ಹೆಣ್ಣು ಬೇಕು, ಹೆಣ್ ಕಂದಾನೇ ಬೇಕು ಎಂದು ತಪಿಸಿ ಹಡೆದವರ ಕತೆಗಳು ಸಾಕಷ್ಟಿವೆ. ಯಾರದೋ ರಕ್ತ ಬಸಿದುಕೊಂಡು, ಯಾರದೋ ಕರುಳು ಕತ್ತರಿಸಿಕೊಂಡು, ಎಲ್ಲೊ ಹುಟ್ಟಿದ ಹೆಣ್ಣು ಕೂಸುಗಳನ್ನು ಆಯ್ದು ಮಡಿಲಿಗೆ ಹಾಕಿಕೊಂಡು ಮಂದಹಾಸ ಬೀರುವವರ ಕತೆಗಳೂ ಈಗೀಗ ಹೆಚ್ಚುತ್ತಿವೆ. ಹೆಣ್ಣು ಮಗುವೆಂದರೆ ಮನಸು ಮುದಗೊಳ್ಳುವ ಹೆಂಗರುಳ ಅಪ್ಪ– ಅಮ್ಮಂದಿರ ಸಂಖ್ಯೆ ಈಗೀಗ ಹೆಚ್ಚುತ್ತಿದೆ ಎನ್ನುವುದನ್ನು ಕೇಳಲೂ ಖುಷಿಯೇ!
ಹೌದು, ಇತ್ತೀಚೆಗೆ ದತ್ತು ಬೇಕೆಂದು ಬರುವವರು ಮಗಳೇ ಬೇಕು ಎಂದು ಕೇಳುತ್ತಿದ್ದಾರೆ. ಹೆಣ್ಣುಮಕ್ಕಳ ಬಗೆಗಿರುವ ಸಾಂಪ್ರದಾಯಕ ನಂಬಿಕೆಗಳು ನಿಧಾನಕ್ಕೆ ಕಳಚಿಕೊಳ್ಳುತ್ತಿರುವುದರ ಮುನ್ಸೂಚನೆ ಇದು. ಹೆಣ್ಣು ಜೀವಗಳ ಸುತ್ತುವರೆದ ಮೂಢ–ವಿಚಾರಗಳು, ಭಯಗಳು, ಆತಂಕಗಳು ಬೇರು ಮುರಿದುಕೊಳ್ಳುತ್ತಿರುವ ಶುಭಗಳಿಗೆಯೂ ಹೌದು.
‘ಎಂದಿದ್ದರೂ ಹೆಣ್ಣು ಪರರ ಸೊತ್ತು’, ‘ಮಗಳ ಪಾಲನೆ–ಪೋಷಣೆ ಕಷ್ಟ’, ‘ವರದಕ್ಷಿಣೆಯ ಖರ್ಚು...’, ‘ವಂಶೋದ್ಧಾರಕ್ಕೆ ಮಗನೇ ಬೇಕು’ ಎಂಬೆಲ್ಲ ಗ್ರಹಿಕೆಗಳ ಬಿಸುಟಿ ಹೆಚ್ಚು ಹೆಚ್ಚು ಜನ ದತ್ತು ಪಡೆಯಬೇಕಾಗಿ ಬಂದಾಗ ಹೆಣ್ಣು ಕಂದನಿಗಾಗಿಯೇ ಹಂಬಲಿಸುತ್ತಿರುವುದು ಹಿಗ್ಗಿನ ಸಂಗತಿಯೇ. ಜನ್ಮ ನೀಡುವಾಗಲೂ ಹೆಣ್ಣು ಮಗುವಿಗಾಗಿಯೇ ಹಂಬಲಿಸುವ ದಂಪತಿ ದತ್ತು ಪಡೆಯುವಾಗಲೂ ಅದೇ ಒಲವು ತೋರುತ್ತಿದ್ದಾರೆ. ಇಂದಿನ ಪುಟ್ಟ ಮತ್ತು ಸೀಮಿತ ಪ್ರಪಂಚದ ಕೇಂದ್ರವಾಗುತ್ತಿದ್ದಾಳೆ ಮಗಳು; ಆ ಮನೆಯ ಒಟ್ಟಾರೆ ಸಂತೋಷದ ಗುಚ್ಚವಾಗುತ್ತಿದ್ದಾಳೆ; ನಾಳಿನ ಭರವಸೆಗೆ ಆಸರೆಯಾಗುತ್ತಿದ್ದಾಳೆ. ‘ಮಗಇದ್ದರೆ ಮಗನೊಬ್ಬನೆ; ಮಗಳು ಇದ್ದರೆ ಅವಳಲ್ಲಿ ಗೆಳತಿ, ಅಮ್ಮ, ಅಕ್ಕ ಎಲ್ಲರೂ ಸಿಗುತ್ತಾರೆ’ ಎನ್ನುವ ಭಾವ ಮಗಳನ್ನೇ ಆಯ್ದುಕೊಳ್ಳಲು ಇಂದಿನ ಯುವ ಪೋಷಕರನ್ನು ಪ್ರೇರೇಪಿಸುತ್ತಿದೆ.
