ADVERTISEMENT

ಅವಧಿಪೂರ್ವ ಪ್ರಸವದ ತಡೆ ಹೇಗೆ?

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:30 IST
Last Updated 28 ಜನವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅವಧಿಪೂರ್ವ ಪ್ರಸವವನ್ನು 37 ವಾರಗಳು ಪೂರ್ಣಗೊಳ್ಳುವ ಮುನ್ನ ಅಂದರೆ 259 ದಿನಗಳಿಗಿಂತ ಪೂರ್ವದಲ್ಲಿ ಆಗುವ ಹೆರಿಗೆ ಎಂದು ವ್ಯಾಖ್ಯಾನಿಸಬಹುದು. ಪ್ರಸ್ತುತ ಇಂಥ ಘಟನೆಗಳು ಶೇ 10– 15 ರಷ್ಟಿದ್ದು, ಗಣನೀಯವಾಗಿ ಏರಿಕೆಯಾಗುತ್ತಿದೆ. ಶೇ 50ರಷ್ಟು ಪ್ರಕರಣಗಳಲ್ಲಿ ಅವಧಿಪೂರ್ವ ಪ್ರಸವಕ್ಕೆ ಕಾರಣಗಳು ತಿಳಿಯುವುದಿಲ್ಲ. ಉಳಿದ ಪ್ರಕರಣಗಳಲ್ಲಿ ಮುಖ್ಯ ಕಾರಣವೆಂದರೆ ಹಿಂದೆ ಅವಧಿಪೂರ್ವ ಪ್ರಸವ ಆಗಿರುವುದು (ಶೇ 15ರಷ್ಟು ಅಪಾಯ ಸಾಧ್ಯತೆ), ಸಂತಾನೋತ್ಪತ್ತಿ ತಂತ್ರಗಳನ್ನು ಅನುಸರಿಸಿ ಗರ್ಭಧಾರಣೆ (ಕೃತಕ ಗರ್ಭಧಾರಣೆ), ಧೂಮಪಾನ, ಮದ್ಯಪಾನ, ಪೌಷ್ಟಿಕಾಂಶದ ಕೊರತೆ, ತೂಕ ಕಡಿಮೆ ಇರುವುದು, ಪ್ರಸವದ ಒತ್ತಡ, ಬೊಜ್ಜು, ಸೋಂಕುಗಳು (ಯುಟಿಐ / ಎಸ್‌ಟಿಡಿ ಸೋಂಕು, ವಸಡಿನ ಕಾಯಿಲೆ). ಇವುಗಳು ಮಾತ್ರವಲ್ಲದೇ ಅಧಿಕ ರಕ್ತದೊತ್ತಡ, ಭ್ರೂಣದ ಚೀಲದಲ್ಲಿ ಅಧಿಕ ದ್ರವವಿರುವುದು, ಗರ್ಭಾಶಯದ ತೊಂದರೆಗಳು (ಯುಟೆರೈನ್ ಅನಾಮಲೀಸ್), ಗರ್ಭಕೋಶದ ಅಶಕ್ತತೆ ಮತ್ತು ಬಹು ಗರ್ಭಧಾರಣೆಗಳು ಸಹ ಅವಧಿಪೂರ್ವ ಪ್ರಸವಕ್ಕೆ ಕಾರಣವಾಗಬಹುದು.

ಅವಧಿಪೂರ್ವ ಪ್ರಸವದ ಪರಿಣಾಮಗಳೆಂದರೆ ಮಗುವಿನ ಬೆಳವಣಿಗೆ ಸಮರ್ಪಕವಾಗಿ ಆಗದಿರುವುದು ಹಾಗೂ ಜನನದ ವೇಳೆ ಕಡಿಮೆ ತೂಕದ ಮಗು ಜನಿಸುವುದು. ಈ ಕಾರಣದಿಂದ ನವಜಾಶ ಶಿಶುಗಳಿಗೆ ಉಸಿರಾಟದ ತೊಂದರೆ, ಜನಿಸುವ ವೇಳೆ ಆಘಾತದಂಥ ಅಪಾಯದ ಸಾಧ್ಯತೆ ಇರುತ್ತದೆ. ಇಷ್ಟು ಮಾತ್ರವಲ್ಲದೇ, ಅವಧಿಪೂರ್ವ ಪ್ರಸವದಿಂದ ಹುಟ್ಟಿದ ಮಕ್ಕಳು, ಹುಟ್ಟಿದ ಕೆಲವೇ ದಿನಗಳಲ್ಲಿ ಸಾಯುವ ಅಪಾಯ ಇರುತ್ತದೆ. ಇದರಿಂದಾಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರಸವಕ್ಕೆ ಮುನ್ನ, ಗರ್ಭಧಾರಣೆಯ ಅವಧಿ ಕಡಿಮೆ ಇದ್ದಷ್ಟೂ ಮಗು ಬದುಕಿ ಉಳಿಯುವ ಸಾಧ್ಯತೆಯೂ ಕಡಿಮೆ. ಇದರಿಂದಾಗಿ ಅವಧಿಪೂರ್ವ ಪ್ರಸವವನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಮುನ್ನೆಚ್ಚರಿಕೆ ಕ್ರಮಗಳು

ADVERTISEMENT

* ಗರ್ಭಧಾರಣೆಗೆ ಮುನ್ನ ಪೌಷ್ಟಿಕ ಆಹಾರ ಸೇವಿಸಿ.

