ಮನೆಯನ್ನು ಸ್ವಚ್ಛಗೊಳಿಸಲು ನಾವು ಅನೇಕ ಬಗೆಯ ಕ್ಲೀನರ್ ಲಿಕ್ವಿಡ್‌ಗಳನ್ನು ಅಂಗಡಿಯಿಂದ ತಂದು ಬಳಸುತ್ತೇವೆ. ಆದರೆ ಕಡಿಮೆ ಬೆಲೆಯಲ್ಲಿ ಬಗೆ ಬಗೆಯ ಲಿಕ್ವಿಡ್‌ಗಳನ್ನು ಖುದ್ದಾಗಿ ಮನೆಯಲ್ಲಿಯೇ ತಯಾರಿಸಬಹುದು. ಇಲ್ಲಿದೆ ಅವುಗಳನ್ನು ತಯಾರಿಸುವ ಸುಲಭ ವಿಧಾನ:
ಅಡುಗೆ ಕೋಣೆಯಲ್ಲಿ ಬಳಸಿ– ಬಾಟಲಿಯಲ್ಲಿ ಒಂದು ಕಪ್ ನೀರು, ಕಾಲು ಕಪ್ ಕ್ಲೀನಿಂಗ್ ವೈಟ್ ವಿನೆಗರ್ (ಇದು ಲಭ್ಯವಿಲ್ಲದಿದ್ದರೆ ಅಡುಗೆಗೆ ಬಳಸುವ ವಿನೆಗರ್ ಅನ್ನೇ ಬಳಸಬಹುದು), ಮೂರ್ನಾಲ್ಕು ಹನಿ ಲಿಕ್ವಿಡ್ ಡಿಟರ್ಜೆಂಟ್ ಹಾಕಿದರೆ ಕ್ಲೀನಿಂಗ್ ಲಿಕ್ವಿಡ್ ರೆಡಿ. ಈ ದ್ರವವನ್ನು ಕಪಾಟು, ಫ್ರಿಜ್, ಅಡುಗೆ ಕೋಣೆಯ ಸಜ್ಜಾವನ್ನು ಸ್ವಚ್ಛಗೊಳಿಸಲು ಬಳಸಬಹುದು.
ಜಿಡ್ಡು ಹೋಗಲಾಡಿಸಲು ಹೀಗೆ ಮಾಡಿ: ಒಂದು ಕಪ್ ಬಟ್ಟೆಸೋಪಿನ ಪುಡಿ ಅಥವಾ ಲಿಕ್ವಿಡ್, 4 ಚಮಚ ಅಡುಗೆ ಉಪ್ಪು, ಒಂದು ಚಮಚ ಟೂತ್‌ಪೇಸ್ಟು, ಅರ್ಧ ಕಪ್ ಕ್ಲೀನಿಂಗ್ ವೈಟ್ ವಿನೆಗರ್ ಮಿಕ್ಸ್ ಮಾಡಿ. ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿಡಿ.
ನೊಣಗಳ ಕಾಟವೇ?: ಒಂದು ಬಾಟಲಿಯಲ್ಲಿ ಒಂದು ಕಪ್ ವಿನೆಗರ್, ಅದರಲ್ಲಿ ಮುಳುಗುವಷ್ಟು ಕಿತ್ತಳೆಹಣ್ಣಿನ ಸಿಪ್ಪೆಯನ್ನು ಹಾಕಿ. ಈ ಬಾಟಲಿಯನ್ನು ಮುಚ್ಚಿ, 15 ದಿನ ಬಿಸಿಲಿನಲ್ಲಿ ಇಡಿ. ನಂತರ ಅದನ್ನು ಸೋಸಿ, ನೊಣ ಬರುವ ಕಡೆ ಸ್ಪ್ರೇ ಮಾಡಬಹುದು.
ಸಿಪ್ಪೆಯಿಂದ ಮಾಡಬಹುದು ಬಯೊ ಎನ್‌ಜೈಮ್– ಇದೊಂದು ಉತ್ತಮವಾದ ಕ್ಲೆನ್ಸರ್. ಇದನ್ನು ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ನೆಲ ಒರೆಸಲು ಉಪಯೋಗಿಸಬಹುದು. ಒಂದು ದೊಡ್ಡ ಬಾಟಲಿಯಲ್ಲಿ ಒಂದು ಕಪ್ ಬೆಲ್ಲ, ಯಾವುದೇ ತರಕಾರಿ ಅಥವಾ ಹಣ್ಣಿನ ಸಿಪ್ಪೆ ಮೂರು ಕಪ್ (ಬಾಳೆಹಣ್ಣು, ಕಿತ್ತಳೆ, ಮೋಸಂಬಿ, ನಿಂಬೆಹಣ್ಣು, ಈರುಳ್ಳಿ, ಬೆಳ್ಳುಳ್ಳಿಯ ಯಾವುದಾದರೂ ಸಿಪ್ಪೆ ಬಳಸಬಹುದು. ಒಂದೇ ಬಗೆಯ ತರಕಾರಿ ಸಿಪ್ಪೆಯಾದರೂ ಸರಿ, ಮಿಶ್ರ ತರಕಾರಿ ಸಿಪ್ಪೆಯೂ ನಡೆದೀತು. ಬೇರೆ ಬೇರೆಯಾಗಿಯೂ ಉಪಯೋಗಿಸಬಹುದು ಅಥವಾ ಎಲ್ಲ ಬಗೆಯ ಸಿಪ್ಪೆಯನ್ನೂ ಒಂದರಲ್ಲೇ ಹಾಕಬಹುದು), 10 ಕಪ್ ನೀರು ಹಾಕಿ ಬಾಟಲಿಯನ್ನು ಮೂರು ತಿಂಗಳು ಮುಚ್ಚಿಡಬೇಕು.
