
ಮೇಜರ್ ಸ್ವಾತಿ ಶಾಂತಕುಮಾರ್
ಭಾರತೀಯ ಸೇನೆಯ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಒಂದು ತಂಡವನ್ನು ಮುನ್ನಡೆಸುತ್ತಿದ್ದಾರೆ ಬೆಂಗಳೂರಿನ ಮೇಜರ್ ಸ್ವಾತಿ ಶಾಂತಕುಮಾರ್. ದಕ್ಷಿಣ ಸುಡಾನ್ ಮಹಿಳೆಯರ ಅಭ್ಯುದಯಕ್ಕಾಗಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಅವರಿಗೆ ಒಲಿದಿದೆ...
ಬಾಲ್ಯದಲ್ಲೇ ಚಿಗುರೊಡೆಯುವ ಸಾಧನೆಯ ಕನಸುಗಳನ್ನು ಭವಿಷ್ಯದಲ್ಲಿ ನನಸಾಗಿಸಿಕೊಳ್ಳುವವರ ಸಂಖ್ಯೆ ತೀರಾ ವಿರಳ. ಭಾರತೀಯ ಸೇನೆ ಸೇರುವ ಬಗ್ಗೆ ಪ್ರೌಢಶಾಲಾ ಹಂತದಲ್ಲಿ ಕಂಡ ತಮ್ಮ ಕನಸನ್ನು ಪದವಿ ಪೂರೈಸಿದ ಒಂದೂವರೆ ವರ್ಷದಲ್ಲೇ ಸಾಕಾರಗೊಳಿಸಿಕೊಳ್ಳುವುದರ ಜತೆಗೆ, ತನ್ನಂಥ ಹಲವಾರು ಯುವತಿಯರಲ್ಲಿ ದೇಶಸೇವೆಯ ಕನಸನ್ನು ಬಿತ್ತಿದ್ದಾರೆ ಬೆಂಗಳೂರಿನ ಮೇಜರ್ ಸ್ವಾತಿ ಶಾಂತಕುಮಾರ್.
ಭಾರತೀಯ ಸೇನೆಯ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಒಂದು ತಂಡದ ನಾಯಕಿಯಾಗಿರುವ ಸ್ವಾತಿ, ಪ್ರಸ್ತುತ ಕಲಹಪೀಡಿತ ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ತಾಯಿ ಮತ್ತು ದೇಶದ ಸೇವೆಯು ದೇವರ ಸೇವೆಗೆ ಸಮ’ ಎಂದು ನಂಬಿರುವ ಅವರು, ತನ್ನಂತೆ ದೇಶದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕೆಂದು ಆಶಿಸುತ್ತಾರೆ.
ಬೆಂಗಳೂರಿನ ಲಿಂಗರಾಜಪುರದ ಸೇಂಟ್ ಪಾಲ್ಸ್ ಕಾನ್ವೆಂಟ್‌ನಲ್ಲಿ ಬಾಲ್ಯದ ಶಿಕ್ಷಣವನ್ನು ಪೂರೈಸಿದ ಅವರು ಪ್ರೌಢಶಾಲಾ ಹಂತದಲ್ಲಿ ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಚರ್ಚಾಸ್ಪರ್ಧೆ, ಲಘು ನಾಟಕ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದರು. ಚಳಿ, ಮಳೆ, ಬಿಸಿಲು ಲೆಕ್ಕಿಸದೆ ದೇಶದ ಜನರ ನೆಮ್ಮದಿಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಗಡಿಗಳಲ್ಲಿ ಗಸ್ತು ತಿರುಗುವ ಭಾರತೀಯ ಸೈನಿಕರೇ ಅವರ ಪಾಲಿಗೆ ನಿಜವಾದ ಹೀರೊಗಳು.
