ADVERTISEMENT

Science & Technology | ಮ್ಯಾಟರ್‌ ಜೆನ್‌: ಎಐ ವಿಶ್ವಾಮಿತ್ರ!

ಕೊಳ್ಳೇಗಾಲ ಶರ್ಮ
Published 4 ಫೆಬ್ರುವರಿ 2025, 22:30 IST
Last Updated 4 ಫೆಬ್ರುವರಿ 2025, 22:30 IST
   

ಎಐ ಅಥವಾ ಯಾಂತ್ರಿಕ ಬುದ್ಧಿಮತ್ತೆ ಮತ್ತೆ ಮತ್ತೆ ಸುದ್ದಿಯಲ್ಲಿದೆ. ಹೊಸದೊಂದು ಲೇಖನ ಬರೆಯಲು, ಇಲ್ಲವೇ ಸಂಶೋಧನೆಗೆ ಎಐ ಬಳಸುವ ಚಾಟ್‌ಜಿಪಿಟಿಯಂತಹ ವ್ಯವಸ್ಥೆಯನ್ನು ಕೇಳಿದರೆ ಸಾಕು, ಸಿದ್ಧಲೇಖನ ದೊರೆಯುತ್ತದೆ. ಅದನ್ನು ಅಷ್ಟಿಷ್ಟು ತಿದ್ದಿ, ಸುಂದರವಾಗಿಸುವುದಷ್ಟೆ ಬಾಕಿ. ಇದೇ ರೀತಿ ಹೊಸ ವಸ್ತುಗಳನ್ನು ಸೃಷ್ಟಿಸುವುದು ಸಾಧ್ಯವಿದ್ದರೆ? ಬಹುಶಃ ಆಗ ಬಹಳಷ್ಟು ವರ್ಷಗಳಿಂದ ಕನಸು ಕಾಣುತ್ತಿರುವ ಸೂಪರ್‌ಕಂಡಕ್ಟರ್‌ಗಳು, ಎಂದಿಗೂ ಒಡೆಯದ ಪಿಂಗಾಣಿ, ಅತ್ಯಲ್ಪ ಬೆಳಕು ಬಿದ್ದರೂ ವಿದ್ಯುತ್‌ ಉತ್ಪಾದಿಸುವ ಸೌರಫಲಕ ಮೊದಲಾದವು ನನಸಾಗಬಹುದು. ಇಂತಹುದೊಂದು ತಂತ್ರಜ್ಞಾನವನ್ನು ಮೈಕ್ರೊಸಾಫ್ಟ್‌ ಸಿದ್ದಪಡಿಸಿದೆಯಂತೆ.

‘ಮ್ಯಾಟರ್‌ಜೆನ್‌’ ಎನ್ನುವ ಈ ಸೃಷ್ಟಿಶಕ್ತ ಎಐ, ಇಂತಿಂತಹ ಗುಣವಿರುವ ವಸ್ತುವಿನ ರಚನೆ ಹೇಗಿರುತ್ತದೆ ಎಂದು ಕೇಳಿದರೆ, ಅದನ್ನು ಹೇಳುವುದರ ಜೊತೆಗೆ, ಆ ವಸ್ತುವನ್ನು ತಯಾರಿಸುವ ವಿಧಾನವನ್ನೂ ಈ ತಂತ್ರಜ್ಞಾನ ತಿಳಿಸುತ್ತದೆಯಂತೆ. ವಸ್ತುವಿಜ್ಞಾನಿಗಳಿಗೆ ಇದು ಖುಷಿಯ ವಿಷಯ. ಏಕೆಂದರೆ ಇದುವರೆವಿಗೂ ವಸ್ತುವಿಜ್ಞಾನಿಗಳಲ್ಲಿ, ಪ್ಲಾಸ್ಟಿಕ್, ಔಷಧಗಳು ಮೊದಲಾದ ಸಾವಯವ ವಸ್ತುಗಳನ್ನು ರಚಿಸುವವರ ಕೈ ಮೇಲಾಗಿತ್ತು. ಆದರೆ ಖನಿಜ ಹಾಗೂ ಲೋಹವಸ್ತುಗಳಿಂದ ಹೊಸ ಉತ್ಪನ್ನಗಳನ್ನು ರಚಿಸುವುದು ಕಷ್ಟಸಾಧ್ಯ ಎನ್ನಿಸಿತ್ತು. ಇದೀಗ ಈ ಅಸಾವಯವ ಅಥವಾ ಇನಾರ್ಗಾನಿಕ್‌ ವಸ್ತುಗಳಲ್ಲಿ ಹೊಸ ವಸ್ತುಗಳ ಶೋಧಕ್ಕೆ ಮ್ಯಾಟರ್‌ಜೆನ್‌ ಇಂಬು ಕೊಡಲಿದೆ. ಮಾನವ ನಾಗರಿಕತೆಯ ಬೆಳೆವಣಿಗೆಗೆ ಮೂಲವಾದ ಈ ವಿಜ್ಞಾನ ಇನ್ನಷ್ಟು ಬೆಳೆಯಲಿದೆ.

