‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದನ್ನು ಬಹಳ ವರ್ಷಗಳಿಂದ ಕೇಳಿಕೊಂಡು ಬರುತಿದ್ದೇವೆ. ಕುಟುಂಬದ ಆಧಾರಸ್ತಂಭದಂತಿರುವ ಹೆಣ್ಣಿನ ಶಿಕ್ಷಣ ಮತ್ತು ಸ್ವಾವಲಂಬನೆ, ಸಾಮಾಜಿಕ ಸ್ವಾಸ್ಥ್ಯದ ಬಹುಮುಖ್ಯ ಅಂಶ. ಕೆಲವೊಂದು ವರದಿಗಳ ಪ್ರಕಾರ ಕಲಿತ ಹೆಣ್ಣು ಹಲವಾರು ಕೌಟುಂಬಿಕ–ಸಾಮಾಜಿಕ ಶೋಷಣೆ, ದೌರ್ಜನ್ಯ, ದುರಂತಗಳಿಂದ ತಪ್ಪಿಸಿಕೊಳ್ಳುತ್ತಾಳೆ. ಅವಳು ಹೆಚ್ಚಿನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಿದವಳೂ, ಆರ್ಥಿಕವಾಗಿ ಸಬಲೆಯೂ, ಅಪ್ರಾಪ್ತ ವಯಸ್ಸಿನ ವಿವಾಹ–ಸಂತಾನ – ಮುಂತಾದ ಸಮಸ್ಯೆಗಳಿಂದ ಮುಕ್ತಳೂ ಆಗಿರುತ್ತಾಳೆಂದು ಹಲವು ಅಧ್ಯಯನಗಳು ಹೇಳಿವೆ; ಅದು ಪ್ರತಿನಿತ್ಯದ ಬದುಕಿನಲ್ಲಿ ನಮ್ಮ ಸುತ್ತಮುತ್ತಲೂ ಗೋಚರಿಸುವಂತಹ ಪ್ರತ್ಯಕ್ಷ ಸತ್ಯ. ಔದ್ಯೋಗಿಕ ಅವಕಾಶಗಳೂ, ಸಾಮಾಜಿಕ ಮನ್ನಣೆಯೂ, ಉತ್ತಮ ಜೀವನಶೈಲಿ, ಸ್ವಾತಂತ್ಯ, ಆಕರ್ಷಕ ವ್ಯಕ್ತಿತ್ವ, ಮುಂದಾಳತ್ವ, ಸಂವಹನ ಕೌಶಲ, ಯೋಚನಾ ಮತ್ತು ಯೋಜನಾ ಸಾಮರ್ಥ್ಯ, ಸಮಸ್ಯೆಗಳ ದಕ್ಷ ನಿರ್ವಹಣೆ ಇನ್ನೂ ಅನೇಕ ಲಾಭಗಳು ಸುಶಿಕ್ಷಿತ ಹೆಣ್ಣಿಗೆ ಇರುವಷ್ಟು ಶಿಕ್ಷಣ ವಂಚಿತ ಹೆಣ್ಣಿಗೆ ಇಲ್ಲವೆಂಬುದು ಎಲ್ಲರ ಅರಿವಿಗೂ ಬಂದಿರುತ್ತದೆಯಷ್ಟೆ. ವ್ಯಕ್ತಿತ್ವ ವಿಕಸನ, ಸಾಮಾಜಿಕ ಬದಲಾವಣೆ, ಆರ್ಥಿಕ ಪ್ರಗತಿ – ಇವುಗಳನ್ನು ಸಾಧಿಸಲು ಗಂಡು–ಹೆಣ್ಣೆಂಬ ಬೇಧವಿಲ್ಲದೆ ಎಲ್ಲರೂ ಶಿಕ್ಷಣ ಪಡೆಯುವುದು ಮುಖ್ಯ. ಎಲ್ಲ ಸ್ತರಗಳಲ್ಲಿಯೂ ಅತಿವೇಗದ ಪಲ್ಲಟಗಳನ್ನು