ADVERTISEMENT

ಅಡುಗೆಮನೆ ಆಗುತ್ತಿದೆ ಸ್ಮಾರ್ಟ್‌: ಎಷ್ಟೊಂದು ಬಗೆಯ ಸೌಲಭ್ಯಗಳು..

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 20:30 IST
Last Updated 19 ಅಕ್ಟೋಬರ್ 2021, 20:30 IST
Woman's Hand Using Home Control System On Cellphone With Various Icons In The KitchenWoman's Hand Holding Mobile Phone
Woman's Hand Using Home Control System On Cellphone With Various Icons In The KitchenWoman's Hand Holding Mobile Phone   

ಹಲವಾರು ಪ್ರಶ್ನೆಗಳಿಗೂ ಉತ್ತರ ನೀಡುವ ಸ್ಮಾರ್ಟ್‌ಫೋನ್‌ ಆ್ಯಪ್‌ಗಳು ಜನಪ್ರಿಯವಾಗುತ್ತಿವೆ. ಈಗಾಗಲೇ ಯಾವ ತಿಂಡಿ ಸೇವಿಸಿದರೆ ಎಷ್ಟು ಕ್ಯಾಲೋರಿಗಳು ನಮ್ಮ ದೇಹ ಸೇರುತ್ತದೆ ಎಂದು ತಿಳಿಸುವ ಅನೇಕ ಆ್ಯಪ್‌ಗಳು ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿವೆ.

ಟಿವಿಯಲ್ಲಿ ಪ್ರಸಾರವಾದ ಅಡುಗೆ ಕಾರ್ಯಕ್ರಮ, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹೊಸರುಚಿ, ಪ್ರವಾಸದಲ್ಲಿದ್ದಾಗ ಅಥವಾ ಮದುವೆ ಮೊದಲಾದ ಸಮಾರಂಭಗಳಲ್ಲಿ ಇಷ್ಟಪಟ್ಟು ಸವಿದ ತಿಂಡಿ–ತಿನಿಸು, ಹೀಗೆ ಎಷ್ಟೊಂದು ನೆನಪುಗಳು. ಆದರೆ ಈ ತಿಂಡಿ–ತಿನಿಸುಗಳನ್ನು ಮಾಡುವ ವಿಧಾನ ತಕ್ಷಣಕ್ಕೆ ನೆನಪಾಗುತ್ತಿಲ್ಲ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಒಂದು ಆ್ಯಪ್‌ ಮೂಲಕ ನಿಮಗೆ ಇಷ್ಟವಾದ ತಿಂಡಿ–ತಿನಿಸುಗಳನ್ನು ಮಾಡುವ ವಿಧಾನದ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದು. ತಿಂಡಿ ಇಷ್ಟವಾಗಿತ್ತು ಆದರೆ ಅದನ್ನು ಮಾಡುವುದು ಹೇಗೆ ಎಂದು ಗೊತ್ತಿಲ್ಲವೆಂದರೂ ಸಮಸ್ಯೆಯಿಲ್ಲ, ತಿಂಡಿ ತಿನಿಸಿನ ಉತ್ತಮ ಗುಣಮಟ್ಟದ ಫೋಟೊ ಅಥವಾ ವಿಡಿಯೊ ಇದ್ದರೂ ಸಾಕು, ಮಾಡುವ ವಿಧಾನವನ್ನು ನಿಮ್ಮ ಸ್ಮಾರ್ಟ್‌ಫೋನ್‌ ಆ್ಯಪ್‌ ನೀಡುತ್ತದೆ.

