದು. ದೂರದ ಸ್ಥಳಕ್ಕೆ ಪ್ರಯಾಣ ಹೋಗುವಾಗ ವಾಲ್ವ್‌ ಮೂಲಕವೇ ನೀರಿನ ಸಂಪರ್ಕ ನಿಲ್ಲಿಸಿ ಹೋಗಬಹುದು. ಆಗ ನೀರು ಪೋಲು ಆಗುವುದಿಲ್ಲ ಎನ್ನುತ್ತಾರೆ ಕಸ್ತೂರಿ ರಂಗನ್‌.

ಮೀಟರ್‌ ಬೆಲೆ: ಈ ಸಾಧನದ ಬೆಲೆ ₹11 ಸಾವಿರ. ಮೊದಲು ₹2 ಸಾವಿರ ಠೇವಣಿ ಪಾವತಿಸಿ, ನಂತರ ತಿಂಗಳಿಗೆ ₹90ರಂತೆ ಕಂತು ಪಾವತಿಸಬಹುದು. 10 ವರ್ಷ ವಾರಂಟಿ. ಆ ವರ್ಷಗಳಲ್ಲಿ ಏನೇ ತೊಂದರೆಯಾದರೂ ಕಂಪನಿಯೇ ದುರಸ್ತಿ ಮಾಡಿಕೊಡುತ್ತದೆ. ಸಂಪರ್ಕಕ್ಕೆ– 080–6673460

ಇ–ಮೇಲ್‌ಗೆ ನೀರಿನ ಬಿಲ್‌

ಈ ಸ್ಮಾರ್ಟ್‌ ವಾಟರ್‌ ಮೀಟರ್‌ನಲ್ಲಿ ಬಿಲ್ಲಿಂಗ್‌ ಸಿಸ್ಟಂ ಕೂಡ ಆಳವಡಿಸಲಾಗಿದೆ. ಅಸೋಸಿಯೇಷನ್‌ ವಿಧಿಸಿದ ನೀರಿನ ದರದ ಪ್ರಕಾರವೇ ತಿಂಗಳ ನೀರಿನ ಬಿಲ್‌ ಅವರವರ ಇ– ಮೇಲ್‌ಗೆ ನಿಗದಿಪಡಿಸಿದ ದಿನದಂದು ಹೋಗುತ್ತದೆ. ಇದು ಪಾರದರ್ಶಕವಾಗಿರುತ್ತದೆ.

ನೀರನ್ನು ಮಿತವಾಗಿ ಬಳಸುವ ಮನೋಭಾವ ಎಲ್ಲರೂ ಬೆಳೆಸಬೇಕು. ಜನರು ವಿದ್ಯುತ್‌ ಬೆಲೆ ವಿಪರೀತ ಎಂದು ಯೋಚನೆ ಮಾಡುತ್ತಾರೆಯೇ ಹೊರತು ನೀರಿನ ಬಗ್ಗೆ ಆಲೋಚನೆ ಮಾಡುವುದಿಲ್ಲ. ಹೀಗಾಗಿ ಪ್ರತಿ ಬೇಸಿಗೆಯಲ್ಲೂ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ.ಕಸ್ತೂರಿ ರಂಗನ್‌, ಸಿಇಒ, ಸ್ಮಾರ್ಟರ್‌ಹೋಮ್ಸ್‌ ಟೆಕ್ನಾಲಜೀಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.