ಕ್ರೈಸ್ಟ್ ಕಾಲೇಜಿನಲ್ಲಿ ದ್ವಿತೀಯ ಪಿಯು ಮುಗಿಸಿದ ನಂತರ ಪೋಷಕರ ಒತ್ತಾಸೆಯಂತೆ ನ್ಯೂ ಹೊರೈಜನ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದರು. ತಮ್ಮ ಸಹಪಾಠಿಗಳು ಪದವಿ ಬಳಿಕ ಉದ್ಯೋಗದ ಕನಸು ಕಾಣುತ್ತಿದ್ದರೆ, ಸ್ವಾತಿ ಮಾತ್ರ ತಮ್ಮೊಳಗೆ ದೇಶಸೇವೆಯ ಕಿಚ್ಚು ಬೆಳೆಸಿಕೊಳ್ಳುತ್ತಲೇ ಹೋದರು. ‘ಯಾವುದೋ ಒಂದು ವೃತ್ತಿ ಮಾಡಿ, ನೆಮ್ಮದಿಯ ಜೀವನ ಅರಸುವ ಬದಲು ನನ್ನ ಭೂಮಿಗೆ ಏನಾದರೂ ಸೇವೆ ಸಲ್ಲಿಸಬೇಕು ಎಂಬ ಹಂಬಲ ನನಗಿತ್ತು. ಅದಕ್ಕಾಗಿ ಸೇನಾ ಅಧಿಕಾರಿ ಹುದ್ದೆಗಳ ಪರೀಕ್ಷೆ ಬರೆಯಲು ನಿರ್ಧರಿಸಿದೆ’ ಎಂಬ ಸ್ವಾತಿ ಅವರ ಮಾತು ಅವರೊಳಗಿದ್ದ ಸ್ಪಷ್ಟ ಗುರಿಗೆ ನಿದರ್ಶನ.
ಎಂಜಿನಿಯರಿಂಗ್ ಪದವಿಯ ನಂತರ ಒಂದೂವರೆ ವರ್ಷ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡಿದರು. ಭಾರತೀಯ ಸೇನೆಯಲ್ಲಿ ಗಡಿ ರಕ್ಷಣಾ ಶಸ್ತ್ರಾಸ್ತ್ರ ಪಡೆಯ ಅಧಿಕಾರಿಗಳ ನೇಮಕಾತಿಗಾಗಿ ಸೇವಾ ಆಯ್ಕೆ ಮಂಡಳಿ (ಎಸ್‌ಎಸ್‌ಬಿ) ನಡೆಸುವ ಪರೀಕ್ಷೆ ಬರೆದು, ಸಂದರ್ಶನ ಪ್ರಕ್ರಿಯೆ ಮೂಲಕ ಆಯ್ಕೆಯಾದರು. 2018ರಲ್ಲಿ ಚೆನ್ನೈನ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ ಒಂದು ವರ್ಷ ಕಠಿಣ ತರಬೇತಿ ಪಡೆದು, ನಂತರ ಎರಡು ವರ್ಷ ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಯಲ್ಲಿ, ಬಳಿಕ ಕಾಶ್ಮೀರ, ಗುಜರಾತ್‌ನಲ್ಲಿ ಮೂರು ವರ್ಷ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದರು. 2024ನೇ ಸೆಪ್ಟೆಂಬರ್‌ನಿಂದ ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಅಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿ, ವಿಶ್ವಸಂಸ್ಥೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಜಗತ್ತೇ ಮೆಚ್ಚುವ ಸೇನಾ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ತಮ್ಮ ಕಾರ್ಯಾಚರಣೆ ವೇಳೆ ತಳಮಟ್ಟದ ಸಂವಹನ ಹಾಗೂ ಚುರುಕಾದ ಗಸ್ತಿನ ಮೂಲಕ ಸ್ವಾತಿ ವಿಶ್ವಸಂಸ್ಥೆಯ ಮೆಚ್ಚುಗೆ ಗಳಿಸಿದ್ದಾರೆ. ಅವರ ಅನನ್ಯ ಸೇವೆಯ ಫಲವಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡುವ ‘ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ–2025’ಕ್ಕೆ ಭಾಜನರಾಗಿದ್ದಾರೆ. ವಿಶ್ವದಾದ್ಯಂತ ಇರುವ ಎಲ್ಲ ಶಾಂತಿ ರಕ್ಷಣಾ ಕಾರ್ಯಾಚರಣೆ ಪಡೆಗಳು ಹಾಗೂ ವಿಶ್ವಸಂಸ್ಥೆಯಿಂದ ಬಂದ ನಾಮನಿರ್ದೇಶನಗಳಲ್ಲಿ ಸ್ವಾತಿ ಪರವಾದ ಆಯ್ಕೆ ಮೇಲುಗೈ ಸಾಧಿಸಿದೆ. ನಾಲ್ವರು ಅಂತಿಮ ಸ್ಪರ್ಧಿಗಳ ನಡುವೆ ನಡೆದ ಮತದಾನದಲ್ಲಿ ಅತ್ಯಧಿಕ ಮತಗಳನ್ನು ಪಡೆದು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
‘ದಕ್ಷಿಣ ಸುಡಾನ್‌ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗಾಗಿ ಕೈಗೊಂಡ ಸಂವೇದನಾಶೀಲ ಕ್ರಮಗಳು ಸವಾಲಿನಿಂದ ಕೂಡಿದ್ದವು. ‘ಸಮಾನ ಪಾಲುದಾರಿಕೆ–ಶಾಶ್ವತ ಶಾಂತಿ’ ಎನ್ನುವುದು ಧ್ಯೇಯವಾಗಿತ್ತು. ಅಲ್ಲಿನ ಜನರಿಗೆ ಶಿಕ್ಷಣ, ವಸತಿ, ಆಹಾರ, ಶುದ್ಧ ಕುಡಿಯುವ ನೀರಿನಂತಹ ಮೂಲಸೌಕರ್ಯಗಳನ್ನು ಒದಗಿಸುವುದರಜತೆಗೆ ಅವರ ರಕ್ಷಣೆಯ ಹೊಣೆಯೂ ನಮ್ಮ ತಂಡದ ಮೇಲಿದೆ. ಸುಡಾನ್ ಅಷ್ಟೇ ಅಲ್ಲ, ವಿಶ್ವದ ಎಲ್ಲ ಜನರೂ ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸಬೇಕು’ ಎನ್ನುವುದು ಸ್ವಾತಿ ಅವರ ಕಳಕಳಿ.