ADVERTISEMENT

ನಮಗೆ ಅಡುಗೆ ಮಾಡುವ ವಿಧಾನ ಗೊತ್ತು; ಆದರೆ ಮಾಡಲು ಬೇಕಾದ ತರಕಾರಿ, ಬೇಳೆ ಇತ್ಯಾದಿಗಳಿಗೆ ಸ್ಥಳೀಯ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ? ಅಥವಾ ನಾಲ್ಕು ಜನರಿಗೆ ಸಾಕಾಗುವಷ್ಟು ತಿಂಡಿ ಮಾಡುವ ವಿಧಾನ ಮತ್ತು ಅಗತ್ಯ ವಸ್ತುಗಳ ಪ್ರಮಾಣ ಗೊತ್ತಿದೆ, ಆದರೆ ಇಪ್ಪತ್ತು ಜನರಿಗೆ ಮಾಡಬೇಕಾದರೆ ಮಾಡುವ ವಿಧಾನ ಮತ್ತು ಪ್ರಮಾಣ ನಿಖರವಾಗಿ ಗೊತ್ತಾಗುವುದು ಹೇಗೆ? ಇಂತಹ ಹಲವಾರು ಪ್ರಶ್ನೆಗಳಿಗೂ ಉತ್ತರ ನೀಡುವ ಸ್ಮಾರ್ಟ್‌ಫೋನ್‌ ಆ್ಯಪ್‌ಗಳು ಜನಪ್ರಿಯವಾಗುತ್ತಿವೆ. ಈಗಾಗಲೇ ಯಾವ ತಿಂಡಿ ಸೇವಿಸಿದರೆ ಎಷ್ಟು ಕ್ಯಾಲೋರಿಗಳು ನಮ್ಮ ದೇಹ ಸೇರುತ್ತದೆ ಎಂದು ತಿಳಿಸುವ ಅನೇಕ ಆ್ಯಪ್‌ಗಳು ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿವೆ.

ಮನೆಗೆ ಬೇಕಾದ ದಿನಸಿ ಸಾಮಾನುಗಳನ್ನು ಆನ್‌ಲೈನ್‌ ಮೂಲಕ ಖರೀದಿ ಅಥವಾ ಅಂಗಡಿಗೆ ಹೋಗಿ ಖರೀದಿ ಮಾಡುವಾಗ ರಿಯಾಯತಿ ಮಾರಾಟ, ಕಾಂಬೋ ಆಫರ್‌ ಇತ್ಯಾದಿಗಳ ಲಾಭ ಪಡೆಯಲು ಮುಂದಾಗುತ್ತೇವೆ. ಈ ಭರಾಟೆಯಲ್ಲಿ ಮನೆಯಲ್ಲಿ ಈಗಾಗಲೇ ಇರುವ ದಿನಸಿ ಸಾಮಾನುಗಳನ್ನು ಮರೆತು ಖರೀದಿ ಮಾಡಿರುವುದು ಅರಿವಾದಾಗ ತಡವಾಗಿರುತ್ತದೆ. ಮನೆಯಲ್ಲಿ ಸ್ಟೋರ್‌ ರೂಮ್‌ ಅಥವಾ ಅಡುಗೆಮನೆಯಲ್ಲಿರುವ ದಿನಸಿ ಸಾಮಾನುಗಳ ಪ್ರಮಾಣ ಪ್ರತಿದಿನ ದೊರೆಯುವಂತೆ ಅನುವು ಮಾಡಿಕೊಡುವ ಸ್ಮಾರ್ಟ್‌ ಸ್ಟೋರೇಜ್‌ ಬಿನ್‌ಗಳು ಮತ್ತು ಮೊಬೈಲ್‌ ಆ್ಯಪ್‌ಗಳು ಜನಪ್ರಿಯವಾಗುತ್ತಿವೆ. ಒಂದು ದಿನಕ್ಕೆ ಸಾಕಾಗುವಷ್ಟು ಅಕ್ಕಿ ಮಾತ್ರವಿದೆ ಅಥವಾ ಎಣ್ಣೆ ಖಾಲಿಯಾಗಿದೆ ಎನ್ನುವ ಎಚ್ಚರಿಕೆಯ ಸಂದೇಶಗಳನ್ನು ಕೂಡ ಈ ಸ್ಮಾರ್ಟ್‌ ವ್ಯವಸ್ಥೆಯಿಂದ ಪಡೆಯಲು ಸಾಧ್ಯವಿದೆ. ಅನಗತ್ಯ ಖರ್ಚು ತಡೆಯಲು ಮತ್ತು ಮನೆಯಲ್ಲಿ ಪುಟ್ಟದೊಂದು ದಿನಸಿ ಅಂಗಡಿಗೆ ಬೇಕಾಗುವಷ್ಟು ಸಾಮಾನುಗಳು ಸಂಗ್ರಹವಾಗುವುದನ್ನು ತಡೆಯಲು ಇಂತಹ ವ್ಯವಸ್ಥೆ ನೆರವಾಗುತ್ತದೆ.