ಅನುಭವಿಸುತ್ತಿರುವ, ತಂತ್ರಜ್ಞಾನದ ಪರಿಣತಿಯಲ್ಲಿ ನಾಗಾಲೋಟದಿಂದ ನಮ್ಮ ದೇಶವೂ ಮುನ್ನುಗ್ಗುತ್ತಿದೆ. ಆದರೆ ಎಷ್ಟೇ ಮುಂದುವರಿದರೂ ಕೆಲವೊಂದು ರೀತಿಯ ಮನಃಸ್ಥಿತಿ, ಮೌಲ್ಯ(?), ಮೌಢ್ಯ, ಆಚರಣೆ, ನಂಬಿಕೆಗಳಿಗೆ ಜೋತುಬಿದ್ದಿರುವ ಭಾರತೀಯ ಸಮಾಜದಲ್ಲಿ ಹೆಣ್ಣಿನ ಶಿಕ್ಷಣ ಏಕೆ ಅತಿ ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಎರಡು ಉದಾಹರಣೆಗಳ ಮೂಲಕ ನೋಡೋಣ.
ಉದಾಹರಣೆ 1
ಬಿ.ಕಾಂ. ಎರಡನೇ ವರ್ಷಕ್ಕೆ ಓದು ಬಿಟ್ಟು ಮದುವೆಯಾದ ಗೆಳತಿಯೊಬ್ಬಳು ಎರಡು ಮಕ್ಕಳ ತಾಯಿಯಾಗಿದ್ದಾಳೆ. ಮದುವೆಯಾದ ಏಳೆಂಟು ವರ್ಷಗಳವರೆಗೆ ಅವಳ ಗಂಡನಿಗೆ ಅತ್ಯುತ್ತಮ ಸಂಬಳದ ಕೆಲಸವಿದ್ದುದರಿಂದ ಅಚ್ಚುಕಟ್ಟಾಗಿ ಸಂಸಾರ ಮಾಡಿಕೊಂಡಿದ್ದಳು. ಆದರೆ ಬರುಬರುತ್ತಾ ಆಫೀಸಿನಲ್ಲೇನೋ ಸಮಸ್ಯೆಗಳು ಉಂಟಾಗಿ ಇರುವ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಬ್ಯುಸಿನೆಸ್ ಒಂದನ್ನು ನಡೆಸುವುದಾಗಿ ಗಂಡ ತೀರ್ಮಾನಿಸಿದಂದಿನಿಂದ ಆರ್ಥಿಕ ದುಃಸ್ಥಿತಿಗೆ ತಲುಪಿರುವ ಸಂಸಾರವನ್ನು ನೆಟ್ಟಗೆ ನಿಲ್ಲಿಸಲು ಅವಳು ಪಡುತ್ತಿರುವ ಕಷ್ಟ ಸಾಧರಣವಾದುದ್ದಲ್ಲ. ತುಂಬಾ ಬುದ್ಧಿವಂತೆಯಾಗಿರುವ, ಚುರುಕಾಗಿರುವ ಅವಳು ಡಿಗ್ರಿ ಮಾಡಿಲ್ಲವೆಂಬ ಕಾರಣಕ್ಕೆ ಸೂಕ್ತ ಉದ್ಯೋಗ ಹುಡುಕಿಕೊಳ್ಳಲಾಗದೆ ತನಗೆ ಏನೇನೂ ಸಮಾಧಾನವೆನ್ನಿಸದ ಕೆಲಸ ಮಾಡಿಕೊಂಡು ಸಂಬಳಕ್ಕಾಗಿಯಷ್ಟೇ ಅದನ್ನು ನೆಚ್ಚಿಕೊಂಡಿದ್ದಾಳೆ. ದಿನದ ಎಂಟು ಗಂಟೆ ತನ್ನ ವ್ಯಕ್ತಿತ್ವಕ್ಕೆ ಸೂಕ್ತವೆನ್ನಿಸದ, ತೃಪ್ತಿ ಕೊಡದ ಕೆಲಸ ಮಾಡುವ ಕಾರಣಕ್ಕೋ ಏನೋ ಒಂದು ರೀತಿಯ ಖಿನ್ನತೆಗೆ ಒಳಗಾಗಿದ್ದಾಳೆ. ತನ್ನನ್ನು ತಾನೇ ನಿರ್ಲಕ್ಷಿಸಿಕೊಳ್ಳುವ ವರ್ತನೆ ಬೆಳೆಸಿಕೊಂಡಿರುವುದಲ್ಲದೆ ಕುಟುಂಬವನ್ನು, ಮಕ್ಕಳ ಪಾಲನೆಯನ್ನು ನಿರ್ವಹಿಸಲಾರದೆ ಸದಾ ಸಿಡಿಮಿಡಿಗೊಳ್ಳುತ್ತಿರುತ್ತಾಳೆ. ಇದರಿಂದ ಕೌಟುಂಬಿಕ ಅಶಾಂತಿ, ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಏರುಪೇರು, ಕಲಿಕೆಯ ತೊಂದರೆಗಳು ಮುಂತಾದ ಅನೇಕ ತೊಂದರೆಗಳಾಗುತ್ತಿವೆ.
ಆತ್ಮವಿಶ್ವಾಸ, ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡಿರುವ ಅವಳನ್ನು ಸಮಾಧಾನದಿಂದ ಮಾತನಾಡಿಸಿದಾಗ ಅವಳು ಹೇಳಿದ್ದಿಷ್ಟು ‘ನನಗೆ ಅಷ್ಟು ಬೇಗ ಮದುವೆಯಾಗಲು ಏನೇನೂ ಇಷ್ಟವಿರಲಿಲ್ಲ. ನಾನು ಮೊದಲ ವರ್ಷದ ಪದವಿ ಪರೀಕ್ಷೆಯಲ್ಲಿ ಶೇ 90 ಅಂಕಗಳನ್ನು ಪಡೆದಿದ್ದೆ. ಅನೇಕ ಚರ್ಚಾಸ್ಪರ್ಧೆ, ಪ್ರಬಂಧಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆದಿದ್ದೆ. ಆದರೆ ವಿದ್ಯಾವಂತರಲ್ಲದ ನನ್ನ ತಂದೆ–ತಾಯಿಗಳಿಗೆ ಇವ್ಯಾವುದೂ ಮುಖ್ಯವಾಗಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಡಂಬರದಿಂದ ನನ್ನ ಮದುವೆ ಮಾಡುವುದೊಂದೇ ಅವರ ಮುಖ್ಯ ಗುರಿಯಾಗಿತ್ತು. ನನ್ನ ಬುದ್ಧಿವಂತಿಕೆ, ಜಾಣ್ಮೆ ಕೂಡ ವರ ಹಾಗೂ ಅವರ ಕಡೆಯವರನ್ನು ಮೆಚ್ಚಿಸುವ ಸರಕಾಗಿತ್ತೇ ಹೊರತು ನಾನು ಬೆಳಸಿ ಪೋಷಿಸಬೇಕಾದ ಗುಣಗಳಾಗಿರಲಿಲ್ಲ. ಹೆಣ್ಣಿನ ಜೀವನದ ಪ್ರತಿಯೊಂದು ನಿರ್ಧಾರವೂ ಮದುವೆ, ಕುಟುಂಬದ ಸುತ್ತಲೇ ಯಾಕೆ ಸುತ್ತಬೇಕು. ಒಳ್ಳೆಯ ಸಂಬಳ ತರುವ ವಿದ್ಯಾವಂತ ಹುಡುಗ, ಬಿಟ್ಟರೆ ಮತ್ತೆ ಇಂತಹ ಅವಕಾಶ ಸಿಗುವುದೇ ಇಲ್ಲ. ಕಾಲೇಜೇನು ಮದುವೆಯಾದ ಮೇಲೂ ಮುಂದುವರೆಸಬಹುದು. ಹೆಣ್ಣಿಗೆ ಮದುವೆ, ಕುಟುಂಬ ಮುಖ್ಯ ಎಂದು ತಂದೆ–ತಾಯಿ, ಅಣ್ಣ–ಅಕ್ಕಂದಿರೆಲ್ಲ ಬಲವಂತ ಮಾಡಿ ಮದುವೆ ಮಾಡಿಬಿಟ್ಟರು. ಸ್ವಂತ ಆಲೋಚನೆ ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲಾಗದೆ ವಿದ್ಯಾಭ್ಯಾಸವನ್ನು ಬಿಟ್ಟಿದ್ದಲ್ಲದೆ ಚಿಕ್ಕ ವಯಸ್ಸಿಗೆ ಎರಡು ಮಕ್ಕಳ ತಾಯಿಯಾದೆ. ಮಕ್ಕಳ ಲಾಲನೆ, ಪಾಲನೆ ಅತಿಯಾದ ಜವಾಬ್ದಾರಿ ನನ್ನನ್ನೂ, ನನ್ನ ಅಭಿವ್ಯಕ್ತಿಯನ್ನು ಮತ್ತಷ್ಟು ಕುಗ್ಗಿಸಿತೇನೋ ಎನಿಸುತ್ತಿದೆ. ನನ್ನ ವಿದ್ಯಾಭ್ಯಾಸಕ್ಕೂ ಮನೆಯವರು ಪ್ರಾಮುಖ್ಯವನ್ನು ಕೊಟ್ಟಿದ್ದರೆ, ಬಿ.ಕಾo. ಮುಗಿಸಿ ನನ್ನಿಷ್ಟದ ಎಂ.ಬಿ.ಎ. ಮಾಡಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗವನ್ನರಸಿ, ನಾನು ಬಯಸಿದಾಗ ನಾನು ಮೆಚ್ಚಿದವನನ್ನು ಮದುವೆಯಾಗಿ, ನನಗೆ ಬೇಕೆನಿಸಿದರೆ ಮಾತ್ರ ಮಗುವನ್ನು ಹೇರುವ ಹಾಗಿದ್ದರೆ ಎಷ್ಟು ಚೆನ್ನಾಗಿತ್ತು?
ಶಿಕ್ಷಣ ಮತ್ತು ಶಿಕ್ಷಣಕ್ಕೆ ತಕ್ಕಂತಹ ಉದ್ಯೋಗ ಕೇವಲ ಆರ್ಥಿಕ ಸ್ವಾವಲಂಬನೆಗಾಗಿಯಷ್ಟೇ ಅಲ್ಲ; ಅದು ಹೆಣ್ಣಿನ ಅಸ್ಮಿತೆಗಾಗಿಯೂ ಬಹುಮುಖ್ಯ. ಗಂಡ–ಹೆಂಡತಿ ಇಬ್ಬರೂ ದುಡಿಯಬೇಕಾಗಿರುವ ಅನಿವಾರ್ಯತೆ ಸೃಷ್ಟಿಸುವ ಇಂದಿನ ಆಧುನಿಕ ಬದುಕಿನಲ್ಲಿ ಶೈಕ್ಷಣಿಕ ಅವಕಾಶಗಳಿಂದ ವಂಚಿತಳಾದ ಹೆಣ್ಣು ದಿನದ ಬಹುಪಾಲು ಸಮಯವನ್ನು