ADVERTISEMENT

ಒನ್‌ಪ್ಲಸ್‌ 6ಟಿ ಅನ್‌ಲಾಕ್‌ ದಿ ಸ್ಪೀಡ್‌

ವಿಶ್ವನಾಥ ಎಸ್.
Published 5 ಡಿಸೆಂಬರ್ 2018, 19:45 IST
Last Updated 5 ಡಿಸೆಂಬರ್ 2018, 19:45 IST
OnePlus 6T
OnePlus 6T   

ಒನ್‌ಪ್ಲಸ್‌ಕಂಪನಿ ‘ನೆವರ್‌ಸೆಟಲ್‌‘ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ‘ಈಗಿರುವುದಕ್ಕೇ ತೃಪ್ತಿ ಪಟ್ಟುಕೊಳ್ಳಬೇಡಿ, ಇನ್ನೂ ಹೊಸತು ಬರಲಿದೆ’ ಎನ್ನುವುದನ್ನು ಪ್ರತಿ ಬಾರಿಯೂ ಖಾತರಿಪಡಿಸುತ್ತಲೇ ಇದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಆದಾಗಲೆಲ್ಲಾ ಸಾಲುಗಟ್ಟಿ ನಿಂತು ಖರೀದಿಸುವ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

ಒನ್‌ಪ್ಲಸ್‌6ನ ಸುಧಾರಿತ ಆವೃತ್ತಿ ಒನ್‌ಪ್ಲಸ್‌6ಟಿ (Oneplus 6t). ಇದು ಇನ್ನಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಡಿಸ್‌ಪ್ಲೆ, ಕ್ಯಾಮೆರಾ ಕ್ಲಾರಿಟಿ, ಗರಿಷ್ಠ ವೇಗ, ಸಂಗ್ರಹಣಾ ಸಾಮರ್ಥ್ಯ, ಸೆಕ್ಯುರಿಟಿ ಹೀಗೆ ಬಹಳಷ್ಟು ಬದಲಾವಣೆಗಳನ್ನು ಮೈಗೂಡಿಸಿಕೊಂಡಿದೆ. ‘ಅನ್‌ಲಾಕ್‌ ದಿ ಸ್ಪೀಡ್’ ಎನ್ನುವುದು ಕೇವಲ ಟ್ಯಾಗ್‌ಲೈನ್‌ ಅಷ್ಟೇ ಅಲ್ಲದೇ ಕಾರ್ಯರೂಪದಲ್ಲಿಯೂ ಇದೆ.

ಪ್ರತಿ ಹೊಸ ಸ್ಮಾರ್ಟ್‌ಫೋನ್‌ನಲ್ಲಿಯೂ ಕ್ಯಾಮೆರಾಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. 6ಟಿ ಕ್ಯಾಮೆರಾ ಕ್ಲಾರಿಟಿ ಅಚ್ಚರಿಪಡುವಂತಿದೆ. ಪೋರ್ಟ್‌ಟ್ರೇಟ್‌, ನೈಟ್‌ಮೋಡ್‌ ಆಯ್ಕೆಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದು. ಮಂದಬೆಳಕಿನಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದು. ರಾತ್ರಿ ವೇಳೆ, ಮನೆಯೊಳಗೆ ಫ್ಲ್ಯಾಷ್‌ ಇಲ್ಲದೆ ತೆಗೆದರೆ ಚಿತ್ರದ ಗುಣಮಟ್ಟ ಸ್ವಲ್ಪ ಕಡಿಮೆಯಾಗುತ್ತದೆ. ಸ್ಲೋ ಮೋಷನ್‌ ಆಯ್ಕೆ ಇರುವುದರಿಂದ ಪ್ರತಿ ಚಲನೆಯನ್ನೂ ಸೂಕ್ಷ್ಮವಾಗಿ ಚಿತ್ರೀಕರಿಸಬಹುದು. ಎಫ್‌ಎಚ್‌ಡಿ ಮತ್ತು 4ಕೆ ರೆಸಲ್ಯೂಷನ್‌ನಲ್ಲಿ ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳ ವಿಡಿಯೊ ಮಾಡಬಹುದು.

ADVERTISEMENT

ಅನ್‌ಲಾಕ್‌

ಫಿಂಗರ್‌ಪ್ರಿಂಟ್‌ ಮತ್ತು ಫೇಸ್‌ ಅನ್‌ಲಾಕ್‌ ಆಯ್ಕೆಗಳು ಬೆರಗು ಮುಡಿಸುವಂತಿವೆ. 6ನಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಫೋನಿನ ಹಿಂಭಾಗದಲ್ಲಿತ್ತು. ಆದರೆ 6ಟಿನಲ್ಲಿ ಅದನ್ನು ಮುಂಭಾಗದಲ್ಲಿ ಪರದೆಯ ಕೆಳಗಡೆ ನೀಡಲಾಗಿದೆ. ಫೇಸ್‌ ಅನ್‌ಲಾಕ್‌ ಆಯ್ಕೆಯು, ಫೋನ್‌ಲಾಕ್ ಆಗಿಯೇ ಇಲ್ಲವೇನೋ ಎನ್ನುವ ಭಾವನೆ ಮೂಡಿಸುವಂತೆ ತಕ್ಷಣವೇ ಅನ್‌ಲಾಕ್‌ ಆಗುತ್ತದೆ.