ಅಡುಗೆ ಮಾಡಲು ಮೈಕ್ರೋವೇವ್‌, ಓವನ್‌ ಬಳಸುವವರಿಗೆ, ಸ್ಮಾರ್ಟ್‌ ಕ್ಯಾಮೆರಾ ಇರುವ ಓವನ್‌ಗಳು ದೊರೆಯುತ್ತಿವೆ. ಇಂತಹ ಓವನ್‌ ಬಳಸುವಾಗ, ಈ ಕ್ಯಾಮೆರಾ ಲೈವ್ ಇಮೇಜ್‌ಗಳನ್ನು ಇಂಟರ್‌ನೆಟ್‌ ಮೂಲಕ ಸ್ಮಾರ್ಟ್‌ಫೋನ್‌ಗೆ ರವಾನಿಸುತ್ತದೆ. ಹೀಗಾಗಿ, ನೀವು ಅಡುಗೆಮನೆಯಲ್ಲಿ ಇಲ್ಲದಿದ್ದರೂ ಒವನ್‌ನಲ್ಲಿ ಆಗುತ್ತಿರುವ ಅಡುಗೆಯನ್ನು ಕುರಿತು ಸ್ಮಾರ್ಟ್‌ಫೋನ್‌ ಮೂಲಕ ಮಾಹಿತಿ ಪಡೆಯಬಹುದು. ಅಷ್ಟೇ ಅಲ್ಲ, ಓವನ್‌ ಕಾರ್ಯಾಚರಣೆಯ ನಿಯಂತ್ರಣವನ್ನು ಕೂಡ ಸ್ಮಾರ್ಟ್‌ಫೋನ್‌ ಮೂಲಕ ಮಾಡಬಹುದಾಗಿದೆ.

ಮೈಕ್ರೋವೇವ್‌ ಓವನ್‌ಗಳಂತೆ, ಈಗ ಸ್ಮಾರ್ಟ್‌ ರೆಫ್ರಿಜರೇಟರ್‌ಗಳು ಜನಪ್ರಿಯವಾಗುತ್ತಿವೆ. ಇಂತಹ ರೆಫ್ರಿಜರೇಟರ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ ವ್ಯವಸ್ಥೆಯನ್ನು ಬಳಸಿ, ರೆಫ್ರಿಜರೇಟರ್‌ನಲ್ಲಿ ಇಟ್ಟಿರುವ ಪದಾರ್ಥಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ರೆಫ್ರಿಜರೇಟರ್‌ನಲ್ಲಿ ಇಟ್ಟಿರುವ ಹಾಲು, ಮೊಸರು, ತರಕಾರಿ ಇತ್ಯಾದಿಗಳನ್ನು ಯಾವ ದಿನ ಮತ್ತು ಸಮಯದಂದು ಇಡಲಾಯಿತು. ಹೆಚ್ಚು ಬಳಕೆಯಾಗುವ ಉತ್ಪನ್ನಗಳು ಯಾವುದು ಮತ್ತು ಲಭ್ಯವಿರುವ ಉತ್ಪನ್ನಗಳನ್ನು ಬಳಸಿ ಯಾವ ಅಡುಗೆ ಮಾಡಬಹುದು – ಹೀಗೆ ವಿವಿಧ ಮಾಹಿತಿಯನ್ನು ಈ ಸ್ಮಾರ್ಟ್‌ ರೆಫ್ರಿಜರೇಟರ್‌ಗಳು ಮತ್ತು ಅವುಗಳಿಗೆ ಸೂಕ್ತವಾದ ಸ್ಮಾರ್ಟ್‌ ಫೋನ್‌ ಆ್ಯಪ್‌ಗಳು ನೀಡುತ್ತವೆ.

