ADVERTISEMENT

Video | ಪರೀಕ್ಷೆಗೆ ತಡವಾಗಿದ್ದಕ್ಕೆ ಪ್ಯಾರಾಗ್ಲೈಡ್‌ನಲ್ಲಿ ಬಂದಳಿದ ವಿದ್ಯಾರ್ಥಿ

ಪಿಟಿಐ
Published 17 ಫೆಬ್ರುವರಿ 2025, 14:13 IST
Last Updated 17 ಫೆಬ್ರುವರಿ 2025, 14:13 IST
   

ಪುಣೆ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ 20 ವರ್ಷದ ವಿದ್ಯಾರ್ಥಿಯೊಬ್ಬರು ಪರೀಕ್ಷೆಗೆ ಸಕಾಲಕ್ಕೆ ತಲುಪಲು ಪ್ಯಾರಾಗ್ಲೈಡ್‌ ಮೂಲಕ ವಾಯುಮಾರ್ಗದಲ್ಲಿ ಬಂದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ಹರಿದಾಡಿದೆ.

ಬಿ.ಕಾಂ. ಮೊದಲ ವರ್ಷದ ಪದವಿ ತರಗತಿಯಲ್ಲಿ ಓದುತ್ತಿರುವ ಸಮರ್ಥ್‌ ಮಹಾಂಗ್ಡೆ ಎಂಬುವವರೇ ಇಂಥ ಸಾಹಸ ನಡೆಸಿದವರು. ಇದು ಕಳೆದ ಡಿ. 15ರಂದು ನಡೆದ ಘಟನೆಯಾಗಿದೆ. ಪಸರಾನಿ ಗ್ರಾಮದ ನಿವಾಸಿಯಾದ ಇವರು, ನೈಸರ್ಗಿಕ ವಿಪತ್ತು ನಿರ್ವಹಣೆಯ ವಿಷಯ ಕುರಿತ ಪರೀಕ್ಷೆಗೆ ತಡವಾಗಿದ್ದರು. ಇದಕ್ಕಾಗಿ ತಾವಿರುವ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಹ್ಯಾರಿಸನ್ ಫೊಲಿ ಪ್ಯಾರಾಗ್ಲೈಡ್‌ನ ನೆರವು ಪಡೆದಿದ್ದರು. ಇದರಿಂದಾಗಿ ತಾವಿರುವ ಪ್ರದೇಶದಿಂದ 12 ಕಿ.ಮೀ. ದೂರದಲ್ಲಿರುವ ಕಿಸಾನ್‌ವೀರ್ ಕಾಲೇಜಿಗೆ ಸಕಾಲಕ್ಕೆ ತೆರಳಿದ್ದರು.

‘ಹ್ಯಾರಿಸನ್ ಫೊಲಿ ಎಂಬ ಪ್ಯಾರಾಗ್ಲೈಡ್‌ ಸಂಸ್ಥೆ ಬಳಿ ಇರುವ ಕಬ್ಬಿನಹಾಲಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಮಧ್ಯಾಹ್ನ 2.15ಕ್ಕೆ ಪರೀಕ್ಷೆಗೆ ಸಮಯ ನಿಗದಿಯಾಗಿತ್ತು. ಆದರೆ ಇದು ನೆನಪಾಗುವಾಗಲೇ ಮಧ್ಯಾಹ್ನ 2 ಆಗಿತ್ತು. ರಸ್ತೆ ಮೂಲಕ ಸಕಾಲಕ್ಕೆ ತಲುಪಲು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿತ್ತು. ಹೀಗಾಗಿ ಅಲ್ಲಿಯೇ ಇದ್ದ ಪ್ಯಾರಾಗ್ಲೈಡಿಂಗ್ ತಜ್ಞ ಗೋವಿಂದ್‌ ಯೆವಾಲೆ ಅವರ ನೆರವು ಪಡೆದೆ. ಎಲ್ಲಾ ರೀತಿಯ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಂಡೇ ಪ್ಯಾರಾಗ್ಲೈಡ್ ಏರಿದ್ದೆ. ಕೇವಲ 5 ನಿಮಿಷಗಳಲ್ಲಿ ಕಾಲೇಜಿನ ಮೈದಾನದಲ್ಲಿ ಬಂದಿಳಿದೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಸಮರ್ಥ್ ಕಾಲೇಜು ತಲುಪುವುದರೊಳಗಾಗಿ ಅವರ ಸ್ನೇಹಿತರು ಪ್ರವೇಶ ಪತ್ರ ಪಡೆದಿದ್ದರು. ಹೀಗಾಗಿ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಆದರೆ ಅವರು ಪ್ಯಾರಾಗ್ಲೈಡ್ ಮೂಲಕ ಬರಲಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದಿರಲಿಲ್ಲ’ ಎಂದು ಕಾಲೇಜಿನ ಸಿಬ್ಬಂದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.