* ರಕ್ತಹೀನತೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ

* ಸೆಪ್ಟಿಕ್ ಫೋಸಿ ಬ್ಯಾಕ್ಟೀರಿಯಾ, ಎಸ್‌ಟಿಡಿ, ವಸಡುಗಳ ಉರಿಯೂತ, ಸೋಂಕುಗಳ ಬಗ್ಗೆ ವಿಶೇಷ ಕಾಳಜಿ ನೀಡಿ.

* ತಂಬಾಕು, ಮದ್ಯ, ಕಾಫಿ, ಚಹಾ, ಮಾದಕ ಔಷಧಗಳ ಬಳಕೆಯನ್ನು ತ್ಯಜಿಸಿ.

* ಗರ್ಭಧಾರಣೆಯ ವೇಳೆ ತೀರಾ ಕಠಿಣ ದೈಹಿಕ ಶ್ರಮ ಅಥವಾ ದಣಿವಾಗುವ ಕೆಲಸ ಮಾಡಬೇಡಿ.

* ನಿಯಮಿತವಾದ ಪ್ರಸವಪೂರ್ವ ಪರೀಕ್ಷೆ ಮಾಡಿಸಿ.

* ಶಂಕೆಯಿದ್ದರೆ ಸಕಾಲಿಕವಾಗಿ ಗರ್ಭಕೊರಳಿಗೆ ಹೊಲಿಗೆ ಹಾಕಿಸಿ.

* ಉದ್ಯೋಗಸ್ಥ ಮಹಿಳೆಯರು, ವಿಶೇಷವಾಗಿ ಅವಧಿಪೂರ್ವ ಪ್ರಸವದ ಇತಿಹಾಸವಿದ್ದಲ್ಲಿ ಗರ್ಭಧಾರಣೆಯ 32ನೇ ವಾರದ ಬಳಿಕ ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ.

* ಗರ್ಭಧಾರಣೆಯ ಕೊನೆಯ ಮೂರು ತಿಂಗಳ ಕಾಲ ಲೈಂಗಿಕ ಚಟುವಟಿಕೆಗಳಿಂದ ದೂರ ಇರಿ.

* ಕೃತಕ ಗರ್ಭಧಾರಣೆಯ ಪ್ರಕರಣಗಳಲ್ಲಿ 32ನೇ ವಾರದ ಸುಮಾರಿಗೆ ಪ್ರೊಫಿಲ್ಯಾಕ್ಟಿಕ್ ಸ್ಟಿರಾಯ್ಡ್ ಬಳಕೆಯನ್ನು ಸ್ಥಗಿತಗೊಳಿಸುವುದರಿಂದ ಅವಧಿಪೂರ್ವ ಪ್ರಸವವನ್ನು ತಡೆಗಟ್ಟಬಹುದು.

ಅವಧಿಪೂರ್ವ ಪ್ರಸವದ ಲಕ್ಷಣಗಳು

* ಪಕ್ಕೆಲುಬಿನ ಬಳಿ ಋತುಸ್ರಾವ ಸಂದರ್ಭದಲ್ಲಾಗುವ ನೋವಿನಂತೆ ನಿಯಮಿತವಾಗಿ ನೋವು ಅಥವಾ ಪಕ್ಕೆಲುಬಿನ ಬಳಿ ಮರುಕಳಿಸುವ ನೋವು

* ಅಲ್ಪಪ್ರಮಾಣದ ಬೆನ್ನುನೋವು (ನಿರಂತರ ಅಥವಾ ಬಿಟ್ಟು ಬಿಟ್ಟು )

* ಮಗು ಕೆಳಕ್ಕೆ ತಳ್ಳುತ್ತಿದ್ದರೂ ಭಾರವಾದ ಅನುಭವದಿಂದ ಒತ್ತಡ

* ಅಸಾಮಾನ್ಯ ಸೆಳೆತ ಹಾಗೂ ಡಯಾರಿಯಾ

* ಯೋನಿಸ್ರಾವ ಹೆಚ್ಚಳ (ಬಿಳಿ ಬಣ್ಣ, ಬಣ್ಣರಹಿತ, ತಿಳಿ ಅಥವಾ ರಕ್ತದ ಬಣ್ಣದ ಸ್ರಾವ)

* ಯೋನಿ ಮೂಲಕ ಫ್ಲೂಯಿಡ್ ಸೋರಿಕೆ

* 10 ಅಥವಾ ಕಡಿಮೆ ನಿಮಿಷಗಳ ಕಾಲ ಗರ್ಭನಾಳ ಸಂಕುಚಿತಗೊಳ್ಳುತ್ತದೆ (ಇದು ನೋವು ರಹಿತವಾಗಿರಬಹುದು ಹಾಗೂ ಇದನ್ನು ಸಾಮಾನ್ಯವಾಗಿ ಮಗು ಬಾಲಿಂಗ್ ಅಪ್ ಆಗುತ್ತಿದೆ ಎನ್ನಲಾಗುತ್ತದೆ)

* ಯೋನಿ ಪರೀಕ್ಷೆ ವೇಳೆ ಒಂದು ಸೆಂಟಿಮೀಟರ್‌ಗಿಂತಲೂ ಕಡಿಮೆ ಬಾಗಿರುತ್ತದೆ.

* ಮೂತ್ರನಾಳದ ಕೆಳಭಾಗ ದಪ್ಪವಾಗಿರುತ್ತದೆ. ಪೆಲ್ವಿಸ್‌ನ ಭಾಗ ಆಳವಾಗಿರುತ್ತದೆ.

(ಲೇಖಕಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.