ADVERTISEMENT

ಅತಿ ವೇಗದ ಇಂಟರ್‌ನೆಟ್‌ ಡೇಟಾ ಪರೀಕ್ಷೆ: ಕ್ಷಣದಲ್ಲಿ 1,000 ಸಿನಿಮಾ ಡೌನ್‌ಲೋಡ್!

ಏಜೆನ್ಸೀಸ್
Published 23 ಮೇ 2020, 10:58 IST
Last Updated 23 ಮೇ 2020, 10:58 IST
ಇಂಟರ್‌ನೆಟ್‌ ಸಂಪರ್ಕಕ್ಕಾಗಿ ಬಳಕೆಯಾಗುವ ಆಪ್ಟಿಕಲ್‌ ಫೈಬರ್‌–ಸಾಂದರ್ಭಿಕ ಚಿತ್ರ
ಇಂಟರ್‌ನೆಟ್‌ ಸಂಪರ್ಕಕ್ಕಾಗಿ ಬಳಕೆಯಾಗುವ ಆಪ್ಟಿಕಲ್‌ ಫೈಬರ್‌–ಸಾಂದರ್ಭಿಕ ಚಿತ್ರ   

ಮೆಲ್ಬರ್ನ್: ವಿಜ್ಞಾನಿಗಳು ವಿಶ್ವದಲ್ಲಿಯೇ ಅತಿ ವೇಗದ ಇಂಟರ್‌ನೆಟ್‌ ಡೇಟಾ ಸಂಪರ್ಕ ಸಾಧಿಸಿದ್ದು, ಎಚ್‌ಡಿ ಗುಣಮಟ್ಟದ 1,000 ಸಿನಿಮಾಗಳನ್ನು ಕ್ಷಣದಲ್ಲಿ ಡೌನ್‌ಲೋಡ್‌ ಮಾಡುವಷ್ಟು ವೇಗ ಹೊಂದಿದೆ. ಆಪ್ಟಿಕಲ್‌ ಚಿಪ್‌ ಬಳಸಿ ಈ ಅಭಿವೃದ್ಧಿ ಮಾಡಲಾಗಿದ್ದು, ಜಗತ್ತಿನಾದ್ಯಂತ ನೆಟ್‌ವರ್ಕ್‌ ಸಂಪರ್ಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಲಿದೆ.

ಇಂಟರ್‌ನೆಟ್‌ ಸೌಕರ್ಯಗಳಿಗೆ ಬೇಡಿಕೆ ಹೆಚ್ಚಿರುವ ರಾಷ್ಟ್ರಗಳಿಗೆ ಟೆಲಿಕಮ್ಯುನಿಕೇಷನ್‌ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಅನ್ವೇಷಣೆ ಸಹಕಾರಿಯಾಗಲಿದೆ. ಈ ಸಂಬಂಧ ನೇಚರ್‌ ಕಮ್ಯುನಿಕೇಷನ್ಸ್‌ನಲ್ಲಿ ಅಧ್ಯಯ ವರದಿ ಪ್ರಕಟಗೊಂಡಿದೆ.

