ADVERTISEMENT

ಟೊಮೆಟೊ ಸಂಸ್ಕರಣೆಗೆ ‘ಕ್ರಷಿಂಗ್’ ತಂತ್ರಜ್ಞಾನ: ಐಐಎಚ್‌ಆರ್‌ನಿಂದ ಅಭಿವೃದ್ಧಿ

ಮನೋಹರ್ ಎಂ.
Published 15 ಜನವರಿ 2021, 19:37 IST
Last Updated 15 ಜನವರಿ 2021, 19:37 IST
ಟೊಮೆಟೊ ಕ್ರಷ್‌ ತಂತ್ರಜ್ಞಾನದಿಂದ ಸಿದ್ಧಗೊಂಡಿರುವ ಮಿಶ್ರಣ
ಟೊಮೆಟೊ ಕ್ರಷ್‌ ತಂತ್ರಜ್ಞಾನದಿಂದ ಸಿದ್ಧಗೊಂಡಿರುವ ಮಿಶ್ರಣ   

ಬೆಂಗಳೂರು:ಟೊಮೆಟೊಗಳನ್ನು ಮಿಶ್ರಣವಾಗಿ ಪರಿವರ್ತಿಸಿ, 4 ತಿಂಗಳಿನಿಂದ ‌ಗರಿಷ್ಠ ಒಂದು ವರ್ಷದವರೆಗೆ ಶೇಖರಿಸಿ ಇಡುವ ಹಾಗೂ ವಿವಿಧ ರೂಪಗಳಲ್ಲಿ ಬಳಕೆ ಮಾಡಬಹುದಾದ ‘ಟೊಮೆಟೊ ಕ್ರಷಿಂಗ್’ ತಂತ್ರಜ್ಞಾನವನ್ನು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಅಭಿವೃದ್ಧಿಪಡಿಸಿದೆ.

ಗಿಡದಿಂದ ಕಟಾವು ಮಾಡಿದ ಟೊಮೆಟೊವನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡುವುದು ಕಷ್ಟ. ಹಣ್ಣಾದ ಟೊಮೆಟೊ ಹೆಚ್ಚೆಂದರೆ ಒಂದು ವಾರದೊಳಗೆ ಕೊಳೆಯುವ ಸ್ಥಿತಿಗೆ ತಲುಪುತ್ತದೆ.

ಆದರೆ, ಈ ನೂತನ ತಂತ್ರಜ್ಞಾನದಿಂದ ಟೊಮೆಟೊ ಪರ್ಯಾಯ ರೂಪದಲ್ಲಿ ದೀರ್ಘಕಾಲದ ಬಳಕೆಗೆ ಉಪಯುಕ್ತವಾಗಲಿದೆ. ಇಂತಹ ತಾಂತ್ರಿಕತೆ ರೂಪಿಸಿರುವುದು ಐಐಎಚ್‌ಆರ್‌ನ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗ.

ADVERTISEMENT

ಯಂತ್ರೋಪಕರಣಗಳ ಸಹಾಯದಿಂದ ಟೊಮೆಟೊಗಳನ್ನು ಹಿಂಡಿ ಪುಡಿ ಮಾಡಲಾಗುವುದು. ಕ್ರಮೇಣ ಅದು ಮಿಶ್ರಣದ ರೂಪ ಪಡೆದುಕೊಳ್ಳುತ್ತದೆ. ಇದಕ್ಕೆ ಯಾವುದೇ ರಾಸಾಯನಿಕಗಳನ್ನು ಸೇರಿಸಲಾಗುವುದಿಲ್ಲ. ಇದರಿಂದ ದೀರ್ಘಕಾಲದವರೆಗೂ ಟೊಮೆಟೊ ಮಿಶ್ರಣ ನೈಜ ರುಚಿ ನೀಡುತ್ತದೆ. ಮಿಶ್ರಣ
ವನ್ನು ದಿನನಿತ್ಯದ ಆಹಾರ ತಯಾರಿಕೆ, ರಸಂ, ಸೂಪ್ ಹಾಗೂ ಇತರ ತರಕಾರಿಗಳೊಂದಿಗೆ ಸೇರಿಸಿಕೊಳ್ಳಬಹುದು.

