ADVERTISEMENT

Child Psychology: ಮರೆತುಬಿಡಿ ಈ ಪಾಠ!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 0:30 IST
Last Updated 2 ಆಗಸ್ಟ್ 2025, 0:30 IST
   

ಮುಂಜಾನೆ ಮಂಪರುಗಣ್ಣಿನಲ್ಲಿ ಎದ್ದುಬಂದ ಮಗಳು, ಎಂದಿನಂತೆ ಓಡಿ ಬಂದು ನನ್ನನ್ನು ತಬ್ಬಲಿಲ್ಲ, ‘ಗುಡ್‌ ಮಾರ್ನಿಂಗ್‌’ ಎಂದದ್ದಕ್ಕೂ ಕ್ಯಾರೇ ಅನ್ನಲಿಲ್ಲ. ನಗಲೋ ಬೇಡವೋ ಎಂಬಂತೆ ಮುಖಮಾಡಿ ಸದ್ದಿಲ್ಲದೆ ಹಲ್ಲುಜ್ಜಲು ಹೊರಟಾಗ, ಅರೆ ಏನಾಯಿತು ಎಂದು ಅಚ್ಚರಿಯಾಯಿತು. ಆದರೂ ಅವಳನ್ನು ಶಾಲೆಗೆ ಹೊರಡಿಸುವ ಧಾವಂತದಲ್ಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವಷ್ಟು ಸಮಯ ಇರಲಿಲ್ಲ, ಕಚೇರಿಯ ಕೆಲಸದಲ್ಲೂ ಅದಕ್ಕೆ ಆಸ್ಪದವಾಗದೆ ವಿಷಯ ಮರೆತೇಹೋಗಿತ್ತು. ಆದರೆ ಸಂಜೆ ಮನೆಗೆ ವಾಪಸಾದಾಗಲೂ ಅವಳು ಅದೇ ಪೆಚ್ಚು ಮೋರೆಯಲ್ಲಿ ಎದುರುಗೊಂಡಾಗ ಮಾತ್ರ ಕಳವಳವಾಯಿತು. ತೋರಿಸಿಕೊಳ್ಳದೆ, ಬರುತ್ತಾ ತಂದಿದ್ದ ಅವಳಿಷ್ಟದ ತಿಂಡಿಯನ್ನು ಮುಂದಿಟ್ಟಾಗಲೂ ಸಪ್ಪೆ ಮುಖದಲ್ಲೇ ಕೈಗೆತ್ತಿಕೊಂಡಾಗ ಮಾತ್ರ ತಡೆಯಲಾಗಲಿಲ್ಲ. ಹತ್ತಿರ ಸೆಳೆದುಕೊಂಡು ಮುದ್ದುಗರೆಯುತ್ತಾ ‘ಏನಾಯಿತು ನನ್ನ ಪುಟಾಣಿಗೆ?’ ಎಂದಾಗ, ಅದಕ್ಕೇ ಕಾದಿದ್ದವಳಂತೆ ಸಿಡಾರ್‌ ಎಂದು ದೂರ ಸರಿದು ‘ಹ್ಞೂಂ ನೆನ್ನೆ ನೀನು ಸುಮ್‌ಸುಮ್ನೆ ನನಗೆ ಬೈದಿದ್ಯಾಕೆ’ ಎಂದಾಗಲೇ ಅವಳ ಕೋಪಕ್ಕೆ ಕಾರಣ ತಿಳಿದದ್ದು. ಮನೆ– ಕಚೇರಿ ಕೆಲಸದ ಒತ್ತಡದಲ್ಲಿ ನಿದ್ದೆ ಸಾಲದೆ ಹೈರಾಣಾಗುತ್ತಿದ್ದರಿಂದ, ನೆನ್ನೆ ರಾತ್ರಿ ಬೇಗ ಬೇಗ ಅಡುಗೆ ಮನೆಯ ಕೆಲಸ ಮುಗಿಸಿ ಆದಷ್ಟು ಬೇಗ ದಿಂಬಿಗೆ ತಲೆಯಾನಿಸುವ ಆತುರದಲ್ಲಿದ್ದೆ. ಆಗ ಹಿಂದಿನಿಂದ ಅವಳು ಗಟ್ಟಿಯಾಗಿ ತಬ್ಬಿಕೊಂಡು ‘ಕಥೆ ಹೇಳು’ ಎಂದು ದುಂಬಾಲು ಬಿದ್ದಾಗ ‘ಟೈಮಾಯಿತು ಹೋಗು ಮಲಗು’ ಎಂದು ಗದರಿದ್ದೆ ಅಷ್ಟೆ. ಆಮೇಲೆ ಅದರ ನೆನಪೇ ನನಗಿರಲಿಲ್ಲ. ಆದರೆ ಅದಾಗಿ ಒಂದು ರಾತ್ರಿ, ಒಂದು ಹಗಲು ಕಳೆದಿದ್ದರೂ ಅವಳ ಮುನಿಸು ಮಾತ್ರ ಮಾಯವಾಗಿರಲಿಲ್ಲ!

