ADVERTISEMENT

ಕ್ಯಾಮೆರಾ ಇಲ್ಲ, ಕಾಲ್‌ ಮಾಡಲು ಆಗಲ್ಲ; ಇದು ಗೂಗಲ್‌ 'ಪೇಪರ್‌ ಫೋನ್‌'

ಡಿಜಿಟಲ್‌ ವ್ಯಸನದಿಂದ ದೂರ ಉಳಿಸುವ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 9:38 IST
Last Updated 30 ಅಕ್ಟೋಬರ್ 2019, 9:38 IST
ಪೇಪರ್‌ ಫೋನ್‌
ಪೇಪರ್‌ ಫೋನ್‌    

ಡಿಜಿಟಲ್‌ ಲೋಕದಿಂದ ಜನರನ್ನು ಬಿಡುಗಡೆಗೊಳಿಸಲು ಗೂಗಲ್‌ ಹೊಸ ಫೋನ್‌ ಪರಿಚಯಿಸಿದೆ. ಸೆಲ್ಫಿ ತೆಗೆದುಕೊಳ್ಳಲು ಇದರಲ್ಲಿ ಕ್ಯಾಮೆರಾ ಇಲ್ಲ, ಚಾಟ್‌ ಮಾಡಲು ವಾಟ್ಸ್‌ಆ್ಯಪ್‌ ಇನ್‌ಸ್ಟಾಲ್‌ ಆಗೋಲ್ಲ, ಯಾರೊಬ್ಬರಿಗೂ ಕರೆ ಮಾಡಿ ಮಾತು–ಕತೆ ನಡೆಸಲು ಸಾಧ್ಯವಿಲ್ಲ. ಒಂದರಿಂದೊಂದು ವಿಡಿಯೊ ನೋಡುತ್ತ ಕಾಲ ಕಳೆದುಕೊಳ್ಳಲು ಇದರಲ್ಲಿ ಡಿಸ್‌ಪ್ಲೇ ಸಹ ಇಲ್ಲ. ಇದು ಗೂಗಲ್‌ನ ಪ್ರಯೋಗಾತ್ಮಕ ವೇದಿಕೆಯಲ್ಲಿ ತೆರೆದುಕೊಂಡಿರುವ 'ಪೇಪರ್‌ ಫೋನ್‌'.

ಸ್ಮಾರ್ಟ್‌ಫೋನ್‌ ವ್ಯಸಿನಿಗಳಾಗಿ ಡಿಜಿಟಲ್‌ ಲೋಕದೊಳಗೆ ವಿಹರಿಸುತ್ತ ವಾಸ್ತವದಿಂದ ಬಹುದೂರ ಸಾಗುತ್ತಿರುವ ಬೆಳವಣಿಗೆ 'ಸಾಮಾಜಿಕ ಮತ್ತು ವೈಯಕ್ತಿಕ ಆರೋಗ್ಯಕ್ಕೆ ಹಾನಿಕಾರ' ಎಂಬುದು ತಂತ್ರಜ್ಞಾನ ಸಂಸ್ಥೆಗಳ ಅರಿವಿಗೂ ಬಂದಂತಿದೆ. ಬೆರಳ ತುದಿಯಲ್ಲಿ ಲೋಕದ ಸಕಲ ಮಾಹಿತಿಯನ್ನೂ ಪೂರೈಸುತ್ತಿರುವ 'ಗೂಗಲ್‌' ಈಗ 'ಡಿಜಿಟಲ್‌ ಸ್ವಾಸ್ಥ್ಯ' ಕಾಪಾಡುವ ನಿಟ್ಟಿನಲ್ಲಿ ವಿನೂತನ ಪ್ರಯತ್ನಗಳಿಗೆ ಮುನ್ನುಡಿಯಾಗಿದೆ. ನಿತ್ಯ ಕಾರ್ಯಗಳಿಗೆ ಅಡ್ಡಿ ಎದುರಾಗದ ಹಾಗೆ ಡಿಜಿಟಲ್‌ ವ್ಯಸನವನ್ನು ದೂರಾಗಿಸುವ ಹಲವು ಪ್ರಯೋಗಗಳಿಗೆ ಸಂಸ್ಥೆ 'ಎಕ್ಸ್‌ಪೆರಿಮೆಂಟ್‌ ವಿತ್‌ ಗೂಗಲ್‌' (Experiments with Google) ಮುಖೇನ ವೇದಿಕೆ ಕಲ್ಪಿಸಿದೆ. ಇದರಿಂದ ಹೊರಬಂದಿರುವುದೇ ಪೇಪರ್‌ ಫೋನ್‌ ಆ್ಯಂಡ್ರಾಯ್ಡ್‌ ಅಪ್ಲಿಕೇಷನ್‌.

