ADVERTISEMENT

ಯಂತ್ರ ಮಾನವನ ಭೇಟಿಗೆ ಮುಕ್ತಾವಕಾಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 19:45 IST
Last Updated 15 ಡಿಸೆಂಬರ್ 2019, 19:45 IST
ಸೈನ್ಸ್‌ ಇನ್‌ ಆ್ಯಕ್ಷನ್‌
ಸೈನ್ಸ್‌ ಇನ್‌ ಆ್ಯಕ್ಷನ್‌   

ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಜ್ಞಾನಿಕ ಮನೋಭಾವವನ್ನು ಸಾರ್ವಜನಿಕರಲ್ಲಿ ಅದರಲ್ಲಿಯೂ ಮುಖ್ಯವಾಗಿ ಯುವಜನತೆಯಲ್ಲಿ ವ್ಯಾಪಕಗೊಳಿಸುವ ಆಶಯದ ‘ಸೈನ್ಸ್ ಇನ್ ಆ್ಯಕ್ಷನ್’ ವಿಜ್ಞಾನ ಮೇಳವು ಜಯನಗರದ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಡಿ. 16,17 ಮತ್ತು 18ರಂದು ಮೂರು ದಿನಗಳ ಕಾಲ ನಡೆಯಲಿದೆ.

ವಿಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆ, ಪ್ರಯೋಗ ಮುಂತಾದವುಗಳಲ್ಲಿ ಆಸಕ್ತರಾಗಿರುವ ಯುವ ಪೀಳಿಗೆಯನ್ನು ಮುಖ್ಯವಾಗಿ ದೃಷ್ಟಿಯಲ್ಲಿಟ್ಟುಕೊಂಡು ಸಂಘಟಿಸಿರುವ ಮೇಳ ಇದಾಗಿದೆ. ಬೆಳಿಗ್ಗೆ 10.30 ರಿಂದ ಸಂಜೆ 5ರವರೆಗೂ ವೀಕ್ಷಣೆಗೆ ಮುಕ್ತ. ಪ್ರವೇಶ ಉಚಿತ. ಯಂತ್ರಮಾನವ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿರಲಿದೆ. ವಿಜ್ಞಾನ ವಿಕಾಸ ಪಥದ ಭಾಗವಾಗಿರುವ ನೂರಾರು ಸಂಶೋಧನಾ ಮಾಡೆಲ್‌ಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ.

ಬಿ.ವಿ. ಜಗದೀಶ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರೂ ತಾರಾಲಯಗಳ (ಪ್ಲಾನೆಟೋರಿಯಂ) ಸಂಯುಕ್ತಾಶ್ರಯದಲ್ಲಿ ಮೇಳ ನಡೆಯುತ್ತದೆ ಎಂದು ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎ.ಎಚ್.ರಾಮರಾವ್ ತಿಳಿಸಿದ್ದಾರೆ. ಅಮೆರಿಕಾದ ಫ್ಲೋರಿಡಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಸ್.ಎಸ್. ಅಯ್ಯಂಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ADVERTISEMENT

ಸಂಚಾರಿ ತಾರಾಲಯ

ರಾಜಭವನದ ಬಳಿಯಲ್ಲಿರುವ ತಾರಾಲಯವನ್ನು ನೋಡಿದವರುಂಟು. ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಂಚಾರಿ ತಾರಾಲಯವು ನಭೋಮಂಡಲದ ವೈಚಿತ್ರ್ಯ ವಿಶೇಷ ಸವಿಯುವ ಅವಕಾಶ ಕಲ್ಪಿಸಿ ಆಸಕ್ತರ ಮನಸ್ಸನ್ನು ತಣಿಸಲಿದೆ. ಕಳೆದ ಬುಧವಾರ 50ನೇ ಬಾಹ್ಯಾಕಾಶ ನೌಕೆ ಪಿಎಸ್‌ಎಲ್‌ವಿ ಗಗನಕ್ಕೆ ಚಿಮ್ಮುವುದರೊಂದಿಗೆ ನಮ್ಮ ದೇಸಿ ಬಾಹ್ಯಾಕಾಶ ವಿಜ್ಞಾನ, ಜಾಗತಿಕ ದಾಖಲೆಯ ಮತ್ತೊಂದು ಮಜಲನ್ನು ಪ್ರವೇಶಿಸಿತು. ಇಸ್ರೋದಲ್ಲಿ ಇಂಥ ಬಾಹ್ಯಾಕಾಶ ನೌಕೆಯ ಪೂರ್ವವೂ, ಅಪೂರ್ವವೂ ಆದ ಮಾದರಿಗಳನ್ನು ಸಂರಕ್ಷಿಸಿಡಲಾಗಿದೆ. ಆ ಪೈಕಿ ಕೆಲವನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಹ್ಯುಮನಾಯ್ಡ್, 3-ಡಿ ಪ್ರಿಂಟರ್ ಮುಂತಾದವು ಮೇಳದ ಆಕರ್ಷಣೆಯನ್ನು ಹೆಚ್ಚಿಸಲಿವೆ ಎನ್ನುವುದು ಸಂಘಟಕ ಸಂಸ್ಥೆಗಳ ನಿರೀಕ್ಷೆ.

ಪ್ರತಿನಿತ್ಯವೂ ಐದು ಸಾವಿರಕ್ಕೆ ಕಡಿಮೆ ಇಲ್ಲದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವಜನತೆ ಮತ್ತಿತರ ವಿಜ್ಞಾನಾಸಕ್ತರು ಆಗಮಿಸಲಿದ್ದಾರೆಂದು ಡಾ. ರಾಮರಾವ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.