
ರುಕ್ಮಿಣಿ ವಸಂತ್, ನಟಿ
‘ಒಂದೊಂದು ವಸ್ತುವಿಗೂ ಒಂದೊಂದು ಮಾಯೆ| ಒಂದೊಂದಕೂ ಸ್ವಂತ ಧಾಟಿ ನಡಿಗೆ| ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ| ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ’ ಎಂಬುದು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವಿತೆಯ ಸಾಲು. ಅಂತೆಯೇ ನಮ್ಮ ಬಾಳಿನಲ್ಲಿ ಬರುವ ಒಂದೊಂದು ಹೊಸ ವರುಷವೂ ಮಾಯೆಯಂತೆಯೇ ಕಳೆದುಹೋಗುತ್ತದೆ. ಅದರ ನಡುವೆಯೂ ತಮಗೆ ದಕ್ಕಿದ್ದೇನು, 2025ರ ಹೊಸ್ತಿಲಾಚೆ ನಿಂತು, ಮುಂದಡಿ ಇಡಲು ಕಾಯುತ್ತಿರುವ ಮಾಯೆಯಂಥ ಮತ್ತೊಂದು ನವ ಸಂವತ್ಸರವನ್ನು ಹೇಗೆ ಎದುರುಗೊಳ್ಳಲಿದ್ದಾರೆ ಎಂಬುದನ್ನು ‘ಭೂಮಿಕಾ’ ಜೊತೆ ಹಂಚಿಕೊಂಡಿದ್ದಾರೆ ವಿವಿಧ ಕ್ಷೇತ್ರಗಳ ಮಹಿಳೆಯರು.
–––
ಸ್ವಕಾಳಜಿಯೂ ಮುಖ್ಯ
ಕನ್ನಡ ಸಿನಿಮಾಗಳಿಗೆ ಜಗತ್ತಿನಾದ್ಯಂತ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ಕನ್ನಡ ಚಿತ್ರೋದ್ಯಮವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಎಲ್ಲ ಕಡೆಗಳಿಂದಲೂ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಸಿಗುತ್ತಿದೆ. ಎಲ್ಲರ ಪ್ರೋತ್ಸಾಹವೂ ದಕ್ಕುತ್ತಿದೆ. ಈ ಬಗ್ಗೆ ಹೆಮ್ಮೆ ಎನಿಸುತ್ತದೆ. ಉತ್ತಮ ಕಥಾವಸ್ತುಗಳಿರುವ ಕನ್ನಡ ಸಿನಿಮಾಗಳಿಗೆ ಎಲ್ಲ ಕಡೆಗಳಿಂದಲೂ ಉತ್ತಮ ಬೇಡಿಕೆ ಇದೆ. 2025ರಲ್ಲಿ ನನಗಾದ ಮನವರಿಕೆಯೆಂದರೆ ಇದೇ.
ಬದುಕು ಹೇಗೆ ಬರುತ್ತದೋ ಹಾಗೆ ಸ್ವೀಕರಿಸಬೇಕು ಎಂದು ನಂಬಿದವಳು ನಾನು. ಮುಂಚಿತವಾಗಿಯೇ ತುಂಬಾ ಯೋಜನೆಗಳನ್ನು ಹಾಕಿಕೊಳ್ಳುವುದಕ್ಕಿಂತ ಆಯಾ ಕ್ಷಣಕ್ಕೆ ಹೇಗೆಲ್ಲ ಯೋಜನೆ ರೂಪಿಸಿಕೊಂಡು ಬದುಕಬೇಕು ಎಂಬುದರತ್ತ ಹೆಚ್ಚು ಗಮನ ಹರಿಸುತ್ತೇನೆ. ಹೀಗೇ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬೇಕು, ಅದರಲ್ಲಿಯೂ ಹೆಚ್ಚು ಹೆಚ್ಚು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬುದೇ ನನ್ನ ಮುಂದಿನ ಗುರಿ. ಸಿನಿಮಾಗಳ ಜತೆಗೆ ಸ್ವಕಾಳಜಿಯೂ ಅಗತ್ಯ. ಕೆಲಸ ಮಾಡುವಷ್ಟೇ ಸಮನಾಗಿ ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡುವುದು ಕೂಡ ಬಹಳ ಮುಖ್ಯ.
ರುಕ್ಮಿಣಿ ವಸಂತ್, ನಟಿ
ಪರ್ಫೆಕ್ಟ್ ಆಗುವ ಅಗತ್ಯವಿಲ್ಲ
2025 ನನ್ನ ಪಾಲಿಗೆ ಚೆನ್ನಾಗಿತ್ತು. ಪುಟ್ಟ ಅವಳಿ ಮಕ್ಕಳ ಕಾರಣದಿಂದ ಎರಡು ವರ್ಷ ಏನನ್ನೂ ಬರೆಯಲು ಆಗಿರಲಿಲ್ಲ. ಆದರೆ, 2025ರಲ್ಲಿ ‘ಮಿಲೇನಿಯಂ ಅಮ್ಮ’ ಅನ್ನುವ ಅನುಭವ ಕಥನ ಬರೆದೆ. ತಾಯ್ತನ, ಬಾಣಂತನದ ಅನುಭವಗಳೆಲ್ಲವೂ ಈಗ ಹೇಗೆ ಬದಲಾಗಿವೆ ಎಂಬುದರ ವಿವರ ಇದರಲ್ಲಿದೆ. ನಾನು ಮೂಲತಃ ವಿಜ್ಞಾನದ ವಿದ್ಯಾರ್ಥಿನಿ, ಎ.ಐ ಎಂಜಿನಿಯರ್. ಆದರೆ, ಸಾಹಿತ್ಯದ ಬಗೆಗಿನ ಆಸಕ್ತಿಯಿಂದ ಈ ವರ್ಷ ಕನ್ನಡ ಸಾಹಿತ್ಯದ ಅಧ್ಯಯನ ಶುರು ಮಾಡಿದೆ. ಅದು ನನಗೆ ತುಂಬಾ ಖುಷಿ ಕೊಟ್ಟ ಸಂಗತಿ.
ಸದ್ಯಕ್ಕೆ ಫ್ರೀಲಾನ್ಸರ್ ಆಗಿರುವ ನನಗೆ, ಹೊಸ ವರ್ಷದಲ್ಲಿ ವೃತ್ತಿ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು, ಮಕ್ಕಳಿಗೆ ಇನ್ನಷ್ಟು ಆರೋಗ್ಯಕರವಾದ ಅಡುಗೆ ಮಾಡಿಕೊಡಬೇಕೆಂಬ ಇಚ್ಛೆ ಇದೆ. ಹೆಣ್ಣುಮಕ್ಕಳ ವಿಚಾರ, ಅವರ ಸಮಸ್ಯೆಗಳು, ಉದ್ಯೋಗಸ್ಥ ಮಹಿಳೆಯರ ಕುರಿತು ಬರೆಯಬೇಕೆಂಬ ತುಡಿತ ಇದೆ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಪರ್ಫೆಕ್ಟ್ ಆಗಿ ಇರಬೇಕೆಂದು ಬಯಸುತ್ತಿರುತ್ತಾರೆ. ಆದರೆ, ಯಾರೇ ಆಗಲಿ ಪರ್ಫೆಕ್ಟ್ ಆಗಿ ಇರಲು
ಪ್ರಯತ್ನಿಸಬೇಡಿ. ನಮ್ಮ ಜೀವನ ಇರುವುದೇ ಕಲಿಯಲು, ತಪ್ಪು ಮಾಡಿದರೆ ಮತ್ತೆ ತಿದ್ದಿಕೊಂಡು ಮುನ್ನಡೆಯಬೇಕು. ಕೆಲವು ಅತಿರೇಕಗಳನ್ನು ನಿಯಂತ್ರಿಸಿಕೊಳ್ಳಬೇಕು. ಹಾಗಾಗಿ, ಯಾರೂ
ಪರಿಪೂರ್ಣರಾಗಿರಲು ಸಾಧ್ಯವಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಇದು ಹೊಸ ವರ್ಷದಲ್ಲಿ ಹೆಣ್ಣುಮಕ್ಕಳಿಗೆ ನಾನು ನೀಡುವ ಸಲಹೆ.
