ADVERTISEMENT

ಜಿಯೊಮೀಟ್‌: ರಿಲಯನ್ಸ್‌ ಜಿಯೊದಿಂದ ವಿಡಿಯೊ ಕಾನ್ಫರೆನ್ಸ್ ಆ್ಯಪ್

ಏಜೆನ್ಸೀಸ್
Published 3 ಜುಲೈ 2020, 1:55 IST
Last Updated 3 ಜುಲೈ 2020, 1:55 IST
ಜಿಯೊಮೀಟ್‌ ಅಪ್ಲಿಕೇಷನ್‌
ಜಿಯೊಮೀಟ್‌ ಅಪ್ಲಿಕೇಷನ್‌   
""

ಬೆಂಗಳೂರು: ಕೊರೊನಾ ವೈರಸ್‌ ಸಾಂಕ್ರಾಮಿಕವಾದಷ್ಟೇ ವೇಗವಾಗಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದ್ದು 'ಜೂಮ್‌ ಆ್ಯಪ್‌'. ಅತಿ ಹೆಚ್ಚು ಬಳಕೆಯಲ್ಲಿರುವ ಈ ಅಪ್ಲಿಕೇಷನ್‌ಗೆ ಪರ್ಯಾಯವಾಗಿ ದೇಶಿಯ ಆ್ಯಪ್‌ 'ಜಿಯೊಮೀಟ್‌' ಬಿಡುಗಡೆಯಾಗಿದೆ.

ಕೋವಿಡ್–19 ಸಾಂಕ್ರಾಮಿಕದಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಿಸುವ ಹೊಸ ಅನುಭವ ಬಹುತೇಕ ಉದ್ಯೋಗಿಗಳು, ಉದ್ಯಮಿಗಳಿಗೆ ದೊರೆತಿದೆ. ವಿದ್ಯಾರ್ಥಿಗಳು, ಶಿಕ್ಷಕರು ಆನ್‌ಲೈನ್‌ ಪಾಠ ಮುಂದುವರಿಸಿದ್ದಾರೆ. ನಿತ್ಯ ಕಾರ್ಯಾಚರಣೆಗಾಗಿ ನಡೆಸುವ ಮೀಟಿಂಗ್‌, ಸೆಮಿನಾರ್‌ ಹಾಗೂ ತರಬೇತಿಗಳೆಲ್ಲವೂ ಈಗ ವೆಬಿನಾರ್‌ ರೂಪ ಪಡೆದಿವೆ. ಜೂಮ್‌, ಗೂಗಲ್‌ ಮೀಟ್‌, ವೆಬ್‌ಎಕ್ಸ್‌, ಸ್ಲೈಪ್‌,...ಇನ್ನೂ ಹಲವು ಆ್ಯಪ್‌ಗಳ ಮೂಲಕ ವಿಡಿಯೊ ಕಾನ್ಫರೆನ್ಸ್‌ ನಡೆಸಲಾಗುತ್ತಿದೆ. ತಿಂಗಳ ಪರೀಕ್ಷೆಯ ಬಳಿಕ ಈಗ ಸಾರ್ವಜನಿಕ ಬಳಕೆಗೆ ಬಿಡುಗಡೆಯಾಗಿರುವ ರಿಲಯನ್ಸ್‌ ಜಿಯೊದ 'ಜಿಯೊಮೀಟ್‌' ದೇಶೀಯ ಪ್ರಯತ್ನವಾಗಿ ಗಮನ ಸೆಳೆಯುತ್ತಿದೆ.

ಆ್ಯಂಡ್ರಾಯ್ಡ್‌ ಮತ್ತು ಐಫೋನ್‌ ಐಒಎಸ್‌ ಫೋನ್‌ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆ್ಯಪಲ್ ಆ್ಯಪ್‌ ಸ್ಟೋರ್‌ ಮೂಲಕ ಎಚ್‌ಡಿ ಕಾನ್ಫರೆನ್ಸಿಂಗ್‌ ಆ್ಯಪ್‌ 'ಜಿಯೊಮೀಟ್‌' ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ADVERTISEMENT

ಜಿಯೊಮೀಟ್‌ ಬಳಕೆ ಹೇಗೆ?