ಅಗತ್ಯವಿರುವ ಎಲ್ಲ ಮಾಹಿತಿಯನ್ನು ಪ್ರಿಂಟ್‌ ಮಾಡುತ್ತಿದ್ದಂತೆ ಪೇಪರ್‌ ಫೋನ್‌ ಸಿದ್ಧಗೊಳ್ಳುತ್ತದೆ. ದಿನವಿಡೀ ಜತೆಯಲ್ಲಿಟ್ಟುಕೊಂಡು ಅಗತ್ಯವಿರುವಾಗ ಬೇಕಾದ ಮಾಹಿತಿ ಪಡೆದು ಮತ್ತೆ ಮಡಚಿ ಕಿಸೆಯಲ್ಲಿಟ್ಟುಕೊಳ್ಳಬಹುದು ಅಥವಾ ಕೈಯಲ್ಲೇ ಹಿಡಿದು ಓಡಾಡಬಹುದು. ಗೂಗಲ್‌ ಬಿಡುಗಡೆ ಮಾಡಿರುವ 'ಪೇಪರ್‌ ಫೋನ್‌' ಅಪ್ಲಿಕೇಷನ್‌ನಿಂದ ಪೇಪರ್‌ ಫೋನ್‌ ಪ್ರಿಂಟ್‌ ಮಾಡಿಕೊಳ್ಳಲು ಸಾಧ್ಯವಿದೆ.

ADVERTISEMENT

ಅತ್ಯಗತ್ಯ ಅಥವಾ ತುರ್ತು ಸಂಪರ್ಕ ಸಂಖ್ಯೆಗಳು, ತಲುಪಬೇಕಾದ ಸ್ಥಳದ ಮಾರ್ಗ(ಮ್ಯಾಪ್‌) ಹಾಗೂ ಮೀಟಿಂಗ್‌ ಪಟ್ಟಿಯನ್ನು ವ್ಯವಸ್ಥಿವಾಗಿ ಒಂದೇ ಪೇಪರ್‌ನಲ್ಲಿ ಮುದ್ರಿಸಿ ತೆಗೆಯಬಹುದು. ರೆಸಿಪಿ, ಕನ್‌ವರ್ಶನ್‌ ಚಾರ್ಟ್ಸ್‌, ಸೈನ್‌ ಲಾಂಗ್ವೇಜ್‌, ಮಲ್ಟಿಪ್ಲಿಕೇಷನ್‌ ಟೇಬಲ್‌ ಹಾಗೂ ರೆಸಿಪಿ ಸೇರಿದಂತೆ ಇತರೆ ಪೇಪರ್‌ ಆ್ಯಪ್‌ಗಳೊಂದಿಗೆ ಸಂಪರ್ಕ ಹೊಂದಲು ಅವಕಾಶವಿದ್ದು, ಅಗತ್ಯ ವಿವರಗಳನ್ನು ಸೇರ್ಪಡೆ ಮಾಡಿ ಪೇಪರ್‌ ಫೋನ್ ಪ್ರಿಂಟ್‌ ಪಡೆಯಬಹುದು.

ಒಂದೇ ಹಾಳೆಯಲ್ಲಿ ಸುಡೋಕು, ಚಿಪ್‌ ಹೊಂದಿರುವ ಡೆಬಿಟ್‌ ಕಾರ್ಡ್‌ ಇಡಲು ನಿಗದಿತ ಸ್ಥಳ ಎಲ್ಲವನ್ನೂ ಒಳಗೊಳ್ಳುವ ಮೂಲಕ ಸ್ಮಾರ್ಟ್‌ಫೋನ್‌ ಮತ್ತು ಡಿಜಿಟಲ್‌ ಬಳಕೆಯಿಂದ ದಿನ ಪೂರ್ತಿ ಬಿಡುಗಡೆ ಪಡೆಯಲು ಈ ಯೋಜನೆ ಸಹಕಾರಿಯಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿPaper Phone ಆ್ಯಪ್‌ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.