
ನನಗೆ 36 ವರ್ಷ. ಇಬ್ಬರು ಮಕ್ಕಳಿದ್ದು, ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಆಗಿದೆ. ಆಗಾಗ್ಗೆ ಸ್ವಲ್ಪ ಬಿಳಿಮುಟ್ಟು ಆಗುತ್ತದೆ. ವೈದ್ಯರಿಗೆ ತೋರಿಸಿದಾಗ, ತೊಂದರೆಯಿಲ್ಲ ಎಂದು ಮಾತ್ರೆ ಕೊಟ್ಟಿದ್ದಾರೆ. ಆದರೆ, ನನ್ನ ಸಹೋದ್ಯೋಗಿಯೊಬ್ಬರಿಗೆ ಬಿಳಿಮುಟ್ಟು ಆಗುತ್ತಿದ್ದು, ಅವರಿಗೆ ವೈದ್ಯರು ‘ಸರ್ವೈಕಲ್ ಕ್ಯಾನ್ಸರ್’ ಇದೆ ಎಂದಿದ್ದಾರೆ. ನನಗೆ ಭಯವಾಗುತ್ತಿದೆ. ನಾನು ಯಾವ ರೀತಿ ಮುಂಜಾಗ್ರತೆ ವಹಿಸಲಿ? ಗರ್ಭಕೋಶದ ಕ್ಯಾನ್ಸರ್‌ಗೆ ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೆ?
→ಅನುರಾಧ, ಮಾಗಡಿ
ಅನುರಾಧ ಅವರೆ, ಪ್ರತಿ ಮಹಿಳೆಯಲ್ಲೂ ಸ್ವಲ್ಪ ಪ್ರಮಾಣದ ಬಿಳಿಮುಟ್ಟು ಆಗುವುದು ಸಹಜ. ಆ ಸಹಜ ಸ್ರಾವವು ನೀರಿನ ಹಾಗಿದ್ದು, ಯಾವುದೇ ವಾಸನೆ ಹೊಂದಿರುವುದಿಲ್ಲ ಮತ್ತು ಯೋನಿಯ ತೇವಾಂಶ ಕಾಯ್ದುಕೊಳ್ಳಲು, ಸ್ವಚ್ಛತೆ ಕಾಪಾಡಲು ಈ ಸ್ರಾವ ಅಗತ್ಯ. ಕಣ್ಣನ್ನು ರಕ್ಷಿಸುವ ಕಣ್ಣೀರು ಹಾಗೂ ಬಾಯಿಯ ಜೊಲ್ಲು ರಸದ ಹಾಗೆ ಈ ಸ್ರಾವ ಕೂಡ.
ಮುಟ್ಟಾಗುವ ಮುನ್ನ ಅಂಡೋತ್ಪತ್ತಿಯಾಗುವ ಸಂದರ್ಭದಲ್ಲಿ, ಅಂದರೆ ಹಿಂದಿನ ಬಾರಿ ಮುಟ್ಟಾದ 12ರಿಂದ 15 ದಿನಗಳಲ್ಲಿ ಲೈಂಗಿಕವಾಗಿ ಉದ್ರೇಕಗೊಂಡ ಸಮಯದಲ್ಲೆಲ್ಲ ಸ್ವಲ್ಪಮಟ್ಟಿಗೆ ಈ ಸಹಜ ಸ್ರಾವ ಹೆಚ್ಚಾಗಬಹುದು. ಚಿಂತಿಸಬೇಡಿ, ಆದರೆ ಬಿಳಿಮುಟ್ಟು ತುಂಬಾ ದಪ್ಪನಾಗಿದ್ದು ವಾಸನೆಯುಕ್ತವಾಗಿದ್ದರೆ, ಪುಡಿ ಪುಡಿ ರೀತಿ ಇದ್ದು, ಹಸಿರು, ಹಳದಿ ರಕ್ತಮಿಶ್ರಿತವಾಗಿದ್ದರೆ ಜೊತೆಗೆ ತುರಿಕೆಯೂ ಇದ್ದರೆ ಅದು ಬ್ಯಾಕ್ಟೀರಿಯಾ ಈಸ್ಟ್ ಅಥವಾ ಪ್ರೋಟೊಜೋವಾದಂತಹ ಸೋಂಕಿನಿಂದ ಆಗಿರಬಹುದು. ಇಂತಹ ಸ್ಥಿತಿ ಇದ್ದರೆ ನೀವು ಸೂಕ್ತ ತಜ್ಞರಿಂದ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯಲೇಬೇಕು.
