ಅರುಣಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ತೆಂಜಿನ್ ಯಾಂಗ್‌ಕಿ
ಚಿತ್ರ: PemaKhanduBJP
ಹೈದರಾಬಾದ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್‌ವಿಪಿಎನ್‌ಪಿಎ) ಮೊದಲ ಹಂತದ ತರಬೇತಿ ಪೂರ್ಣಗೊಳಿಸಿದ ಬಳಿಕ ತೆಂಜಿನ್ ಯಾಂಗ್‌ಕಿ ಅವರು ಅರುಣಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅವರು ಅಕ್ಟೋಬರ್ 17 ರಂದು 77ನೇ ಬ್ಯಾಚ್ ಅಧಿಕಾರಿಗಳು ಹಾಗೂ ಇತರರ ಜೊತೆ ನಡೆದ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದರು. ಮಾತ್ರವಲ್ಲ. ಈ ಬ್ಯಾಚ್‌ನಲ್ಲಿ ದಾಖಲೆಯ 36% ಮಹಿಳಾ ಅಧಿಕಾರಿಗಳು ಭಾಗವಹಿಸಿದ್ದರು. ಇವರು ಗೋವಾ, ಮಿಜೋರಾಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೇಡರ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ
2022ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಯಾಂಗ್‌ಕಿ, ಐಎಎಸ್ ಅಧಿಕಾರಿಯಾಗಿದ್ದ ಮಾಜಿ ಸಚಿವ ದಿ. ಥುಪ್ಟೆನ್ ಟೆಂಪಾ ಮತ್ತು ಗೋಆಪ್ ನಿವೃತ್ತ ಕಾರ್ಯದರ್ಶಿ ಜಿಗ್ಮಿ ಚೋಡೆನ್ ಅವರ ಪುತ್ರಿ.
'ಅರುಣಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿರುವ ತವಾಂಗ್ ಜಿಲ್ಲೆಯ ತೆಂಜಿನ್ ಯಾಂಗ್‌ಕಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅರುಣಾಚಲದ ಪ್ರಶಾಂತ ಪರ್ವತಗಳಿಂದ ಹೈದರಾಬಾದ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿವರೆಗಿನ ನಿಮ್ಮ ಪ್ರಯಾಣ ಅದ್ಭುತವಾಗಿದೆ. ಇದು ನಿಮ್ಮ ಧೈರ್ಯ, ದೃಢನಿಶ್ಚಯ ಮತ್ತು ಅಚಲ ಕರ್ತವ್ಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
‘ತೆಂಜಿನ್ ಸಾಧನೆ ಕೇವಲ ವೈಯಕ್ತಿಕ ಮೈಲಿಗಲ್ಲು ಅಲ್ಲ, ಇದು ನಮ್ಮ ಇಡೀ ರಾಜ್ಯಕ್ಕೆ ಹೆಮ್ಮೆಯ ಕ್ಷಣ. ಅವರು ನಾರಿ ಶಕ್ತಿಯ ಚೈತನ್ಯವನ್ನು ಸಾಕಾರಗೊಳಿಸುತ್ತಾರೆ ಮತ್ತು ಅರುಣಾಚಲದ ಅಸಂಖ್ಯಾತ ಯುವ ಹೆಣ್ಣುಮಕ್ಕಳು ದೊಡ್ಡ ಕನಸು ಕಾಣಲು ಮತ್ತು ಹೆಮ್ಮೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಪ್ರೇರಣೆಯಾಗಿದ್ದಾರೆ. ದೇಶ ಸೇವೆಯಲ್ಲಿ ವೃತ್ತಿಜೀವನವು ಸ್ಫೂರ್ತಿದಾಯಕವಾಗಿರಲಿ’ ಎಂದು ಹಾರೈಸಿದ್ದಾರೆ.
ಇವರ ಜೊತೆಗೆ ಖಾತ್ಯ ಉದ್ಯಮಿ ಆನಂದ್ ಮಹಿಂದ್ರಾ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ‘ತೆಂಜಿನ್ ಯಾಂಗ್‌ಕಿ ಭಾರತೀಯ ಪೊಲೀಸ್ ಸೇವೆಗೆ ಸೇರಿದ ಅರುಣಾಚಲ ಪ್ರದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿಕ್ಷಣ ತಜ್ಞೆ, ನಾಗರಿಕ ಸೇವಕಿ ಮತ್ತು ಈಗ ಐಪಿಎಸ್ ಅಧಿಕಾರಿಯಾಗಿರುವ ಅವರು, ತಮ್ಮದೇ ಆದ ಶ್ರೇಷ್ಠತೆಯ ಹಾದಿಯನ್ನು ರೂಪಿಸಿಕೊಳ್ಳುತ್ತಾ ತಮ್ಮ ಪೋಷಕರಿಂದ ಬಂದ ಸೇವೆಯ ಪರಂಪರೆಯನ್ನು ಮುಂದುವರೆಸಿದ್ದಾರೆ’. ಎಂದು ಕೊಂಡಾಡಿದ್ದಾರೆ.
ಮುಂದುವರೆದು, ‘ಮೊದಲಿಗರಾಗುವುದು ಎಂದಿಗೂ ಸುಲಭವಲ್ಲ. ಇದರರ್ಥ ನೀವು ಮೊದಲು ಒಂಟಿಯಾಗಿ ನಡೆಯುತ್ತೀರಿ ಇದರಿಂದ ಇತರರು ಒಂದು ದಿನ ನಿಮ್ಮ ಪಕ್ಕದಲ್ಲಿ ನಡೆಯಬಹುದು ಇಂದು ಒಂಟಿಯಾಗಿ ನಡೆಯಲು ಭಯಪಡಬೇಡಿ’ ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.