ಜಲಜಾಕ್ಷಿ ಕೆ.ಡಿ.
ಮಕ್ಕಳು ಶಾಲೆಗೆ ಬರಲು ಸಾರಿಗೆಯದ್ದೇ ತೊಂದರೆ ಎನ್ನುವುದನ್ನು ಅರಿತ ಎಸ್‌ಡಿಎಂಸಿ, ವಾಹನವನ್ನು ಖರೀದಿಸಿತು. ಶಾಲಾ ಶಿಕ್ಷಕಿ ಜಲಜಾಕ್ಷಿ ಸಾರಥಿಯಾದರು. ಮಕ್ಕಳ ಸಂಖ್ಯೆಯೂ ಹೆಚ್ಚಿತು. ಸರ್ಕಾರಿ ಶಾಲೆಯೊಂದರ ಸಹಭಾಗಿತ್ವದ ಯಶಸ್ವಿ ಕಥೆ ಇದು.
ಆಗ ಸಮಯ ಬೆಳಿಗ್ಗೆ ಎಂಟೂವರೆ. ಜಲಜಾಕ್ಷಿ ಟೀಚರ್ ಶಾಲಾ ವಾಹನವನ್ನು ಚಾಲನೆ ಮಾಡುತ್ತಾ ಸುಳ್ಯದಿಂದ ಸ್ವಲ್ಪ ಮುಂದೆ ಬಂದರು. ಅಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮಕ್ಕಳು ‘ಗುಡ್ ಮಾರ್ನಿಂಗ್ ಟೀಚರ್’ ಎನ್ನುತ್ತಾ ವಾಹನ ಏರಿ ಕುಳಿತರು. ಮಾರ್ಗಮಧ್ಯೆ ಮತ್ತೆ ಹೀಗೆ ನಾಲ್ಕು ಕಡೆ ನಿಲುಗಡೆ ಇತ್ತು. ಮಕ್ಕಳಿಂದ ಭರ್ತಿಯಾದ ಆ ವಾಹನ ತಲುಪಿದ್ದು ಕೋಲ್ಚಾರು ಸರ್ಕಾರಿ ಶಾಲೆಗೆ.
‘ಅಕ್ಷರ ವಾಹಿನಿ’ ಹೆಸರಿನ ಈ ವಾಹನಕ್ಕೆ ಜಲಜಾಕ್ಷಿ ಅವರೇ ಚಾಲಕಿ. ಮಕ್ಕಳ ಸಂಖ್ಯೆ ಹೆಚ್ಚಿಸಲು ಎಸ್‌ಡಿಎಂಸಿ ಈ ವಾಹನ ಖರೀದಿಸಿದ್ದರೆ, ಪಾಠದ ಜೊತೆಗೆ ವಾಹನ ಚಾಲನೆ ಮತ್ತು ನಿರ್ವಹಣೆಯ ಹೊಣೆ ಹೊತ್ತಿದ್ದಾರೆ ಈ ಶಿಕ್ಷಕಿ.
ಕೋಲ್ಚಾರು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿ, ಕೇರಳದ ಗಡಿಯಲ್ಲಿ ಕಾನನದ ಮಧ್ಯೆ ಇದೆ. ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು 6.20 ಎಕರೆಯಲ್ಲಿ ಹರಡಿಕೊಂಡಿದೆ. 1.50 ಎಕರೆಯಲ್ಲಿ ಶಾಲಾ ಸಂಕೀರ್ಣ ಇದ್ದರೆ, ಉಳಿದ ಜಾಗದಲ್ಲಿ ಶಾಲೆಯ ಆದಾಯಕ್ಕಾಗಿ 250 ಗೇರುಮರ ಬೆಳೆಸಲಾಗಿದೆ. ಸುಸಜ್ಜಿತ ಸಭಾಭವನ, ಮುಖ್ಯ ಶಿಕ್ಷಕರ ಕೊಠಡಿ, ಎಂಟು ಬೋಧನಾ ಕೊಠಡಿ, ಶೌಚಾಲಯ, ಎರಡು ನೀರು ಶುದ್ಧೀಕರಣ ಯಂತ್ರ... ಹೀಗೆ ಸಕಲೆಂಟು ಸೌಕರ್ಯಗಳಿಂದ ಕೂಡಿದೆ. ಜಲಜಾಕ್ಷಿ ಹಾಗೂ ಇತರೆ ಶಿಕ್ಷಕರ ಜೊತೆಗೆ ಸಮುದಾಯವೂ ಕೈಜೋಡಿಸಿದ್ದರಿಂದ ಶಾಲೆಯ ಚಹರೆಯೇ ಬದಲಾಗಿದೆ.