ಇನ್ನು ನೀವು ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಭಯ ಹೊಂದಿದ್ದೀರಿ. ಗರ್ಭಕೋಶದ ಒಳಾವರಣದ ಕ್ಯಾನ್ಸರ್‌ನಲ್ಲಿ ಅತಿ ರಕ್ತಸ್ರಾವ ಅಥವಾ ಮುಟ್ಟು ನಿಂತ ಮೇಲೆ ರಕ್ತಸ್ರಾವ ಕಂಡುಬರಬಹುದು. ಬಿಳಿಮುಟ್ಟು ಹೆಚ್ಚಿನ ಸಂದರ್ಭದಲ್ಲಿ ಇರುವುದಿಲ್ಲ. ಆದರೆ ಗರ್ಭಕಂಠ ಅಥವಾ ಗರ್ಭ ಕೊರಳಿನ ಅಂದರೆ ಸರ್ವೈಕಲ್ ಕ್ಯಾನ್ಸರ್‌ನಲ್ಲಿ ಕೆಲವೊಮ್ಮೆ ರಕ್ತಮಿಶ್ರಿತ ಬಿಳಿಸ್ರಾವ ಕಂಡುಬರಬಹುದು. ಇನ್ನು ಕೆಲವೊಮ್ಮೆ ಸಂಭೋಗದ ನಂತರ ರಕ್ತಸ್ರಾವ ಆಗಬಹುದು. ಇಂತಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಸೂಕ್ತ ತಪಾಸಣೆಗೆ ಒಳಗಾಗಬೇಕು. ಗರ್ಭಕೋಶದ ಕ್ಯಾನ್ಸರ್ ಬಾರದಂತೆ ತಡೆಯಲು ಲಸಿಕೆ ಇಲ್ಲ. ಆದರೆ, ಗರ್ಭಕೊರಳಿನ ಕ್ಯಾನ್ಸರ್‌ಗೆ ಲಸಿಕೆ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದು, ಬಹುಲೈಂಗಿಕ ಸಂಗಾತಿಗಳನ್ನು ಹೊಂದುವುದು, ಧೂಮಪಾನ, ಅಂತರವಿಲ್ಲದ ಹೆರಿಗೆಯಂತಹ ಕಾರಣಗಳಿಂದ ಗರ್ಭಕೊರಳಿನ ಕ್ಯಾನ್ಸರ್ ಉಂಟಾಗಬಹುದು. ನಿಯಮಿತವಾಗಿ ಪ್ಯಾಪ್ಸ್‌ಮಿಯರ್ ಎಂಬ ಸ್ಕ್ರೀನಿಂಗ್ ಪರೀಕ್ಷೆ ಮಾಡಿಸಿಕೊಳ್ಳಿ. ಗರ್ಭಕೊರಳಿನ ಕ್ಯಾನ್ಸರ್ ನಿರ್ಮೂಲನೆಗೆ ಸಂಬಂಧಪಟ್ಟಂತೆ 9ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ಹಾಕಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಕಾರ್ಯಸೂಚಿ ಹೊರಡಿಸಿದೆ. 26 ವರ್ಷದ ನಂತರ ಲಸಿಕೆ ತೆಗೆದುಕೊಳ್ಳುವುದು ಅಷ್ಟೇನೂ ಪ್ರಯೋಜನಕಾರಿ ಅಲ್ಲ. ಆದರೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕ್ಯಾನ್ಸರ್‌ನ ತೀವ್ರತೆ ತಡೆಯಲು ಸ್ವಲ್ಪ ಮಟ್ಟಿಗೆ ಅದರಿಂದ ಸಹಾಯವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.