ಅಸಾವಯವ ವಸ್ತುಗಳು ಮಾನವನ ವಿಕಾಸದಲ್ಲಿ ಪ್ರಮುಖ ಪಾತ್ರಧಾರಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಲೋಹಗಳು, ಮಣ್ಣು, ಗಾಜು ಮತ್ತು ಪಿಂಗಾಣಿ ಇವು ಬಲು ಪುರಾತನ ವಸ್ತುಗಳು. ಇವುಗಳಲ್ಲಿ ಗಾಜು ಮತ್ತು ಪಿಂಗಾಣಿ ಮಾನವನ ಸೃಷ್ಟಿ. ಲೋಹಗಳು ಮತ್ತು ಮಣ್ಣು ನೈಸರ್ಗಿಕವಾದಂಥವು. ಮಣ್ಣಿನಲ್ಲಿರುವ ಹಲವು ಖನಿಜಗಳು ಕೂಡ ಉಪಯುಕ್ತವಾದಂಥವೇ. ಜಗತ್ತಿನ ಎಲ್ಲ ಯಂತ್ರಸಾಧನಗಳಿಗೂ ಇವು ಮೂಲವಸ್ತುಗಳು. ಆದರೂ ಹೊಸ, ಹೊಸ ವಸ್ತುಗಳು ಬೇಕಾಗುತ್ತಲೇ ಇವೆ. ದುರದೃಷ್ಟವಶಾತ್‌, ಸಾವಯವ ವಸ್ತುಗಳನ್ನು ಸೃಷ್ಟಿಸಿದಂತೆ ಗಣಕಯಂತ್ರವನ್ನು ಬಳಸಿಕೊಂಡು ಹೊಸ ಗಾಜನ್ನೋ, ಹೊಸ ಹರಳನ್ನೋ ರೂಪಿಸುವುದು ಸಾಧ್ಯವಾಗಿಲ್ಲ. ಹೀಗಾಗಿಯೇ ಅಸಾವಯವ ವಸ್ತುಗಳ ನಿರ್ಮಾಣ ನಿಧಾನವಾಗಿದೆ.

ADVERTISEMENT

ಮ್ಯಾಟರ್‌ಜೆನ್‌ ಇದನ್ನು ಬದಲಿಸಲಿದೆ. ಚಾಟ್‌ ಜಿಪಿಟಿ ಅಥವಾ ಜೆಮಿನಿ ತಂತ್ರಾಂಶಗಳಿಗೆ ಒಂದು ಪ್ರಶ್ನೆ ಕೇಳಿದೆವೆನ್ನಿ. ಅವು ತಮ್ಮ ಸ್ಮೃತಿಭಂಡಾರದಲ್ಲಿರುವ ಮಾಹಿತಿಯನ್ನು ಹೆಕ್ಕಿ, ಸುಮ್ಮನೆ ಪಟ್ಟಿ ಮಾಡದೆಯೇ, ನಮಗೆ ಅರ್ಥವಾಗುವಂತೆ ಪ್ರಬಂಧದ ರೂಪದಲ್ಲಿ ಕೊಡುತ್ತವೆ. ಈ ಮ್ಯಾಟರ್‌ಜೆನ್‌ ಕೂಡ ಅಷ್ಟೆ. ಈಗಾಗಲೇ ನಮಗೆ ಪರಿಚಿತವಿರುವ ವಸ್ತುಗಳ ಗುಣ, ವಿಶೇಷ ರಚನೆಗಳೆಲ್ಲವನ್ನೂ ಮನದಲ್ಲಿಟ್ಟುಕೊಂಡು, ನಾವು ಕೇಳಿದ ಅಥವಾ ಕಲ್ಪಿಸಿದ ವಸ್ತುಗಳ ಗುಣ, ರಚನೆಗಳನ್ನು ಹೀಗಿರಬೇಕು ಎಂದು ಊಹಿಸುತ್ತದೆ. ಅನಂತರ, ಅದನ್ನು ರಚಿಸುವ ವಿಧಾನವನ್ನೂ ತಿಳಿಸುತ್ತದೆ.

