ADVERTISEMENT

‘ಆ ದಿನ’ಗಳಿಗೆ ಇರಲಿ ಕಪ್!

ಮಂಜುಶ್ರೀ ಎಂ.ಕಡಕೋಳ
Published 26 ಜುಲೈ 2019, 19:30 IST
Last Updated 26 ಜುಲೈ 2019, 19:30 IST
Menstrual cup, detail of object of intimate hygiene of woman
Menstrual cup, detail of object of intimate hygiene of woman   

ಸತತವಾಗಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡುವ ಉದ್ಯೋಗ ಆಕೆಯದು. ತಿಂಗಳಿಗೊಮ್ಮೆ ಬರುವ ಆ ದಿನಗಳಲ್ಲಿ ಕೆಲವೊಮ್ಮೆ ಹೆಚ್ಚು ಸ್ರಾವವಾದಾಗ ಅವಳ ಕಷ್ಟ ಹೇಳತೀರದು. ಎರಡು– ಮೂರು ಗಂಟೆಗಳಿಗೊಮ್ಮೆ ವಾಷ್‌ರೂಂಗೆ ಹೋಗಿ ಪ್ಯಾಡ್ ಬದಲಿಸುವುದರಲ್ಲೇ ಹೈರಾಣಾಗುತ್ತಿದ್ದಳಾಕೆ. ಥತ್ ಈ ಪ್ಯಾಡ್ ಬದಲಿಗೆ ಮತ್ತಷ್ಟು ಸುರಕ್ಷಿತ ಅನಿಸುವಂಥದ್ದು ಬೇರೇನಾದರೂ ಇದ್ದಿದ್ದರೆ ಅಂತ ಸ್ನೇಹಿತೆಯ ಬಳಿ ಹೇಳಿಕೊಂಡಾಗಲೇ ಆಕೆಗೆ ಪರಿಚಯವಾದದ್ದು ಗೆಳತಿಯಷ್ಟೇ ಆತ್ಮೀಯತೆ ತುಂಬಿದ ‘ಮುಟ್ಟಿನ ಕಪ್’!

ಮುಟ್ಟಿನ ಕಪ್ ಬಳಸತೊಡಗಿದ ಮೇಲೆಅವಳಿಗೀಗ ‘ಆ ದಿನಗಳ’ ಚಿಂತೆಯಿಲ್ಲ. ಪದೇಪದೇ ಪ್ಯಾಡ್ ಬದಲಾಯಿಸುವ ಗೋಜಲೂ ಇಲ್ಲ. ಹೆಚ್ಚು ರಕ್ತಸ್ರಾವವಾದಾಗ ಬಟ್ಟೆಗೆ ಅಂಟುವ ರಗಳೆಯೂ ಇಲ್ಲ.ಮೆಡಿಕಲ್ ಶಾಪ್‌ಗೆ ಹೋಗಿ ‘ಅದನ್ನು ಕೊಡಿ’ ಅಂತ ಪಿಸುಮಾತಿನಲ್ಲಿ ಕೇಳುವ ಸಮಸ್ಯೆಯೂ ಇಲ್ಲ. ಅದೆಲ್ಲಾ ಈ ಕಪ್‌ನ ಮಹಿಮೆ!

ಹೌದು. ವಿಜ್ಞಾನ ಬೆಳೆದಂತೆ ಹೆಣ್ಮಕ್ಕಳ ಆರೋಗ್ಯ ಕ್ಷೇತ್ರದಲ್ಲೂ ಅಗಾಧ ಬೆಳವಣಿಗೆಯಾಗಿದೆ. ಹಳೇ ಬಟ್ಟೆ, ಟ್ಯಾಂಪನ್ಸ್‌, ಸ್ಯಾನಿಟರಿ ಪ್ಯಾಡ್ ಕಾಲವೀಗ ನಿಧಾನಕ್ಕೆ ತೆರೆಗೆ ಸರಿಯುತ್ತಿದ್ದು, ಮುಟ್ಟಿನ ಕಪ್‌ಗಳನ್ನು ಬಳಸುವ ಮತ್ತು ಅದರ ಬಗ್ಗೆ ತಿಳಿವಳಿಕೆ ಪಡೆಯುವ ಕಾಲವಿದು. ಸಣ್ಣ ಪಟ್ಟಣ ಮತ್ತು ದೊಡ್ಡ ನಗರಗಳಲ್ಲಿ ಮುಟ್ಟಿನ ಕಪ್‌ಗಳು ಈಗ ಪರಿಸರ ಪ್ರಿಯ ಹೆಣ್ಣುಮಕ್ಕಳ ಮನಸಿನಲ್ಲಿ ಆತ್ಮೀಯ ಸ್ಥಾನ ಗಳಿಸಿಕೊಂಡಿವೆ.