ಬಾಲ್ಯದಲ್ಲಿ ಅಮ್ಮನಿಂದ ಹಿಗ್ಗಾಮುಗ್ಗಾ ಬೈಸಿಕೊಳ್ಳುತ್ತಿದ್ದರೂ ಮರುದಿನ ಏಳುವಷ್ಟರಲ್ಲಿ ಅದ್ಯಾವುದೂ ತಲೆಯಲ್ಲಿ ಇರುತ್ತಲೇ ಇರಲಿಲ್ಲ. ಎಂದಿನಂತಿರದ ಅಮ್ಮನ ಸಿಡುಕು ಮೂತಿ ನೋಡಿದಾಗಷ್ಟೇ ಮಿತಿಮೀರಿದ ಕೀಟಲೆಯಿಂದ ಅವಳ ಪಿತ್ಥ ನೆತ್ತಿಗೇರಿಸಿದ್ದು ನೆನಪಾಗುತ್ತಿದ್ದುದು. ವಯೋಸಹಜವಾದ ವಿಪರೀತ ತುಂಟಾಟದಿಂದ ನನಗೆ ಗೂಸಾ ಬೀಳುವುದು, ಅಮ್ಮನಿಂದ ಮಂಗಳಾರತಿ ಎತ್ತಿಸಿಕೊಳ್ಳುವುದು ಮಾಮೂಲಿ ಎಂಬಂತಾಗಿ ಹೋಗಿತ್ತು. ಆದರೆ ರಾತ್ರಿ ನಿದ್ದೆ ಮುಗಿಸಿ ಎದ್ದೆನೆಂದರೆ ಮುಗಿಯಿತು, ಅಲ್ಲಿಗೆ ಎಲ್ಲವೂ ಮರೆತಂತೆಯೇ. ಮತ್ತದೇ ತುಂಟಾಟ, ಕೀಟಲೆಗೆ ಹಾತೊರೆಯುತ್ತಿತ್ತು ಮನ.

ಆದರೆ ಈಗಿನ ಮಕ್ಕಳಿಗೆ ಏನಾಗಿದೆ? ಮಲಗಿ ಎದ್ದಾಗ ಹೋಗಲಿ, ಅದರ ಮರುದಿನವೂ ಅದೇ ಗುಂಗು, ದೊಡ್ಡವರು ಮರೆತರೂ ಚಿಕ್ಕ ತಲೆಯಲ್ಲಿ ಮಾತ್ರ ಅದೇ ಗುನುಗು. ಈ ಕಿವಿಯಲ್ಲಿ ಹೇಳಿದ ಒಳ್ಳೆಯ ವಿಷಯ ಆ ಕಿವಿಯಿಂದ ಆಚೆ ಓಡಿ ಹೋಗಿರುತ್ತದೆ. ಸಕಾರಣವಿದ್ದು ಬೈದಾಗಲೂ ಕೆಲಸದ ಒತ್ತಡದಲ್ಲಿದ್ದಾಗ ಕಿರಿಕಿರಿ ತಡೆಯಲಾರದೆ ಗದರಿದಾಗಲೂ ಅದನ್ನು ಮಾತ್ರ ಮರೆಯದೇ ಜಿದ್ದು ಸಾಧಿಸುವುದು ಆನ್‌ಲೈನ್‌ ಕಾಲದ ನವಪೀಳಿಗೆಯ ವರಸೆಯೇ? ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ’ ಎಂಬ ಬೇಂದ್ರೆಯವರ ಕವನದ ಸಾಲು ಅಲ್ಲೆಲ್ಲೋ ನಮ್ಮನ್ನು ಅಣಕಿಸಿ ನಗುತ್ತಿದೆಯೇ?

ADVERTISEMENT

‘ಮನೆಯಲ್ಲಿ ಅಥವಾ ಹೊರಗೆ ನಮಗೆ ಏನಾದರೂ ಜಗಳ ಆಗಿದ್ರೆ ಒಮ್ಮೆ ಮಲಗಿ ಎದ್ದೆವೆಂದರೆ ಅದು ಮುಗಿದುಹೋಗಿರಬೇಕು. ಮತ್ತೆ ನಾವು ಕೆಟ್ಟವರೂ ಅಲ್ಲ, ಒಳ್ಳೆಯವರೂ ಅಲ್ಲ, ನಾವು ಹೊಸಬರು.ತಾಜಾ ಜೀವನ. ಹಾಗೆ ನಾವು ಪ್ರತಿದಿನ ಹೊಸಬರಾಗಿ ಬಾಳಿದರೆ ಅದೇ ಅಧ್ಯಾತ್ಮ ಜೀವನ’ ಎಂದಿದ್ದಾರೆ ಸಿದ್ಧೇಶ್ವರ ಸ್ವಾಮೀಜಿ. ಹೌದು, ನಮ್ಮ ಮಕ್ಕಳಿಗೆ ನಾವೀಗ ಕಲಿಸಲೇಬೇಕಾದ ಪಾಠಗಳಲ್ಲಿ ‘ಮರೆಯಲೇಬೇಕಾದ’ ಈ ಪಾಠವೂ ಒಂದು, ಅಲ್ಲವೇ?

–ಶಾರದಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.