ADVERTISEMENT

ನಿನ್ನ ನೋಡಲೆಂತೊ... ಏನೊ ಒಂಥರಾ ಥರಾ...

ಅರಿವೆಯ ಹರವು

ನಿಷ್ಕಾ
Published 18 ಜುಲೈ 2014, 19:30 IST
Last Updated 18 ಜುಲೈ 2014, 19:30 IST

ಅದು 1890ರ ಸಮಯ. ಬೈಸಿಕಲ್‌ ಪರಿಚಯವಾದ ಬೆನ್ನಲ್ಲೇ ಹೆಣ್ಮಕ್ಕಳ ಉದ್ದನೆ ಸ್ಕರ್ಟ್‌ಗಳ ಮಧ್ಯೆ ಹೊಲಿಗೆ ಬೀಳತೊಡಗಿದ್ದು. ಡಿವೈಡರ್‌ ಸ್ಕರ್ಟ್ ಹೆಣ್ಮಕ್ಕಳು ಸೈಕಲ್‌ ತುಳಿಯಲು ಅನುಕೂಲಕರವಾಗಿತ್ತು. ಅಷ್ಟಕ್ಕೂ ಇದನ್ನು ನೋಡಿದರೆ ಪುರುಷರ ಡ್ರೆಸ್ಸಿನಂತೆ ಅನಿಸುತ್ತಿರಲಿಲ್ಲ. ಸ್ಕರ್ಟ್‌ನ ನಿರಿಗೆಗಳೇನೂ ಕಡಿಮೆಯಾಗಿರಲಿಲ್ಲವಲ್ಲ. ಹಾಗಾಗೇ ಇದಕ್ಕೆ  ಸ್ವೀಕೃತಿ ದೊರೆತಿದ್ದು.

ಕ್ರಮೇಣ 1920ರ ಸುಮಾರಿಗೆ ಪ್ಯಾಂಟ್‌ ಕೂಡ ಅಲ್ಲಲ್ಲಿ ಹೆಣ್ಮಕ್ಕಳ ಉಡುಗೆಯಾಗಿ ಕಾಣಿಸಿಕೊಳ್ಳತೊಡಗಿತ್ತು. ಆಟೋಟಗಳಲ್ಲಿ ಪಾಲ್ಗೊಳ್ಳಲು, ಪಿಕ್‌ನಿಕ್‌ಗೆ ಹೊರಡುವಾಗ ಮತ್ತು ಮನೆಯ ಹಿತ್ತಿಲಿನಲ್ಲಿ ಗಿಡ ನೆಡಲೆಂದು ಮಣ್ಣು ಅಗೆಯಲೆಲ್ಲ ಅಡ್ಡಿಯಾಗದು ಎಂಬ ಕಾರಣಕ್ಕೆ ಹುಡುಗಿಯರು ಪ್ಯಾಂಟ್‌, ಹಾಫ್‌ ಪ್ಯಾಂಟ್‌ ಧರಿಸತೊಡಗಿದ್ದರು. ಆದರೂ ಇಂಥ ಖಾಸಗಿ ಜೀವನಶೈಲಿ ಬಿಟ್ಟು ಅವರ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಪ್ಯಾಂಟ್‌ ಹಾಕುವ ಹಾಗೇ ಇರಲಿಲ್ಲ. ಹಾಕಿದರೆ ಗಂಡುಬೀರಿ, ಹೆಣ್ಣೇ ಅಲ್ಲ ಎನ್ನುವ ನೋಟ ಎದುರಿಸಬೇಕಾಗುತ್ತಿತ್ತು.

1930ರಿಂದೀಚೆಗೆ ಹುಡುಗಿಯರು ಪ್ಯಾಂಟ್‌ ಧರಿಸುವುದಕ್ಕೆ ಸಮಾಜದ ಸ್ವೀಕೃತಿ ದೊರೆಯತೊಡಗಿತ್ತು.
ಈಗಲೂ ಎಷ್ಟೋ ಸಂಪ್ರದಾಯವಾದಿಗಳಿಗೆ ಇದು ಇಷ್ಟವಾಗುವುದಿಲ್ಲ. ಲೈಂಗಿಕವಾಗಿ ಪುರುಷರನ್ನು ಇದು ಆಕರ್ಷಿಸುವಲ್ಲಿ ವಿಫಲವಾಗುತ್ತದೆ; ಕಾರಣ ಹೆಣ್ತನದ ಪ್ರತೀಕವಾಗಿ ಆಕೆ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಹಿರಿಯರು ಒಪ್ಪುವುದು ಕಷ್ಟ.