ಕಂಪನಿಯ ಪ್ರಕಾರ ಜಿಯೊಮೀಟ್‌ ಮೂಲಕ ಒಮ್ಮೆಗೆ 100 ಜನರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಬಹುದು. ಡೆಸ್ಕ್‌ಟಾಪ್‌ ಬಳಕೆದಾರರು ಆ್ಯಪ್‌ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಜಿಯೊಮೀಟ್‌ ಇನ್ವೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಗೂಗಲ್‌ ಕ್ರೋಮ್‌ ಅಥವಾ ಮೊಜಿಲ್ಲಾ ಫೈರ್‌ಫಾಕ್ಸ್‌ ಬ್ರೌಸರ್‌ನಿಂದ ನೇರವಾಗಿ ಸಭೆಗೆ ಸೇರಿಕೊಳ್ಳಬಹುದು. ಉಚಿತವಾಗಿ ಇದು ಬಳಕೆಗೆ ಲಭ್ಯವಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಜಿಯೊಮೀಟ್‌ ಆ್ಯಪ್‌

ಇತರೆ ವಿಡಿಯೊ ಕಾನ್ಫರೆನ್ಸ್‌ ಆ್ಯಪ್‌ಗಳಲ್ಲಿ ಇರುವಂತೆ ಮೀಟಿಂಗ್‌ ಶೆಡ್ಯೂಲ್‌, ಸ್ಕ್ರೀನ್‌ ಶೇರಿಂಗ್‌ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ. ಆ್ಯಪ್‌ನ ವಿನ್ಯಾಸ ಬಹುತೇಕ ಜೂಮ್‌ ಅಪ್ಲಿಕೇಷನ್‌ಗೆ ಹೋಲಿಕೆ ಇದೆ. ಇಮೇಲ್‌ ಐಡಿ ಅಥವಾ ಮೊಬೈಲ್‌ ಸಂಖ್ಯೆ ಬಳಸಿ ಲಾಗ್ಇನ್‌ ಆಗಬಹುದು. ಒಬ್ಬರು ಒಂದೇ ಐಡಿ ಮೂಲಕ 5 ಸಾಧನಗಳಲ್ಲಿ ಲಾಗ್‌ಇನ್‌ ಆಗುವ ಅವಕಾಶವಿದೆ. ಗರಿಷ್ಠ 100 ಜನರನ್ನು ಒಳಗೊಂಡ ವಿಡಿಯೊ ಮೀಟ್‌ ನಿರಂತರ 24 ಗಂಟೆಗಳ ವರೆಗೂ ಮುಂದುವರಿಸಬಹುದಾಗಿದೆ.

ವಿಡಿಯೊ ಕಾಲಿಂಗ್‌ ಸೇವೆಯನ್ನು ಆರಂಭಿಸುತ್ತಿರುವುದಾಗಿ ರಿಲಯನ್ಸ್‌ ಜಿಯೊ ಏಪ್ರಿಲ್‌ 30ರಂದು ಪ್ರಕಟಿಸಿತ್ತು. ಗೂಗಲ್‌ ಪ್ಲೇ ಸ್ಟೋರ್‌ ಪ್ರಕಾರ, ಜೂನ್‌ 30ರಂದು ಆ್ಯಪ್‌ ಡೌನ್‌ಲೋಡ್‌ಗೆ ಬಿಡುಗಡೆಯಾಗಿದ್ದು, ಈವರೆಗೆ 1,00,000 ಬಾರಿ ಡೌಲ್‌ಲೋಡ್‌ ಆಗಿದೆ. ಬಳಕೆದಾರರು 4.6 ರೇಟಿಂಗ್‌ ನೀಡಿದ್ದಾರೆ. ಆದರೆ, ವಿನ್ಯಾಸ ಬದಲಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಈ ಆ್ಯಪ್‌ ಬಳಸಲು ಆ್ಯಂಡ್ರಾಯ್ಡ್‌ ವರ್ಶನ್‌ 5.0 ಮತ್ತು ಅದಕ್ಕಿಂತ ಮುಂದಿನ ಒಎಸ್‌ ಇರಬೇಕು ಹಾಗೂ ಫೋನ್‌ ಕನಿಷ್ಠ 2ಜಿಬಿ ರ್‍ಯಾಮ್‌ ಒಳಗೊಂಡಿರಬೇಕು. ಐಫೋನ್‌ಗಳಲ್ಲಿ ಐಒಎಸ್‌ 9 ಮತ್ತು ಅದಕ್ಕಿಂತ ಮುಂದಿನದು ಹಾಗೂ ಕನಿಷ್ಠ 1ಜಿಬಿ ರ್‍ಯಾಮ್‌ ಇರಬೇಕು. ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಕೆಗೆ ಮೈಕ್ರೊಸಾಫ್ಟ್‌ ವಿಂಡೋಸ್‌ 10 ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.