ತನಗೆ ಯಾವ ರೀತಿಯಿಂದಲೂ ಸಾರ್ಥಕವೆನ್ನಿಸದ ಕೆಲಸ ಮಾಡುತ್ತಾ ಅದರಿಂದುಂಟಾಗುವ ರೇಜಿಗೆಯನ್ನು ಸಂಸಾರದಲ್ಲಿ ತೋರ್ಪಡಿಸುತ್ತ ಆತ್ಮಗೌರವವನ್ನು, ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ದುರಂತವಲ್ಲದೆ ಮತ್ತೇನು? ಉದ್ಯೋಗವೆನ್ನುವುದು ಹಣಕ್ಕಾಗಿ ಮಾತ್ರವಲ್ಲದೆ ಅದು ‘self expression’ ಕೂಡ ಹೌದೆಂದು ಹಲವಾರು ಉದ್ಯೋಗಸ್ಥ ಮಹಿಳೆಯರು ನಂಬುತ್ತಾರೆ. ತಮ್ಮ ಪರಿಣತಿಯ ಕ್ಷೇತ್ರದಲ್ಲಿ ದುಡಿಯುವುದು ಗಳಿಕೆಗಾಗಿ ಮಾತ್ರವಲ್ಲ, ಕಲಿಕೆಗಾಗಿ, ಆತ್ಮತೃಪ್ತಿಗಾಗಿ, ಮಾನಸಿಕ ನೆಮ್ಮದಿಗಾಗಿ ಎನ್ನುವಂಥದ್ದು ಅನೇಕರು ಒಪ್ಪುವಂತಹ ವಿಚಾರ. ಸಮಾಜಕ್ಕೂ ವ್ಯಕ್ತಿಗೂ ನಡುವಿನ ಬಾಂಧವ್ಯ ರೂಪಿಸುವ ಉದ್ಯೋಗ ಹೆಣ್ಣಿನ ಮನೋಲೋಕವನ್ನು ಶ್ರೀಮಂತಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಉದ್ಯೋಗವೆನ್ನುವುದು ಸಮಾನಮನಸ್ಕರ ಜೊತೆ ಬೆರೆಯುವ, ವಿಚಾರವಿನಿಮಯದ, ಪರಸ್ಪರ ಹೊಂದಾಣಿಕೆಯನ್ನು ಅರಿಯುವ, ವೈವಿಧ್ಯವನ್ನು ಮನಸಾರೆ ಒಪ್ಪುವ, ಆಸ್ವಾದಿಸುವ, ನಮ್ಮಲ್ಲಿ ಅನೇಕ ರೀತಿಯ ಮಹತ್ತರ ಬದಲಾವಣೆಗಳಿಗೆ ಪೂರಕವಾಗುವ ಅನನ್ಯ ಅನುಭವಗಳನ್ನು ಒದಗಿಸುವ, ಸಾರ್ಥಕತೆಯ, ಅರ್ಥಪೂರ್ಣ ಬದುಕಿನ ಸಾಧ್ಯತೆಗಳನ್ನು ಒದಗಿಸುವ ಮಾರ್ಗಗಳಲ್ಲಿ ಪ್ರಮುಖವಾದದ್ದು ಎನ್ನುವುದು ಖಂಡಿತ ಉತ್ಪ್ರೇಕ್ಷೆಯಲ್ಲ. ಸರಿಯಾದ ಶಿಕ್ಷಣ ದೊರೆಯದ ಕಾರಣ ಬದುಕಿನ ಎಷ್ಟೆಲ್ಲ ಅನಿಶ್ಚಿತತೆಗಳೆದುರು ಹೆಣ್ಣು ಎಷ್ಟು ನಿರಾಯುಧಳಾಗಿ ನಿಲ್ಲಬೇಕಾಗುತ್ತದೆ, ಯೋಚಿಸಿ.
