ADVERTISEMENT

ಸೇನೆ ಸೇರುವ ಕನಸು: ಕೆಲಸ ಮುಗಿಸಿ ನಡುರಾತ್ರಿ 10 ಕಿಮೀ ಓಡುವ ಯುವಕನ ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮಾರ್ಚ್ 2022, 14:43 IST
Last Updated 21 ಮಾರ್ಚ್ 2022, 14:43 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಉತ್ತರಖಾಂಡದ ಅಲ್ಮೋರಾ ಪಟ್ಟಣದ 19 ವರ್ಷದ ಪ್ರದೀಪ್‌ ಮೆಹ್ರಾ ಎಂಬವರು ಸಾಮಾಜಿಕ ಮಾಧ್ಯಮಗಳಲ್ಲಿರಾತ್ರೋರಾತ್ರಿ ಹೀರೋ ಆಗಿಬಿಟ್ಟಿದ್ದಾರೆ.

ಈ ಯುವಕ ಹೀಗೆದಿಢೀರ್‌ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಕಾರಣವಾಗಿದ್ದು ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಪ್ರಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ 2.20 ನಿಮಿಷದ ವಿಡಿಯೊ.

ವಿಡಿಯೊದಲ್ಲೇನಿದೆ?
ನೋಯ್ಡಾದ ಸೆಕ್ಟರ್‌ 16ರಲ್ಲಿರುವ ಮೆಕ್‌ಡೊನಾಲ್ಡ್‌ನಲ್ಲಿ ಕೆಲಸ ಮಾಡುವ ಮೆಹ್ರಾ, ಅಲ್ಲಿಂದ(ಕೆಲಸದ ಸ್ಥಳದಿಂದ) ಬರೋಬ್ಬರಿ 10 ಕಿ.ಮೀ. ದೂರದಲ್ಲಿರುವ ತಮ್ಮ ಮನೆಗೆ ಪ್ರತಿದಿನ ಓಡುತ್ತಲೇ ತೆರಳುತ್ತಾರೆ. ಹೀಗೇ ಮಧ್ಯರಾತ್ರಿ ವೇಳೆ ಓಡುತ್ತಿದ್ದ ಆ ಯುವಕನೊಂದಿಗೆ ನಡೆಸಿದ ಸಂಭಾಷಣೆಯ ವಿಡಿಯೊವನ್ನು ಕಪ್ರಿ ಹಂಚಿಕೊಂಡಿದ್ದಾರೆ.

ADVERTISEMENT

ಕಪ್ರಿ ಅವರು ಮೊದಲಿಗೆ ಯುವಕನನ್ನುದ್ದೇಶಿಸಿ, 'ಮನೆವರೆಗೆ ಕಾರಿನಲ್ಲಿ ಬಿಟ್ಟುಕೊಡುತ್ತೇನೆ, ಬಾ' ಎಂದು ಕರೆದಿದ್ದಾರೆ. ಆದರೆ, ಅವರಕಾಳಜಿಯ ಮಾತನ್ನು ನಯವಾಗಿಯೇ ತಿರಸ್ಕರಿಸುವ ಯುವಕ ಓಡಿಕೊಂಡೇ ಮನೆ ಸೇರುವುದಾಗಿ ತಿಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಪ್ರಿ ಮನೆವರೆಗೆ ಬಿಟ್ಟುಕೊಡುವುದಾಗಿ ಮತ್ತೆಮತ್ತೆ ಹೇಳಿದ್ದಾರೆ. ಅದಕ್ಕೆ ಒಪ್ಪದ ಯುವಕ, ಇಂದು ಕಾರಿನಲ್ಲಿ ಮನೆಗೆ ಹೋದರೆ ನಿತ್ಯದ ಅಭ್ಯಾಸಕ್ಕೆ ಹಿನ್ನಡೆಯಾಗುತ್ತದೆ ಎಂದಿದ್ದಾರೆ.

ಸಂಭಾಷಣೆ ಮುಂದುವರಿದಂತೆ, ಯುವಕ ತಾನು ಕೆಲಸ ಮಾಡುತ್ತಿರುವ ಸ್ಥಳ, ಮನೆ ಇರುವ ಪ್ರದೇಶ, ಕೌಟುಂಬಿಕ ಹಿನ್ನೆಲೆ ಹಾಗೂ ಸೇನೆಗೆ ಸೇರಲು ತಾವು ಹೊಂದಿರುವ ಅದಮ್ಯ ಬಯಕೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಭಾನುವಾರ ಸಂಜೆ ಅಪ್‌ಲೋಡ್ ಆಗಿರುವಈ ವಿಡಿಯೊವನ್ನು ಇದುವರೆಗೆ 80 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 77 ಸಾವಿರಕ್ಕೂ ಅಧಿಕ ಮಂದಿ ತಮ್ಮ ಖಾತೆಗಳಲ್ಲಿ ರೀಟ್ವೀಟ್ ಮಾಡಿಕೊಂಡಿದ್ದಾರೆ.

ಮೆಹ್ರಾರ ಸ್ಥೈರ್ಯ ಮತ್ತು ಬದ್ಧತೆಯ ಬಗ್ಗೆ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಮೆಹ್ರಾಗೆ ಒಳಿತಾಗಲೆಂದು ಹಾರೈಸಿದ್ದಾರೆ.

ನಿವೃತ್ತ ಸೇನಾಧಿಕಾರಿಯಿಂದ ನೆರವಿನ ಭರವಸೆ
ನಿವೃತ್ತ ಲೆ.ಜನರಲ್ ಸತಿಶ್ ದುವಾ ವಿಡಿಯೊವನ್ನು ಹಂಚಿಕೊಂಡಿದ್ದು, ಮೆಹ್ರಾಗೆ ನೆರವು ನೀಡುವ ಭರವಸೆ ನೀಡಿದ್ದಾರೆ. 'ಅವರ (ಮೆಹ್ರಾ)ಸ್ಥೈರ್ಯ ಶ್ಲಾಘನೀಯವಾದದ್ದು. ಅರ್ಹತೆಗೆ ಅನುಸಾರವಾಗಿ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅವರಿಗೆ ನೆರವು ನೀಡಲು ಕುಮೌನ್ ರೆಜಿಮೆಂಟ್‌ನ ಕರ್ನಲ್‌, ಪೂರ್ವ ಸೇನಾಪಡೆ ಕಮಾಂಡರ್‌ ಲೆ.ಜನರಲ್ ರಾಣ ಕಲೀಟ ಅವರೊಂದಿಗೆ ಮಾತನಾಡಿದ್ದೇನೆ. ಅವರು ತಮ್ಮಿಂದ ಸಾಧ್ಯವಾದಷ್ಟು ನೆರವು ನೀಡಲಿದ್ದಾರೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.