‘ಹುಟ್ಟಿದರೆ ನಮಗೆ ಮಗಳೇ ಹುಟ್ಟಬೇಕು ಎನ್ನುವ ಹಂಬಲವಿತ್ತು. ಆದರೆ ನಮಗೆ ಮಕ್ಕಳಾಗುವ ಅವಕಾಶವಿಲ್ಲ ಎನ್ನುವುದು ತಿಳಿದ ದಿನವೇ ನಾವು ಮಗಳನ್ನು ಮನೆ ತುಂಬಿಕೊಳ್ಳಲು ನಿರ್ಧರಿಸಿದೆವು. ಅವಳು ಮನೆಗೆ ಬಂದಾಗ 8 ತಿಂಗಳ ಕೂಸು. ಅವಳ ಆಗಮನದಿಂದ ಮನೆಯಲ್ಲಿ ಖುಷಿ–ಕಿಲಕಿಲ ತುಂಬಿತು. ಖುಷಿ ಅಂತಲೇ ಹೆಸರಿಟ್ಟ ನಮ್ಮ ಕನಸಿನ ಕೂಸು ನಮ್ಮ ಪ್ರತಿ ಮುಂಜಾವಿನಲ್ಲಿ ನವೋಲ್ಲಾಸ ತುಂಬುತ್ತಿದ್ದಾಳೆ’ ಎನ್ನುವ ಸಾರ್ಥಕ್ಯದ ನುಡಿಗಳು ಧಾರವಾಡದ ದೇಸಾಯಿ ದಂಪತಿಯದು.
‘ಎರಡೂವರೆ ವರ್ಷದವಳಿದ್ದಾಗ ನಮ್ಮ ಪುಟ್ಟ ಕಂದನನ್ನು ನಾವು ಮನೆಗೆ ಕರೆತಂದೆವು. ಈಗ ಅವಳಿಗೆ 8 ವರ್ಷ. ಅವಳು ನಮ್ಮ ಜೀವನದಲ್ಲಿ ಬಂದಾಗಿನಿಂದಲೂ, ನಮ್ಮ ಬಾಳಬಂಡಿ ಹೆಚ್ಚು ಉಲ್ಲಾಸಮಯವಾಗಿ ಸಾಗುತ್ತಿದೆ. ಮಗ ಬೇಡ, ಮಗಳೇ ಇರಲಿ ಎನ್ನುವ ನಮ್ಮ ನಿರ್ಧಾರ ನಮ್ಮ ಹೆಮ್ಮೆ’ ಎನ್ನುತ್ತಾರೆ ಸಾಗರದ ದಂಪತಿ. ಹೀಗೆ ಮಗಳನ್ನೇ ಮನೆ ತುಂಬಿಸಿಕೊಂಡವರ ಮನದುಂಬಿದ ಮಾತುಗಳು ಸಾಕಷ್ಟು.
