ADVERTISEMENT

ನೈಸರ್ಗಿಕ ಹೇರ್‌ ಕಂಡಿಷನರ್‌ ಮೊಸರು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 19:30 IST
Last Updated 30 ಜನವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಳ್ಳೆಯ ಬ್ಯಾಕ್ಟೀರಿಯ ಹೆಚ್ಚಿಸುವ ಮೊಸರು ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ ಎಂಬುದು ಗೊತ್ತೇ ಇದೆ. ಇದು ಮುಖದ ಸೌಂದರ್ಯ ಹೆಚ್ಚಿಸಲು ಮಾತ್ರವಲ್ಲ, ಕೂದಲಿನ ಅಂದಕ್ಕೂ ಕೂಡ ಸಾಥ್‌ ನೀಡುತ್ತದೆ. ಇದು ಇತ್ತೀಚೆಗೆ ಆರಂಭವಾದದ್ದಲ್ಲ. ಸಾವಿರಾರು ವರ್ಷಗಳಿಂದಲೂ ಕೂದಲು ಸದೃಢವಾಗಿ ಬೆಳೆಯಲು ಮೊಸರು ಉಪಯೋಗಿಸುತ್ತಾ ಬಂದಿದ್ದಾರೆ.

ಇದು ತಲೆಹೊಟ್ಟು, ತುರಿಕೆ ಹಾಗೂ ತಲೆಗೂದಲಿಗೆ ಅಂಟುವ ಸೋಂಕುಗಳಂತಹ ಸಮಸ್ಯೆಗಳನ್ನು ಶಮನಗೊಳಿಸುತ್ತದೆ.

ಕೂದಲಿನ ಗುಣಮಟ್ಟವನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟುವ ಅತ್ಯುತ್ತಮವಾದ ನೈಸರ್ಗಿಕ ಹೇರ್‌ ಕಂಡಿಷನರ್‌ಗಳಲ್ಲಿ ಮೊಸರು ಕೂಡ ಒಂದು. ಇದರಲ್ಲಿ ವಿಟಮಿನ್ ಬಿ5 ಮತ್ತು ಡಿ ಇರುವುದರಿಂದ ಕೂದಲು ಸಮೃದ್ಧವಾಗಿ ಬೆಳೆಯಲು, ಬೇರುಗಳನ್ನು ಆಳದಿಂದ ಪೋಷಿಸಲು ನೆರವಾಗುತ್ತದೆ. ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುವ ಮೂಲಕ ತಲೆಯ ಬುರುಡೆ ಆರೋಗ್ಯಕರವಾಗಿರುವಂತೆ ಸಹಾಯ ಮಾಡುತ್ತದೆ. ಜೊತೆಗೆ ಸಿಕ್ಕು ಸಿಕ್ಕಾದ ಹಾಗೂ ಬಲಹೀನವಾಗಿ ತುಂಡಾಗುವ ಕೂದಲನ್ನು ಬಲಗೊಳಿಸಿ ಹದಗೊಳಿಸುತ್ತದೆ.

ADVERTISEMENT

ಉಪಯೋಗಿಸುವ ವಿಧಾನ

ಮೊಸರನ್ನು ಕೂದಲಿಗೆ ಉಪಯೋಗಿಸುವುದು ತುಂಬಾ ಸರಳ. ಒಂದು ಬಟ್ಟಲಿನಲ್ಲಿ ಗಟ್ಟಿ ಮೊಸರು ತೆಗೆದುಕೊಂಡು ಚೆನ್ನಾಗಿ ಕಲೆಸಿ ಪೇಸ್ಟ್‌ ರೀತಿಯಲ್ಲಿ ತಯಾರಿಸಿ. ನಂತರ ನೆತ್ತಿಯ ಮೇಲೆ ಹಾಗೂ ಕೂದಲಿಗೆ ಸಮನಾಗಿ ಲೇಪಿಸಿ. 20– 30 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಸಾಮಾನ್ಯ ನೀರಿನಿಂದ ಚೆನ್ನಾಗಿ ತೊಳೆಯಿರಿ.

ವಾಸನೆ ದೂರವಾಗಿಸಿ

ಮೊಸರನ್ನು ಕೂದಲಿಗೆ ಹಚ್ಚುವುದರಿಂದ ಕೆಟ್ಟವಾಸನೆ ಬರುತ್ತದೆ ಎಂಬ ಕಾರಣದಿಂದ ಅನೇಕರು ಕೂದಲಿಗೆ ಮೊಸರನ್ನು ಹಚ್ಚಿಕೊಳ್ಳುವುದಿಲ್ಲ. ಮೊಸರು ಹಚ್ಚಿದ ನಂತರ ವಾಸನೆ ಬರದಂತೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಕಿತ್ತಳೆ ಹಣ್ಣಿನ ರಸ: ಇದು ಸುವಾಸನೆಯಿಂದ ಕೂಡಿರುವ ಕಾರಣ ವಾಸನೆ ಬರದಂತೆ ತಡೆಯುತ್ತದೆ. ತಾಜಾ ಕಿತ್ತಾಳೆ ಹಣ್ಣಿನ ರಸವನ್ನು ಕೂದಲಿಗೆ ಲೇಪಿಸಿಕೊಳ್ಳಿ. 5– 10 ನಿಮಿಷಗಳ ನಂತರ ಬಿಟ್ಟು ತೊಳೆದರೆ ಸಾಕು, ಕೂದಲು ಕಿತ್ತಳೆ ವಾಸನೆಯಿಂದ ಕೂಡಿರುತ್ತದೆ.

ನಿಂಬೆರಸ: ತಾಜಾ ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ನೀರು ಸೇರಿಸಿ ಕೂದಲಿಗೆ ಹಚ್ಚಿಕೊಂಡು 2–3 ನಿಮಿಷಗಳ ನಂತರ ತೊಳೆಯಿರಿ.

ಅಡುಗೆ ಸೋಡಾ: ಮೊಸರಿನ ವಾಸನೆಯನ್ನು ತಡೆಯಲು ಅಡುಗೆ ಸೋಡಾ ಕೂಡ ಸಹಕಾರಿ. ಒಂದು ಚಿಟಿಕೆ ಅಡುಗೆ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್‌ ತಯಾರಿಸಿ ಒದ್ದೆಯಾದ ಕೂದಲಿಗೆ ಹಚ್ಚಿ. 5 ನಿಮಿಷಗಳ ನಂತರ ತೊಳೆಯುವುದರಿಂದ ವಾಸನೆಯನ್ನು ನಿಯಂತ್ರಿಸಬಹುದು.

ಮಾಹಿತಿ:ಡಾ.ಬ್ರಹ್ಮಾನಂದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.