ADVERTISEMENT

ಏನಿದು ಮುಟ್ಟಿನ ಕಪ್?

ಬಳಸಲು ಸುಲಭವಾದ, ಹಳೇ ಬಟ್ಟೆ, ಟ್ಯಾಂಪನ್ಸ್, ಸ್ಯಾನಿಟರಿ ಪ್ಯಾಡ್‌ಗಳಿಗಿಂತಲೂ ಹೆಚ್ಚು ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವಂಥ ಸಾಧನವೇ ಮುಟ್ಟಿನ ಕಪ್. ನೋಡಲು ಸಣ್ಣ ಗಂಟೆಯಾಕಾರದಂತಿರುವ ಈ ಕಪ್ ಅನ್ನು ಒಮ್ಮೆ ಖರೀದಿಸಿದರೆ ಕನಿಷ್ಠ 10 ವರ್ಷಗಳ ಕಾಲ ಬಳಸ ಬಹುದು!

ಮೆಡಿಕಲ್ ಗ್ರೇಡ್ ಸಿಲಿಕಾನ್‌ನಿಂದ ಮಾಡಿರುವ ಮುಟ್ಟಿನ ಕಪ್ ಗರ್ಭಕಂಠದೊಳಗೆ (ಸರ್ವಿಕ್ಸ್‌) ನಿಶ್ಚಲವಾಗಿ ನಿಲ್ಲುವಂಥ ಸಾಧನ. ಸತತ ಎಂಟು ಗಂಟೆಗಳ ಕಾಲ ಮುಟ್ಟಿನ ರಕ್ತಸ್ರಾವವನ್ನು ಸಂಗ್ರಹಿಸಿಡುವ ಸಾಮರ್ಥ್ಯವುಳ್ಳ ಈ ಕಪ್ ಪರಿಸರ ಸ್ನೇಹಿಯೂ ಹೌದು.

ಕಪ್ ಒಂದು, ಲಾಭ ಅನೇಕ

ತಿಂಗಳಿಗೊಮ್ಮೆ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ಗಾಗಿ ವ್ಯಯಿಸುವ ಹಣಕ್ಕಿಂತ ತುಸು ದುಬಾರಿಯೆನಿಸಿದರೂ ಮುಟ್ಟಿನ ಕಪ್, ಒಮ್ಮೆ ಖರೀದಿಸಿದರೆ ಹತ್ತು ವರ್ಷಗಳಿಗಾಗುವಷ್ಟು ಪ್ಯಾಡ್‌ನ ಹಣ ಉಳಿತಾಯ ಮಾಡಬಹುದು. ರಕ್ತಲೇಪಿತ ಪ್ಯಾಡ್ ಅನ್ನು ಕಾಣದಂತೆ ಪೇಪರ್‌ನಲ್ಲಿ ಸುತ್ತಿ ಅದನ್ನು ವಿಲೇವಾರಿ ಮಾಡುವ ಕಷ್ಟ ಮುಟ್ಟಿನ ಕಪ್‌ನಲ್ಲಿಲ್ಲ. ಕಪ್ ತುಂಬಿದ ಅನುಭವವಾದಾಗ ಅದನ್ನು ಹೊರತೆಗೆದು ಸ್ವಚ್ಛ ನೀರಿನಲ್ಲಿ ತೊಳೆದು ಮರು ಬಳಸಬಹುದು.