‘99’ ಮತ್ತು ಶಾಲಾ ವಾಹನ!
‘ಸರ್ಕಾರಿ ಶಾಲೆ ಸ್ವಂತ ವಾಹನ ಹೊಂದಿದ್ದಾದರೂ ಹೇಗೆ’ ಎಂದು ಕೇಳಿದರೆ, ಎಲ್ಲರೂ ಹೇಳುವುದು ‘99’ ಕತೆಯನ್ನು! ಸರ್ಕಾರಿ ಶಾಲೆಯಲ್ಲಿ ನೂರಕ್ಕಿಂತ ಕಡಿಮೆ ಮಕ್ಕಳು ಇದ್ದರೆ ಇಬ್ಬರು ಅಡುಗೆ ಸಿಬ್ಬಂದಿ ನೇಮಕಕ್ಕೆ ಮಾತ್ರ ಅವಕಾಶ ಇದೆ. ಬಿಸಿಯೂಟಕ್ಕೆ ದೊರೆಯುವ ಅನುದಾನ ₹25 ಸಾವಿರ ಮಾತ್ರ. ನೂರಕ್ಕಿಂತ ಹೆಚ್ಚು ಮಕ್ಕಳು ಇದ್ದರೆ ಮೂವರು ಅಡುಗೆಯವರನ್ನು ನೇಮಿಸಿಕೊಳ್ಳಲು ಅವಕಾಶ ಇದೆ. ₹50 ಸಾವಿರ ಅನುದಾನ ಬರುತ್ತದೆ. ಈ ಶಾಲೆಯಲ್ಲಿ 99 ಮಕ್ಕಳು ಇದ್ದರು. ಶಾಲೆಯ ಅಭಿವೃದ್ಧಿಗಾಗಿ ದಾನಿಗಳ ಬಳಿ ನೆರವು ಕೇಳಲು ಹೋದರೆ ‘ನಿಮ್ಮಲ್ಲಿ ಮಕ್ಕಳು ಎಷ್ಟಿದ್ದಾರೆ’ ಎಂದು ಕೇಳುತ್ತಿದ್ದರು. ಹೆಚ್ಚು ಮಕ್ಕಳಿದ್ದರೆ ನೆರವು ನೀಡಲು ಅವರಿಗೂ ಮನಸ್ಸು ಬರುತ್ತದೆ ಎಂಬ ಕಾರಣಕ್ಕಾಗಿ ತಮ್ಮ ಶಾಲೆಯ ಮಕ್ಕಳ ಸಂಖ್ಯೆಯನ್ನು ನೂರರ ಗಡಿ ದಾಟಿಸಲು ಶಾಲೆಯವರು ಪಣತೊಟ್ಟರು.
ಈ ಶಾಲೆಗೆ ಐವರು ವಿದ್ಯಾರ್ಥಿಗಳು 5 ಕಿ.ಮೀ. ದೂರದಿಂದ ಬರುತ್ತಿದ್ದರು. ಸುಳ್ಯದಿಂದ ಬೆಳಿಗ್ಗೆ ಇರುವುದು ಒಂದೇ ಬಸ್. 7.30ಕ್ಕೆ ಹೊರಡುವ ಬಸ್ 8.45ಕ್ಕೆ ಕೋಲ್ಚಾರು ತಲುಪುತ್ತದೆ. ಈ ಬಸ್‌ಗೆ ಬರಲು ಮಕ್ಕಳು 7.45ಕ್ಕೇ ಬಂದು ನಿಲ್ಲಬೇಕಿತ್ತು. ವಾಹನ ಸೌಲಭ್ಯ ಕಲ್ಪಿಸಿದರೆ ಮಕ್ಕಳ ಸಂಖ್ಯೆ ಹೆಚ್ಚಬಹುದು ಎಂಬುದನ್ನು ಶಿಕ್ಷಕರು, ಎಸ್‌ಡಿಎಂಸಿಯವರು ಮನಗಂಡರು.