ಪ್ರಶಸ್ತಿ ಘೋಷಣೆಯ ಸಮಯದಲ್ಲಿ ಸ್ವಾತಿ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, ‘ಸುಡಾನ್‌ನ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಮೇಜರ್ ಸ್ವಾತಿ ಮತ್ತು ಅವರ ತಂಡ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಿದೆ. ಅವರು ಗಳಿಸಿದ ಸಮುದಾಯದ ವಿಶ್ವಾಸವು ವಿಶ್ವಸಂಸ್ಥೆಯ ಮುಂದಿನ ಕೆಲಸಗಳಿಗೂ ಪ್ರೇರಣೆಯಾಗಿದೆ’ ಎಂದಿರುವುದು ಕರ್ನಾಟಕ ಅಷ್ಟೇ ಅಲ್ಲ, ಭಾರತ ಹಾಗೂ ವಿಶ್ವದ ಎಲ್ಲ ಮಹಿಳೆಯರಿಗೂ ಹೆಮ್ಮೆಯ ಸಂದೇಶ.
‘ಸೇನೆಯ ಪರೀಕ್ಷೆಗಳು ಮತ್ತು ಆಯ್ಕೆ ಪ್ರಕ್ರಿಯೆಗಾಗಿ ಸ್ವಾತಿ ತಿಂಗಳಾನುಗಟ್ಟಲೆ ಕಠಿಣ ಪರಿಶ್ರಮದ ತರಬೇತಿ ಪಡೆದಳು. ವಿಶ್ವಸಂಸ್ಥೆಯ ತಂಡಕ್ಕೆ ಆಯ್ಕೆಯಾಗುವ ಹಾದಿಯೂ ಕಠಿಣವಾಗಿತ್ತು. ಅನೇಕ ಅಭ್ಯರ್ಥಿಗಳ ನಡುವೆ, ಜ್ಞಾನ, ಅನುಭವ, ಸಮರ್ಪಣೆ ಮತ್ತು ಕೆಲಸದ ನೈತಿಕತೆಯು ಆಯ್ಕೆಯ ಫಲ ಕೊಟ್ಟವು’ ಎಂದು ಸ್ಮರಿಸಿದರು ಶಿಕ್ಷಕಿಯಾಗಿರುವ ಅವರ ತಾಯಿ ರಾಜಮಣಿ.
‘ಸೇನೆಗೆ ಸೇರುತ್ತಾಳೆಂದು ನಾವು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಶ್ವಸಂಸ್ಥೆಯ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ. ಅವರ ತಾತ, ಚಿಕ್ಕಪ್ಪ, ದೊಡ್ಡಪ್ಪ ಅವರ ಕನಸುಗಳನ್ನೂ ಅವಳು ನನಸು ಮಾಡಿದಳು’ ಎನ್ನುತ್ತಲೇ ಭಾವುಕರಾದರು ಖಾಸಗಿ ಕಂಪನಿ ಉದ್ಯೋಗಿಯಾದ ತಂದೆ ಶಾಂತಕುಮಾರ್.
‘ಸುಡಾನ್ ಅತೀವ ಸಂಕಷ್ಟದಲ್ಲಿರುವ ದೇಶ. ಯುದ್ಧ, ಹಿಂಸಾಚಾರ ಮತ್ತು ದೌರ್ಜನ್ಯಗಳಿಂದ ಅಲ್ಲಿನ ಮಹಿಳೆಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ತೀವ್ರವಾಗಿ ಬಾಧಿತರಾಗಿದ್ದಾರೆ. ಸಮುದಾಯದ ನಿರ್ಧಾರಗಳಲ್ಲಿ ಅವರ ಧ್ವನಿಗೆ ಮನ್ನಣೆ ಇಲ್ಲ. ಅಲ್ಲಿನ ಜನರಿಗೆ ತಮ್ಮ ಜೀವನವನ್ನು ಪುನರ್ ಕಟ್ಟಿಕೊಳ್ಳಲು ವಿಶ್ವಸಂಸ್ಥೆಯ ನೆರವು ಅತ್ಯಂತ ಅಗತ್ಯ. ಇಂತಹ ಪರಿಸ್ಥಿತಿಯಲ್ಲಿ ಸಮುದಾಯಗಳ ಪುನರ್ ನಿರ್ಮಾಣ ಮತ್ತು ಉನ್ನತಿಗಾಗಿ ಕೆಲಸ ಮಾಡುತ್ತಿದ್ದೇವೆ. ಸ್ತ್ರೀ ಗೌರವ ಮರಳಿ ದೊರೆಯುವಂತೆ ನೋಡಿಕೊಂಡಿದ್ದೇವೆ’ ಎನ್ನುವುದು ಸ್ವಾತಿ ಅವರ ಮನದಾಳದ ಮಾತು.
‘ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿಗಳನ್ನು ಗೆಲ್ಲುವ ಉದ್ದೇಶ ನಮ್ಮದಾಗಿರಲಿಲ್ಲ. ವಿಶ್ವಸಂಸ್ಥೆ ನೀಡಿದ ಗುರಿ, ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದೇವೆ. ಈ ಪ್ರಶಸ್ತಿ ನನ್ನಂತೆ ಸೇನೆಗೆ ಸೇರುವ ಕನಸು ಕಾಣುತ್ತಿರುವ ಭಾರತೀಯ ಯುವತಿಯರಿಗೆ ಸ್ಫೂರ್ತಿಯಾದರೆ ಅದೇ ಸಾರ್ಥಕ’ ಎನ್ನುವ ಭಾವ
ವ್ಯಕ್ತಪಡಿಸಿದರು.
‘ದೇಶಸೇವೆಯ ಬಗ್ಗೆ ನಿಜವಾದ ಆಸಕ್ತಿ ಮತ್ತು ಉತ್ಸಾಹ ಇದ್ದರೆ ಖಂಡಿತವಾಗಿ ಮುಂದೆ ಬನ್ನಿ. ಇಲ್ಲಿ ಅದಕ್ಕೆ ಪೂರಕವಾದ ವಾತಾವರಣ ಇದೆ . ನಿಮ್ಮನ್ನು ಯಾರೂ ತಡೆಯುವುದಿಲ್ಲ. ನೀವು ಕಠಿಣ ಪರಿಶ್ರಮಕ್ಕೆ ಸಿದ್ಧರಾಗಿದ್ದರೆ, ಎಲ್ಲವೂ ಸಾಧ್ಯ’ ಎನ್ನುವ ಸಂದೇಶ ನೀಡಿದ್ದಾರೆ.
ಸ್ವಾತಿ ಅಪ್ಪ ಅಮ್ಮ
ಸೇನೆಯಲ್ಲಿ ಇಲ್ಲ ತಾರತಮ್ಯ... ಸೇನೆಯಲ್ಲಿ ಎದುರಾಗುವ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಚಿಂತೆ ಇತ್ತು. ಆದರೆ, ದೇಶಸೇವೆ ಮಾಡಬೇಕೆಂಬ ಬಗ್ಗೆ ಸ್ವಾತಿ ದೃಢನಿಶ್ಚಯ ಹೊಂದಿದ್ದಳು. ಅವಳ ಸಾಮರ್ಥ್ಯದ ಬಗ್ಗೆ ನಮಗೆ ಸದಾ ನಂಬಿಕೆ ಇತ್ತು. ನಾವು ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆವು. ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ, ಗೌರವಭಾವ ದೊರೆಯುತ್ತಿದೆ. ಅವರನ್ನು ಪುರುಷ ಅಧಿಕಾರಿಗಳಂತೆಯೇ ಸಮಾನವಾಗಿ ಕಾಣಲಾಗುತ್ತದೆ ಎನ್ನುವುದೇ ಅತ್ಯಂತ ಸಮಾಧಾನದ, ಸಾರ್ಥಕತೆಯ ಭಾವ ಮೂಡಿಸುತ್ತದೆ.ರಾಜಮಣಿ, ಶಾಂತಕುಮಾರ್, ಮೇಜರ್ ಸ್ವಾತಿ ಅವರ ತಾಯಿ– ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.