ADVERTISEMENT

ಯುವತಿಯರ ಸುರಕ್ಷತೆಗೆ ಕಾರ್ ಪೂಲಿಂಗ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:30 IST
Last Updated 27 ಜನವರಿ 2020, 19:30 IST
ಕಾರ್‌ ಪೂಲಿಂಗ್‌ ವ್ಯವಸ್ಥೆಗೆ ಮೊರೆ ಹೋಗಿರುವ ಯುವತಿ
ಕಾರ್‌ ಪೂಲಿಂಗ್‌ ವ್ಯವಸ್ಥೆಗೆ ಮೊರೆ ಹೋಗಿರುವ ಯುವತಿ   

ಮಹಾನಗರಗಳಲ್ಲಿ ಮಹಿಳೆಯರು ಕಾರ್‌ ಪೂಲಿಂಗ್‌ ವ್ಯವಸ್ಥೆಗೆ ಮೊರೆ ಹೋಗುವ ಟ್ರೆಂಡ್‌ ಜಾಸ್ತಿಯಾಗಿದೆ. ಸುರಕ್ಷಿತ ಪ್ರಯಾಣಕ್ಕೆ ಇದೊಂದು ಸುಲಭ ಮಾರ್ಗ.

ಸುಮಿತ್ರಾ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿ. ಆಫೀಸ್‌ನಿಂದ ಮನೆಗೆ 15 ಕಿ.ಮೀ ದೂರ. ಪ್ರತಿದಿನ ಬಸ್ಸು, ಮೆಟ್ರೊ ಹಿಡಿದು ಓಡಾಡಿ ಹೈರಾಣಾಗಿ ಹೋಗಿದ್ದ ಆಕೆಗೆ ವರವಾಗಿದ್ದು ಕಾರ್ ಪೂಲಿಂಗ್.

ಪ್ರತಿದಿನ ಕೆಲಸ, ಕಚೇರಿ ಎಂದು ಓಡಾಡುವ ಮಹಿಳೆಯರಿಗೆ ಕಾರ್ ಪೂಲಿಂಗ್ ನಿಜಕ್ಕೂ ವರದಾನ ಎನ್ನುತ್ತಾರೆ ದೊಡ್ಡ ನಗರಗಳ ಮಹಿಳೆಯರು. ಇದರಿಂದ ಪ್ರಯಾಣದ ಶ್ರಮ ಅರ್ಧದಷ್ಟು ಉಳಿಯುತ್ತದೆ ಎನ್ನುವುದು ಅವರ ಅಭಿಪ್ರಾಯ.

ADVERTISEMENT

ಭದ್ರತೆಯ ದೃಷ್ಟಿಯಿಂದ ಉತ್ತಮ

ಕಾರ್ ಪೂಲಿಂಗ್ ಮೂಲಕ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡುವುದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ. ತಾವು ಹೋಗುವ ದಾರಿಯಲ್ಲೇ ಪ್ರಯಾಣಿಸುವ ಸಹ ಪ್ರಯಾಣಿಕರು ತಮ್ಮೊಂದಿಗೆ ಪ್ರಯಾಣ ಮಾಡುವುದರಿಂದ ಒಂದಷ್ಟು ಆತ್ಮೀಯ ವಲಯ ಸೃಷ್ಟಿಯಾಗುತ್ತದೆ ಎಂಬುದು ಉದ್ಯೋಗಸ್ಥ ಮಹಿಳೆಯರ ಅಭಿಪ್ರಾಯ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ‘ಕ್ವಿಕ್ ರೈಡ್ ಆ್ಯಪ್‌’ ಪ್ರಕಾರ ಭಾರತದಲ್ಲಿ ಶೇ 45ರಷ್ಟು ಮಹಿಳೆಯರು ಕಾರ್ ಪೂಲಿಂಗ್ ಅನ್ನು ಅವಲಂಬಿಸಿದ್ದಾರೆ. ಅದರಲ್ಲೂ ಬೆಂಗಳೂರು, ದೆಹಲಿ, ಹೈದರಾಬಾದ್, ಕೇರಳ, ಮುಂಬೈ, ಪುಣೆ, ಚೆನ್ನೈ ಹಾಗೂ ಕೊಲ್ಕತ್ತಾದಂತಹ ಮಹಾನಗರಗಳಲ್ಲಿ ಹೆಚ್ಚು ಮಹಿಳೆಯರು ಕಾರ್ ಪೂಲಿಂಗ್ ಮಾಡುತ್ತಿದ್ದಾರೆ.

ಸಮಯದೊಂದಿಗೆ ಹಣವೂ ಉಳಿತಾಯ

ಕಾರ್ ಪೂಲಿಂಗ್‌ನಲ್ಲಿ ಒಂದೇ ಮಾರ್ಗದಲ್ಲಿ ಪ್ರಯಾಣಿಸುವವರು ಅಥವಾ ಒಂದೇ ಪ್ರದೇಶಕ್ಕೆ ಹೋಗುವವರು ಸಿಗುವ ಕಾರಣದಿಂದ ಸಮಯದ ಜೊತೆಗೆ ಹಣವೂ ಉಳಿತಾಯವಾಗುತ್ತದೆ. ಇದರಿಂದ ತಮಗೆ ಪ್ರಯಾಣದ ಶ್ರಮವೂ ಕಡಿಮೆ ಎನ್ನುವುದು ಮಹಿಳಾ ಉದ್ಯೋಗಿಗಳ ಮಾತು. ಆದರೆ ನಿಮ್ಮ ದಾರಿಯಲ್ಲಿ ಪ್ರಯಾಣಿಸುವ ಮಂದಿ ಕಡಿಮೆಯಾದರೆ ನಿಮ್ಮ ಮೇಲೆ ಹೊರೆ ಹೆಚ್ಚಬಹುದು.

ಬೆಂಗಳೂರಿನಲ್ಲಿ ಸುಮಾರು 3 ಲಕ್ಷ ಮಂದಿ ಮಹಿಳೆಯರು ತಮ್ಮ ಪ್ರಯಾಣಕ್ಕೆ ಕಾರ್ ಪೂಲಿಂಗ್ ಉತ್ತಮ ಆಯ್ಕೆ ಎಂದಿದ್ದಾರೆ ಎನ್ನುತ್ತದೆ ಅಧ್ಯಯನ. ಕಾರ್ ಪೂಲಿಂಗ್‌ನಲ್ಲಿ ಚೆನ್ನೈ ಎರಡನೇ ಸ್ಥಾನದಲ್ಲಿದೆ.

ಮಂಗಳೂರಿನಲ್ಲಿ..

ಮಂಗಳೂರು ನಗರದಲ್ಲಿಯೂ ಕೂಡ ಮಹಿಳೆಯರು ಕಾರ್‌ ಪೂಲಿಂಗ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ಸಮಯಕ್ಕೆ ಸರಿಯಾಗಿ ಸಿಗದ ಬಸ್‌, ಇದರಿಂದ ಕಚೇರಿಗೆ ತಡವಾಗಿ ಹೋಗುವುದು, ವಾಪಸ್ಸಾಗುವಾಗ ಕತ್ತಲಾಗಿ ಒಂಟಿಯಾಗಿ ಬರುವ ಆತಂಕ.. ಇಂತಹ ಸಮಸ್ಯೆಗಳಿಗೆ ಪರಿಹಾರ ಕಾರ್‌ ಪೂಲಿಂಗ್‌’ ಎನ್ನುತ್ತಾರೆ ಈ ವ್ಯವಸ್ಥೆ ಮಾಡಿಕೊಂಡಿರುವ ಮಾಯಾ ನಾಯಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.