ಶಾಲೆಗೆ ಬರುತ್ತಿದ್ದ ಐವರು ಮಕ್ಕಳಲ್ಲಿ ಒಬ್ಬರ ಪಾಲಕರದ್ದು ಆಟೊ ಇತ್ತು. ಬೆಳಿಗ್ಗೆ ತಮ್ಮ ಮಗುವಿನೊಂದಿಗೆ ಉಳಿದ ಮಕ್ಕಳನ್ನೂ ಕರೆದುಕೊಂಡು ಬರುತ್ತಿದ್ದರು. ಸಂಜೆ ಬಾಡಿಗೆ ಬಿಟ್ಟು ಶಾಲೆಗೆ ಬರುವುದು ಅವರಿಗೂ ಕಷ್ಟವಾಗುತ್ತಿತ್ತು. ಹೀಗಾಗಿ ಪ್ರತಿ ಮಗುವಿಗೆ ತಿಂಗಳಿಗೆ ₹1500 ಬಾಡಿಗೆ ಪಡೆಯುತ್ತಿದ್ದರು. ಆದರೆ, ಇಷ್ಟೊಂದು ಬಾಡಿಗೆ ಕೊಡುವುದು ಪಾಲಕರಿಗೆ ಹೊರೆಯಾಗಿತ್ತು. ಶಾಲೆಯಿಂದಲೇ ಕಾರು ಖರೀದಿಸಿದರೆ ಹೇಗೆ ಎಂದು ಶಿಕ್ಷಕರು, ಎಸ್‌ಡಿಎಂಸಿಯವರು ಚರ್ಚಿಸಿದರು.
ಕಾರು ಚಾಲನೆ ಗೊತ್ತಿರುವ ಎಸ್‌ಡಿಎಂಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಊರಿನಲ್ಲಿ ಒಬ್ಬರ ಕಾರು ಪಡೆದು ಕೆಲ ದಿನ ಮಕ್ಕಳನ್ನು ಶಾಲೆಗೆ ಕರೆತಂದು–ಮನೆಗೆ ಬಿಡಲು ಆರಂಭಿಸಿದರು. ವಾಹನ ಸೌಲಭ್ಯ ಕಲ್ಪಿಸಿದರೆ ಸುತ್ತಲಿನ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಖಚಿತವಾದಾಗ, ಎಸ್‌ಡಿಎಂಸಿಯವರೇ ವಾಹನ ಖರೀದಿಸಿದರು. ಆ ವಾಹನಕ್ಕೆ ಸಾರಥಿಯಾಗಿದ್ದು ಜಲಜಾಕ್ಷಿ ಟೀಚರ್.
ಚಾಲಕಿ ಕಂ ಶಿಕ್ಷಕಿಯ ಪಾತ್ರ ನಿರ್ವಹಣೆ ಬಗ್ಗೆ ಜಲಜಾಕ್ಷಿ ಹೇಳುವುದು ಹೀಗೆ... ‘ನನಗೆ ಕಾರು ಚಾಲನೆ ಗೊತ್ತಿತ್ತು. ಶಾಲೆಗೆ ವ್ಯಾನ್ ಖರೀದಿಸಿದರೆ ನಾನೇ ಚಾಲನೆ ಮಾಡುತ್ತೇನೆ ಎಂದು ಹೇಳಿದೆ. ನಂತರ ಎಸ್‌ಡಿಎಂಸಿಯವರು ಮನಸು ಮಾಡಿದರು. ಸೆಕೆಂಡ್ ಹ್ಯಾಡ್ ಮಾರುತಿ ವ್ಯಾನ್ ಖರೀಸಿ, ಅದನ್ನು ಎಂಟು ಸೀಟರ್ ಆಗಿ ಪರಿವರ್ತಿಸಿದೆವು. ಅದಕ್ಕೆ ಅಕ್ಷರ ವಾಹಿನಿ ಎಂದು ಹೆಸರಿಟ್ಟಿದ್ದೇವೆ’.