ಹೆಚ್ಚು ವೇಗ

ಕ್ವಾಲ್ಕಮ್‌ ಸ್ನ್ಯಾಪ್‌ ಡ್ರ್ಯಾಗನ್‌ 845 ಗರಿಷ್ಠ 8 ಜಿಬಿ ರ್‍ಯಾಮ್‌ (RAM)ಹೊಂದಿದ್ದು ಅತ್ಯಂತ ನಯ ಮತ್ತು ವೇಗದ ಅನುಭವ ನೀಡುತ್ತದೆ. ಗೇಮ್‌ ಆಡುವಾಗ, ವಿಡಿಯೊ ಚಿತ್ರೀಕರಿಸುವಾಗ... ಹೀಗೆ ಯಾವುದೇ ಸಂದರ್ಭದಲ್ಲಿಯೂ ಫೋನ್‌ಹ್ಯಾಂಗ್‌ ಆದ ಅಥವಾ ಸ್ಲೋ ಆದ ಅನುಭವ ಆಗಿಲ್ಲ. ಏಕಕಾಲಕ್ಕೆ ಎರಡು ಆ್ಯಪ್‌ಗಳನ್ನು ಬಳಸಬಹುದು. ಗೇಮಿಂಗ್‌ಗೂ ಅತ್ಯುತ್ತಮ ಫೋನ್‌ ಇದು.

ತೆರೆದಿಟ್ಟ ಒಂದು ಆ್ಯಪ್‌ ಬ್ಯಾಗ್ರೌಂಡ್‌ನಲ್ಲಿ ಬ್ಯಾಟರಿಯನ್ನು ಹೆಚ್ಚು ವ್ಯಯಿಸುತ್ತಿದೆ ಎಂದಾದರೆ ತಕ್ಷಣವೇ ಪರದೆಯ ಮೇಲೆ ಎಚ್ಚರಿಕೆ ಸಂದೇಶ ಮೂಡುತ್ತದೆ. ಆಗ ಆ ಆ್ಯಪ್ ಅನ್ನು ನಿಷ್ಕ್ರಿಯಗೊಳಿಸಬಹುದು. ಗೇಮ್‌ ಆಡುತ್ತಿರುವಾಗಲೂ ಇ–ಮೇಲ್‌, ಕರೆ, ಸಂದೇಶಗಳನ್ನು ತೋರಿಸುವ ವ್ಯವಸ್ಥೆ ಇದೆ. ಆಟಕ್ಕೆ ಅಡ್ಡಿಯಾಗದಂತೆ ಮಾಡಲು ಸೆಟ್ಟಿಂಗ್ಸ್‌ ಮಾಡಿಕೊಳ್ಳಬಹುದು.

ಬ್ಯಾಟರಿ ಸಾಮರ್ಥ್ಯ 3,700 ಎಂಎಎಚ್‌ ಇದೆ. ಡ್ಯಾಷ್‌ ಚಾರ್ಜರ್‌ ಇರುವುದರಿಂದ ಒಂದು ಗಂಟೆಯಲ್ಲಿ ಶೇ 100ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಬಾಳಿಕೆ ಅವಧಿ ಒಂದು ದಿನ ಮಾತ್ರ. ಫೋನ್‌ನ ವೇಗ ಮತ್ತು ಕ್ಯಾಮೆರಾ ಕ್ಲಾರಿಟಿಯ ದೃಷ್ಟಿಯಿಂದ ನೋಡುವುದಾದರೆ ಬ್ಯಾಟರಿ ಸಾಮರ್ಥ್ಯ ಇನ್ನೂ ಉತ್ತಮಗೊಳಿಸಬಹುದು.

