ADVERTISEMENT

ಫ್ಯಾಷನ್: ಬೆನ್ನಿಗಿರಲಿ ರಾಮ..

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 23:38 IST
Last Updated 26 ಜನವರಿ 2024, 23:38 IST
   

ಉತ್ತರಪ್ರದೇಶದ ಗಾಜಿಯಾಬಾದ್‌ ಜಿಲ್ಲೆಯ ಒಂದು ರಾಮಮಂದಿರದಲ್ಲಿದ್ದ ಪರದೆ, ಕನ್ನಡತಿ ವೃಂದಾ ಶೇಖರ್‌ ಅವರ ಬೆನ್ನೇರಿದೆ.

ರಾಮನ ವಿಗ್ರಹದ ಹಿಂದೆ ಪರದೆಯಂತೆ ಬಳಸುತ್ತಿದ್ದ ಟಸ್ಸರ್‌ ಸಿಲ್ಕ್‌ನ ವಸ್ತ್ರದ ತುಣುಕು ಆಶೀರ್ವಾದದ ರೂಪದಲ್ಲಿ ವೃಂದಾ ಕೈಗೆ ಬಂದಿತು. ಮೊದಲೆಲ್ಲ ಈ ಪರದೆಯನ್ನು ನೀಡಲು ಅರ್ಚಕರು ನಿರಾಕರಿಸಿದರು. ದೇವರನ್ನು ಅವಮಾನಿಸಿದಂತೆ ಎಂದೆಲ್ಲ ಹೇಳಿದರು. ಈಗಾಗಲೇ ಬುದ್ಧನ ಚಿತ್ರವನ್ನು ಮನಬಂದಂತೆ ಬಳಸಲಾಗುತ್ತಿದೆ. ಹಾಗೆಯೇ ಇದೂ ಆದರೆ ಎಂಬ ಆತಂಕ ವ್ಯಕ್ತಪಡಿಸಿದರು.

ವೃಂದಾ ಮಾತ್ರ ತಮ್ಮ ರಾಮ ಭಕ್ತಿಯನ್ನೂ ಸಮ್ಮಿಳಿಸಿ, ದೇವರು ನನ್ನ ಬೆನ್ನಿಗಿರಲಿ ಎಂಬ ಆಶಯವನ್ನು ಸ್ಪಷ್ಟಪಡಿಸಿದರು. ಎಲ್ಲಿಯೂ ರಾಮ ಎಂಬ ಹೆಸರು ಬರುವಲ್ಲಿ ಕತ್ತರಿ ಹಾಕದಂತೆ ಬಳಸಬೇಕಿತ್ತು. ಈ ವಸ್ತ್ರದಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಶೇಕದ ಚಿತ್ರವನ್ನೂ ಚಿತ್ರಿಸಲಾಗಿದೆ. ಜೊತೆಗೆ ತುಳಸೀದಾಸರ ಶ್ರೀರಾಮ ಚರಿತಮಾನಸವನ್ನೂ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.

ADVERTISEMENT

ಅದನ್ನು ನಾಜೂಕಾಗಿ ರವಿಕೆಗೆ ಒಪ್ಪುವಂತೆ ವಿನ್ಯಾಸವನ್ನು ಒಪ್ಪಗೊಳಿಸಿದರು. ಬೆನ್ನಿಗಿರಲಿ ರಾಮನ ಬೆಳಕು ಎಂಬಂತೆ ರವಿಕೆಯನ್ನು ಸಿದ್ಧಪಡಿಸಿದರು. ಈ ರವಿಕೆ ತೊಟ್ಟಾಗ ಆದ ದೈವೀಕ ಅನುಭವ ವರ್ಣಿಸಲು ಅಸದಳ ಎನ್ನುತ್ತಾರೆ ವೃಂದಾ.

ಅಷ್ಟೂ ವರ್ಷಕಾಲ ದೇವೋಪಾಸನೆಯ ಪರಿಸರದಲ್ಲಿ ಇದ್ದುದರಿಂದ ಈ ರವಿಕೆ ಸ್ಪರ್ಶಿಸಿದರೂ ಸಕಾರಾತ್ಮಕ ಅಲೆಗಳ ಅನುಭೂತಿ ಉಂಟಾಗುತ್ತದೆ. ಮತ್ತು ಪ್ರತಿಸಲವೂ ಆ ಅರ್ಚಕರ ಎಚ್ಚರವೂ ಇರುತ್ತದೆ. ನಮ್ಮನು ಘನತೆಯಿಂದ ಕಾಣುವಂತೆ ಮಾಡುವ ರವಿಕೆ, ಈ ಚಿತ್ರದಿಂದಾಗಿ ಗೌರವವನ್ನೂ ತಂದು ಕೊಡುತ್ತಿದೆ ಎನ್ನುತ್ತಾರೆ.

ಈ ವಿನ್ಯಾಸದಿಂದಲೇ ಸ್ಫೂರ್ತಿ ಪಡೆದ ವೃಂದಾ, ದೇಗುಲದ ವಿನ್ಯಾಸವನ್ನು ರವಿಕೆಯ ಬೆನ್ನಿಗೆ ಬರೆಯಿಸಿ, ಕಡ್ಡಿ ಹೊಲಿಗೆಯಿಂದ ಕಸೂತಿ ಮಾಡಿಸಿದರು. ಈ ವಸ್ತ್ರ ನೇಯ್ದಿದ್ದು ಬಾಗಲಕೋಟೆ ಜಿಲ್ಲೆಯ ನೇಕಾರರು. ಕಸೂತಿ ಮಾಡಿದ್ದು, ವೃಂದಾ ಅವರ ಸಹಾಯಕಿ ಪ್ರಿಯಾ. ಕ್ರೈಸ್ತಧರ್ಮದ ಈ ಯುವತಿ ರಾಮಬಂಟ ಹನುಮನ ಭಕ್ತೆಯೂ ಹೌದು. ಅವರು ಈ ದೇಗುಲವನ್ನು ಕಸೂತಿಯಲ್ಲಿ ಸೆರೆ ಹಿಡಿದರು.

ಪಟ್ಟಾಭಿಷೇಕದ ರಾಮ, ತುಳಸೀದಾಸರ ರಾಮ ಹಾಗೂ ಬಾಲರಾಮನ ಮಂದಿರ ಎಲ್ಲವೂ ವೃಂದಾ ಶೇಖರ್‌ ಸಂಗ್ರಹದಲ್ಲಿ ಬೆಚ್ಚಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.