ಜಲಜಾಕ್ಷಿ ಪ್ರತಿದಿನ ಬೆಳಿಗ್ಗೆ 8.30ಕ್ಕೆ ಸುಳ್ಯದಿಂದ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದರು. ಈಗಲೂ ವ್ಯಾನ್‌ನಲ್ಲಿ ಅದೇ ಸಮಯಕ್ಕೆ ಹೊರಡುತ್ತಾರೆ. ಪಾಲಕರು ಮಕ್ಕಳನ್ನು ಕರೆದುಕೊಂಡು ನಿಂತಿರುತ್ತಾರೆ. ಅವರನ್ನು ಹತ್ತಿಸಿಕೊಂಡು ಹೋಗುವ ಅವರು, ಬರುವಾಗ ಅವರವರ ಸ್ಥಳಕ್ಕೆ ಬಿಡುತ್ತಾರೆ. ಮಕ್ಕಳಿಗಾಗಿ ಕಾಯುವ ಸಮಸ್ಯೆ ಇಲ್ಲ. 17 ಮಕ್ಕಳು ಶಾಲಾ ವಾಹನದಲ್ಲಿ ಬರುತ್ತಾರೆ. ವಾಹನದ ನಿರ್ವಹಣೆ ವೆಚ್ಚವನ್ನು ಇವರೇ ಹೊಂದಿಸಿಕೊಳ್ಳಬೇಕು. 17 ಮಕ್ಕಳ ಪಾಲಕರು ತಿಂಗಳಿಗೆ ತಲಾ ₹700 ಕೊಡುತ್ತಾರೆ. ಜಲಜಾಕ್ಷಿ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುವಾಗ ತಿಂಗಳಿಗೆ ಪೆಟ್ರೋಲ್‌ಗಾಗಿ ₹2 ಸಾವಿರ ಖರ್ಚಾಗುತ್ತಿತ್ತು. ಆ ಹಣವನ್ನು ವಾಹನಕ್ಕೆ ಕೊಡುತ್ತಾರೆ. ಈ ಮೊತ್ತವನ್ನು ಸೇರಿಸಿ, ವಾಹನದ ಪೆಟ್ರೋಲ್, ಇತರೆ ವೆಚ್ಚದ ಲೆಕ್ಕ ಬರೆದಿಡುತ್ತಾರೆ. ‘ಎಲ್ಲವೂ ಸಮಯಕ್ಕೆ ಸರಿಯಾಗಿ ಆಗುತ್ತಿರುವುದರಿಂದ ಶಾಲಾ ವಾಹನ ಚಾಲನೆಯ ಕೆಲಸ ಹೊರೆ ಎನಿಸುತ್ತಿಲ್ಲ; ಪಾಠ ಪ್ರವಚನಕ್ಕೂ ತೊಂದರೆಯಾಗುತ್ತಿಲ್ಲ. ನಮ್ಮ ಶಾಲೆಯ ಇನ್ನೊಬ್ಬ ಶಿಕ್ಷಕರಿಗೆ ವಾಹನ ಚಾಲನೆ ಬರುತ್ತದೆ. ಅವರೂ ಸುಳ್ಯದಲ್ಲಿಯೇ ಮನೆ ಮಾಡಿದ್ದಾರೆ. ನಾನು ರಜೆ ಇದ್ದರೆ ಅವರು ವಾಹನ ಚಲಾಯಿಸುತ್ತಾರೆ. ಹೀಗಾಗಿ ವಾಹನ ನಿಲ್ಲುವ ಪ್ರಮೇಯವೂ ಇಲ್ಲ’ ಎನ್ನುತ್ತಾರೆ ಜಲಜಾಕ್ಷಿ.
1954ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ 1ರಿಂದ 7 ನೇ ತರಗತಿ ಇದ್ದು, 115 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಂಗ್ಲಿಷ್ ಶಿಕ್ಷಕರು ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡುತ್ತಾರೆ. ಐವರು ಪೂರ್ಣಕಾಲಿಕ ಶಿಕ್ಷಕರಿದ್ದಾರೆ. ಅವರು ತಿಂಗಳಿಗೆ ತಲಾ ₹2 ಸಾವಿರ ನೀಡುತ್ತಿದ್ದು, ಆ ಹಣದಲ್ಲಿ ಒಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ.