ಆಟ, ಓಟ, ಪಾಠ ಹೀಗೆ ಚಟುವಟಿಕೆ ಯಾವುದೇ ಆಗಿರಲಿ ಮುಟ್ಟಿನ ಕಪ್ ಧರಿಸಿ ಆರಾಮವಾಗಿ ಪಾಲ್ಗೊಳ್ಳಬಹುದು. ರಕ್ತಸ್ರಾವ ಹೆಚ್ಚಿ ಬಟ್ಟೆಗೆ ಅಂಟಿಕೊಳ್ಳುವ ಮುಜುಗರವಾಗಲೀ, ಪ್ಯಾಡ್ ಬದಲಿಸುವ ತಾಪತ್ರಯವಾಗಲೀ ಇದರಲ್ಲಿಲ್ಲ. ಪ್ಯಾಡ್‌ನ ಪ್ಲಾಸ್ಟಿಕ್ ಎಳೆಗಳಿಂದ ತೊಡೆಸಂದಿಯಲ್ಲಿ ಉಂಟಾಗುವ ಕಡಿತವಾಗಲೀ, ಅಲರ್ಜಿಯೂ ಇದರಲ್ಲಿಲ್ಲ. ಪ್ಯಾಡ್‌ ಇಲ್ಲವೇ ಟ್ಯಾಂಪನ್‌ನಂತೆ ಬಿಸಾಡಿ, ಪರಿಸರ ಮಾಲಿನ್ಯ ಮಾಡುವ ತೊಂದರೆ ಇಲ್ಲ. ವ್ಯಾನಿಟಿ ಬ್ಯಾಗ್‌ನಲ್ಲಿ ಹೆಚ್ಚು ಜಾಗವೂ ಇದಕ್ಕೆ ಬೇಕಿಲ್ಲ. ಮೂಲೆಯೊಂದರಲ್ಲಿ ಸಣ್ಣ ಬಟ್ಟೆಯ ಚೀಲದಲ್ಲಿ ಕಟ್ಟಿಟ್ಟರೂ ಆದೀತು. ಅಂಗೈಯ ಮುಷ್ಟಿಯಲ್ಲಿ ಮಡಚಿಟ್ಟುಕೊಂಡು ವಾಷ್‌ರೂಂಗೆ ಹೋಗಿ ಧರಿಸುವ ಸರಳತೆ ಮುಟ್ಟಿನ ಕಪ್‌ನ ವೈಶಿಷ್ಟ್ಯ.

ಮೊದಲು ಕಷ್ಟ, ಆಮೇಲೆ ಇಷ್ಟ!

ಮುಟ್ಟಿನ ಕಪ್ ಬಳಸುವ ಆರಂಭಿಕ ಹಂತ ಅನೇಕರಿಗೆ ಕಷ್ಟಕರವೆನಿಸಬಹುದು. ಆದರೆ, ಸೂಕ್ತ ವಿಧಾನದಲ್ಲಿ ಈ ಕಪ್ ಅನ್ನು ಬಳಸತೊಡಗಿದ ಮೇಲೆ ಇದು ಖಂಡಿತಾ ಇಷ್ಟವಾಗುತ್ತದೆ. ದೇಹಾಕೃತಿ ಮತ್ತು ವಯಸ್ಸಿಗೆ ಅನುಗುಣವಾಗಿ ಸೂಕ್ತ ರೀತಿಯ ಕಪ್ ಆಯ್ದುಕೊಳ್ಳುವುದು ಜಾಣತನ. ಕಪ್‌ನ ತುದಿ ಹೆಚ್ಚು ಉದ್ದವಾಗಿರದೇ ತುಸು ಕಡಿಮೆ ಉದ್ದ ಇರುವ ಕಪ್‌ಗಳನ್ನೇ ಬಳಸುವುದು ಸೂಕ್ತ ಎನ್ನುವುದು ವೈದ್ಯರ ಅಭಿಮತ.

