ADVERTISEMENT

Technology: ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಪೇರಿಯ ಟಾನಿಕ್!

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 23:30 IST
Last Updated 6 ಜನವರಿ 2026, 23:30 IST
   
ಒಂದು ಕೀಬೋರ್ಡ್ ಹಾಳಾದರೆ, ಒಂದೆರಡು ಸಾವಿರದಲ್ಲಿ ಹೊಸ ಕೀಬೋರ್ಡ್ ಸಿಗುತ್ತದೆ ಎಂದಾದರೆ, ಆಗ ನಾವು 30-40 ಸಾವಿರ ರೂಪಾಯಿಗಳನ್ನು ಕೊಟ್ಟು ಹೊಸ ಲ್ಯಾಪ್‌ಟಾಪನ್ನು ಖರೀದಿಸುವ ಅನಿವಾರ್ಯಕ್ಕೆ ಬೀಳುವುದಿಲ್ಲ; ಎಲೆಕ್ಟ್ರಾನಿಕ್ಸ್ ತ್ಯಾಜ್ಯವೂ ಹೆಚ್ಚಾಗುವುದಿಲ್ಲ.

ದಿನಬಳಕೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿ ಅದು ಹಾಳಾದಾಗ ಬಿಸಾಡುವ ವ್ಯವಸ್ಥೆಯಿಂದಾಗಿ ನಮ್ಮಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ, ಒಂದು ರೇಡಿಯೊವನ್ನು ಕೊಂಡರೆ ಅದನ್ನು ಜೀವನಪರ್ಯಂತ ಇಟ್ಟುಕೊಂಡು, ಅದರ ಯಾವ ಬಿಡಿಭಾಗ ಹಾಳಾಗಿಹೋದರೂ, ಆ ಬಿಡಿಭಾಗವನ್ನಷ್ಟೇ ಬದಲಿಸುವ ವ್ಯವಸ್ಥೆ ಇತ್ತು. ಕಾಲಕ್ರಮೇಣ ಎಲ್ಲ ಎಲೆಕ್ಟ್ರಾನಿಕ್ಸ್ ಸಲಕರಣೆಗಳೂ ಚಿಕ್ಕದಾಗುತ್ತಾ ಬಂದವು. ಇದರಿಂದ ಈ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳಿಗೆ ಈ ಹಿಂದೆ ಇದ್ದ ಹೊಂದಿಕೊಳ್ಳುವ ಗುಣ ಕಡಿಮೆಯಾಗುತ್ತಾ ಬಂದವು. ಊರೂರಿನಲ್ಲೂ ಇರುತ್ತಿದ್ದ ಎಲೆಕ್ಟ್ರಾನಿಕ್ಸ್ ರಿಪೇರಿ ಅಂಗಡಿಗಳು ಮಂಕಾಗುತ್ತಾ ಬಂದವು. ಬದಲಿಗೆ, ಎಲೆಕ್ಟ್ರಾನಿಕ್ಸ್ ಮಾರಾಟದ ಅಂಗಡಿಗಳು ಹೊಸ ಹೊಸ ಎಲ್‌ಇಡಿ ಲೈಟ್‌ಗಳನ್ನು ಹಾಕಿಕೊಂಡು ಝಗಮಗಿಸುವುದಕ್ಕೆ ಶುರುವಾದವು. ಈಗ ಒಂದು ಬಿಡಿಭಾಗ ಹಾಳಾದರೆ, ಇಡೀ ಸಲಕರಣೆಯನ್ನೇ ನಾವು ಎಸೆದು ಹೊಸದು ಖರೀದಿಸಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಮಾರಾಟ ಉದ್ಯಮ ಚಿಗಿತುಕೊಂಡಿತು. ಆದರೆ, ರಿಪೇರಿ ಉದ್ಯಮ ನೆಲಕಚ್ಚಿತು.