ಅರವತ್ತೈದು ಎಪ್ಪತ್ತು ವಯಸ್ಸಿನ ಮಹಿಳೆಯೊಬ್ಬರು ಒಮ್ಮೆ ಹೀಗೆ ನನ್ನನ್ನು ಕೇಳಿದರು: ‘ಗಂಡನ ಎದುರು ನಿಂತು ಮಾತನಾಡುವ, ತನಗೆ ಸರಿಯೆನಿಸಿದ್ದನು ಸಾಧಿಸುವ ಆ ಛಲ, ಧೈರ್ಯ ಅದೆಲ್ಲಿಂದ ಸಿಗುತ್ತೆ ಈಗಿನ ಕಾಲದ ಹೆಣ್ಣುಮಕ್ಕಳಿಗೆ?’ ನಮ್ಮ ಕಾಲದಲ್ಲಿ ಹೆಣ್ಣೊಬ್ಬಳು ‘ನಾನು ಸರಿಯಾಗಿದ್ದೀನಿ, ನನ್ನ ಮಾತಿಗೆ, ನನ್ನ ಆಲೋಚನೆಗೆ ಬೆಲೆಯಿದೆ’ ಎಂದು ತಿಳಿಯುವುದು ಅಪರೂಪವಾಗಿತ್ತು. ಗಂಡ, ಅತ್ತೆ, ಮಾವ – ಇವರು ನಡೆಸುವ ಹಾದಿಯಲ್ಲಿ ನಾವೂ ನಡೆಯಬೇಕಾಗಿತ್ತಷ್ಟೇ. ಪ್ರಶ್ನೆ, ಪ್ರತಿಯುತ್ತರ, ವಾದ–ವಿವಾದ, ಸರಿ–ತಪ್ಪು, ಹಕ್ಕುಬಾಧ್ಯತೆ, ಲೆಕ್ಕಾಚಾರ – ಈ ಎಲ್ಲವೂ ಮನಸ್ಸಿನಲ್ಲಿ ಹೊಳೆದರೂ ಗಂಟಲಿನಿಂದ ಹೊರಬರುವ ದಾರಿಯಲ್ಲಿ ಯಾವುದೋ ಹೇಳತೀರದ ಭಯಕ್ಕೆ ಸಿಲುಕಿ ಸತ್ತುಹೋಗುತ್ತಿತ್ತು. ‘ನಿಂಗೇನೂ ಅರ್ಥವಾಗಲ್ಲ, ಸುಮ್ನಿರು, ಒಳ್ಳೆಯ ಮನೆತನದ ಸುಸಂಸ್ಕೃತ, ಸುಶೀಲ ಹೆಂಗಳೆಯರು ಹೆಚ್ಚು ಮಾತನಾಡುವುದಿಲ್ಲ’ ಎಂದು ಹೇಳಿ ಬಾಯಿ ಮುಚ್ಚಿಸುತ್ತಿದರು. ಅದೇ ಇಂದಿನ ವಿದ್ಯಾವಂತ ತರುಣಿಯರು ‘ನೀವು ನಮ್ಮನ್ನು ಒಳ್ಳೆ ಹೆಣ್ಣುಮಕ್ಕಳು ಅಲ್ಲ ಅಂದ್ರೂ ಪರವಾಗಿಲ್ಲ, ನಿಮ್ಮ ಪ್ರಶಸ್ತಿ, ಪಾರಿತೋಷಕ, ಬಿರುದಾವಳಿಗಳಿಂದ ನಮಗಾಗಬೇಕಾದ್ದೇನಿಲ್ಲ’ ಎಂದು ಅಷ್ಟು ಸಲೀಸಾಗಿ ಅದ್ಹೇಗೆ ಹೇಳ್ತಾರೆ? ನೀನು ಒಳ್ಳೆ ಹೆಣ್ಣು, ನೀನು ಸುಂದರಿ, ನೀನು ಸಂಸ್ಕಾರವಂತ ಹೆಣ್ಣು, ಮುಂತಾದವೆಲ್ಲ ನಮ್ಮ ಆಂತರಿಕ ಸೌಂದರ್ಯದ ಕುರಿತು ಹೇಳುವ ಮಾತುಗಳಲ್ಲ; ಅವೆಲ್ಲ ನಮ್ಮನ್ನು ಬಂಧಿಸುವ, ಆ ಮೂಲಕ ಅವಮಾನಿಸುವ, ಹಿಡಿದಿಡುವ ಹುನ್ನಾರ ಎನ್ನುವ ರೀತಿಯ ಮಾತುಗಳು ಕೇಳಲಿಕ್ಕೆ ಸ್ವಲ್ಪ ಕಿರಿಕಿರಿ ಎನ್ನಿಸಿದರೂ ‘ನಾಲ್ಕು ಜನ ಮೆಚ್ಚುವಂತಹ ಹೆಣ್ಣಾಗು', ಎಂಬ ಹಿರಿಯರ ಮಾತಿಗೆ ಅತಿಯಾದ ಬೆಲೆ ಕೊಡಲು ಹೋಗಿಯೇ ಅಲ್ವಾ ನನ್ನಂತಹ ಹೆಂಗಸರು ನಮ್ಮನ್ನು ನಾವೇ ಬಿಟ್ಟುಕೊಟ್ಟಿದ್ದು? ಬಹುಶಃ ಬರೀ ಒಣಜ್ಞಾನ, ಬುದ್ಧಿವಂತಿಕೆ, ಆಸ್ತಿ, ಐಶ್ವರ್ಯ, ಆರ್ಥಿಕ ಸ್ವಾವಲಂಬನೆ – ಇಂತಹ ಧೈರ್ಯ ಕೊಡಲಾರದೇನೋ! ‘ನಾನು ಸಶಕ್ತಳು, ನಾನು ಸಬಲೆ, ನನ್ನ ಜೀವನ ನನ್ನ ಆಲೋಚನೆಗಳು ಅನುಭವಗಳು ನನಗೆ ಸತ್ಯ, ನನಗೆ ಅವು ಮುಖ್ಯ, ಅವುಗಳಿಗೆ ಬೆಲೆಯಿದೆ’ ಎಂದು ದೃಢವಾಗಿ ನಂಬಬೇಕೇನೋ. ಆ ಆಳವಾದ ನಂಬಿಕೆಯೇ ಆ ಧೈರ್ಯದ ದನಿಯ ಮೂಲವಿರಬೇಕು’ ಎಂದರು.
ಹೆಚ್ಚೇನೂ ಓದಿರದ ತಮ್ಮ ಜೀವನದ ಬಹುಪಾಲು ಗಂಡ, ಮಕ್ಕಳ ಸೇವೆಯಲ್ಲಿಯೇ ಕಳೆದಿರಬಹುದಾದ ಆ ಮಹಿಳೆಯ ಮೂಕ ನೋವಿಗೆ ಪ್ರತಿಯಾಗಿ ಉತ್ತರಿಸಿದ ಅವರ ಅನುಭವದ, ವಿವೇಕಾಯುತ ಒಳದನಿಯನ್ನು ಒಪ್ಪಲೇಬೇಕು.
ಶತಶತಮಾನಗಳಿಂದ ಪುರುಷಪ್ರಧಾನ ಸಮಾಜದಿಂದ ತುಳಿಸಿಕೊಂಡಿರುವ ಹೆಣ್ಣಿನ ದನಿಗೆ ಗಟ್ಟಿತನ ಸಿಗಬೇಕಾದರೆ ಅವಳ ಅಂತರಾಳದಲ್ಲಿ ಅವಳ ಬಗೆಗಿನ ನಂಬಿಕೆ ಸ್ಥಿರವಾಗಬೇಕಾದರೆ ಶಿಕ್ಷಣ ನೀಡುವ ನೈತಿಕ ಸ್ಥೈರ್ಯ ಬೇಕೇ ಬೇಕು.
–ರಮ್ಯಾ ಶ್ರೀಹರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.