ADVERTISEMENT

ಹಲಸಿನಕಾಯಿ ಉಪ್ಪಿನಸೊಳೆಯ ವೈವಿಧ್ಯ...

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 18:30 IST
Last Updated 4 ಫೆಬ್ರುವರಿ 2011, 18:30 IST

ಉಂಡ್ಲುಕ
ಬೇಕಾಗುವ ಸಾಮಗ್ರಿಗಳು : ಉಪ್ಪಿನ ಸೊಳೆ ಎರಡು ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಜೀರಿಗೆ ಒಂದು ಟೇಬಲ್ ಚಮಚ, ಎಣ್ಣೆ ಅರ್ಧ ಲೀಟರ್, ಸಣ್ಣಗೆ ಹಚ್ಚಿದ ಕೊಬ್ಬರಿ ಹೋಳುಗಳು ಅರ್ಧ ಕಪ್.

ಮಾಡುವ ವಿಧಾನ: ಮೊದಲು ಉಪ್ಪಿನಲ್ಲಿ ಹಾಕಿಟ್ಟ ಸೊಳೆಗಳನ್ನು ತೊಳೆದು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಬೇಕು. ನಂತರ ಅದನ್ನು ಚೆನ್ನಾಗಿ ಹಿಂಡಿ ತೆಗೆದು ನೆನೆಸಿದ ಬೆಳ್ತಿಗೆ ಅಕ್ಕಿಯ ಜೊತೆ ಜೀರಿಗೆಯನ್ನೂ ಸೇರಿಸಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹಿಟ್ಟು ನೀರಾಗಬಾರದು, ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗಿರಬೇಕು. ಒಂದು ವೇಳೆ ಹಿಟ್ಟು ನೀರಾದರೆ ಒಂದು ಬಟ್ಟೆಯ ಮೇಲೆ ಹಿಟ್ಟನ್ನು ಹರಡಿ ನೀರು ತೆಗೆಯಬಹುದು. ನಂತರ ಒಣಗಿದ ಕೊಬ್ಬರಿಯನ್ನು ಸೀಳಿ ಸಣ್ಣಸಣ್ಣ ಹೋಳುಗಳಾಗಿ ಮಾಡಿಟ್ಟುಕೊಳ್ಳಬೇಕು. ಈಗ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಕೊಬ್ಬರಿ ಹೋಳನ್ನು ಇಟ್ಟು ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಬೇಕು. ಉಂಡೆಗಳನ್ನು ಒಲೆಯಲ್ಲಿ ಕಾಯಲು ಇಟ್ಟ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕಾಯಿಸಬೇಕು. ಈಗ ರುಚಿರುಚಿಯಾದ ಉಂಡ್ಲಕಾಳು ರೆಡಿಯಾಯಿತು. ಖಾರ ಬೇಕಿದ್ದರೆ ಹಿಟ್ಟಿಗೆ ಇಂಗು ಮತ್ತು ಖಾರಪುಡಿ ಬಳಸಬಹುದು. ಡಬ್ಬದಲ್ಲಿ ಮುಚ್ಚಿಟ್ಟರೆ ಸುಮಾರು ಇಪ್ಪತ್ತು ದಿನಗಳಾದರೂ ಹಾಳಾಗದ  ಕರಾವಳಿಯ ಸ್ಪೆಷಲ್ ತಿಂಡಿಯಾದ ಇದು ತುಂಬಾ ರುಚಿಯಾಗಿದ್ದು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. 

 ಸೊಳೆ ರೊಟ್ಟಿ 

  ಬೇಕಾಗುವ ಸಾಮಗ್ರಿ : ಸೊಳೆ ಎರಡು ಕಪ್, ತೆಂಗಿನಕಾಯಿ ತುರಿ ಅರ್ಧ ಕಪ್, ಬೆಳ್ತಿಗೆ ಅಕ್ಕಿಒಂದು ಕಪ್, ಜೀರಿಗೆ ಒಂದು ಟೇಬಲ್ ಚಮಚ,  ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಮೂರು, ಸಣ್ಣಗೆ ಹೆಚ್ಚಿದ ನೀರುಳ್ಳಿ ಎರಡು, ಹೆಚ್ಚಿಟ್ಟು ಕೊಂಡ ಕರಿಬೇವು ಸ್ವಲ್ಪ.

