ADVERTISEMENT

ಹಾದಿ ತೋರುವ ಗೂಗಲ್‌ ಮ್ಯಾಪ್ಸ್‌ಗೆ 15ರ ಸಂಭ್ರಮ; ಹೊಸ ಅಪ್‌ಡೇಟ್‌ ಲಭ್ಯ

ಏಜೆನ್ಸೀಸ್
Published 6 ಫೆಬ್ರುವರಿ 2020, 13:04 IST
Last Updated 6 ಫೆಬ್ರುವರಿ 2020, 13:04 IST
ಗೂಗಲ್‌ ಮ್ಯಾಪ್ಸ್‌
ಗೂಗಲ್‌ ಮ್ಯಾಪ್ಸ್‌   

ಸ್ಯಾನ್‌ ಫ್ರ್ಯಾನ್ಸಿಸ್ಕೊ:'ದಾರಿ ಯಾವುದಯ್ಯಾ ಈ ಊರಿಗೆ, ಈ ಬೀಡಿಗೆ, ಈ ಕೇರಿಗೆ, ಈ...,' ಎಲ್ಲಿಗೇ ಹೋಗಬೇಕೆಂದರು ಮಾರ್ಗಸೂಚಿಯಾಗಿ ಗೂಗಲ್‌ ಮ್ಯಾಪ್ಸ್‌ ದಾರಿ ತೋರಿಸುತ್ತಿದೆ. ಡಿಜಿಟಲ್‌ ಯುಗದಲ್ಲಿ ಓಡಾಡುವ ಕೋಟ್ಯಂತ ಜನರ ನಿತ್ಯ ನಂಬಿಕೆಯ ಸಂಗಾತಿ 'ಗೂಗಲ್‌ ಮ್ಯಾಪ್ಸ್‌'ಗೆ ಈಗ 15 ವರ್ಷಗಳ ಸಂಭ್ರಮ.

2005ರಲ್ಲಿ ಹಾದಿ ತೋರುವ ಕಾರ್ಯ ಆರಂಭಿಸಿದ ಮ್ಯಾಪ್‌, ಬಳಕೆದಾರರ ಸಹಕಾರದಿಂದಲೇ ಬಹಳಷ್ಟು ಅಭಿವೃದ್ಧಿ ಕಂಡಿದೆ. 15ರ ಸಂಭ್ರಮದಲ್ಲಿ ಲೋಗೊ ಹಾಗೂ ಕೆಲವು ಆಯ್ಕೆಗಳನ್ನು ಅಪ್‌ಡೇಟ್‌ ಮಾಡಿಕೊಂಡು ಹೊಸ ರೂಪ ಪಡೆದಿದೆ. ತಂತ್ರಜ್ಞಾನ ಜಗತ್ತಿನಲ್ಲಿ ಗೂಗಲ್‌ ಮ್ಯಾಪ್ಸ್‌ ಸಾರ್ವಭೌಮತ್ವ ಸಾಧಿಸಿದೆ. ಇದಕ್ಕೆ ಸ್ಪರ್ಧೆಯೊಡ್ಡಲು ಆ್ಯಪಲ್‌ ಇತ್ತೀಚೆಗಷ್ಟೇ ತನ್ನದೇ ಮ್ಯಾಪ್‌ ಅಪ್ಲಿಕೇಷನ್‌ ಮರು ವಿನ್ಯಾಸಗೊಳಿಸಿದೆ.

ಗೂಗಲ್‌ ಮ್ಯಾಪ್‌ನ 'ಎಕ್ಸ್‌ಪ್ಲೋರ್‌' ಟ್ಯಾಬ್‌ ನಿಗದಿತ ಸ್ಥಳದ ಮಾಹಿತಿ, ರೆಸ್ಟೊರೆಂಟ್, ಮಳಿಗೆ, ಥೇಟರ್‌ಗಳ ರಿವ್ಯೂ ತಿಳಿಯಲು ನೆರವಾಗುತ್ತದೆ. ಸ್ವಂತ ವಾಹನದಲ್ಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಸಾಗುವಾಗ 'ಕಮ್ಯೂಟ್‌' ಟ್ಯಾಬ್‌ ಕಡಿಮೆ ಅವಧಿಯಲ್ಲಿ ಸಾಗಬಹುದಾದ ಮಾರ್ಗವನ್ನು ಸೂಚಿಸುತ್ತದೆ.

ADVERTISEMENT

220 ರಾಷ್ಟ್ರಗಳಲ್ಲಿ ಮಾರ್ಗಸೂಚಿಯಾಗಿ ಗೂಗಲ್‌ ಮ್ಯಾಪ್ಸ್‌ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ತಿಂಗಳಿಗೆ 100 ಕೋಟಿಗೂ ಹೆಚ್ಚು ಬಳಕೆದಾರರು ಈ ಅಪ್ಲಿಕೇಷನ್‌ ಉಪಯೋಗಿಸುತ್ತಿದ್ದಾರೆ. 171 ರಾಷ್ಟ್ರಗಳಲ್ಲಿ ಲೈವ್‌ ಟ್ರಾಫಿಕ್‌ ಮಾಹಿತಿಯನ್ನು ಗೂಗಲ್‌ ಮ್ಯಾಪ್ಸ್‌ ಒದಗಿಸುತ್ತಿದೆ.

ಬಳಕೆದಾರರಿಂದಲೇ ಮಾಹಿತಿ ಪಡೆದು ಅಭಿವೃದ್ಧಿಯಾಗುತ್ತಿರುವ ಗೂಗಲ್‌ ಮ್ಯಾಪ್ಸ್‌ಗೆ ಸೇರ್ಪಡೆಯಾಗುವ ತಪ್ಪು ಮಾಹಿತಿಗಳೂ ಅಧಿಕ. ಅದನ್ನು ತಡೆಯಲೂ ಗೂಗಲ್‌ ಕ್ರಮವಹಿಸಿದ್ದು, 2018 ಒಂದೇ ವರ್ಷದಲ್ಲಿ ಸಮಾರು 30 ಲಕ್ಷ ನಕಲಿ ಉದ್ಯಮಗಳ ಮಾಹಿತಿಯನ್ನು ತೆಗೆದು ಹಾಕಿದೆ.

ಬಸ್‌, ರೈಲು ಅಥವಾ ಸಬ್‌ವೇ ದಟ್ಟಣೆಯ ಬಗ್ಗೆ ಮಾಹಿತಿ ನೀಡುವ ಸೌಲಭ್ಯವನ್ನು ಕಳೆದ ವರ್ಷ ಗೂಗಲ್‌ ಮ್ಯಾಪ್ಸ್‌ನಲ್ಲಿ ಸೇರ್ಪಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.