`ಬ್ರೇಕ್‌ಬೋನ್ ಫೀವರ್~ಎಂದೇ ಕರೆಸಿಕೊಳ್ಳುವ ಡೆಂಗ್ಯೂ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಷ್ಟೇ ಅಲ್ಲ, ಗಮನಾರ್ಹ ಸಂಖ್ಯೆಯ ಚಿಕೂನ್‌ಗುನ್ಯಾ ಮರುಕಳಿಕೆ ಪ್ರಕರಣಗಳನ್ನು ಕೂಡಾ ಆಸ್ಪತ್ರೆಗಳು ನೋಡುತ್ತಿವೆ.
ಬೆಂಗಳೂರಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚುವುದರ ಹಿಂದಿರುವ ಕಾರಣ ಏನು?
ನಿಂತ ನೀರು ಮತ್ತು ತೆರೆದ ಕಾಲುವೆಗಳು ಅನೇಕ ಬಗೆಯ ಅಪಾಯಕಾರಿ ಸೊಳ್ಳೆಗಳ ಉತ್ಪತ್ತಿಗೆ ಅತ್ಯಂತ ಪ್ರಶಸ್ತ ತಾಣಗಳು.
ನಿಂತ ನೀರಿನ ಕಟು ವಾಸನೆ ಸಹಿಸಲು ಅಸಾಧ್ಯ. ಅದಕ್ಕಿಂತ ಹೆಚ್ಚಾಗಿ ಇದು ಸೊಳ್ಳೆಗಳ ಹಾವಳಿಗೆ ಕಾರಣವಾಗುತ್ತದೆ. ಸೊಳ್ಳೆ ಕಡಿತದಿಂದ ಉಂಟಾಗುವ, ಸೊಳ್ಳೆಜನ್ಯ ಕಾಯಿಲೆಯಾದ ಮಾರಕ ಡೆಂಗ್ಯೂ ಬೆಂಗಳೂರಿನಲ್ಲಿ ಹೆಚ್ಚಿಗೆ ಇದೆ.
ಸ್ವಚ್ಛತೆಯಿಲ್ಲದ ಪ್ರದೇಶಗಳು ಮತ್ತು ನಿಂತ ನೀರಿನಿಂದಾಗಿ ಸೊಳ್ಳೆಗಳ ಉತ್ಪತ್ತಿಗೆ ಉತ್ತೇಜನ ದೊರೆತಿದ್ದು, ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಿವೆ.
ಡೆಂಗ್ಯೂ ಜ್ವರಕ್ಕೆ ಕಾರಣವಾಗುವುದು ಈಡಿಯಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆ. ಇದು ಸಾಮಾನ್ಯವಾಗಿ ಹಗಲಿನಲ್ಲಿ ಆಹಾರ ತೆಗೆದುಕೊಳ್ಳುತ್ತದೆ ಹಾಗೂ ಕಚ್ಚುವುದರ ಮುಖಾಂತರ ಮನುಷ್ಯರಲ್ಲಿ ತನ್ನ ವೈರಾಣುಗಳನ್ನು ಹರಡುತ್ತದೆ. ಎಲ್ಲ ವಯೋಮಾನದವರಿಗೂ ಡೆಂಗ್ಯೂ ಜ್ವರ ಬರಬಹುದು.
ಆದರೆ, 15ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚು. ಹಗಲಿನಲ್ಲಿ ಸೊಳ್ಳೆ ಕಡಿತಕ್ಕೆ ಒಳಗಾಗದಿರುವುದು ಮಹತ್ವದ ಮುನ್ನೆಚ್ಚರಿಕೆ ಕ್ರಮ. ಸೊಳ್ಳೆಗಳ ವೈರಾಣುಗಳು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಪಸರಿಸುವುದಿಲ್ಲ. ವ್ಯಕ್ತಿಯಿಂದ ಸೊಳ್ಳೆ-ಸೊಳ್ಳೆಯಿಂದ ಮತ್ತೊಬ್ಬ ವ್ಯಕ್ತಿಗೆ ಈ ರೀತಿಯಲ್ಲಿ ಹಬ್ಬುತ್ತದೆ.