ಸ್ಯಾನಿಟರಿ ಪ್ಯಾಡ್‌ನಿಂದ ಆಗುವ ಅಡ್ಡಪರಿಣಾಮಗಳು ಕಪ್‌ನಲ್ಲಿಲ್ಲ. ಕೆಲವರಿಗೆ ಪ್ಯಾಡ್‌ ಬಳಕೆಯಿಂದ ಆಗುವ ಚರ್ಮದ ಅಲರ್ಜಿ, ಸದಾ ಹಸಿಹಸಿ ಎನಿಸುವಂಥ ಭಾವ, ಸೋಂಕಿನ ಸಮಸ್ಯೆ ಮುಟ್ಟಿನ ಕಪ್‌ನಲ್ಲಿ ಇರುವುದಿಲ್ಲ ಅನ್ನುವ ಬಗ್ಗೆ ಅಧ್ಯಯನವೊಂದರ ವರದಿ ಹೇಳುತ್ತದೆ. ಮುಖ್ಯವಾಗಿ ಮದುವೆಯಾಗದ ಯುವತಿಯರು ಯಾವುದೇ ಅನುಮಾನವಿಲ್ಲದೇ ಇದನ್ನು ಧೈರ್ಯವಾಗಿ ಬಳಸಬಹುದು ಎನ್ನುತ್ತಾರೆ ಮುಟ್ಟಿನ ಬಗ್ಗೆ ಸಂಶೋಧನೆ ಕೈಗೊಂಡಿರುವ ಜ್ಯೋತಿ ಹಿಟ್ನಾಳ್.

ನೋಡಲು ದೊಡ್ಡದೆನಿಸುವ ಭಾವ ಹುಟ್ಟಿಸುವ ಮುಟ್ಟಿನ ಕಪ್ ಸರಾಗವಾಗಿ ದೇಹದೊಳಗೆ ಹೋಗುವ ಅನುಮಾನ ಹಲವರದ್ದು. ಆದರೆ, ಒಂದು ಮಗುವನ್ನೇ ಹೊರಹಾಕಬಲ್ಲ ಅವಳ ಖಾಸಗಿ ಭಾಗದಲ್ಲಿ ಪುಟ್ಟ ಕಪ್ ಅಷ್ಟೇ ಸಲೀಸಾಗಿ ಒಳಹೋಗಬಲ್ಲದು ಎನ್ನುವ ಆತ್ಮವಿಶ್ವಾಸವೂ ಇರಬೇಕಾದದ್ದು ಅಗತ್ಯ ಎನ್ನುತ್ತಾರೆ ಸಂಶೋಧಕರು. ಆರಂಭಿಕ ಹಂತದಲ್ಲಿ ತುಸು ಗಲಿಬಿಲಿ ಅನಿಸಿದರೂ 2–3 ದಿನಗಳಲ್ಲಿ ಇದು ದೇಹಕ್ಕೆ ಹೊಂದಿಕೊಳ್ಳುತ್ತದೆ. ಆಮೇಲೆ ಎಲ್ಲವೂ ನಿರಾಳ. ಮುಟ್ಟಿನ ಕಪ್ ಟ್ಯಾಂಪನ್ಸ್, ಪ್ಯಾಡ್‌ನಂತೆ ಖಾಸಗಿ ಭಾಗದ ತೇವಾಂಶಕ್ಕೆ ಯಾವುದೇ ಧಕ್ಕೆ ತರದು.

ಪ್ರತಿ ತಿಂಗಳ ಮುಟ್ಟಿನ ಅವಧಿ ಮುಗಿದ ನಂತರ ಮುಟ್ಟಿನ ಕಪ್ ಅನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದು 20 ನಿಮಿಷ ಬಿಸಿನೀರಲ್ಲೇ ಕುದಿಸಿಬಿಟ್ಟರೆ ಅದನ್ನು ಮುಂದಿನ ತಿಂಗಳಿಗೆ ಮರು ಬಳಕೆ ಮಾಡಬಹುದು. ಸಂಕೋಚ, ಮುಜುಗರ ಬದಿಗಿಟ್ಟು ಹೆಣ್ತನವನ್ನು ಮುಟ್ಟಿನ ಕಪ್ ಮೂಲಕ ಸಂಭ್ರಮಿಸಲು ಇದು ಸಕಾಲ.

ಆನ್‌ಲೈನ್, ಮೆಡಿಕಲ್ ಸ್ಟೋರ್‌ಗಳಲ್ಲೂ ವಿವಿಧ ಬ್ರ್ಯಾಂಡ್‌ನ ಮುಟ್ಟಿನ ಕಪ್‌ಗಳು ಲಭ್ಯ. ಬಳಸುವ ವಿಧಾನವೂ ಆನ್‌ಲೈನ್‌ನಲ್ಲಿ ಲಭ್ಯ. ದರ 250– 2500 ರೂಪಾಯಿವರೆಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.