ಇತ್ತೀಚೆಗೆ ಮತ್ತೆ ಈ ರಿಪೇರಿ ಮಾಡಬಹುದಾದ ಸಾಧ್ಯತೆಯನ್ನು ಹೆಚ್ಚಿಸುವ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎದ್ದಿದೆ. ಡೆಸ್ಕ್‌ಟಾಪ್ ಕಂಪ್ಯೂಟರ್ ವಿಷಯದಲ್ಲಿ ಈವರೆಗೆ ಈ ಅನುಕೂಲಸಿಂಧು ವ್ಯವಸ್ಥೆ ಜಾರಿಯಲ್ಲಿತ್ತು. ನಮಗೆ ಬೇಕಾದ ಮಾನಿಟರ್ ಅನ್ನು ನಾವು ತಂದಿಟ್ಟುಕೊಳ್ಳಬಹುದು. ಸಿಪಿಯು ಒಳಗೆ ಇದ್ದ ಫ್ಯಾನ್ ಹಾಳಾದರೆ, ಅದಷ್ಟನ್ನೇ ತಂದು ಜೋಡಿಸಿಕೊಳ್ಳಬಹುದು. ಹಾರ್ಡ್‌ಡಿಸ್ಕ್‌ ಹಾಳಾದರೆ, ಹಾರ್ಡ್‌ಡಿಸ್ಕ್, ರ್‍ಯಾಮ್ ಅಪ್‌ಗ್ರೇಡ್ ಮಾಡಬೇಕಾದರೆ ರ್‍ಯಾಮ್, ಹೀಗೆ ಬಹುತೇಕ ಬಿಡಿಭಾಗಗಳನ್ನು ಬದಲಿಸಿಕೊಳ್ಳಬಹುದಾಗಿತ್ತು. ಕೆಲವು ಬಿಡಿಭಾಗಗಳಲ್ಲಿ ಕಂಪ್ಯಾಟಿಬಿಲಿಟಿ ಸಮಸ್ಯೆ ಇದೆ. ಉದಾಹರಣೆಗೆ, ಎಲ್ಲ ಪ್ರೊಸೆಸರ್ ಮತ್ತು ಮದರ್‌ಬೋರ್ಡ್‌ಗಳೂ ಹೊಂದಿಕೆಯಾಗುವುದಿಲ್ಲ. ಸಾಕೆಟ್, ಚಿಪ್‌ಸೆಟ್ ಹಾಗೂ ಬಯೋಸ್ ಆಧರಿಸಿ ಇವು ಬದಲಾಗುತ್ತವೆ.

ಆದರೆ, ಈವರೆಗೆ ಲ್ಯಾಪ್‌ಟಾಪ್‌ನಲ್ಲಿ ಈ ಸಮಸ್ಯೆ ಹಾಗೆಯೇ ಇತ್ತು. ಇಲ್ಲಿ ಅಪ್‌ಗ್ರೇಡ್‌ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ. ನೀವು ರ್‍ಯಾಮ್‌, ಹಾರ್ಡ್‌ಡಿಸ್ಕ್, ಕೀಬೋರ್ಡ್‌ ಅಪ್‌ಗ್ರೇಡ್ ಹಾಗೂ ಬದಲಾವಣೆ ಮಾಡುವುದಕ್ಕೆ ಸ್ವಲ್ಪ ಮಟ್ಟಿನ ಅವಕಾಶವಿದ್ದರೂ, ಉಳಿದ ಯಾವುದನ್ನೂ ರಿಪ್ಲೇಸ್ ಮಾಡುವ ಸಾಧ್ಯತೆ ಕಡಿಮೆಯೇ. ಒಂದು ವೇಳೆ ರಿಪೇರಿ ಮಾಡಬೇಕಾದರೂ ಅದೇ ಕಂಪನಿಯ ಅದೇ ಮಾಡೆಲ್‌ಗೆಂದೇ ನಿರ್ಮಿಸಿದ್ದಾದ್ದರಿಂದ, ಅವುಗಳನ್ನು ಅದೇ ಕಂಪನಿಯಿಂದಲೇ ತರಿಸಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಅದು ಬಹುತೇಕ ಸಂದರ್ಭದಲ್ಲಿ ಸುಲಭಕ್ಕೆ ಸಿಗುವುದೂ ಇಲ್ಲ; ಸಿಕ್ಕರೂ, ಅದರ ರೇಟ್ ವಿಪರೀತ ಹೆಚ್ಚೇ ಇರುತ್ತದೆ.

ADVERTISEMENT

ಹೀಗಾಗಿ, ಹೆಚ್ಚಿನ ಜನರು ಲ್ಯಾಪ್‌ಟಾಪ್ ರಿಪೇರಿ ಅಥವಾ ಅಪ್‌ಗ್ರೇಡ್ ಮಾಡುವುದರ ಬದಲಿಗೆ ಹೊಸದನ್ನೇ ಖರೀದಿ ಮಾಡಿಬಿಡುತ್ತಾರೆ.

ಆದರೆ, ಈಗ ಕೆಲವು ಕಂಪನಿಗಳು ಈ ಸಮಸ್ಯೆಯನ್ನ ನಿವಾರಿಸುವ ಪ್ರಯತ್ನಕ್ಕೆ ಹೊರಟಿವೆ. ಮೊದಲು ‘ಫ್ರೇಮ್‌ವರ್ಕ್’ ಎಂಬ ಕಂಪನಿ ಇಂತಹ ರಿಪೇರಿ ಮಾಡಬಹುದಾದ ಲ್ಯಾಪ್‌ಟಾಪ್‌ ತಯಾರಿಕೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಯನ್ನು ಆರಂಭಿಸಿದೆ. ಖುಷಿಯ ಸಂಗತಿಯೇನೆಂದರೆ, ಲೆನೊವೋದಂತಹ ಜನಪ್ರಿಯ ಕಂಪನಿಗಳೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವುದು.

