ADVERTISEMENT

ಕೋಮು ಸಂಘರ್ಷದಲ್ಲಿ ಆ ಪೊಲೀಸ್ ಪೇದೆ ತೋರಿದ ಸಾಹಸ ವೈರಲ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 5:51 IST
Last Updated 5 ಏಪ್ರಿಲ್ 2022, 5:51 IST
ಪೊಲೀಸ್ ಕಾನ್ಸ್‌ಟೇಬಲ್ ನೇತ್ರೇಶ್ ಶರ್ಮಾ ಮಗುವನ್ನು ಬೆಂಕಿಯಿಂದ ಕಾಪಾಡಿದ ಕ್ಷಣ
ಪೊಲೀಸ್ ಕಾನ್ಸ್‌ಟೇಬಲ್ ನೇತ್ರೇಶ್ ಶರ್ಮಾ ಮಗುವನ್ನು ಬೆಂಕಿಯಿಂದ ಕಾಪಾಡಿದ ಕ್ಷಣ   

ಜೈಪುರ: ಕಳೆದ ಶನಿವಾರ ಯುಗಾದಿ ಹಬ್ಬದ ವೇಳೆ ರಾಜಸ್ಥಾನದ ಕರೌಲಿ ನಗರದಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಪೊಲೀಸ್ ಪೇದೆಯೊಬ್ಬರು ತೋರಿಸಿದ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕರೌಲಿ ನಗರದಲ್ಲಿ ಯುಗಾದಿ ಪ್ರಯುಕ್ತ ಕೆಲ ಹಿಂದೂ ಸಂಘಟನೆಗಳ ಯುವಕರು ಬೈಕ್ ರ‍್ಯಾಲಿ ಆಯೋಜಿಸಿದ್ದರು. ಬೈಕ್ ರಾಲಿ ಮುಸ್ಲಿಂ ಜನ ಇರುವ ಪ್ರದೇಶದಲ್ಲಿ ತೆರಳುತ್ತಿರುವ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿತ್ತು. ಇದರಿಂದ ಉದ್ರಿಕ್ತರು ಅಂಗಡಿ–ಮುಂಗಟ್ಟು ಹಾಗೂ ಕೆಲ ಮನೆಗಳಿಗೆ ಬೆಂಕಿ ಇಟ್ಟಿದ್ದರು.

ಬೆಂಕಿಯ ಕೆನ್ನಾಲಿಗೆ ಅನೇಕ ಮನೆಗಳಿಗೆ ವ್ಯಾಪಿಸಿದ್ದರಿಂದ ಜನ ತೊಂದರೆಗೆ ಸಿಲುಕಿದ್ದರು. ಈ ವೇಳೆ ಗುಡಿಸಲಿನಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕುವ ಆತಂಕದಲ್ಲಿದ್ದ 3 ವರ್ಷದ ಹೆಣ್ಣುಮಗುವನ್ನು ಪೊಲೀಸ್ ಕಾನ್ಸ್‌ಟೇಬಲ್ ನೇತ್ರೇಶ್ ಶರ್ಮಾ ಅವರು ಕಾಪಾಡಿದ್ದರು. ಅವರು ಗುಡಿಸಲೊಳಗೆ ನುಗ್ಗಿ ಮಗುವನ್ನು ಎತ್ತಿಕೊಂಡು ಓಡಿ ಬಂದಿದ್ದರು.

ನೇತ್ರೇಶ್ ಶರ್ಮಾ ಅವರ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಶರ್ಮಾ ಅವರ ಸಾಹಸ ಹಾಗೂ ಮಾನವೀಯತೆಯನ್ನು ಅನೇಕ ಜನ ಕೊಂಡಾಡಿದ್ದಾರೆ.

ಇನ್ನು ನೇತ್ರೇಶ್ ಶರ್ಮಾ ಅವರನ್ನು ಪ್ರಶಂಸಿಸಿ ಟ್ವೀಟ್ ಮಾಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಶರ್ಮಾ ಅವರಿಗೆ ಕಾನ್ಸ್‌ಟೇಬಲ್ ಹುದ್ದೆಯಿಂದ ಹೆಡ್‌ಕಾನ್ಸ್‌ಟೇಬಲ್ ಹುದ್ದೆಗೆ ಬಡ್ತಿ ನೀಡುವುದಾಗಿ ತಿಳಿಸಿದ್ದಾರೆ.

ಕರೌಲಿ ಹಿಂಸಾಚಾರದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸ್, 33 ಜನರನ್ನು ಬಂಧಿಸಿರುವುದಾಗಿ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.