ADVERTISEMENT

ಸಹಜ ನೋಟ ನೀಡುವ ಜೀನ್ಸ್‌

ನಿಷ್ಕಾ
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST
ಸಹಜ ನೋಟ ನೀಡುವ ಜೀನ್ಸ್‌
ಸಹಜ ನೋಟ ನೀಡುವ ಜೀನ್ಸ್‌   

ಜೀನ್ಸ್‌ ಎಂದರೆ ಜೀನ್ಸ್‌ ಪ್ಯಾಂಟ್‌ ತಕ್ಷಣ ನೆನಪಾಗುತ್ತದೆ. ಆದರೆ ಕೇಪ್ರಿಸ್‌, ಹಾಫ್‌ ಪ್ಯಾಂಟ್‌, ಶಾರ್ಟ್ಸ್‌, ಸ್ಕರ್ಟ್‌ಗಳೂ ಸಿಗುತ್ತವೆ. ಚಿಕ್ಕ ಮಕ್ಕಳಿಗಂತೂ ಜೀನ್ಸ್‌ನ ಡಂಗರಿ, ಡಮ್ಮಿ ಡಿಪ್ಪಿ, ಫ್ರಾಕ್‌, ಮಿಡಿ, ಮಿನಿಗಳು ಬಹಳ ಸಾಮಾನ್ಯವಾಗಿ ಕಾಣಸಿಗುತ್ತವೆ. ಜೀನ್ಸ್‌ನ ಜಾಕೆಟ್‌, ಕೋಟಿನಂತೆ ಶರ್ಟ್‌ನ ಮೇಲೆ ಹಾಕಲು ಇರುವ ಜರ್ಕಿನ್‌ ತರಹದ ಮೇಲಂಗಿ, ಬ್ಯಾಗ್‌, ಪರ್ಸ್‌, ಕ್ಯಾನ್ವಾಸ್‌ ಶೂ ತರಹದ್ದೇ ಜೀನ್ಸ್‌ನಿಂದ ಮಾಡಿದ ಶೂ, ಜಿನ್ಸ್‌ನ ಸ್ಲೀವ್‌ಲೆಸ್‌ ಟಾಪ್‌ ಕೂಡ ಲಭ್ಯ. ಕೂದಲಿಗೂ ಜೀನ್ಸ್‌ನ ಬಟ್ಟೆಯ ಬೋ ಇರುವ, ಜೀನ್ಸ್‌ ಬಟ್ಟೆಯಿಂದ ಮಾಡಿದ ಹೇರ್‌ಬ್ಯಾಂಡ್‌, ಕ್ಲಿಪ್‌ ಮತ್ತು ಜೀನ್ಸ್‌ ತರಹ ಕಾಣುವಂತೆ ಪೇಂಟ್‌ ಮಾಡಿದ ಪ್ಲಾಸ್ಟಿಕ್‌ ಹೇರ್‌ಪಿನ್‌ ಕೂಡ ಇವೆ.

ಆದರೆ ಜೀನ್ಸ್‌ ಪ್ಯಾಂಟಿಗೆ ಮ್ಯಾಚಿಂಗ್‌ ಎಂದು ಜೀನ್ಸ್‌ ಮೇಲೆ ಜೀನ್ಸ್‌ನ ಶರ್ಟ್‌ ಮತ್ತು ಜಾಕೆಟ್‌ ಹಾಕಿ, ಶೂ, ಬ್ಯಾಗ್‌ ಎಲ್ಲವನ್ನೂ ಒಮ್ಮೆಲೆ ಧರಿಸಿದರೆ ಛಿ, ಚೆನ್ನಾಗಿರುತ್ತಾ? ಊಹ್ಹುಂ. ಪೂರ್ತಿ ಜೀನ್ಸ್‌ನಲ್ಲೇ ಮುಳುಗಿದರೆ ಅದರ ಲುಕ್ಕೇ ಹೊರಟುಹೋಗುತ್ತದೆ. ಜೀನ್ಸ್‌ ಪ್ಯಾಂಟ್‌ ಧರಿಸಿದರೆ ಪೂರಾ ಡ್ರೆಸಿಂಗ್‌ನಲ್ಲಿ ಅದೊಂದೇ ಜೀನ್ಸ್‌ ಇದ್ದರಷ್ಟೇ ಅದಕ್ಕೆ ಮಹತ್ವ ಬರುತ್ತದೆ. ಒಂದು ರೀತಿ ಅದಕ್ಕೆ ಅಷ್ಟೇನೂ ಮಹತ್ವ ದೊರೆಯದಂತೆಯೇ ಕ್ಯಾಶುವಲ್‌ ಆಗಿ ದಿನದ ಉಡುಗೆ ಧರಿಸಿದ ಹಾಗೆ ಕಾಣುತ್ತದೆ. ಅದೇ ಅಲ್ಲವೆ ಜೀನ್ಸ್‌ನ ಉದ್ದೇಶ? ಸಹಜ ದೈನಂದಿನ ಉಡುಗೆಯಾಗೇ ನಾವು ಅದನ್ನು ಸ್ವೀಕರಿಸಿರುವುದು. ಅದರ ಜತೆ ಮತ್ತೆಲ್ಲ ಜೀನ್ಸ್‌ ಮ್ಯಾಚ್‌ ಮಾಡಿದರೆ ಬಹಳ ಆಸ್ಥೆಯಿಂದ ರೆಡಿಯಾಗಿ ರಸ್ತೆಗೆ ಬಂದಂತಾಗದೆ? ಸಲ್ಲದು. ಕೆಟ್ಟದಾಗಿ ಕಾಣುತ್ತದೆ.