ಚಾಟ್‌ಜಿಪಿಟಿಯಂತೆಯೇ ಮ್ಯಾಟರ್‌ಜೆನ್‌ ಕೂಡ ಈಗಾಗಲೇ ಇರುವ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಸದ್ಯಕ್ಕೆ ನಮಗೆ ಪರಿಚಯವಿರುವ ಸುಮಾರು ಆರುಲಕ್ಷ ಲೋಹ, ಅಲೋಹ, ಇವುಗಳ ಸಂಯುಕ್ತಗಳು, ಮಿಶ್ರಣಗಳು, ಮಿಶ್ರಲೋಹಗಳು ಹಾಗೂ ಕಂಪೋಸಿಟ್‌ ವಸ್ತುಗಳ ಮಾಹಿತಿ ಇರುವ ಮೆಟೀರಿಯಲ್ಸ್‌ ಪ್ರಾಜೆಕ್ಟ್‌, ಈ ವಸ್ತುಗಳ ವಿದ್ಯುತ್‌, ಕಾಂತೀಯ ಗುಣಗಳನ್ನು ವಿಶ್ಲೇಷಿಸುವ ಅಲೆಕ್ಸಾಂಡ್ರಿಯ, ಹಾಗೂ ಪರಿಚಿತವಿರುವ ವಸ್ತುಗಳಲ್ಲಿ ಅಣುಗಳ ಜೋಡಣೆಯನ್ನು ವಿವರಿಸುವ ಐಸಿಎಸ್‌ಡಿ ಡೇಟಬೇಸ್‌ ಮುಂತಾದ ಡೇಟಬೇಸುಗಳನ್ನೇ ಮ್ಯಾಟರ್‌ಜೆನ್ನನ್ನು ರೂಪಿಸಲು ಬಳಸಲಾಗಿದೆ. ಇಪ್ಪತ್ತು ಅಣುಗಳಿರುವ ನಿರ್ದಿಷ್ಟ ಗುಣವಿರುವ ಒಂದು ಲಕ್ಷಕ್ಕೂ ಹೆಚ್ಚು ವಸ್ತುಗಳನ್ನು ಅಥವಾ ಅವುಗಳ ರಚನೆಯನ್ನು ವಿನ್ಯಾಸ ಮಾಡಿದ್ದಾರೆ.

ಮ್ಯಾಟರ್‌ಜೆನ್‌ ಗುರುತಿಸಿದ ಈ ರಚನೆಗಳು ಕೇವಲ ಕಾಲ್ಪನಿಕ ರಚನೆಗಳಷ್ಟೆ. ಇವುಗಳು ಸೂಚಿಸುವ ವಸ್ತುಗಳನ್ನು ಪಡೆಯಬಹುದೇ? ಇದು ಪ್ರಶ್ನೆ. ಇದಕ್ಕಾಗಿ ಮೈಕ್ರೊಸಾಫ್ಟ್‌ ತಂಡ ಮತ್ತೂ ಒಂದು ಪ್ರಯತ್ನವನ್ನು ಮಾಡಿತು. ಸುಲಭವಾಗಿ ದೊರೆಯುವ ವಸ್ತುಗಳಿಂದ ಅತ್ಯಂತ ಅಧಿಕವಾದ ಅಂದರೆ 50, 100, 150, 200 ಗಿಗಾ ಪ್ಯಾಸ್ಕಲ್‌ ಕಾಂತಶಕ್ತಿ ಇರುವ ಅಯಸ್ಕಾಂತಗಳನ್ನು ತಯಾರಿಸಲು ಪ್ರಯತ್ನಿಸಿತು. ಮ್ಯಾಟರ್‌ಜೆನ್ನಿಗೆ ಸುಲಭವಾಗಿ ದೊರೆಯದ ಗ್ಯಾಡೊಲೀನಿಯಂ ಹಾಗೂ ಕೋಬಾಲ್ಟ್‌ ಇಲ್ಲದೆಯೇ ಇತರೆ ಲೋಹಗಳಿಂದ ಇಂತಹುದೊಂದು ಅಯಸ್ಕಾಂತದ ಮಿಶ್ರಲೋಹ ಸಾಧ್ಯವೇ ಎಂದು ಪ್ರಶ್ನಿಸಲಾಯಿತು. ಮ್ಯಾಟರ್‌ಜೆನ್‌ ಇದಕ್ಕಾಗಿ 8192 ವಸ್ತುಗಳನ್ನು ರಚಿಸಬಹುದು ಎಂದು ಕಲ್ಪಿಸಿತು. ಈ ವಸ್ತುಗಳಲ್ಲಿ ಆಕ್ಸಿಜನ್‌ ಇಲ್ಲದ, ಬೇರಾವ ವಸ್ತುಗಳ ರಚನೆಗೂ ಹೋಲದ ಹಾಗೂ ರಚನೆ ಸ್ಥಿರವಾಗಿರುವಂತಹ ವಸ್ತುಗಳನ್ನು ಹೆಕ್ಕುವಂತೆ ತಿಳಿಸಿದಾಗ, ಒಟ್ಟು ಎಪ್ಪತ್ತೈದು ವಿಶಿಷ್ಟ ರಚನೆಗಳನ್ನು ಮ್ಯಾಟರ್‌ಜೆನ್‌ ತಿಳಿಸಿತು. ಇವುಗಳನ್ನು ಪರಿಶೀಲಿಸಿದ ವಿಜ್ಞಾನಿಗಳು, ನಾಲ್ಕು ರಚನೆಗಳನ್ನು ಹೆಕ್ಕಿ ಅವನ್ನು ಪ್ರಯೋಗಶಾಲೆಯಲ್ಲಿ ತಯಾರಿಸಿದ್ದಾರೆ. ಆ ವಸ್ತುಗಳ ಕಾಂತಬಲವನ್ನು ಅಳೆದಿದ್ದಾರೆ. ಅವು ತಾವು ನಿಗದಿ ಪಡಿಸಿದ ಕಾಂತಬಲಕ್ಕೆ ಹೋಲುತ್ತಿದ್ದುದನ್ನು ಕಂಡಿದ್ದಾರೆ.