   ವಿಧಾನ : ಉಪ್ಪು ಬಿಡಿಸಿಟ್ಟುಕೊಂಡ ಸೊಳೆಯನ್ನು ನೆನೆಸಿದ ಅಕ್ಕಿ ಮತ್ತು ಕಾಯಿತುರಿಯ ಜೊತೆ ಜೀರಿಗೆ ಹಾಕಿಕೊಂಡು ನುಣ್ಣಗೆ  ಸಾಧಾರಣ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಈ ಹಿಟ್ಟಿಗೆ ಹೆಚ್ಚಿಟ್ಟುಕೊಂಡ ನೀರುಳ್ಳಿ, ಹಸಿಮೆಣಸು, ಕರಿಬೇವು ಹಾಕಿಕೊಂಡು ಚೆನ್ನಾಗಿ ಮಿಶ್ರಮಾಡಿ. ನಂತರ ಒಂದು ಬಾಳೆ ಎಲೆಯಲ್ಲಿ ಸ್ವಲ್ಪ ಹಿಟ್ಟುಹಾಕಿಕೊಂಡು ರೊಟ್ಟಿತಟ್ಟಿ ಕಾದ ಕಾವಲಿಯಲ್ಲಿ ತೆಂಗಿನಎಣ್ಣೆ ಅಥವಾ ತುಪ್ಪ ಹಾಕಿಕೊಂಡು ಎರಡೂ ಬದಿ ಕೆಂಪಗೆ ಬೇಯಿಸಿ. ಈಗ ಘಂ ಎನ್ನುವ ಬಿಸಿಬಿಸಿ ರೊಟ್ಟಿ ಸಿದ್ಧವಾಯಿತು. ಸಕ್ಕರೆ ಬೆರೆಸಿದ ಬೆಣ್ಣೆ ಜೊತೆ ಅಥವಾ ಕಾಯಿಚಟ್ನಿ ಜೊತೆ ಸವಿಯಬಹುದು.


ಸೊಳೆ ತೆಂಗೊಳಲು 
 ಬೇಕಾಗುವ ಸಾಮಗ್ರಿ : ಸೊಳೆ ಎರಡು ಕಪ್, ಮೈದಾ ಹಿಟ್ಟು ಒಂದು ಕಪ್, ಜೀರಿಗೆ ಒಂದು ಟೇಬಲ್ ಚಮಚ, ಖಾರದ ಪುಡಿ ಎರಡು ಚಮಚ, ಇಂಗು ಪರಿಮಳಕ್ಕೆ, ಎಣ್ಣೆ ಅರ್ಧ ಲೀಟರ್.

 ವಿಧಾನ: ಮೊದಲು ಉಪ್ಪು ಬಿಡಿಸಿದ ಸೊಳೆಗಳನ್ನು ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮೈದಾಹುಡಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಪ್ರೆಷರ್‌ಕುಕರ್‌ನಲ್ಲಿ ಹತ್ತು ನಿಮಿಷ ಉಗಿಯಲ್ಲಿಡಿ. ಈಗ ರುಬ್ಬಿಟ್ಟುಕೊಂಡ ಹಿಟ್ಟಿಗೆ ಈ ಮೈದಾವನ್ನು ಹಾಗೂ ಖಾರಪುಡಿ, ಇಂಗು, ಓಮ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಖಾರದಕಡ್ಡಿ ಅಚ್ಚಿನಲ್ಲಿ ಕಾದ ಎಣ್ಣೆಗೆ ಹಾಕಿ ಬೇಯಿಸಿ ಹೊಂಬಣ್ಣ ಬರುವಾಗ ತೆಗೆಯಿರಿ. ಬಹಳ ಮೃದುವಾದ ಈ ತೆಂಗೊಳಲು ತುಂಬ ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.