ಆಸ್ಟ್ರೇಲಿಯಾದ ಮೊನಾಷ್ ಯೂನಿವರ್ಸಿಟಿಯ ಬಿಲ್‌ ಕಾರ್ಕೊರನ್‌ ಸೇರಿದಂತೆ ಹಲವು ಸಂಶೋಧಕರು ನಡೆಸಿರುವ ಪರೀಕ್ಷೆಯಲ್ಲಿಪ್ರತಿ ಸೆಕೆಂಡ್‌ಗೆ 44.2 ಟೆರಾಬಿಟ್ಸ್‌ (ಟಿಬಿಪಿಎಸ್‌) ವೇಗದ ಡೇಟಾ ದಾಖಲಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಫೈಬರ್‌ ಆಪ್ಟಿಕ್‌ ತಂತ್ರಜ್ಞಾನದೊಂದಿಗೆ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ನೆಟವರ್ಕ್‌ನಲ್ಲಿ ಬಳಸುವಂತಹ ಒಂದು ಹೊಸ ಸಾಧನವನ್ನು ಉಪಯೋಗಿಸಿ ಅತ್ಯಂತ ವೇಗದ ಡೇಟಾ ಸಂಪರ್ಕ ಸಾಧಿಸಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಆರ್‌ಎಂಐಟಿ ಯೂನಿವರ್ಸಿಟಿಯಿಂದ ಮೊನಾಷ್ ಯೂನಿವರ್ಸಿಟಿಯ ಕ್ಲೇಟನ್‌ ಕ್ಯಾಂಪಸ್‌ ವರೆಗಿನ 76.6 ಕಿ.ಮೀ ಆಪ್ಟಿಕಲ್‌ ಫೈಬರ್‌ನಲ್ಲಿ ಈ ಪರೀಕ್ಷೆ ನಡೆಸಲಾಗಿದೆ. ಉಪಯೋಗಿಸಲಾಗಿರುವ ಹೊಸ ಸಾಧನವು 80 ಲೇಸರ್‌ಗಳಿಗೆ ಬದಲಾಗಿ ಬಳಸಬಹುದಾಗಿದ್ದು, ಮೈಕ್ರೊ–ಕಾಂಬ್‌ ಎಂದು ಕರೆಯಲಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಟೆಲಿಕಮ್ಯುನಿಕೇಷನ್‌ ಸಾಧನಗಳಿಗಿಂತ ಚಿಕ್ಕದು ಹಾಗೂ ಹಗುರವಾದುದಾಗಿದೆ.

ಆಪ್ಟಿಕಲ್‌ ಫೈಬರ್‌ಗೆ ಮೈಕ್ರೊ–ಕಾಂಬ್‌ ಅಳವಡಿಸಿ ಗರಿಷ್ಠ ಮಟ್ಟದ ಡೇಟಾ ರವಾನಿಸಲಾಗಿದ್ದು, 4 ಟೆರಾಹರ್ಟ್ಸ್‌ ಬ್ಯಾಂಡ್‌ವಿಡ್ತ್‌ನಲ್ಲಿ ಗರಿಷ್ಠ ಇಂಟರ್‌ನೆಟ್‌ ಬಳಕೆ ಪರೀಕ್ಷಿಸಲಾಗಿದೆ. ಪ್ರಯೋಗಾಲಯದ ಹೊರಗೆ ಇದೇ ಮೊದಲ ಬಾರಿಗೆ ಮೈಕ್ರಿ–ಕಾಂಬ್‌ ಪರೀಕ್ಷೆನಡೆದಿದೆ.

ಕೊರೊನಾ ವೈರಸ್‌ ಸೊಂಕು ತಡೆಗಾಗಿ ಅಳವಡಿಸಿಕೊಳ್ಳಲಾದ ಲಾಕ್‌ಡೌನ್‌ನಿಂದಾಗಿ ಇಂಟರ್‌ನೆಟ್‌ ಬಳಕೆ ಹಾಗೂ ಬೇಡಿಕೆ ಹೆಚ್ಚಿದೆ. ಇಂಟರ್‌ನೆಟ್‌ ಸಂಪರ್ಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿರುವುದು ಇದರಿಂದ ತಿಳಿದುಬಂದಿದೆ.

ಪರೀಕ್ಷಿಸಲಾಗುತ್ತಿರುವ ಹೊಸ ಸಂಪರ್ಕ ಕ್ರಾಂತಿಯಿಂದ ಸ್ವಯಂ ಚಾಲಿತ ಕಾರುಗಳು, ಭವಿಷ್ಯದ ಸಾರಿಗೆ, ಔಷಧಿ, ಶಿಕ್ಷಣ, ಹಣಕಾಸು ಹಾಗೂ ಇ–ಕಾಮರ್ಸ್‌ ವಲಯಗಳಿಗೆ ಉಪಯುಕ್ತವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮೈಕ್ರೊ –ಕಾಂಬ್‌ ಚಿಪ್‌ಗಳಿಗೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಿಂದ ಪ್ರಮುಖ ಸಂಶೋಧನೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.