‘ಕೋವಿಡ್ ಸಮಯದಲ್ಲಿ ಶಿಕ್ಷಕರು ಖಾಲಿ ಇದ್ದೆವು. ನಮ್ಮ ಶಾಲೆಯ ಆವರಣದಲ್ಲಿ ಒಂದು ಕೊಠಡಿ ಬಳಕೆಯಾಗುತ್ತಿರಲಿಲ್ಲ. ಅಲ್ಲಿ ಗ್ರಂಥಾಲಯ ಮಾಡುವ ಆಲೋಚನೆ ಬಂತು. ದಾನಿಗಳನ್ನು ಸಂಪರ್ಕಿಸಿದೆವು. ‘ಪುಸ್ತಕ ಜೋಳಿಗೆ ’ ಕಾರ್ಯಕ್ರಮ ಮಾಡಿದೆವು. ಜಿಲ್ಲಾ ಗ್ರಂಥಾಲಯದವರೂ ₹65 ಸಾವಿರ ಮೌಲ್ಯದ ಪುಸ್ತಕ ನೀಡಿದರು. ಪೀಠೋಪಕರಣ ಸಹಿತ ಸುಸಜ್ಜಿತ ಗ್ರಂಥಾಲಯ ರೂಪುಗೊಂಡಿದೆ’ ಎಂದು ಗ್ರಂಥಾಲಯಕ್ಕೆ ಕೊರೆದೊಯ್ದು ಸಂಭ್ರಮಿಸಿದರು ಜಲಜಾಕ್ಷಿ, ಇತರೆ ಶಿಕ್ಷಕರು. ಇದೇ ಶಾಲೆಯ ಇನ್ನೊಬ್ಬ ಶಿಕ್ಷಕಿ ಮಮತಾ ಅವರು ತಮ್ಮ ವೇತನದಿಂದ ನಲಿಕಲಿ ಕೊಠಡಿ ನವೀಕರಣ ಮಾಡಿಸಿ, ಅದಕ್ಕೆ ಬೇಕಿರುವ ಉಪಕರಣ ಕೊಟ್ಟಿದ್ದಾರೆ.
ಎಸ್‌ಡಿಎಂಸಿ ಜೊತೆಗೆ ಶಾಲಾ ಪಾಲನಾ ಸಮಿತಿ (ಕರುಣಾಕರ ಹಾಸ್ಪಾರೆ ಇದರ ಅಧ್ಯಕ್ಷರು) ರಚಿಸಲಾಗಿದೆ. ಈ ಸಮಿತಿಯವರು, ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ, ಪಾಲಕರು ಅಷ್ಟೇ ಅಲ್ಲ ಇಡೀ ಊರಿನವರೇ ಶಾಲೆಯನ್ನು ಪೋಷಿಸುತ್ತಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ಅವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ಈ ಬಾರಿ ಈ ಶಾಲೆಗೆ ಲಭಿಸಿದೆ.
ಸುಸಜ್ಜಿತ ಸಭಾಭವನ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆದು ₹15 ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಿಸಲಾಗಿದೆ. ಊರಿನವರು, ಸುತ್ತಲಿನ ಶಾಲಾ–ಕಾಲೇಜು ವಿದ್ಯಾರ್ಥಿಗಳು ಶ್ರಮದಾನ ಮಾಡಿದ್ದರಿಂದ ಕಡಿಮೆ ಖರ್ಚಿನಲ್ಲಿ ಸುಂದರ ಸಭಾಭವನ ತಲೆ ಎತ್ತಿದೆ. ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ನವರು ₹25 ಲಕ್ಷ ವೆಚ್ಚದಲ್ಲಿ ಇನ್ನೊಂದು ಕಟ್ಟಡ ನಿರ್ಮಿಸುತ್ತಿದ್ದಾರೆ. ಶಾಲೆಗೆ ಮಹಾದ್ವಾರ ನಿರ್ಮಿಸಲು ಸಿದ್ಧತೆ ನಡೆದಿದೆ.
ಜಲಜಾಕ್ಷಿ ಕೆ.ಡಿ. ಅವರು ಮಕ್ಕಳನ್ನು ಶಾಲೆಯ ಅಕ್ಷರ ವಾಹಿನಿ ವ್ಯಾನ್‌ನಲ್ಲಿ ಶಾಲೆಗೆ ಕರೆತರುತ್ತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.