ADVERTISEMENT

ಕೊರೊನಾ ಒತ್ತಡ ತಂದ ಮದುವೆ ‘ಬಂಧ’

ಸುಕೃತ ಎಸ್.
Published 26 ಆಗಸ್ಟ್ 2020, 19:30 IST
Last Updated 26 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‌ಡೌನ್‌ನಿಂದ ಹುಟ್ಟಿಕೊಂಡ ‘ವರ್ಕ್‌ ಫ್ರಂ ಹೋಂ’ ಎಂಬ ಕೆಲಸದ ಹೊಸ ವ್ಯವಸ್ಥೆಯು ಮಹಿಳೆಯರ ಪಾಲಿಗೆ ಒಂದು ರೀತಿ ಶತ್ರುವೇ ಆಗಿದೆ. ಆದರೆ, ಮದುವೆ ಆಗದ ಹೆಣ್ಣುಮಕ್ಕಳ ಕಥೆ ಬೇರೆಯದೇ ಇದೆ. ‘ಯಾಕೆ ಈ ಕೆಲಸ ಎಲ್ಲ, ಕೆಲಸ ಬಿಟ್ಟು ಬಿಡು, ಮದುವೆ ಮಾಡಿಬಿಡುತ್ತೇವೆ’ ಎನ್ನುವ ಒತ್ತಡ ಪ್ರಾರಂಭವಾಗಿದೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಲಾಕ್‌ಡೌನ್‌ ಕಾರಣ ಕೆಲಸ ಕಳೆದುಕೊಂಡ ಕುಟುಂಬಗಳು ಊರು ಸೇರಿವೆ. ಮತ್ತೆ ತಮಗೆ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಆತಂಕ, ಅನಿಶ್ಚಿತತೆ. ಜೀವ ಉಳಿಯುವ ಬಗ್ಗೆಯೂ ಅನುಮಾನ.

ಈ ಎಲ್ಲ ಕಾರಣದಿಂದ ಮನೆಯ ಹೆಣ್ಣುಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಬೇಡ; ಮದುವೆ ಮಾಡಿಬಿಡೋಣ ಎನ್ನುವ ವಾತಾವರಣ ನಿರ್ಮಾಣವಾಗಿದೆ.

‘ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ’ ಎನ್ನುವುದರ ಮೂಲಕ, ಹೆಣ್ಣುಮಕ್ಕಳ ಸ್ಥಾನವನ್ನು ಅದಾಗಲೇ ಸಮಾಜ ತೋರಿಸಿಕೊಟ್ಟಾಗಿದೆ. ಕೆಲಸಕ್ಕೆ ಹೋಗಿ ಮನೆ ಮಗಳು ದುಡಿದು ಮನೆಗೆ ತಂದುಹಾಕುವ ಅಗತ್ಯವೇನಿಲ್ಲ ಎನ್ನುವ ಮನಃಸ್ಥಿತಿ ನಮ್ಮಲ್ಲಿ ಬೇರೂರಿದೆ. ಇದು ಹೊಸದಲ್ಲದಿದ್ದರೂ, ಲಾಕ್‌ಡೌನ್‌, ಕೊರೊನಾ ಇವು ಕಾರಣಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

ADVERTISEMENT

‘ನಾವು ಇಬ್ಬರು ಸಹೋದರಿಯರು. ಅಕ್ಕನನ್ನು ಅಷ್ಟಾಗಿ ಓದಿಸಲಿಲ್ಲ. ಬೇಗನೇ ಮದುವೆ ಮಾಡಿ ಕೊಟ್ಟರು. ನಾನು ಇತ್ತೀಚೆಗಷ್ಟೇ ಎಂಜಿನಿಯರಿಂಗ್‌ ಓದಿ ಮುಗಿಸಿದ್ದೇನೆ. ಲಾಕ್‌ಡೌನ್‌ಗೂ ಸ್ವಲ್ಪ ತಿಂಗಳ ಮುಂಚೆ ಕೆಲಸಕ್ಕೆ ಸೇರಿದ್ದೆ. ಅದು ಸ್ಟಾರ್ಟ್‌ಅಪ್‌ ಕಂಪನಿ ಆಗಿತ್ತು. ಲಾಕ್‌ಡೌನ್‌ ಕಾರಣ, ನಷ್ಟವಾಗಿ ಕಂಪನಿ ಮುಚ್ಚಿಹೋಯಿತು, ವಾಪಸ್‌ ಮನೆಗೆ ಬಂದೆ.’

