ಬೆಂಗಳೂರು: ಭಾರತದಲ್ಲಿ ಪ್ಯಾರಾಸಿಟಮಾಲ್ ಮಾತ್ರೆ ವ್ಯಾಪಕವಾಗಿ ಲಭ್ಯವಿದ್ದು, ಸಣ್ಣ ಜ್ವರ ಬಂದರೂ ಸೇವಿಸುವ ದೊಡ್ಡ ವರ್ಗವೇ ಇದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಡೊಲೊ 650 ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾತ್ರೆ ಎಂದೆನಿಸಿದೆ.
ಉದರ ತಜ್ಞ ಹಾಗೂ ಆರೋಗ್ಯ ಸಲಹೆಗಾರ ಪಳನಿಯಪ್ಪನ್ ಮಾಣಿಕ್ಕಂ ಅವರು ಈ ಬೆಳವಣಿಗೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಡೊಲೊ 650ಯನ್ನು ಭಾರತೀಯರು ಕ್ಯಾಡ್‌ಬೆರಿ ಜೆಮ್ಸ್‌ನಂತೆ ಸೇವಿಸುತ್ತಿದ್ದಾರೆ’ ಎಂದಿದ್ದಾರೆ.
‘ಜ್ವರ, ತೆಲೆನೋವು, ಮೈಕೈ ನೋವು ಇದ್ದಲ್ಲಿ ವೈದ್ಯರು ಡೊಲೊ 650ಯನ್ನು ಸೇವಿಸಲು ಹೇಳುವುದು ಭಾರತದಲ್ಲಿ ಸಾಮಾನ್ಯ. ಸುರಕ್ಷಿತ ಎಂಬ ಭಾವನೆಯಿಂದ ಈ ಮಾತ್ರೆಯನ್ನು ಹಲವರು ಶಿಫಾರಸು ಮಾಡುತ್ತಾರೆ. ಆದರೆ ಅತಿಯಾದ ಬಳಕೆ ಯಕೃತ್‌ಗೆ ಸಮಸ್ಯೆ ತಂದೊಡ್ಡಬಹುದು’ ಎಂದು ತಜ್ಞರು ಹೇಳಿದ್ದಾರೆ.
‘ಕೋವಿಡ್–19 ಸಂದರ್ಭದಲ್ಲಿ ಡೊಲೊ–650 ವ್ಯಾಪಕವಾಗಿ ಬಳಕೆಯಾಯಿತು. ವ್ಯಾಕ್ಸಿನ್ ಪಡೆದ ನಂತರ ಅದರ ಅಡ್ಡಪರಿಣಾಮ ತಡೆಗಟ್ಟಲು ಈ ಮಾತ್ರೆ ಹೆಚ್ಚಾಗಿ ಶಿಫಾರಸುಗೊಂಡಿತು. ಡೊಲೊಪರ್ ಮಾತ್ರೆಯ ನಂತರದಲ್ಲಿ ಬಂದ ಡೊಲೊ–650ಯಲ್ಲಿ ಪ್ಯಾರಾಸಿಟಮಾಲ್ ಇರುತ್ತದೆ. ನೋವು, ಜ್ವರ, ಉರಿಯೂತಕ್ಕೆ ಕಾರಣವಾಗುವ ಪ್ರೊಸ್ಟಾಗ್ಲಾಂಡಿನ್ ಬಿಡುಗಡೆಯನ್ನು ಇದು ತಡೆಯುತ್ತದೆ. ಜತೆಗೆ ದೇಹದ ಉಷ್ಣತೆಯನ್ನೂ ಇದು ಕಡಿಮೆ ಮಾಡುತ್ತದೆ.
2020ರಲ್ಲಿ ವ್ಯಾಪಿಸಿದ ಕೋವಿಡ್–19ರ ನಂತರದಲ್ಲಿ ಸುಮಾರು 350 ಕೋಟಿಯಷ್ಟು ಡೊಲೊ–650 ಮಾತ್ರೆಗಳು ಮಾರಾಟವಾಗಿದ್ದವು. ಇದರಿಂದ ವಾರ್ಷಿಕ ₹400 ಕೋಟಿ ಆದಾಯ ಗಳಿಕೆಯಾಗಿದೆ. ಕೋವಿಡ್ ಪೂರ್ವದಲ್ಲಿ ಮೈಕ್ರೊಲ್ಯಾಬ್ಸ್ ಸುಮಾರು 7.5 ಕೋಟಿ ಸ್ಟ್ರಿಪ್ ಅನ್ನು ಮೈಕ್ರೊ ಲ್ಯಾಬ್ಸ್ ಮಾರಾಟ ಮಾಡಿತ್ತು. ಮುಂದಿನ ವರ್ಷ ಇದು 9.4 ಕೋಟಿಗೆ ಏರಿಕೆಯಾಯಿತು. 2021ರಲ್ಲಿ 14.5 ಕೋಟಿಗೆ ಹೆಚ್ಚಳವಾಯಿತು ಎಂದು ಫೋರ್ಬ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.