ಸಮುದ್ರತೀರದಲ್ಲಿ ಜೀನ್ಸ್‌ನ ಕೇಪ್ರಿಸ್‌ ಧರಿಸಿದರೆ, ಅತ್ಯಂತ ಸಹಜವಾಗಿ, ಸರಳವಾಗಿ ಕಾಣುವುದಲ್ಲದೆ, ಕಂಫರ್ಟಬಲ್‌ ಆಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮುದ್ರದಲೆಗಳ ಜತೆ ಚಿನ್ನಾಟವಾಡುತ್ತಿದ್ದರೆ ಕಾಲು ಮಾತ್ರ ನೆನೆಯುತ್ತದೆ, ಪ್ಯಾಂಟ್‌ ಅಲ್ಲ. ಪುಟ್ಟ ಹೆಣ್ಣುಮಕ್ಕಳಿಗೆ ಹುಡುಗರ ತರಹವೇ ಜೀನ್ಸ್‌ನ ಹಾಫ್‌ ಪ್ಯಾಂಟ್‌ ಹಾಕಿ ನೋಡಿ ಮುದ್ದಾಗಿರುತ್ತದೆ. ಒಂದು ವರ್ಷದ ಮಗುವಿಗೂ ಜೀನ್ಸ್‌ ಫ್ರಾಕ್‌ ಹಾಕಿದರೆ ಟ್ರೆಂಡಿಯಾಗಿ ಕಾಣುತ್ತದೆ. ಇನ್ನು ಆಗತಾನೇ ನಡೆಯಲು ಕಲಿತ ಮಗುವಿಗೆ ಡಿಮ್ಮಿ ಡಿಪ್ಪಿ ಚೆನ್ನಾಗಿ ಕಾಣುವುದಷ್ಟೇ ಅಲ್ಲ, ಡಯಪರ್‌ ಹಾಕಿ ಭದ್ರವಾಗಿ ಪ್ಯಾಂಟ್‌ ಕೆಳಗಿಳಿಯದಂತೆ ರೆಡಿ ಮಾಡಬಹುದು. ನಡೆದಾಗ ತುಂಬ ಚೆಂದ. ಮೂರು, ನಾಲ್ಕು ವರ್ಷದ ಹೆಣ್ಣುಮಕ್ಕಳಿಗೆ ಜೀನ್ಸ್‌ ಮಿನಿ ಸ್ಕರ್ಟ್‌ ಹಾಕಿದರೆ ಅವು ಪುಟ್ಟ ಪುಟ್ಟ ಮಾಡೆಲ್‌ಗಳು, ನಡೆದಲ್ಲೆಲ್ಲ ರ್‍ಯಾಂಪ್‌ ಲೋಕ ತೆರೆದುಕೊಳ್ಳುತ್ತದೆ.

ರಜಾದಿನಗಳಲ್ಲೊಮ್ಮೆ ಪತಿಯೂ ಜೀನ್ಸ್‌, ಪತ್ನಿಯೂ ಜೀನ್ಸ್‌ ಕೇಪ್ರಿಸ್‌ ಹಾಕಿ, ಮಕ್ಕಳಿಗೂ ಜೀನ್ಸ್‌ ಶಾರ್ಟ್ಸ್‌ ಮತ್ತು ಮಿನಿಸ್ಕರ್ಟ್‌ ಹಾಕಿ ನೋಡಿ ಅದೆಷ್ಟು ಚೆಂದದ ಫ್ಯಾಮಿಲಿ ಫೊಟೊ ತೆಗೆದಿಟ್ಟುಕೊಳ್ಳಬಹುದು ಕಡೆಯವರೆಗೂ ನೋಡಿ ನೆನಪು ಕೆದಕಿ ಸಂಭ್ರಮಿಸಲು. ಫೊಟೊ ಬ್ಯಾಕ್‌ಗ್ರೌಂಡ್‌ಗೆ ಸಮುದ್ರತೀರವಿರಲಿ, ಮನೆಯ ಹತ್ತಿರದ ಪಾರ್ಕ್‌ ಇರಲಿ, ಮನೆಯೊಳಗಿನ ಮೆಟ್ಟಿಲೇ ಇರಲಿ ಏನಿದ್ದರೇನಂತೆ. ಅಂದಹಾಗೆ ಜೀನ್ಸ್‌ನ ಮೇಲೆ ಅಚ್ಚ ಬಿಳಿ ಬಣ್ಣದ ಕಾಟನ್‌ ಶರ್ಟ್‌ ಇದ್ದರೆ ಕ್ಲಾಸಿಕ್‌ ಲುಕ್‌. ಮನೆಯವರೆಲ್ಲ ಒಂದೇ ದಿರಿಸಿನಲ್ಲಿದ್ದರೆ ಆಹಾ ಫ್ಯಾಮಿಲಿ ಪೂರಾ ಜೀನ್ಸ್‌ನಲ್ಲಿ.. ಏನು ಮಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.