ಫ್ರೇಮ್‌ವರ್ಕ್ ಕಂಪನಿಯ ಲ್ಯಾಪ್‌ಟಾಪ್ ಖರೀದಿ ಮಾಡಿದರೆ, ಅದರಲ್ಲಿನ ಯುಎಸ್‌ಬಿಸಿ, ಎಚ್‌ಡಿಎಂಐ ಪೋರ್ಟ್‌ಗಳನ್ನು ಬದಲಿಸುವುದರ ಜೊತೆಗೆ, ರ್‍ಯಾಮ್, ಎಸ್‌ಎಸ್‌ಡಿ, ಕೀಬೋರ್ಡ್, ಟಚ್‌ಪ್ಯಾಡ್, ಬ್ಯಾಟರಿಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಮದರ್‌ಬೋರ್ಡ್‌ಗಳನ್ನೂ ಅಪ್‌ಗ್ರೇಡ್ ಮಾಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದರ ಲ್ಯಾಪ್‌ಟಾಪ್‌ ರಿಪೇರಿ ಮಾಡಿಕೊಳ್ಳುವುದಕ್ಕೆ ಅಂದರೆ, ಒಂದು ಬಿಡಿಭಾಗವನ್ನು ತೆಗೆದು ಇನ್ನೊಂದನ್ನು ಅಳವಡಿಸುವ ವಿಧಾನಗಳನ್ನು ಕಂಪನಿ ವೀಡಿಯೋ ಮೂಲಕ ತಿಳಿಸಿಕೊಡುತ್ತದೆ. ಬಿಡಿಭಾಗಗಳ ಮೇಲೆ ಇರುವ ಕ್ಯುಆರ್‌ ಕೋಡ್ ಸ್ಕ್ಯಾನ್ ಮಾಡಿದರೆ, ಬಿಡಿಭಾಗವನ್ನು ಖರೀದಿ ಮಾಡುವ ಸೌಲಭ್ಯ, ಅದನ್ನು ತೆಗೆದು ಹೊಸದು ಅಳವಡಿಸುವುದು ಹೇಗೆ ಎಂಬ ಎಲ್ಲ ಮಾಹಿತಿಯೂ ವೀಡಿಯೋ ಸಮೇತ ಇರುತ್ತದೆ.

ಒಂದು ಲ್ಯಾಪ್‌ಟಾಪ್ ಕೊಂಡರೆ, ಹತ್ತಾರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಅಗತ್ಯಕ್ಕೆ ತಕ್ಕ ಹಾಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬಹುದು, ಬಳಸಿ ಹಾಳಾದ ಬಿಡಿಭಾಗಗಳನ್ನು ಬದಲಿಸಿಕೊಳ್ಳುತ್ತಾ ಇರಬಹುದು.

ಇದೇ ದಾರಿಯಲ್ಲಿ ಲೆನೊವೊ ಕೂಡ ಸಾಗಿದೆ. ಕಂಪನಿ ಹೇಳುವ ಪ್ರಕಾರ ಲೆನೊವೊದ ಕೆಲವು ಸರಣಿಯ ಲ್ಯಾಪ್‌ಟಾಪ್‌ಗಳ ಬ್ಯಾಟರಿಗಳು, ರ್‍ಯಾಮ್ ಹಾಗೂ ಎಸ್‌ಎಸ್‌ಡಿಗಳನ್ನು ಬದಲಿಸಬಹುದು. ಆದರೆ, ಸದ್ಯಕ್ಕೆ ಲ್ಯಾಪ್‌ಟಾಪ್ ಬಿಚ್ಚಿ, ಬಿಡಿಭಾಗಗಳನ್ನು ತೆಗೆದು, ಹೊಸದನ್ನು ಅಳವಡಿಸಲು ನಾವು ಪರಿಣಿತರ ಬಳಿಯೇ ಹೋಗಬೇಕಿರುತ್ತದೆ. ಕಂಪನಿ ಬಿಡಿಭಾಗಗಳನ್ನು ಮಾರುವುದಕ್ಕೆಂದೇ ಪ್ರತ್ಯೇಕ ವೆಬ್‌ಸೈಟ್ ರೂಪಿಸಿದ್ದು, ಅದರಲ್ಲಿ ಬಿಡಿಭಾಗಗಳನ್ನು ಖರೀದಿ ಮಾಡಬಹುದು. ಕಂಪನಿ ಹೇಳುವ ಪ್ರಕಾರ, ಒಂದು ಲ್ಯಾಪ್‌ಟಾಪ್‌ನಲ್ಲಿರುವ ಶೇ. 80ರಷ್ಟು ಬಿಡಿಭಾಗಳನ್ನು ಬದಲಿಸುವ ಅನುಕೂಲವನ್ನು ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆಯಂತೆ.