ಬ್ರೇಕ್‌ಬೋನ್ ಫಿವರ್
ನಗರ ಪರಿಸರದಲ್ಲಿ, ಹೆಚ್ಚು ಜನಸಂಖ್ಯೆ ಮತ್ತು ಸೋಂಕುಪೀಡಿತ ಜನರ ಚಲನವಲನವು ಸೋಂಕಿನ ಅಪಾಯವನ್ನು ಹೆಚ್ಚಿಸುವುದು ಅನಿವಾರ್ಯವೆಂಬಂತೆ ಕಾಣುತ್ತದೆ. ಬೃಹತ್ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಕೂಡ ಈ ಮಾತು ದಿಟ.
ಡ್ಯಾಂಡಿ ಫೀವರ್, ಥ್ರೀ ಡೇ ಫೀವರ್, ಬ್ರೇಕ್‌ಬೋನ್ ಫೀವರ್ ಮುಂತಾದ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಡೆಂಗ್ಯೂ ಜ್ವರ ಪೀಡಿತರಿಗೆ ಸಂದು ಮತ್ತು ಸ್ನಾಯು ನೋವು ತೀವ್ರವಾಗಿರುತ್ತದೆ. ಈ ಕಾರಣದಿಂದ ಇದನ್ನು ಬ್ರೇಕ್‌ಬೋನ್ ಫೀವರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಲಕ್ಷಣಗಳು
ಚಿಕೂನ್‌ಗುನ್ಯಾ: ತೀವ್ರ ಜ್ವರ, ಸಂದು ನೋವು.
ಡೆಂಗ್ಯೂ: ತೀವ್ರ ಜ್ವರ, ಬೆನ್ನುನೋವು, ಸ್ನಾಯು ಮತ್ತು ಸಂದು ನೋವು, ಕಣ್ಣುಗಳ ಹಿಂದೆ ನೋವು, ತೀವ್ರ ತಲೆನೋವು.
ವೈರಾಣು ಜ್ವರ: ತೀವ್ರ ಜ್ವರ, ಶೀತ, ಗಂಟಲು ಕೆರಸುವಿಕೆ, ದೇಹದಲ್ಲಿ ನೋವು.
ಸೊಳ್ಳೆಗಳ ವಿರುದ್ಧ ಮುಂಜಾಗ್ರತೆ ಹೇಗೆ?
ಸೊಳ್ಳೆ ಕಡಿತಕ್ಕೆ ಅನೇಕ ಮುನ್ನೆಚ್ಚರಿಕೆ ಕ್ರಮಗಳಿವೆ. ಇವುಗಳಲ್ಲಿ ಪ್ರಮುಖವಾದುದು ಎಂದರೆ, ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಆಸುಪಾಸು ನೀರು ಶೇಖರಣೆಯಾಗದಂತೆ ಖಾತ್ರಿಪಡಿಸಿಕೊಳ್ಳುವುದು.
ಮನೆಯ ಒಳಗೆ ಸೊಳ್ಳೆ ಕಡಿತಕ್ಕೆ ಮುನ್ನೆಚ್ಚರಿಕೆ ಕ್ರಮ ಎಂದರೆ ಸೊಳ್ಳೆ ಪರದೆ ಬಳಸುವುದು ಹಾಗೂ ಸೊಳ್ಳೆಗಳನ್ನು ನಾಶಪಡಿಸುವ ರಾಸಾಯನಿಕಗಳನ್ನು ಗೋಡೆಗೆ ಸಿಂಪಡಿಸುವುದು. ಕೆಲ ಜನರು ರೋಗಪ್ರತಿಬಂಧಕ ಔಷಧಗಳನ್ನು ಇಟ್ಟುಕೊಂಡಿರುತ್ತಾರೆ. ಹೊರಗಡೆ ಹೋದಾಗ ಸೊಳ್ಳೆ ದೇಹಕ್ಕೆ ಕ್ರೀಮ್‌ಗಳನ್ನು ಲೇಪಿಸಿಕೊಳ್ಳುತ್ತಾರೆ.
ಸೊಳ್ಳೆ ನಿವಾರಕಗಳು ಎಷ್ಟು ಸುರಕ್ಷಿತ?
ಮನೆಯೊಳಗೆ ಮತ್ತು ಹೊರಗಡೆ ಸೊಳ್ಳೆಗಳನ್ನು ನಿವಾರಿಸಲು ಬೆಂಗಳೂರಿನಲ್ಲಿ ತಿಂಗಳಿಗೆ ಸುಮಾರು 25 ಲಕ್ಷ ಯೂನಿಟ್‌ಗಳಷ್ಟು ಮಾಸ್ಕಿಟೊ ರಿಪೆಲೆಂಟ್‌ಗಳನ್ನು ಉಪಯೋಗಿಸಲಾಗುತ್ತದೆ.