ಮೊಬೈಲ್‌ನ ಅಂಚಿನವರೆಗೂ ಪರದೆ ಇದೆ. ಸ್ಕ್ರೀನ್‌ಟು ಬಾಡಿ ಅನುಪಾತದಲ್ಲಿ ಶೇ 85ರಷ್ಟಿದೆ. ಸ್ಕ್ರೀನ್‌ಡಿಸ್‌ಪ್ಲೇ ಬ್ರೈಟ್‌ನೆಸ್‌ ಹೊಂದಿಸಿಕೊಳ್ಳಲು ಅವಕಾಶವಿದೆ. ಆಟೊ ಅಡ್ಜೆಸ್ಟ್ ಆಯ್ಕೆಯನ್ನೂ ಚಾಲನೆಗೊಳಿಸಬಹುದು. ಇದಲ್ಲದೆ ನೈಟ್‌ಮೋಡ್‌, ರೀಡಿಂಗ್‌ಮೋಡ್, ಅಡಾಪ್ಟಿವ್‌ಬ್ರೈಟ್‌ನೆಸ್‌ ಆಯ್ಕೆಗಳೂ ಇದರಲ್ಲಿವೆ. ಫೋನ್‌ನ ಹಿಂಭಾಗ ನಯವಾಗಿದೆ. ಹೀಗಾಗಿ ಬ್ಯಾಕ್‌ ಪೌಚ್‌ ಬಳಸದೇ ಇದ್ದರೆ ಫೋನ್‌ ಕೈಜಾರಿ ಬೀಳುವ ಸಾಧ್ಯತೆಯೇ ಹೆಚ್ಚು. ಇದೇ ಕಾರಣಕ್ಕೆ ಕಂಪನಿಯೇ ಒಂದು ಪಾರದರ್ಶಕ ಬ್ಯಾಕ್‌ ಪೌಚ್‌ ನೀಡಿದೆ.

ಹೆಡ್‌ಫೋನ್‌ಜಾಕ್‌

ಸಾಂಪ್ರದಾಯಿಕ 3.5 ಎಂಎಂ ಹೆಡ್‌ಫೋನ್‌ ಜಾಕ್‌ ಕೈಬಿಡಲಾಗಿದೆ. ಅದಕ್ಕೆ ಬದಲಾಗಿ ಯುಎಸ್‌ಬಿ ಸಿ ಬಳಸಿದೆ. ಹೀಗಾಗಿ ಹೆಡ್‌ಫೋನ್‌ ಬುಲೆಟ್‌ ಸಹ ‘ಸಿ’ ಆಕಾರದಲ್ಲಿಯೇ ಇದೆ. ಹೆಡ್‌ಫೋನ್‌ಗೆಂದು ಪ್ರತ್ಯೇಕ ಪೋರ್ಟ್‌ ಇಲ್ಲ. ಚಾರ್ಜಿಂಗ್‌ ಪೋರ್ಟ್‌ನಲ್ಲಿಯೇ ಹೆಡ್‌ಫೋನ್‌ ಸಿಕ್ಕಿಸುವಂತೆ ಮಾಡಲಾಗಿದೆ. ಚಾರ್ಜ್‌ಮಾಡಲು, ಹೆಡ್‌ಫೋನ್ ಬಳಸಲು ಒಂದೇ ಪೋರ್ಟ್‌ ಹೆಚ್ಚು ಬಾರಿ ಬಳಕೆಯಾಗುವುದರಿಂದ ದೀರ್ಘಕಾಲದವರೆಗೆ ಬಾಳಿಕೆ ಬರುವುದು ಅನುಮಾನ.

3.5 ಎಂಎಂ ಹೆಡ್‌ಫೋನ್‌ ಹೊಂದಿರುವವರು ನಿರಾಶೆಗೊಳಗಾಗುವ ಅಗತ್ಯ ಇಲ್ಲ. ಅದಕ್ಕೂ ಒಂದು ಪರಿಹಾರ ಇದೆ. ಕಂಪನಿ ‘ಸಿ’ ಕನೆಕ್ಟರ್‌ ನೀಡಿದೆ. ಅದರ ಮೂಲಕ 6ಟಿಗಿಂತಲೂ ಹಳೆಯ ಫೋನ್‌ಗಳ ಹೆಡ್‌ಫೋನ್‌ ಬಳಸಬಹುದು.

ಕಡಿಮೆ ಬೆಲೆಯ ಫೋನ್‌ ಹೊಂದಿರುವವರಿಗೆ ಇದು ದುಬಾರಿ ಎನಿಸಬಹುದು. ಆದರೆ ಪ್ರೀಮಿಯಂ ವಿಭಾಗದಲ್ಲಿ ಈ ರೀತಿಯ ಫೀಚರ್‌ಗಳನ್ನು ಬಯಸುವವರಿಗೆ ಬೆಲೆಗೆ ತಕ್ಕ ಪೋನ್‌ ಇದಾಗಿದೆ. ‘ಸ್ಯಾಮ್ಸಂಗ್‌ ಗೆಲಕ್ಸಿ ಎಸ್‌’ ಪ್ಲಸ್‌ಗಿಂತಲು ಕಡಿಮೆ ಬೆಲೆ ಮತ್ತು ಅದಕ್ಕಿಂತಲೂ ವೈಶಿಷ್ಯಗಳು ಇದರಲ್ಲಿವೆ.‌

ಬೆಲೆ ವಿವರ
ಒನ್‌ಪ್ಲಸ್‌6; 6ಟಿ
6/64 ಜಿಬಿ; ₹34,999
8/128 ಜಿಬಿ; ₹39,999

ಒನ್‌ಪ್ಲಸ್‌ 6ಟಿ
6/128 ಜಿಬಿ; 37,999
8/128 ಜಿಬಿ; ₹41,999
8/256 ಜಿಬಿ; ₹ 45,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.