ನಾಗಮಂಗಲ: ಬ್ಯೂಟಿಷನ್ ಶೀಲಾ ಅವರು ಬಿಡುವಿದ್ದಾಗಲೆಲ್ಲಾ ಭಿಕ್ಷುಕರನ್ನು ಹುಡುಕಿಕೊಂಡು ಹೋಗುತ್ತಾರೆ. ಸಿಕ್ಕವರಿಗೆ ಸಾಂತ್ವನ ಹೇಳಿ ಕ್ಷೌರ, ಸ್ನಾನ ಮಾಡಿಸುತ್ತಾರೆ. ಅವರದ್ದು ಅನನ್ಯ ಮಾತೃಪ್ರೇಮ. ತಮ್ಮ ವೃತ್ತಿಯನ್ನು ಹೀಗೂ ನಿಭಾಯಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ತಾಲ್ಲೂಕಿನ ಚಾಮಲಾಪುರದ ನಿವಾಸಿಯಾದ ಅವರ ಸೇವೆ ಅಷ್ಟಕ್ಕೇ ಮುಗಿಯುವುದಿಲ್ಲ. ಭಿಕ್ಷುಕರನ್ನು ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ನಂತರ ಬಿ.ಜಿ.ಸ್ ಆಸ್ಪತ್ರೆ ಶಿಬಿರದಲ್ಲಿ ಆರೋಗ್ಯ ತಪಾಸಣೆಗೂ ನೆರವಾಗುತ್ತಾರೆ. ಹದಿನೈದು ದಿನಕೊಮ್ಮೆ ಆಶ್ರಮಕ್ಕೆ ಹೋಗಿ ವೃದ್ಧರಿಗೆ ಕ್ಷೌರ ಮಾಡುತ್ತಾರೆ.
ಜೊತೆಗೆ, ಬೀದಿ ನಾಯಿಗಳಿಗೆ ಪ್ರತಿನಿತ್ಯ ಊಟ ಬಡಿಸುತ್ತಾರೆ. ಮಂಡ್ಯ ಜಿಲ್ಲೆಯ 50 ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಸಸಿ ನೆಟ್ಟು ಪರಿಸರ ಕಾಳಜಿಯನ್ನು ತೋರಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಕೊಡಗಿನ ಪ್ರವಾಹ ಸಂದರ್ಭದಲ್ಲಿ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಕೊರೊನಾ ವಾರಿಯರ್ಸ್‌ಗಳಿಗೆ ತಮ್ಮೂರಿನಲ್ಲೇ ಸನ್ಮಾನ ಮಾಡಿದ್ದಾರೆ. ನಿರ್ಗತಿಕ ವೃದ್ಧೆಯೊಬ್ಬರನ್ನು ಒಂದು ವರ್ಷದ ಕಾಲ ತಮ್ಮ ಮನೆಯಲ್ಲಿರಿಸಿಕೊಂಡು ಸಲಹಿದ್ದಾರೆ.
ಬಿ.ಜಿ.ನಗರದಲ್ಲಿ ಬ್ಯೂಟಿ ಪಾರ್ಲರ್ ಉಳ್ಳ ಅವರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಇಂಥ ಸೇವಾ ಕಾರ್ಯಗಳಲ್ಲಿ ನಿರತರಾಗಿರುವುದು ವಿಶೇಷ. ಶನಿವಾರ ಮತ್ತು ಭಾನುವಾರದ ಜೊತೆಗೆ ಬಿಡುವಿನ ಸಮಯದಲ್ಲಿ ತಾಲ್ಲೂಕಿನ ಬಸ್ ನಿಲ್ದಾಣಗಳು ಸೇರಿದಂತೆ ಯಡಿಯೂರು, ಚನ್ನರಾಯಪಟ್ಟಣ, ಹಿರೀಸಾವೆ, ಬೆಳ್ಳೂರು, ನಾಗಮಂಗಲ ಪಟ್ಟಣದ ಸೇರಿದಂತೆ ವಿವಿಧೆಡೆ ಸಂಚರಿಸಿ ಅನಾಥರು, ಮಾನಸಿಕ ಅಸ್ವಸ್ಥರು, ನಿರ್ಗತಿಕರಿಗೆ ಬಟ್ಟೆ ಕೊಡುತ್ತಾರೆ.
‘ತಾತ ಮತ್ತು ತಂದೆತಾಯಿ ಬಾಲ್ಯದಿಂದಲೇ ಸಮಾಜ ಸೇವೆಯ ಕುರಿತು ಆಸಕ್ತಿ ಬೆಳೆಸಿದ್ದರು. ಸ್ವಂತ ಉದ್ಯೋಗ ಮಾಡಲಾರಂಭಿಸಿದ ಬಳಿಕ ಬಡವರ, ನಿರ್ಗತಿಕರ ಸೇವೆ ಶುರು ಮಾಡಿದೆ. ಪತಿ ಕೃಷ್ಣೇಗೌಡ ಮತ್ತು ಮಗಳು ಡಿಂಪಲ್ ಬೆಂಬಲವೂ ಜೊತೆಗಿದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.