ಹೀಗೆ ನಿಯೋಡೈಮಿಯಂ, ಕೋಬಾಲ್ಟ್‌ ಇಲ್ಲದೆಯೇ ಕೇವಲ ಟ್ಯಾಂಟಾಲಂ, ಕ್ರೋಮಿಯಂ ಮತ್ತು ಆಕ್ಸಿಜನ್‌ ಇರುವ ಅತಿ ಬಲಶಾಲಿ ಅಯಸ್ಕಾಂತಗಳನ್ನು ತಯಾರಿಸಬಹುದು ಎಂದು ಕಂಡುಕೊಂಡಿದ್ದಾರೆ. ಇದೇ ಶೋಧವನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಬೇಕಿದ್ದರೆ ಕನಿಷ್ಠವೆಂದರೆ ಸಾವಿರವಾದರೂ ಮಾದರಿಗಳನ್ನು ತಯಾರಿಸಿ, ಪರೀಕ್ಷಿಸಬೇಕಾಗುತ್ತಿತ್ತು. ಅಷ್ಟು ಶ್ರಮ ಹಾಗೂ ಸಮಯವನ್ನು ಮ್ಯಾಟರ್‌ಜೆನ್‌ ಉಳಿಸಿದೆ.

ಮ್ಯಾಟರ್‌ಜೆನ್‌ ಬಳಸಿ ವಿನೂತನವಾದ, ವಿಶಿಷ್ಟ ಗುಣಗಳುಳ್ಳ ವಸ್ತುಗಳನ್ನು ಸೃಷ್ಟಿಸುವುದು ಸಾಧ್ಯ ಎನ್ನುತ್ತಾರೆ, ಮೈಕ್ರೊಸಾಫ್ಟ್‌ ಮುಖ್ಯಸ್ಥ ಸತ್ಯಾ ನಾದೆಲ್ಲ. ಇದು ರಾಸಾಯನಿಕ ಕ್ರಿಯೆಗಳನ್ನು ತ್ವರಿತಗೊಳಿಸುವ ಹೊಸ ಬಗೆಯ ಕೆಟಲಿಸ್ಟುಗಳನ್ನು ರೂಪಿಸಲು ನೆರವಾಗಬಹುದು. ಮಾಲಿನ್ಯ ನಿಯಂತ್ರಣ, ಔಷಧಗಳ ತಯಾರಿಕೆ, ಹಲವು ಸಾವಯವ ರಾಸಾಯನಿಕ ವಸ್ತುಗಳನ್ನು ತಯಾರಿಸುವ ಅಗ್ಗದ ವಿಧಾನಗಳಲ್ಲಿ ಬಳಸುವ ಕೆಟಲಿಸ್ಟುಗಳಿಗಾಗಿ ಹುಡುಕಾಟ ನಡದಿದೆ. ಹಾಗೆಯೇ ಸೂಪರ್‌ಕಂಡಕ್ಟರುಗಳು, ಅಂತರಿಕ್ಷದಲ್ಲಿ ಅತಿಯಾದ ಉಷ್ಣತೆಯನ್ನು ತಾಳಿಕೊಳ್ಳುವ ಹೆಂಚುಗಳು, ಕಾರ್ಬನ್‌ ಡಯಾಕ್ಸೈಡನ್ನು ಹೀರುವ ವಸ್ತುಗಳು ಹಾಗೂ ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ನೇರವಾಗಿ ಗಾಳಿಯಲ್ಲಿರುವ ನೈಟ್ರೊಜನನ್ನು ಹೀರುವ ವಸ್ತುಗಳನ್ನು ತಯಾರಿಸಲು ಇದು ನೆರವಾಗಬಲ್ಲುದು ಎಂಬುದು ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.