‘ಈ ಮಧ್ಯೆ ಬೇರೆ ಕೆಲಸಕ್ಕೂ ಅರ್ಜಿ ಹಾಕಿದ್ದೆ. ಸಂದರ್ಶನಕ್ಕೂ ಕರೆದಿದ್ದರು. ಆದರೆ, ಮನೆಯಲ್ಲಿ ಹೋಗಲು ಬಿಡಲಿಲ್ಲ. ‘ಸೋಂಕು ಬೇರೆ ಇದೆ. ಬೆಂಗಳೂರಿನಲ್ಲಿ ಪಿ.ಜಿ ಎಲ್ಲ ಹುಡುಕೋದು ಕಷ್ಟ. ನನ್ನ ನಿವೃತ್ತಿ ಸಹ ಹತ್ತಿರ ಇದೆ. ಅದಕ್ಕೂ ಮುಂಚೆ ನಿನ್ನ ಮದುವೆ ಮಾಡಿಬಿಡುತ್ತೇವೆ. ಕೆಲಸಕ್ಕೆ ಹೋಗುವುದು ಬೇಡ’ ಎಂದು ಅಪ್ಪ ಹೇಳಿದರು’ ಎಂದು ಒಬ್ಬ ಹೆಣ್ಣು ಮಗಳು ಬೇಸರಿಸುತ್ತಾರೆ.

ಬಿ–ಕನ್ಸರ್ನ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ನ ನಿರ್ದೇಶಕಿ, ಕವಿತಾರತ್ನ ಮತ್ತೊಂದು ಮಜಲನ್ನು ಬಿಚ್ಚಿಡುತ್ತಾರೆ.

ಭವಿಷ್ಯದ ಚಿಂತೆ

‘ಲಾಕ್‌ಡೌನ್‌ ಕಾರಣ, ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಬಡ, ಮಧ್ಯಮವರ್ಗದವರು ಮರಳಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಅವರಿಗೆ ಮತ್ತೆ ಕೆಲಸ ಸಿಗುವ ಯಾವ ಬೆಳಕೂ ಅವರ ಕಣ್ಣುಗಳಲ್ಲಿ ಇಲ್ಲ. ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೆ. ಇವರ ಮುಂದಿನ ಭವಿಷ್ಯ ಹೇಗೋ ತಿಳಿಯದು. ಆದ್ದರಿಂದ, 16–17 ವರ್ಷದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ಇಲ್ಲವೇ, ನಿಶ್ಚಿತಾರ್ಥ ಮಾಡುತ್ತಿರುವ ಹಲವು ಘಟನೆಗಳು ಕೂಡ ನಡೆಯುತ್ತಿವೆ’ ಎನ್ನುತ್ತಾರೆ ಕವಿತಾರತ್ನ.

‘ತಮ್ಮ ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆಯೂ ತಂದೆ–ತಾಯಿಯರು ಚಿಂತಿತರಾಗಿದ್ದಾರೆ. ಒಂದು ಹಳ್ಳಿಯಲ್ಲಿ ಶೇಕಡ 80 ರಷ್ಟು ಮಂದಿ ನಗರ ಪ್ರದೇಶಗಳಿಂದ ಕೆಲಸ ಕಳೆದುಕೊಂಡು ಬಂದಿದ್ದಾರೆ. ಹಳ್ಳಿಗಳಲ್ಲಿ ಜನ ಹೆಚ್ಚಾಗಿದ್ದಾರೆ. ಮನೆಯಲ್ಲಿ ವಯಸ್ಸಿಗೆ ಬಂದಿರುವ ಹೆಣ್ಣು ಮಕ್ಕಳು. ಆದ್ದರಿಂದ ಮದುವೆ ಮಾಡಿದರೆ, ಗಂಡನ ಮನೆಯವರು ನೋಡಿಕೊಳ್ಳುತ್ತಾರೆ ಎಂಬ ಯೋಚನೆ ಮಾಡುತ್ತಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ಮಹಿಳೆಯರಿಗೂ ಆರ್ಥಿಕ ಸ್ವಾವಲಂಬನೆ ಬೇಕು. ಆಕೆಗೂ ಭವಿಷ್ಯದ ಬಗ್ಗೆ ಕನಸುಗಳು ಇರುತ್ತವೆ. ಪ್ರತಿಯೊಬ್ಬ ಪೋಷಕರೂ ಈ ನಿಟ್ಟಿನಲ್ಲಿ ಆಲೋಚಿಸಿ ತಮ್ಮ ಹೆಣ್ಣುಮಕ್ಕಳ ಬಗ್ಗೆ ನಿರ್ಣಯ ಕೈಗೊಳ್ಳುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.