‘ಮಿಶ್ರಿತ ಟೊಮೆಟೊ ಒಂದು ಮಧ್ಯಂತರ ಉತ್ಪನ್ನ. ಅಡುಗೆಗೆ ಟೊಮೆಟೊ ಬದಲಾಗಿ ಇದನ್ನು ಬಳಸಿಕೊಳ್ಳಬಹುದು. ಟೊಮೆಟೊದಲ್ಲಿರುವ ಅಂಶಗಳನ್ನು ನಾವು ಬೇರ್ಪಡಿಸುವುದಿಲ್ಲ. ಅವುಗಳನ್ನು ಬೀಜ ಮತ್ತು ಸಿಪ್ಪೆಯೊಂದಿಗೆ ಮೂಲ ಸ್ಥಿತಿಯಲ್ಲೇ ಮಿಶ್ರಣ ಮಾಡುತ್ತೇವೆ. ಇದರಲ್ಲಿಆಸ್ಕೋರ್ಬಿಕ್ ಆಮ್ಲ ಮತ್ತು ಲೈಕೋಪೀನ್ ಅಂಶಗಳು ಸಮೃದ್ಧವಾಗಿರುತ್ತವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಸ್ಥೆಯ ಹಿರಿಯ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದರು.

‘ಈ ಮಿಶ್ರಣವನ್ನು ಸಾಮಾನ್ಯವಾಗಿ ಗರಿಷ್ಠ 4 ತಿಂಗಳವರೆಗೆ ಸಂಗ್ರಹಿಸಿ ಇಡಬಹುದು. ರೆಫ್ರಿಜರೇಟರ್‌ನಲ್ಲಿ ಕನಿಷ್ಠ ತಾಪಮಾನದ ಸಹಾಯದಿಂದ ಗರಿಷ್ಠ ಒಂದು ವರ್ಷದವರೆಗೆ ಉಳಿಸಿಡಬಹುದು. 100 ಕೆ.ಜಿ ಟೊಮೆಟೊದಿಂದ 30 ಕೆ.ಜಿಯಷ್ಟು ಮಿಶ್ರಣ ತಯಾರಾಗುತ್ತದೆ. ಅಡುಗೆಗೆ ಮೂರು ಟೊಮೆಟೊಗಳ ಬದಲಿಗೆ ಒಂದು ಚಮಚದಷ್ಟು ಮಿಶ್ರಣ ಬಳಸಿಕೊಳ್ಳಬಹುದು. ಮನೆ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲೂ ಆಹಾರ ಸಿದ್ಧಪಡಿಸಲು ಮಿಶ್ರಣ ಉಪಯೋಗಿಸಬಹುದು’ ಎಂದು ವಿವರಿಸಿದರು.

‘ಟೊಮೆಟೊ ಕ್ರಷಿಂಗ್‌ ತಂತ್ರಜ್ಞಾನದ ಮೂಲಕ ಉದ್ಯಮ ಆರಂಭಿಸಬಹುದು. ಈ ತಂತ್ರಜ್ಞಾನದ ಘಟಕ ಸ್ಥಾಪಿಸಲು ಗರಿ‌ಷ್ಠ ₹7 ಲಕ್ಷ ಖರ್ಚಾಗಬಹುದು. ಘಟಕಗಳನ್ನು ತೆರೆಯಲು ಇಚ್ಛಿಸುವವರುdirector@iihr.res.in ಅಥವಾ 080–23086100 ಸಂಖ್ಯೆಗೆ ಸಂಪರ್ಕಿಸಬಹುದು’ ಎಂದು ಐಐಎಚ್‌ಆರ್ ತಿಳಿಸಿದೆ.

ರೈತರ ಕಣ್ಣೀರು ಒರೆಸುವ ತಂತ್ರಜ್ಞಾನ

ಟೊಮೊಟೊ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂದು ರೈತರು ಬೆಳೆದ ಟೊಮೆಟೊಗಳನ್ನು ರಸ್ತೆಬದಿ ರಾಶಿ ಹಾಕಿ ಕಣ್ಣೀರು ಹಾಕುತ್ತಾರೆ. ತೋಟಗಳಲ್ಲೇ ಕೊಳೆಯಲು ಬಿಡುತ್ತಾರೆ. ಉಳಿದ ತರಕಾರಿಗಳಂತೆ ಹೆಚ್ಚು ದಿನಗಳವರೆಗೆ ಶೇಖರಣೆ ಮಾಡಲು ಸಾಧ್ಯವಾಗದ ಕಾರಣ ಬೆಳೆಗಾರರಿಗೆ ದಿಕ್ಕುತೋಚುತ್ತಿರಲಿಲ್ಲ.ರಾಜ್ಯದಲ್ಲಿ ಈ ತಂತ್ರಜ್ಞಾನ ಹೆಚ್ಚು ಬಳಸಿಕೊಂಡಲ್ಲಿ, ಟೊಮೆಟೊ ನಿರುಪಯುಕ್ತವಾಗಿ ಕೊಳೆಯುವುದಿಲ್ಲ. ರೈತರೂ ನಷ್ಟ ಅನುಭವಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.