ADVERTISEMENT

ಪೇಟಿಎಂನ ಮಿನಿ ಆ್ಯಪ್ ಸ್ಟೋರ್, ಏನಿದು?

ಅವಿನಾಶ್ ಬಿ.
Published 7 ಅಕ್ಟೋಬರ್ 2020, 15:08 IST
Last Updated 7 ಅಕ್ಟೋಬರ್ 2020, 15:08 IST
ಪೇಟಿಎಂ ಮಿನಿ ಆ್ಯಪ್ ಸ್ಟೋರ್
ಪೇಟಿಎಂ ಮಿನಿ ಆ್ಯಪ್ ಸ್ಟೋರ್   

ಆನ್‌ಲೈನ್ ಜೂಜಾಟಕ್ಕೆ ಪ್ರೋತ್ಸಾಹ ನೀಡಿ, ತನ್ನ ನೀತಿಯನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಪೇಟಿಎಂ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ತಾತ್ಕಾಲಿಕವಾಗಿ ನಿಷೇಧಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಗೂಗಲ್‌ನ ಈ ಕ್ರಮದಿಂದ ಆಕ್ರೋಶಗೊಂಡಿರುವ ಪೇಟಿಎಂ, ಇದೀಗ ಭಾರತೀಯ ನವೋದ್ಯಮಗಳಿಗಾಗಿ ತನ್ನ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಅನ್ನು ತೆರೆದಿದೆ.

ಈ ಇ-ಕಾಮರ್ಸ್ ಮಿನಿ ಆ್ಯಪ್‌ಗಳು ಪೂರ್ಣಪ್ರಮಾಣದ ಆ್ಯಪ್‌ಗಳಲ್ಲ. ಮೂಲತಃ ವೆಬ್ ಸೈಟ್‌ಗಳಾಗಿದ್ದು, ಆ್ಯಪ್ ರೀತಿಯಲ್ಲೇ ಕಾಣಿಸುತ್ತವೆ. ಇವುಗಳನ್ನು ವೆಬ್ ಆ್ಯಪ್ ಅಂತಲೂ ಕರೆಯಬಹುದು.

ಈ ವೆಬ್ ಆ್ಯಪ್‌ಗಳ ಮುಖ್ಯ ಪ್ರಯೋಜನವೇನೆಂದರೆ, ಡೇಟಾ ಮತ್ತು ಫೋನ್ ಮೆಮೊರಿ ಸ್ಪೇಸ್ ಉಳಿತಾಯ. ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದ್ದರೆ, ಮಿನಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿಲ್ಲ.

ADVERTISEMENT

ಈ ವೆಬ್ ಆ್ಯಪ್‌ಗಳು ವೆಬ್ ಸೈಟಿನ ಶಾರ್ಟ್‌ಕಟ್ ರೂಪದಲ್ಲಿ ಮಿನಿ ಆ್ಯಪ್ ಸ್ಟೋರ್‌ನಲ್ಲಿರುತ್ತವೆ. ಕ್ಲಿಕ್ ಮಾಡಿದರೆ, ವೆಬ್ ಆ್ಯಪ್ ರೀತಿಯಲ್ಲಿ ರೂಪುಗೊಂಡಿರುವ, ಮೊಬೈಲ್-ಫ್ರೆಂಡ್ಲಿಯಾಗಿರುವ ಜಾಲತಾಣಕ್ಕೆ ಹೋಗುತ್ತದೆ. ಅಲ್ಲಿಂದ ಎಲ್ಲ ವಹಿವಾಟುಗಳನ್ನೂ ಮಾಡಬಹುದು.

ಪೇಟಿಎಂ ವ್ಯಾಲೆಟ್, ಪೇಮೆಂಟ್ ಬ್ಯಾಂಕ್ ಮತ್ತು ಯುಪಿಐ ಮೂಲಕ ಇಲ್ಲಿ ಪಾವತಿ ಮಾಡಬಹುದಾಗಿದ್ದು, ಶೂನ್ಯ ಶುಲ್ಕವಿರುವುದರಿಂದ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಅನುಕೂಲ. ಆದರೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಶೇ.2 ಹಾಗೂ ಜಿಎಸ್‌ಟಿ ಶುಲ್ಕ ಪಾವತಿಸಬೇಕಾಗುತ್ತದೆ.

ಕಡಿಮೆ ಖರ್ಚಿನಲ್ಲಿ ಮಿನಿ ಆ್ಯಪ್ ಹೇಗೆ ಮಾಡಬಹುದೆಂಬ ಕುರಿತು ಡೆವಲಪರ್‌ಗಳ ಸಮ್ಮೇಳನವನ್ನು ಪೇಟಿಎಂ ಗುರುವಾರ ಕರೆದಿದೆ ಎಂಬುದು ಗಮನಿಸಬೇಕಾದ ವಿಚಾರ. ಗೂಗಲ್ ಪ್ಲೇ ಸ್ಟೋರ್‌ನ ಏಕಸ್ವಾಮ್ಯಕ್ಕೆ ಚುರುಕು ಮುಟ್ಟಿಸುವ ಕ್ರಮ ಇದು ಎಂದು ಹೇಳಲಾಗುತ್ತಿದ್ದರೂ, ಸ್ವತಃ ಆಂಡ್ರಾಯ್ಡ್‌ನ ಒಡೆತನ ಹೊಂದಿರುವ ಗೂಗಲ್‌ಗೆ ಸವಾಲು ನೀಡುವುದು ಅಸಾಧ್ಯವೆನ್ನಬಹುದು. ಅಮೆರಿಕದಲ್ಲಿ ಚೀನಾ ಉತ್ಪನ್ನಗಳಿಗೆ ನಿಷೇಧದ ಹಿನ್ನೆಲೆಯಲ್ಲಿ ಚೀನಾದ ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆ ಹುವಾವೆ (Huawei), ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗೆ ಪ್ರತಿಯಾಗಿ ತನ್ನದೇ ಆದ ಹಾರ್ಮೊನಿ ಒಎಸ್ (ಕಾರ್ಯಾಚರಣಾ ವ್ಯವಸ್ಥೆ) ಹೊರತರಲು ನಿರ್ಧರಿಸಿರುವುದು ಇಲ್ಲಿ ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.