ಇನ್ನು ಖರೀದಿಯಲ್ಲಿ ಕಸ್ಟಮೈಸೇಶನ್ ಸೌಲಭ್ಯವನ್ನೂ ಕೆಲವು ಕಂಪನಿಗಳು ಒದಗಿಸುವುದಕ್ಕೆ ಆರಂಭ ಮಾಡಿವೆ. ಅಂದರೆ, ನಮಗೆ ರ್‍ಯಾಮ್ ಹೆಚ್ಚು ಬೇಕು ಎಂದರೆ, ಅದನ್ನಷ್ಟೇ ಹೆಚ್ಚಿಸಿಕೊಡುವುದು, ಗ್ರಾಫಿಕ್ಸ್ ಕಾರ್ಡ್ ಮಾತ್ರ ಹೆಚ್ಚು ಹಾಕಿಕೊಡುವುದು, ಇತ್ಯಾದಿ ಸೌಲಭ್ಯಗಳು ಕೆಲವು ಕಂಪನಿಗಳಲ್ಲಿವೆಯಾದರೂ, ಇದೇ ಸೌಲಭ್ಯ ರಿಪೇರಿ ಹಾಗೂ ಅಪ್‌ಗ್ರೇಡ್ ವಿಷಯಕ್ಕೆ ಬಂದಾಗ ಕಂಪನಿಗಳು ನಿರ್ಲಕ್ಷ್ಯ ತಾಳುತ್ತವೆ.

ಗ್ರಾಹಕರಾಗಿ ರಿಪೇರಿಯಲ್ಲಿ ಕಂಪ್ಯಾಟಿಬಿಲಿಟಿ ಹೆಚ್ಚು ಮುಖ್ಯವಾಗುತ್ತದೆ. ಒಂದು ಕೀಬೋರ್ಡ್ ಹಾಳಾದರೆ, ಒಂದೆರಡು ಸಾವಿರದಲ್ಲಿ ಹೊಸ ಕೀಬೋರ್ಡ್ ಸಿಗುತ್ತದೆ ಎಂದಾದರೆ, ಆತ 30-40 ಸಾವಿರ ರೂಪಾಯಿಗಳನ್ನು ಕೊಟ್ಟು ಹೊಸ ಲ್ಯಾಪ್‌ಟಾಪನ್ನು ಖರೀದಿ ಮಾಡುವ ಅನಿವಾರ್ಯಕ್ಕೆ ಬೀಳುವುದಿಲ್ಲ. ಇದರಿಂದ, ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್ ಹೊರೆಯಾಗುವುದಿಲ್ಲ. ಜೊತೆಗೆ, ಎಲೆಕ್ಟ್ರಾನಿಕ್ಸ್ ತ್ಯಾಜ್ಯವೂ ಹೆಚ್ಚಾಗುವುದಿಲ್ಲ. ಆದರೆ, ಹೀಗೆ ಮಾಡಿದರೆ ಕಂಪನಿಗಳ ಮಾರಾಟ ಹೆಚ್ಚಳವಾಗುವುದಿಲ್ಲವಲ್ಲ! ಒಬ್ಬ ಲ್ಯಾಪ್‌ಟಾಪ್ ಖರೀದಿ ಮಾಡಿದರೆ, ಹತ್ತಾರು ವರ್ಷ ಅದನ್ನು ಇಟ್ಟುಕೊಂಡು ಬಳಸಬಹುದು, ಕೆಲವು ಬಿಡಿಭಾಗಗಳನ್ನಷ್ಟೇ ಬದಲಿಸಿಕೊಂಡರೆ ಸಾಕಾಗುತ್ತದೆ ಎಂದಾದರೆ, ಕಂಪನಿಗಳ ವಹಿವಾಟು ಕುಸಿಯುತ್ತದೆ ಎಂಬ ಕಾರಣಕ್ಕೆ ಕಂಪನಿಗಳು ಈ ಅನುಕೂಲ ಒದಗಿಸುವುದರತ್ತ ಹೆಚ್ಚಿನ ಒತ್ತು ನೀಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.