ಪಾತ್ರೆ ತೊಳೆಯಲು ಬಳಸುವ ನೀರು ಇರಬಹುದು, ಅಡುಗೆ ತ್ಯಾಜ್ಯ ಸೇರುವ ಕಸದ ಬುಟ್ಟಿ ಇರಬಹುದು – ಇವುಗಳು ಕೂಡ ಈಗ ಸ್ಮಾರ್ಟ್‌ ಆಗುತ್ತಿವೆ. ನೀರು ಪೋಲಾಗದಂತೆ ಕೆಲಸ ಮಾಡುವ ನಲ್ಲಿಗಳು, ಯಾವ ತರಕಾರಿ, ಹಣ್ಣು, ಸೊಪ್ಪು ಅಥವಾ ಅಡುಗೆ ಪದಾರ್ಥ ಹೆಚ್ಚಾಯಿತು ಅಥವಾ ಹಾಳಾಯಿತು ಎಂದು ಕಸದ ಬುಟ್ಟಿ ಸೇರಿತು ಎನ್ನುವ ಮಾಹಿತಿ ನೀಡುವ ಕಸದ ಬುಟ್ಟಿ, ಅಡುಗೆಮನೆಯಲ್ಲಿ ವಿದ್ಯುತ್‌ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ನೆರವಾಗುವ ಸ್ಮಾರ್ಟ್‌ ವಿದ್ಯುತ್‌ ಉಪಕರಣಗಳು ಮತ್ತು ದೀಪಗಳು – ಹೀಗೆ ಹಲವಾರು ಅನುಕೂಲತೆಗಳನ್ನು ನೀಡಲು ಕಾರಣವಾಗಿದೆ, ಅರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ.

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌, ಅಡುಗೆ ಅನಿಲ ಸೋರಿಕೆ ಮೊದಲಾದ ಸಮಸ್ಯೆಗಳು, ಅಡುಗೆಮನೆಯಲ್ಲಿ ಹಿರಿಯರು ಇಲ್ಲದಿರುವಾಗ ಮಕ್ಕಳು ಕುತೂಹಲದಿಂದ ಗ್ಯಾಸ್‌, ಓವನ್‌, ಮಿಕ್ಸಿ ಇತ್ಯಾದಿಗಳನ್ನು ಬಳಸಲು ಮುಂದಾಗುವಂತಹ ಸಂದರ್ಭಗಳಲ್ಲಿ ಹಿರಿಯರಿಗೆ ಎಚ್ಚರಿಕೆ ನೀಡುವ ಸುರಕ್ಷತಾ ಸೌಲಭ್ಯಗಳನ್ನು ಸ್ಮಾರ್ಟ್‌ ಅಡುಗೆಮನೆಯಲ್ಲಿ ನೀಡಲು ಅಗತ್ಯ ತಂತ್ರಜ್ಞಾನದ ಅಭಿವೃದ್ಧಿ ನಡೆದಿದೆ.

ಸ್ಮಾರ್ಟ್‌ ಸಿಟಿ ಯೋಜನೆಗಳಂತೆ, ಸ್ಮಾರ್ಟ್‌ ಮನೆ ಅಥವಾ ಸ್ಮಾರ್ಟ್‌ ಅಡುಗೆಮನೆ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತಿದೆ. ಭಾರತೀಯ ಅಡುಗೆಯ ವಿಧಾನಗಳು, ದಿನಸಿ ಮೊದಲಾದ ಸಾಮಾನುಗಳನ್ನು ಕುರಿತು ಮಾಹಿತಿಯನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಆಧಾರಿತ ರೆಫ್ರಿಜರೇಟರ್‌ಗಳು, ಮೈಕ್ರೋವೇವ್‌ ಮೊದಲಾದ ಉಪಕರಣಗಳು ಹಾಗೂ ಸ್ಮಾರ್ಟ್‌ಫೋನ್‌ ಆ್ಯಪ್‌ಗಳಲ್ಲಿ ದೊರೆಯುವಂತೆ ಮಾಡುವ ಕೆಲಸ ಸಾಕಷ್ಟು ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.