ಈ ರಿಪೆಲೆಂಟ್‌ಗಳಲ್ಲಿ ಹೆಚ್ಚಿನವು ರಾಸಾಯನಿಕ ಆಧಾರಿತವಾದ್ದರಿಂದ ಮಾನವ ದೇಹಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತವೆ.ಕೆಲ ಸಂದರ್ಭಗಳಲ್ಲಿ ಸೊಳ್ಳೆಗಳಿಗಿಂತಲೂ ಹೆಚ್ಚು ಹಾನಿ ಇವುಗಳಿಂದ ಆಗುತ್ತದೆ.
ಅಲೆತ್ರಿನ್ಸ್ ಮತ್ತು ಪ್ಯಾರಲೆತ್ರಿನ್‌ಗಳಂತಹ ವೆಪೊರೈಸರ್ ಮತ್ತು ಮ್ಯೋಟ್‌ಗಳಿಂದ ಬರುವ ರಾಸಾಯನಿಕ ಹೊಗೆಯು ಅಪಾಯಕಾರಿ ಮತ್ತು ಉಸಿರಾಟ ತೊಂದರೆ, ಅಲರ್ಜಿ ಹಾಗೂ ದೀರ್ಘಕಾಲೀನ ನೆಲೆಯಲ್ಲಿ ಹಾನಿಯನ್ನುಂಟುಮಾಡುವ ಮತ್ತು ಅಂತಿಮವಾಗಿ ಪ್ರಾಣಕ್ಕೂ ಸಂಚಕಾರ ತರಬಲ್ಲ ಅನೇಕ ಬಗೆಯ ಎದೆಸಂಬಂಧಿ ಕಾಯಿಲೆಗಳನ್ನು ಪ್ರಚೋದಿಸುತ್ತದೆ.
ಮಲೇಷ್ಯಾದ ಥಾಮ್ಸನ್ ಮೆಡಿಕಲ್ ಸೆಂಟರ್‌ನ ಮಕ್ಕಳ ವಿಭಾಗದ ಡಾ.ಅಂಗ್ ಐ ತಿನ್ ಅವರು ನಡೆಸಿದ ಅಧ್ಯಯನದ ಪ್ರಕಾರ, ಮಾಸ್ಕಿಟೊ ಕಾಯ್ಲನಿಂದ ಹೊರಬರುವ ಹೊಗೆಯು 75ರಿಂದ 135 ಸಿಗರೇಟ್‌ಗಳ ಹೊಗೆಗೆ ಸಮ.
ನೈಸರ್ಗಿಕ ಸೊಳ್ಳೆ ನಿವಾರಕಗಳು
ರಾಸಾಯನಿಕ ಸೊಳ್ಳೆ ನಿವಾರಕಗಳ ಅಸ್ವಸ್ಥ್ಯತೆಯನ್ನು ತೊಡೆದುಹಾಕುವ ಸಲುವಾಗಿ ಲಕ್ನೋದ ಔಷಧೀಯ ಮತ್ತು ಸುಗಂಧ ಸಸ್ಯಗಳ ಕೇಂದ್ರೀಯ ಸಂಸ್ಥೆಯು ಪ್ರಮುಖ ಸಸ್ಯ ಸಂಶೋಧನಾ ಪ್ರಯೋಗಾಲಯದ ಜೊತೆ ಸೇರಿ `ಜಸ್ಟ್ ಸ್ಪ್ರೇ~ ಎಂಬ ಗಿಡಮೂಲಿಕೆ ಸೊಳ್ಳೆ ನಿವಾರಕವನ್ನು ಅಭಿವೃದ್ಧಿಪಡಿಸಿದೆ. ಅಲ್ಲದೇ, ಉದ್ಯಾನಗಳಲ್ಲಿ ನಿಂಬೆಹುಲ್ಲು ಕೂಡ ಒಳ್ಳೆಯದು.
ಇವು ನೈಸರ್ಗಿಕ ಸೊಳ್ಳೆ ನಿವಾರಕಗಳು. ನಿಂಬೆಹುಲ್ಲು ಗಾರ್ಡನ್ ಪ್ರದೇಶದಲ್ಲಿ ಸೊಳ್ಳೆಗಳು ಹಾಗೂ ಕೀಟಗಳ ಕಾಟಕ್ಕೆ ಮುಕ್ತಿ ಕೊಡುತ್ತದೆ.
(ಮೊಬೈಲ್- 9845259150)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.