ಫ್ಯಾಷನ್‌ನ ಚಕ್ರದೊಡನೆ ಉರುಳುತ್ತ ಬಹುಶಃ ಈಗೇನು ಕಾಮನ್‌ ಎಂಬ ಕಾರಣಕ್ಕೆ ಅರೆಮನಸ್ಸಿನಿಂದಲೊ, ನಾವಂತೂ ಹಾಕಲಾಗಿಲ್ಲ ಮಕ್ಕಳಾದರೂ ಹಾಕಿ ಖುಷಿ ಪಡಲಿ ಎಂಬ ಕಾರಣಕ್ಕೊ ಅಂತೂ ನಗರಗಳಲ್ಲದೆ ಪಟ್ಟಣಗಳಲ್ಲೂ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಜೀನ್ಸ್‌ಗೆ ವ್ಯಾಪಕ ಸ್ವೀಕೃತಿ, ದೊರೆತಾಗಿದೆ. ಮಾರುಕಟ್ಟೆ ಕೂಡ ವಿಸ್ತರಿಸಿದಂತಾಗಿದೆ.

ಬಾಟಮ್‌ ಜೀನ್ಸ್‌ ಇದ್ದರೂ, ಅದರ ಮೇಲೆ ಎಂಥ ಟಾಪ್‌ ಹಾಕುತ್ತಾರೆ ಎಂಬುದರ ಮೇಲೆ ಅವರವರ ಭಾವ, ಸ್ವಭಾವ, ಸಾಂಸ್ಕೃತಿಕ ಹಿನ್ನೆಲೆ, ಅಭುರುಚಿ, ಫ್ಯಾಷನ್‌ಪ್ರಜ್ಞೆಗಳೆಲ್ಲ ವ್ಯಕ್ತವಾಗುತ್ತವೆ. ಪಾಶ್ಚಾತ್ಯರಂತೆ ಫೆಮಿನೈನ್‌ ನೋಟ ಕೊಡುವ ಶರ್ಟ್, ಹುಡುಗರಂಥದೇ

ಯಾವುದೇ ಟಕ್‌ ಇಲ್ಲದ ಶರ್ಟ್, ಬಿಗಿಯಾಗಿ ಮೈ ಅಪ್ಪುವ ಟಿಶರ್ಟ್‌, ತುಸು ಮೈಬಿಟ್ಟು ದೂರವಿರುವ ಕಾಲರ್‌ನ ಟಿಶರ್ಟ್‌, ಉದ್ದನೆ ದೇಸಿ ನೋಟದ ಕುರ್ತಾ ಅಥವಾ ಖಾದಿ ನೆಹರೂ ಶರ್ಟ್‌,  ಮೊಳಕಾಲಿಗಿಂತ ಮೇಲಿರುವ ಕುರ್ತಿ, ಪೋಂಚೊ ಏನು ಹಾಕಿದರೂ ಸರಿ ಜೀನ್ಸ್‌ ಅದನ್ನು ತನ್ನ ಜತೆ ಸ್ನೇಹದಿಂದ ಸ್ವಾಗತಿಸಿಬಿಡುತ್ತದೆ.  ಹಾಗಾಗೇ ಎಷ್ಟು ರೀತಿಯ ಸ್ವಭಾವದ ಹೆಣ್ಣುಮಕ್ಕಳಿದ್ದೇವೊ ಅಷ್ಟೂ ರೀತಿಯಲ್ಲಿ ಜೀನ್ಸ್‌ ಧರಿಸಿದ ಹುಡುಗಿಯರು (ಮಹಿಳೆಯರೂ) ನೋಡಲೂ ಸಿಗುವುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.