ಚಿಕಾಗೊ: ಸಾಧನೆಗೆ ಅಥವಾ ಯಾವುದೇ ಆಸಕ್ತಿಕರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಅಡ್ಡಿಯಾಗದು ಎಂದು ಈ ಹಿಂದೇ ಅನೇಕರು ತೋರಿಸಿಕೊಟ್ಟಿದ್ದಾರೆ.
ಅಂಥಹದ್ದೇ ಒಂದು ಘಟನೆ ಚಿಕಾಗೊದಲ್ಲಿ ನಡೆದಿದೆ. 104 ವರ್ಷದ ಡೊರೊಥಿ ಹಾಫ್‌ನರ್ ಎನ್ನುವ ವೃದ್ಧೆಯೊಬ್ಬರು ವಿಮಾನದಿಂದ ಜಿಗಿದು ಸ್ಕೈಡೈವ್ ಮಾಡಿದ್ದಾರೆ. ಈ ಮೂಲಕ ಸ್ಕೈಡೈವ್ ಮಾಡಿದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಇದು ವಿನೋದಮಯವಾಗಿದೆ ಮತ್ತು ತುಂಬಾ ಸುಂದರವಾಗಿ ಕಾಣುತ್ತದೆ’ ಎಂದು ಹಾಫ್‌ನರ್ ಸ್ಕೈಡೈವ್ ಬಳಿಕ ಖುಷಿ ಹಂಚಿಕೊಂಡಿದ್ದಾರೆ.
ಸ್ಕೈಡೈವ್ ಚಿಕಾಗೊ ಇನ್‌ಸ್ಟಾಗ್ರಾಮ್ ಪುಟ ಇದರ ವಿಡಿಯೊವನ್ನು ಹಂಚಿಕೊಂಡಿದೆ. ‘104 ವರ್ಷದ ಸ್ನೇಹಿತೆಗೆ ಸ್ಕೈಡೈವ್ ಮಾಡಲು ಸಹಾಯ ಮಾಡಿದ್ದು ಸಂತಸ ನೀಡಿದೆ. ಯಾವ ಕೆಲಸಕ್ಕೂ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಇದು ಮೊದಲ ಬಾರಿಯಲ್ಲ, 100ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾಫ್‌ನರ್ ಸ್ಕೈಡೈವ್ ಅನುಭವವನ್ನು ಪಡೆದಿದ್ದರು. ಈ ಬಾರಿ ವಿಮಾನದಿಂದ ಹೊರಗೆ ಹಾರಿ ಸ್ಕೈಡೈವ್ ಮಾಡಿ ವಿಭಿನ್ನ ಅನುಭವ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಹಾಫ್‌ನರ್ ಅವರ ಸಾಧನೆ ಶೀಘ್ರವೇ ಗಿನ್ನಿಸ್ ವಿಶ್ವ ದಾಖಲೆ ಪಟ್ಟಿ ಸೇರಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಈ ಹಿಂದೆ 103 ವರ್ಷದ ವೃದ್ಧೆ ಸ್ಕೈಡೈವ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.