ADVERTISEMENT

ವಿಶ್ವ ಸ್ತನ್ಯಪಾನ ಸಪ್ತಾಹ | ಹಾಲುಣಿಸಿ: ಬಾಂಧವ್ಯ ಹೆಚ್ಚಿಸಿ

ಡಾ.ವೀಣಾ ಭಟ್ಟ
Published 1 ಆಗಸ್ಟ್ 2025, 23:30 IST
Last Updated 1 ಆಗಸ್ಟ್ 2025, 23:30 IST
   

‘ಮಗುವಿಗೆ ಎದೆಹಾಲು ಸಾಲುತ್ತಿಲ್ಲ. ದನದ ಹಾಲು ಕುಡಿಸಬಹುದೇ?’ ಎಂದು ಹಲವರು ನನ್ನನ್ನು ಕೇಳುತ್ತಲೇ ಇರುತ್ತಾರೆ. ಹೆರಿಗೆಯಾದ ಪ್ರತಿ ತಾಯಿಯಲ್ಲೂ ಮಗುವಿಗೆ ಸಾಕಾಗುವಷ್ಟು ಹಾಲು ಉತ್ಪಾದಿಸುವ ಸಾಮರ್ಥ್ಯ ಇದ್ದೇ ಇರುತ್ತದೆ. ಇದಕ್ಕೆ ಅವಳಿ ಮಕ್ಕಳ ತಾಯಂದಿರೂ ಹೊರತಲ್ಲ. ಗರ್ಭಧಾರಣೆಯ ಸಂದರ್ಭದಲ್ಲಿ ಪಿಟ್ಯೂಟರಿ ಗ್ರಂಥಿಯಿಂದ ಹಾಲಿನ ಉತ್ಪಾದನೆಯನ್ನು ಪ್ರಚೋದಿಸುವ ಪ್ರೋಲ್ಯಾಕ್ಟಿನ್‌ ಹಾರ್ಮೋನ್‌ ಉತ್ಪಾದನೆಯಾಗುತ್ತದೆ. ಪ್ರತಿ ಬಾರಿ ಮಗು ಹಾಲುಂಡಾಗ ಹಾಲು ಕಡಿಮೆಯಾಗುತ್ತಿದೆ ಎನ್ನುವ ಸಂದೇಶವು ನರವಾಹಕಗಳಿಂದ ಮೆದುಳಿಗೆ ಹೋಗುತ್ತದೆ. ಆಗ ಮತ್ತಷ್ಟು ಪ್ರೋಲ್ಯಾಕ್ಟಿನ್ ಹಾರ್ಮೋನ್‌ ಉತ್ಪಾದನೆಯಾಗಿ ಎದೆಹಾಲು ಇನ್ನಷ್ಟು ಹೆಚ್ಚಾಗುತ್ತದೆ. ಮಗು ಹಾಲು ಕುಡಿಯುವಾಗ ಆಕ್ಸಿಟೋಸಿನ್ ಎಂಬ ಹಾರ್ಮೋನ್‌ ಬಿಡುಗಡೆಯಾಗಿ, ಹಾಲನ್ನು ಹೊರಚಿಮ್ಮಿಸಲು ನೆರವಾಗುತ್ತದೆ.

ಮೊದಲ ಆರು ವಾರ ದಿನಕ್ಕೆ ಹತ್ತರಿಂದ ಹನ್ನೆರಡು ಬಾರಿಯಾದರೂ ಎದೆಹಾಲುಣಿಸಬೇಕು. ಹಾಲಿಲ್ಲ, ಹಾಲು ಹೆಚ್ಚಾಗಿ ಸೋರುತ್ತಿಲ್ಲ ಎಂದು ನಿಮಗೆ ಅನ್ನಿಸಿದರೂ ಮಗುವಿಗೆ ಸಾಕಾಗುವಷ್ಟು ಹಾಲು ಬಂದೇ ಬರುತ್ತದೆ. ಪ್ರತಿ ಬಾರಿಯೂ ಕನಿಷ್ಠ 15 ನಿಮಿಷವಾದರೂ ಒಂದು ಕಡೆ ಕುಡಿಸಿ, ಪೂರ್ತಿ ಖಾಲಿಯಾದ ಮೇಲೆ ಇನ್ನೊಂದು ಕಡೆ ಕುಡಿಸಿ. 