ಗಂಡು ಮಗುವಿಗಿಂತ ಹೆಣ್ಣು ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುವುದನ್ನು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ)ದ ಅಧ್ಯಯನವೂ ದೃಢಪಡಿಸಿದೆ. ಕಾರಾ ವೆಬ್‌ಸೈಟ್‌ನ ಪುಟದಲ್ಲಿ ಪೋಸ್ಟ್ ಮಾಡಲಾದ ಅನುಭವ ಕಥನಗಳಲ್ಲಿ ಹೆಣ್ಣು ಮಕ್ಕಳನ್ನು ದತ್ತು ಪಡೆದ ದಂಪತಿಗಳು/ಒಂಟಿ ಮಹಿಳೆಯರ ನೆಮ್ಮದಿಯ ನುಡಿಗಳೇ ಹೆಚ್ಚಿವೆ. ಈ ಪ್ರಾಧಿಕಾರ ನಡೆಸಿರುವ ಸಮೀಕ್ಷೆಯಲ್ಲಿಯೂ ಇದೇ ಅಂಶ ಢಾಳಾಗಿ ಕಂಡುಬಂದಿದೆ. ಭಾರತದ ನೋಡಲ್ ಪ್ರಾಧಿಕಾರ ಬಿಡುಗಡೆ ಮಾಡಿದ ದತ್ತಾಂಶವೂ ಸಹ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳನ್ನೇ ದತ್ತು ಪಡೆಯುವ ಪ್ರವೃತ್ತಿಗೆ ಸಾಕ್ಷಿಯಾಗಿದೆ.
2015ರಿಂದ ಈಚೆಗೆ ದೇಶದಲ್ಲಿ ದಾಖಲಾದ ದತ್ತು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳನ್ನು ಪಡೆದವರೇ ಹೆಚ್ಚಿದ್ದಾರೆ. ದತ್ತು ಪಡೆಯುವಾಗ ಅಧಿಕ ಸಂಖ್ಯೆಯ ಪಾಲಕರು ಹೆಣ್ಣು ಮಗುವನ್ನೇ ಆಯ್ದುಕೊಂಡಿದ್ದು, ಶೇ 60ರಷ್ಟು ಹೆಣ್ಣು ಮಕ್ಕಳನ್ನು ದತ್ತು ಪಡೆಯಲಾಗಿದೆ. 2015ರಿಂದ 2018ರ ಅವಧಿಯಲ್ಲಿ ದತ್ತು ಪಡೆಯಲಾದ ಹೆಣ್ಣುಮಕ್ಕಳ ಸಂಖ್ಯೆ 6,962 ಮತ್ತು ಬಾಲಕರ ಸಂಖ್ಯೆ 4,687. ಇದರಲ್ಲಿ ಮಹಾರಾಷ್ಟ್ರ ಮುಂದಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಬೀದಿಗೆ ಬೀಳುತ್ತಿವೆ ಹೆಣ್ಣುಕಂದಗಳು...
ಇಲ್ಲಿಗೇ ಹೆಣ್ಣುಮಕ್ಕಳ ದತ್ತು ಪಡೆಯುವ ಧನ್ಯತೆಯ ಅಧ್ಯಾಯ ಮುಗಿದು ಹೋಗುವುದಿಲ್ಲ. ಹಾಗೆ ದತ್ತು ಕೇಂದ್ರಗಳ ಮಡಿಲಿಗೆ ಬಂದು ಬೀಳುವ ಮಕ್ಕಳಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚು ಎನ್ನುವ ಸಂಗತಿ ಈ ಅಧ್ಯಾಯದ ಇನ್ನೊಂದು ಮುಖವನ್ನು ಅನಾವರಣ ಮಾಡುತ್ತದೆ. ಒಟ್ಟು ಸುಮಾರು 2.7 ಕೋಟಿ ಮಕ್ಕಳು ಬೀದಿಗೆ ಬಂದಿದ್ದಾರೆ. ಅವರಲ್ಲಿ ಅನಾಥ ಮಕ್ಕಳೂ ಇದ್ದಾರೆ, ತಂದೆ–ತಾಯಿ ಕೈಬಿಟ್ಟ ಮಕ್ಕಳೂ ಸೇರಿದ್ದಾರೆ. ಇವರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚು ಎನ್ನುವುದು ಬೇಸರದ ವಿಚಾರ.
ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ (ಸಿಐಎಫ್) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಡೆಸಿದ ಅಧ್ಯಯನದ ಪ್ರಕಾರ 2017ರಲ್ಲಿ 2.7 ಕೋಟಿ ಅನಾಥ ಮಕ್ಕಳಲ್ಲಿ, 4.70 ಲಕ್ಷ ಮಕ್ಕಳು ಮಾತ್ರ ಕೆಲವು ರೀತಿಯ ಸಾಂಸ್ಥಿಕ ಆರೈಕೆಯಲ್ಲಿದ್ದಾರೆ. ಇವರಲ್ಲಿ ದತ್ತು ಹೋದ ಮಕ್ಕಳ ಸಂಖ್ಯೆ 4,027. ಹಾಗಾದರೆ ಇನ್ನುಳಿದ ಮಕ್ಕಳ ಗತಿ ಏನಾಗಿದೆ? ಪ್ರತಿವರ್ಷ ಸಾವಿರಾರು ಮಕ್ಕಳು ಗೊತ್ತುಗುರಿ ಇಲ್ಲದೆ ಕಾಣೆಯಾಗುತ್ತವೆ. ಅವುಗಳಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚು!
ಪಾಲಕರ ಮನಸ್ಥಿತಿಬದಲಾವಣೆಯೇ ಕಾರಣ
ಈಗ ಬದಲಾಗುತ್ತಿರುವ ಪ್ರವೃತ್ತಿಯನ್ನು ಈ ಬೆಳವಣಿಗೆ ದೃಢಪಡಿಸಿದೆ. ಪಾಲಕರ ಮನಸ್ಥಿತಿಯಲ್ಲಿಯೂ ಸಾಕಷ್ಟು ಬಲಾವಣೆಗಳಾಗಿವೆ. ಹೆಣ್ಣು ಮಕ್ಕಳನ್ನು ನಿರ್ವಹಿಸುವುದು ಸುಲಭ ಎಂದು ಇಂದಿನ ಪಾಲಕರು ಭಾವಿಸಿದಂತಿದೆ. ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಇದೊಂದು ಬಹುಮುಖ್ಯ ಕಾರಣವಾಗಿದೆ. ತಮ್ಮದೇ ಆದ ಗಂಡು ಮಗುವನ್ನು ಹೊಂದಿದವರೂ ಸಹ ಮನೆಗೆ ಹೆಣ್ಣು ಮಗುವೊಂದು ಬೇಕೆನ್ನುವ ಕಾರಣಕ್ಕೆ ಮಗಳನ್ನು ದತ್ತು ಪಡೆಯುತ್ತಿದ್ದಾರೆ ಎನ್ನುತ್ತಾರೆ 'ಕಾರಾ' ಸಂಸ್ಥೆಯ ಸಿಇಒದೀಪಕ್ ಕುಮಾರ್.
ಮುಖ್ಯಾಂಶಗಳು
2017–18ರಅವಧಿಯಲ್ಲಿದತ್ತು ಹೋದ 3,276ಒಟ್ಟು ಮಕ್ಕಳ ಸಂಖ್ಯೆಯಲ್ಲಿದತ್ತು ಹೋದ ಹೆಣ್ಣುಮಕ್ಕಳ ಸಂಖ್ಯೆ-1,858.
ಮಹಾರಾಷ್ಟ್ರದಲ್ಲಿ ದತ್ತು ಹೋದ ಒಟ್ಟು ಮಕ್ಕಳ ಸಂಖ್ಯೆ642, ಇವರಲ್ಲಿ ದತ್ತುಹೋದ ಒಟ್ಟುಹೆಣ್ಣುಮಕ್ಕಳ ಸಂಖ್ಯೆ 353.
ಕರ್ನಾಟಕದಲ್ಲಿ ದತ್ತುಹೋದಒಟ್ಟು ಮಕ್ಕಳ ಸಂಖ್ಯೆ286, ಇವರಲ್ಲಿ ದತ್ತುಹೋದಹೆಣ್ಣುಮಕ್ಕಳ ಸಂಖ್ಯೆ167.
ಇದನ್ನೂ ಓದಿ: ಇಲ್ಲಿನ ಹೆಣ್ಣುಮಕ್ಕಳು ಪಾಠದಲ್ಲೂ, ಆಟದಲ್ಲೂ ಮುಂದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.