ಪ್ರತಿದಿನ ಒಮ್ಮೆ ಮುಚ್ಚಳವನ್ನು ತೆಗೆದು ಪುನಃ ಮುಚ್ಚಿಡಬೇಕು. ದಿನಾಲೂ ಅದರಲ್ಲಿ ಗ್ಯಾಸ್ ತುಂಬುತ್ತದೆ. ಆದ್ದರಿಂದ ದಿನಕ್ಕೊಮ್ಮೆ ಮುಚ್ಚಳ ತೆಗೆಯದಿದ್ದರೆ ಬಾಟಲಿ ಒಡೆದುಹೋಗುವ ಸಂಭವ ಇರುತ್ತದೆ. ಮೂರು ತಿಂಗಳಾದ ನಂತರ ಸೋಸಿ ಉಪಯೋಗಿಸಿ. ಇದನ್ನು ಗಿಡಗಳಿಗೆ ಫರ್ಟಿಲೈಜರ್ ರೀತಿ ಕೂಡ ಉಪಯೋಗಿಸಬಹುದು.
ನೆಲ ಒರೆಸುವ ಲಿಕ್ವಿಡ್: ಒಂದು ಕಪ್ ನೀರಿಗೆ ನಾಲ್ಕು ಚಮಚ ಉಪ್ಪು, ಎರಡು ಚಮಚ ಅಡುಗೆ ಸೋಡ, ಅರ್ಧ ಕಪ್ ವೈಟ್ ವಿನೆಗರ್, ಐದು ಕರ್ಪೂರ ಹಾಕಿ ಬೆರೆಸಿ ಉಪಯೋಗಿಸಿ. ಇದನ್ನು ಕೂಡಲೇ ಉಪಯೋಗಿಸಬಹುದು. ಪರಿಮಳಭರಿತ ಆಗಬೇಕಾದರೆ ಎರಡು ಮೂರು ಹನಿ ಎಸೆನ್ಷಿಯಲ್ ಆಯಿಲ್ ಅನ್ನು ಬೆರೆಸಬಹುದು.
ಬಹುಉಪಯೋಗಿ ಅಂಟುವಾಳ ಕಾಯಿ ನೀರು: ಮಾಡುವ ವಿಧಾನ. ಎರಡು ಲೀಟರ್ ನೀರಿಗೆ 35 ಅಂಟುವಾಳ ಕಾಯಿಯನ್ನು ಹಾಕಿ, ಅರ್ಧ ಪ್ರಮಾಣ ಬರುವವರೆಗೆ ಅಂದರೆ ಒಂದು ಲೀಟರ್ ಬರುವವರೆಗೆ ಕುದಿಸಿ ನಂತರ ಅದರ ಬೀಜವನ್ನು ಬಿಸಾಡಿ. ಬೀಜ ತೆಗೆದ ಅಂಟ್ವಾಳಕಾಯನ್ನು ಪುನಹ ನೀರಿನಲ್ಲಿ ಹಾಕಿ ಸರಿಯಾಗಿ ಗಿವುಚಿ ತೆಗೆಯಿರಿ. ನಂತರ ಅದನ್ನು ಸೋಸಿ ಅನೇಕ ರೀತಿಯಲ್ಲಿ ಈ ನೀರನ್ನು ಉಪಯೋಗಿಸಬಹುದು.
ನೆಲ ಒರೆಸುವ ಲಿಕ್ವಿಡ್. ಮೂರು ಕಪ್ ಅಂಟುವಾಳ ಕಾಯಿನೀರು, ಎರಡು ಕಪ್ ವಿನೆಗರ್, ಎರಡು ಚಮಚ ಕಲ್ಲುಪ್ಪು ಬೆರೆಸಿ ಉಪಯೋಗಿಸಿ.
ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಬರಿ ಅಂಟ್ವಾಳ ಕಾಯಿಯ ನೀರನ್ನು ಬೇರೇನು ಬೆರೆಸದೆ ಉಪಯೋಗಿಸಬಹುದು.
ಲೋಹದ ಪಾತ್ರೆಯನ್ನು ತೊಳೆಯಲು ಒಂದು ಕಪ್ ಅಂಟುವಾಳ ಕಾಯಿ ನೀರು ಹಾಗು ಒಂದು ಕಪ್ ವಿನೆಗರ್ ಬೆರೆಸಿ ಉಪಯೋಗಿಸಿ. ವಿನೆಗರ್ ಬದಲು ಹುಣಿಸೆ ಬಳಸ ಬಹುದು.
ಹ್ಯಾಂಡ್ ವಾಶ್ ಲಿಕ್ವಿಡ್. ಒಂದು ಕಪ್ ಅಂಟುವಾಳ ಕಾಯಿ ನೀರು, ಸ್ವಲ್ಪ ಅಲೋವೆರಾ ಜೆಲ್ ಬೆರೆಸಿ ಉಪಯೋಗಿಸಿ.
ಸ್ವಚ್ಛಗೊಳಿಸುವ ದ್ರವವನ್ನು ಮನೆಯಲ್ಲಿಯೇ ತಯಾರಿಸಿ ಹಣವನ್ನು ಉಳಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.