ಎದೆಹಾಲಿನಲ್ಲಿ ಮುಂಭಾಗದ ಹಾಲು ಹಾಗೂ ಹಿಂಭಾಗದ ಹಾಲು ಎಂದು ಎರಡು ವಿಧ. ಸಕ್ಕರೆ ಅಂಶವಿರುವ ಮುಂದಿನ ಹಾಲು (ಫ್ಲೋರ್‌ಮಿಲ್ಕ್‌) ನೀರಿನಂತಿದ್ದು, ಬಾಯಾರಿಕೆ ನೀಗಿಸುತ್ತದೆ. ಮಗು ಇದನ್ನಷ್ಟೇ ಕುಡಿದಾಗ ಹೊಟ್ಟೆ ಉಬ್ಬರಿಸಿದಂತಾಗಿ, ಆಗಾಗ್ಗೆ ಅಳಬಹುದು. ಹಿಂದಿನ ಹಾಲಿನಲ್ಲಿ (ಹೈಂಡ್‌ಮಿಲ್ಕ್) ಹೆಚ್ಚು ಕೊಬ್ಬಿನಾಂಶವಿದ್ದು, ಅದನ್ನು ಕುಡಿದ ಮಗು ಸಂತೃಪ್ತಭಾವದಿಂದ ಮಲಗಬಹುದು. ಮಗುವಿನ ತೂಕ ಹೆಚ್ಚಲು ಇದು ಪೂರಕ. ತಾಯಿ–ಮಗುವಿನ ಬಾಂಧವ್ಯದಿಂದಲೂ ಹಾಲು ಉತ್ಪಾದನೆ ಹೆಚ್ಚುತ್ತದೆ ಎಂಬುದು ತಿಳಿದಿರಲಿ.

ADVERTISEMENT

ಸರಿಯಾದ ಭಂಗಿಯಲ್ಲಿ ಕುಳಿತು ಹಾಲುಣಿಸಿ. ಮೊಲೆಯ ತೊಟ್ಟಿನ ಭಾಗ ಬಾಯೊಳಗೆ ಪೂರ್ತಿ ಹೋಗುವಂತೆ ನೋಡಿಕೊಳ್ಳಿ. ಎದೆಹಾಲು ನೀಡುವ ತಾಯಿ ದಿನಕ್ಕೆ ಕನಿಷ್ಠ ಮೂರರಿಂದ ಮೂರೂವರೆ ಲೀಟರ್ ನೀರನ್ನು ಕುಡಿಯಲೇಬೇಕು. ನಾರಿನಂಶವುಳ್ಳ, ಪ್ರೊಟೀನ್‌ಯುಕ್ತ ಆಹಾರ ಸೇವಿಸಬೇಕು. ಕೆಲವರು ಎದೆಹಾಲು ಹೆಚ್ಚಲು ಮೆಂತ್ಯೆ, ಸೋಂಪಿನಕಾಳು, ಕ್ಯಾರೆಟ್, ನುಗ್ಗೇಸೊಪ್ಪು, ತೆಂಗಿನಹಾಲು ಕೊಡುತ್ತಾರೆ. ಇದರಿಂದ ಅಪಾಯವೇನೂ ಇಲ್ಲ. ಶತಾವರಿ, ಅಶ್ವಗಂಧ, ದಶಮೂಲ ಸೇವಿಸಲು ಆಯುರ್ವೇದ ತಜ್ಞರು ಹೇಳುತ್ತಾರೆ. ಇದು ಸಹ ಹಾಲು ಹೆಚ್ಚಿಸಲು ಪೂರಕವೇ.

ಬಾಣಂತಿಯರಿಗೆ ಮಾಡಿಸುವ ಅಭ್ಯಂಗ ಸ್ನಾನವು ನರವ್ಯವಸ್ಥೆಯನ್ನು ಶಾಂತಗೊಳಿಸಲು ಸಹಕಾರಿ. ಮಗು ನಿದ್ದೆ ಮಾಡಿದಾಗ ತಾಯಿಯೂ ನಿದ್ದೆ ಮಾಡಬೇಕು. ಆಗ ಒತ್ತಡದ ಹಾರ್ಮೋನುಗಳು ಕಡಿಮೆಯಾಗಿ,  ತಾಯಿಯ ಮನಃಸ್ಥಿತಿ ಶಾಂತವಾಗುತ್ತದೆ. ಇದರಿಂದ, ಹಾಲು ಉತ್ಪಾದನೆಗೆ ಅಗತ್ಯವಿರುವ ಹಾರ್ಮೋನ್‌ ಸ್ರವಿಸುವಿಕೆ ಹೆಚ್ಚುತ್ತದೆ. ಆಗಾಗ್ಗೆ ದೀರ್ಘ ಉಸಿರಾಟ, ಇಂಪಾದ ಸಂಗೀತ ಕೇಳುವುದು ಇವೆಲ್ಲವೂ ಒತ್ತಡ ನಿರ್ವಹಣೆಗೆ ನೆರವಾಗುತ್ತವೆ. ವಿಟಮಿನ್ ಡಿ, ಕ್ಯಾಲ್ಸಿಯಂ, ವಿಟಮಿನ್ ಬಿ, ಕಬ್ಬಿಣಾಂಶದ ಮಾತ್ರೆಗಳನ್ನು ಕೊಟ್ಟಿದ್ದರೆ ತಪ್ಪದೇ ಸೇವಿಸಿ. ಹೆರಿಗೆಯಾಗಿ 6 ತಿಂಗಳವರೆಗೆ ಬರೀ ಎದೆಹಾಲು, 2 ವರ್ಷದವರೆಗೆ ಎದೆಹಾಲಿನ ಜೊತೆಗೆ ಸೂಕ್ತ ಪೂರಕ ಆಹಾರವನ್ನು ಮಗುವಿಗೆ ಕೊಡುವುದನ್ನು ತಪ್ಪಿಸಬೇಡಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.