
ಪಾಲಕ್ ಪನೀರ್ ವಿವಾದ: ವಿವಿ ಎದುರು ಹೋರಾಡಿ ₹1.8ಕೋಟಿ ಪರಿಹಾರ ಪಡೆದ ಭಾರತ ದಂಪತಿ
ಚಿತ್ರ ಕೃಪೆ ಎಕ್ಸ್
ಭಾರತೀಯ ಆಹಾರದ ವಾಸನೆಯ ಬಗ್ಗೆ ವಿವಾದ ಸೃಷ್ಟಿಯಾಗಿ ಜನಾಂಗೀಯ ತಾರತಮ್ಯದ ರೂಪ ಪಡೆದ ಹಿನ್ನೆಲೆ ಅಮೆರಿಕದ ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯವು ಭಾರತದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ಸುಮಾರು ₹1.8 ಕೋಟಿ ಪರಿಹಾರ ನೀಡಿದೆ.
ಈ ಮೂಲಕ ಭಾರತೀಯ ವಿದ್ಯಾರ್ಥಿಗಳು ನಡೆಸಿದ ಕಾನೂನು ಹೋರಾಟಕ್ಕೆ ಜಯ ಸಂದಿದೆ.
ಪ್ರಕರಣ ಏನು?
ಆದಿತ್ಯ ಪ್ರಕಾಶ ಮತ್ತು ಅವರ ಪತ್ನಿ ಊರ್ಮಿ ಭಟ್ಟಾಚಾರ್ಯ ಅವರು ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿ ಸೇರಿಕೊಂಡಿದ್ದರು. 2023ರ ಸೆ.5ರಂದು ಆದಿತ್ಯ ಅವರು ವಿಶ್ವವಿದ್ಯಾಲಯದ ಮೈಕ್ರೋವೇವ್‌ನಲ್ಲಿ ಪಾಲಕ್ ಪನ್ನೀರ್‌ಅನ್ನು ಬಿಸಿ ಮಾಡುತ್ತಿದ್ದಾಗ ಮಹಿಳಾ ಸಿಬ್ಬಂದಿಯೊಬ್ಬರು ಆಹಾರದ ವಾಸನೆಗೆ ಆಕ್ಷೇಪ ವ್ಯಕ್ತಪಡಿಸಿ, ಈ ಆಹಾರವನ್ನು ಇಲ್ಲಿ ಬಿಸಿ ಮಾಡಬೇಡಿ ಎಂದಿದ್ದರು. ಇದಕ್ಕೆ ಆದಿತ್ಯ ಪ್ರತಿಕ್ರಿಯಿಸಿ, ಇದು ಕೇವಲ ಆಹಾರವಷ್ಟೇ, ಆಹಾರ ಸಂಸ್ಕೃತಿಯ ಭಾಗವಾಗಿದ್ದು, ನನ್ನ ಹೆಮ್ಮೆಯೂ ಹೌದು. ಇದು ಭಾರತೀಯ ಆಹಾರದ ವಿಚಾರದಲ್ಲಿ ಜನಾಂಗೀಯ ತಾರತಮ್ಯ ಎಂದಿದ್ದರು. ಆದಿತ್ಯ ಪರ ಪತ್ನಿ ಊರ್ಮಿ ಅವರೂ ಮಾತನಾಡಿದ್ದರು.
ಇದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿದ್ದ ವಿಶ್ವವಿದ್ಯಾಲಯ ಇಬ್ಬರ ವಿರುದ್ಧವೂ ಕ್ರಮ ಕೈಗೊಂಡು ಪದವಿ ನೀಡಲು ನಿರಾಕರಿಸಿತ್ತು. ಜತೆಗೆ ಶಿಸ್ತು ಕ್ರಮದ ಹೆಸರಿನಲ್ಲಿ ಪದೇ ಪದೇ ಸಭೆಗೆ ಬರುವಂತೆ ಕಿರುಕುಳ ನೀಡಿತ್ತು ಎಂದು ಆದಿತ್ಯ ದಂಪತಿ ದೂರು ನೀಡಿದ್ದರು.
ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ನ್ಯಾಯ ಈಗ ಸಿಕ್ಕಿದೆ. ವಿದ್ಯಾರ್ಥಿಗಳಾಗಿರುವ ದಂಪತಿಗೆ ಪರಿಹಾರ ರೂಪದಲ್ಲಿ ₹1.8 ಕೋಟಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು. ಜತೆಗೆ ದಂಪತಿಗೆ ಪದವಿ ನೀಡುವಂತೆಯೂ ಹೇಳಿತ್ತು. ಆದರೆ ಅವರು ಇನ್ನುಮುಂದೆ ಆ ವಿಶ್ವವಿದ್ಯಾಲಯದಲ್ಲಿ ಕಲಿಯುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಇದಕ್ಕೆ ಒಪ್ಪಿದ ದಂಪತಿ ಸದ್ಯ ಭಾರತಕ್ಕೆ ವಾಪಸ್ಸಾಗಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆದಿತ್ಯ ಅವರು, ‘ಆಹಾರದ ಹೆಸರಿನಲ್ಲಿ ತಾರತಮ್ಯ ಮಾಡಿದರೆ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕು ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ’ ಎಂದು ಬರೆದುಕೊಂಡಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.