ಮೇಘನಾ ಸುಧೀಂದ್ರ, ಲೇಖಕಿ, ಎಂಜಿನಿಯರ್
ಫೋನ್ ಗೀಳು ತೊರೆಯಲು ಕ್ರೀಡೆ ಮದ್ದು
ನನ್ನ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿರುವೆ. 2025ರಲ್ಲಿ ಮಹಿಳೆಯರ ಕಬಡ್ಡಿ ವಿಶ್ವಕಪ್ ಜಯಿಸಿದ ಭಾರತ ತಂಡದ ಕೋಚ್ ಆಗಿ ಮಾಡಿದ ಸಾಧನೆಯು ವಿಶೇಷವಾಗಿದೆ. ಆಟಗಾರ್ತಿಯಾಗಿದ್ದಾಗಲೂ ಭಾರತ ತಂಡದ ಜಯಕ್ಕೆ ಮಹತ್ವದ ಕಾಣಿಕೆ ನೀಡಿದ್ದೆ. ಕೋಚ್ ಆಗಿ ಮಹತ್ವದ ಪ್ರಶಸ್ತಿಗಳ ‘ಹ್ಯಾಟ್ರಿಕ್’ ಸಾಧಿಸಿರುವೆ.
ಆದರೆ ಇಷ್ಟಕ್ಕೇ ಮುಗಿಯುವುದಿಲ್ಲ. ಹೊಸ ವರ್ಷದಲ್ಲಿ ಪ್ರಮುಖ ಟೂರ್ನಿಗಳು ನಡೆಯಲಿವೆ. ಅದರಲ್ಲಿ ಚೀನಾದಲ್ಲಿ ಬೀಚ್ ಏಷ್ಯನ್ ಗೇಮ್ಸ್ ನಡೆಯಲಿದೆ. ಇದೇ ವರ್ಷ ಏಷ್ಯನ್ ಕ್ರೀಡಾಕೂಟವೂ ನಡೆಯಲಿದೆ. ಎರಡೂ ಟೂರ್ನಿಗಳಲ್ಲಿ ಬಂಗಾರದ ಮೇಲೆ ನಮ್ಮ ಕಣ್ಣಿದೆ. ಗೆಲ್ಲುವ ವಿಶ್ವಾಸವೂ ಇದೆ. ಉತ್ತಮ ಆಟಗಾರ್ತಿಯರು ಇರುವ ತಂಡ ನಮ್ಮದು.
ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸದಾ ಕಬಡ್ಡಿ ಬಗ್ಗೆಯೇ ನನ್ನ ಚಿತ್ತವಿದೆ. ಪುರುಷರಿಗೆ ಪ್ರೊ ಕಬಡ್ಡಿ ಇರುವಂತೆ ಮಹಿಳೆಯರಿಗೂ ಪ್ರೀಮಿಯರ್ ಲೀಗ್ ಆರಂಭಿಸಬೇಕು. ನಾನು ಉತ್ತಮ ಕೋಚ್ ಎಂಬ ಹೆಸರು ಪಡೆಯಬೇಕು, ‘ದ್ರೋಣಾಚಾರ್ಯ’ ಗೌರವ ಗಳಿಸಬೇಕು ಎಂಬ ಗುರಿ ನನ್ನದು. ಬಾಲ್ಯದಿಂದಲೂ ‘ಅರ್ಜುನ’ ಪುರಸ್ಕಾರ ಪಡೆಯಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಆಟಗಾರ್ತಿಯಾಗಿ ಅದನ್ನು ಸಾಧಿಸಿದ್ದೇನೆ.
ಈಗಿನ ಮಕ್ಕಳು ಮತ್ತು ಯುವಜನ ಫೋನ್ ಗೀಳಿನಿಂದ ದೂರ ಇರಬೇಕು. ಅದಕ್ಕೆ ಕ್ರೀಡೆಯಲ್ಲಿ ತೊಡಗಿಕೊಳ್ಳುವುದೇ ಉತ್ತಮ ಹಾದಿ. ಶಿಸ್ತು, ಸತತ ಪರಿಶ್ರಮದ ಮೂಲಕ ಗುರಿ ಸಾಧನೆ ಮಾಡಬೇಕು.
ತೇಜಸ್ವಿನಿ ಬಾಯಿ, ವಿಶ್ವಕಪ್ ವಿಜೇತ ಭಾರತ ಮಹಿಳಾ ಕಬಡ್ಡಿ ತಂಡದ ಕೋಚ್