
ಮೆಟ್ರೊದಲ್ಲಿ ಗೆಳತಿ ಜೊತೆ ಸಿಕ್ಕಿಬಿದ್ದ ಮಗನಿಗೆ ನಿಶ್ಚಿತಾರ್ಥ ಮಾಡಿಸಿದ್ರಾ ತಾಯಿ?
ಬೆಂಗಳೂರು: ಯುವಕನೊಬ್ಬ ಗೆಳತಿ ಜೊತೆ ಸುತ್ತುತ್ತಿರುವಾಗ ತನ್ನ ತಾಯಿ ಎದುರು ಸಿಕ್ಕಿಬಿದ್ದಿದ್ದಾನೆ. ಬಳಿಕ ಆ ತಾಯಿ ಯುವಕ– ಯುವತಿಗೆ ಸ್ಥಳದಲ್ಲಿಯೇ ನಿಶ್ಚಿತಾರ್ಥ (ಎಂಗೇಜ್‌ಮೆಂಟ್) ಮಾಡಿಸಿರುವ ಘಟನೆಯೊಂದು ನಡೆದಿದೆ ಎನ್ನಲಾಗಿದೆ.
ಇತ್ತೀಚೆಗೆ ಮೆಟ್ರೊ ನಿಲ್ದಾಣವೊಂದರಲ್ಲಿ ಕೂತಿದ್ದ ಯುವಕ–ಯುವತಿಯನ್ನು ಹಿಂಬಾಲಿಸಿ ಬಂದ ಯುವಕನ ತಾಯಿ ಕೆಲ ಕ್ಷಣ ಯುವಕನನ್ನು ದಬಾಯಿಸಿದ್ದಾರೆ. ಕೂಡಲೇ ತಾವು ತಂದಿದ್ದ ಹೂ–ಹಣ್ಣು, ಸಿಹಿ ಮುಂತಾದವುಗಳನ್ನು ಯುವತಿಗೆ ಕೊಟ್ಟು ನಿಶ್ಚಿತಾರ್ಥದ ರೀತಿ ಸನ್ನಿವೇಶ ಸೃಷ್ಟಿಸಿದ್ದಾರೆ.
ಆಗ ಯುವಕ ಅದಕ್ಕೆ ಗೊಣಗುತ್ತಾ ಅಮ್ಮಾ ಏನಮ್ಮಾ ಇದು ಎಂದು ಹೇಳುತ್ತಿರುವಾಗ ನೀನು ಸುಮ್ಮನೀರು, ನೀವು ಫೋಟೊ ವಿಡಿಯೊ ತೆಗೆಯಿರಿ ಸರಿಯಾಗಿ ಎಂದು ಮತ್ತೊಬ್ಬ ವ್ಯಕ್ತಿಗೆ ಹೇಳುತ್ತಾರೆ.
ಕಡೆಗೆ ಯುವಕ–ಯುವತಿ ಮಹಿಳೆಯ ವಿರೋಧಕ್ಕೆ ಮಣಿದು, ಅವರ ಕಾಲಿಗೆ ನಮಸ್ಕಾರ ಮಾಡಿ ಕೈ ಮುಗಿಯುತ್ತಾರೆ. ಬಳಿಕ ಆಶೀರ್ವಾದ ಪಡೆಯುತ್ತಾರೆ.
ಆದರೆ, ಈ ಘಟನೆ ಯಾವ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ ಹಾಗೂ ಯಾವಾಗ ನಡೆದಿದೆ ಎಂಬುದು ಬಹಿರಂಗವಾಗಿಲ್ಲ. ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ನೆಟ್ಟಿಗರು ಇದೊಂದು ಮೊದಲೇ ನಿರ್ಧರಿಸಿದ ವಿಡಿಯೊ ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.