ಶಮಾ, ನಂದಿವಳ್ಳಿ
ಎರಡು ವರ್ಷಗಳಿಂದ ಸುಖಾಸುಮ್ಮನೆ ವಿಪರೀತ ಎನ್ನುವಷ್ಟು ಆತಂಕ ಆಗುತ್ತದೆ. ಏನಾದರೂ ಅವಘಡ ಸಂಭವಿಸಿ ಬಿಡಬಹುದು ಅನ್ನಿಸುತ್ತಿರುತ್ತದೆ. ಹಾಗೆ ಅಂದುಕೊಂಡಾಗಲೆಲ್ಲ ಏನಾದರೊಂದು ಆಗುತ್ತಲೇ ಇರುತ್ತದೆ. ಹಾಗೆ ಅಂದುಕೊಳ್ಳುವುದಕ್ಕೆ ಸಂಕಟ ಎದುರಾಗುತ್ತದೋ ಸಂಕಟ ಎದುರಾಗುತ್ತದೆ ಎನ್ನುವ ಕಾರಣಕ್ಕೆ ಹಾಗೆಲ್ಲ ಅನ್ನಿಸುತ್ತದೋ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಹೀಗಾಗಿ, ನಾಳೆ ಹೇಗೋ ಏನೋ ಎಂಬ ಭಯದಲ್ಲೇ ದಿನ ದೂಡುವಂತೆ ಆಗಿದೆ. ಯಾವ ಕೆಟ್ಟ ಸಮಾಚಾರ ಕೇಳಿದರೂ ಅದು ನನ್ನ ಬದುಕಿನಲ್ಲೂ ನಡೆದುಬಿಡಬಹುದು ಅನ್ನಿಸುತ್ತದೆ. ಈ ಸಂಕಟದಿಂದ ಹೊರಬರಲು ಏನು ಮಾಡಬೇಕು?
ಉತ್ತರ: ಜೀವನದಲ್ಲಿ ಏರುಪೇರು, ಏಳುಬೀಳು ಇದ್ದದ್ದೇ. ಇವತ್ತು ಚೆನ್ನಾಗಿದ್ದರೆ ನಾಳೆಯೂ ಹಾಗೇ ಇರಬೇಕೆಂದಿಲ್ಲ; ಹಾಗೆಯೇ ಇಂದು ಅಷ್ಟೊಂದು ಚೆನ್ನಾಗಿಲ್ಲ ಎಂದ ಮಾತ್ರಕ್ಕೆ ನಾಳೆಯೂ ಚೆನ್ನಾಗಿರದು ಎಂದೇನೂ ಇಲ್ಲ. ಆಗಾಗ್ಗೆ ಸಂಭವಿಸುತ್ತಿರುವ ಅವಘಡಗಳೂ ಜೀವನದ ಏರುಪೇರಿನ ಭಾಗವಾಗಿರಬಹುದು. ಅದಕ್ಕಾಗಿ ನೀವು ಅಷ್ಟೊಂದು ಕುಗ್ಗಬೇಕಾದ ಅಗತ್ಯವಿಲ್ಲ. ಪ್ರತಿ ಸೂರ್ಯಾಸ್ತವೂ ಮರುದಿನದ ಸೂರ್ಯೋದಯಕ್ಕೆ ನಾಂದಿ ಹಾಡುತ್ತದೆ. ಹಾಗೆಯೇ, ಪ್ರತಿ ಉದಯಕ್ಕೂ ಒಂದು ಅಸ್ತವಿದೆ. ಅಂತೆಯೇ ಜೀವನದಲ್ಲಿ ಕಷ್ಟಗಳು ಎದುರಾದಾಗ ಕುಗ್ಗದೆ, ಸಂತೋಷದ ದಿನಗಳು ಬಂದಾಗ ಅತಿಯಾಗಿ ಹಿಗ್ಗದೆ ಪ್ರತಿಯೊಂದನ್ನೂ ಸಂಪೂರ್ಣವಾಗಿ ಅನುಭವಿಸುತ್ತಾ ಅದರ ರಸವನ್ನು ಹೀರುತ್ತಾ ಸಮತೋಲನ ಕಾಯ್ದುಕೊಂಡು ಮುಂದುವರಿಯಬೇಕು. ಅದಕ್ಕೇ ಅಲ್ಲವೇ ಯುಗಾದಿಯಂದು ಬೇವನ್ನೂ ಬೆಲ್ಲವನ್ನೂ ಜೊತೆಗೆ ಸೇರಿಸಿ ಕೊಡುವುದು?
ಈ ತರ್ಕವನ್ನು ಬೌದ್ಧಿಕವಾಗಿ ಅರ್ಥೈಸಿಕೊಳ್ಳುವುದು ಸುಲಭ. ಆದರೆ, ಭಾವನಾತ್ಮಕವಾಗಿ ಅದನ್ನು ಸಂಭಾಳಿಸುವುದು ಹೇಗೆ ಎಂಬುದನ್ನು ನಾವು ಅರಿಯಬೇಕು. ಕೆಲವೊಮ್ಮೆ ಎಲ್ಲ ತಿಳಿದಿದ್ದೂ ನಿಜವಾದ ಪರಿಸ್ಥಿತಿ ಎದುರಾದಾಗ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತೇವೆ. ಯಾಕೆಂದರೆ, ನಮ್ಮ ಜೀವನದಲ್ಲಿ ಆಗಿರುವಂತಹ ನೋವುಗಳು ನಮ್ಮ ಮನದಲ್ಲಿ ಆಳವಾದ ಗಾಯವನ್ನು ಮಾಡಿ ಹೋಗಿರುತ್ತವೆ. ಆ ಗಾಯಗಳು ಎಷ್ಟೋ ಬಾರಿ ಮೇಲಿನಿಂದ ವಾಸಿಯಾದಂತೆ ಕಂಡರೂ ಒಳಗೆ ಹಸಿಯಾಗಿಯೇ ಇರುತ್ತವೆ. ಮಾತ್ರವಲ್ಲ, ಕೆಲವೊಮ್ಮೆ ಅದರೊಳಗೆ ಕೀವು ತುಂಬಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಜೀವನದಲ್ಲಿ ಎಷ್ಟೋ ಬಾರಿ ಸಂತೋಷದಾಯಕ ಸಂದರ್ಭಗಳು ಬಂದಾಗಲೂ ಒಂದೋ ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಅಥವಾ ಯಾವಾಗ ಈ ಸಂತಸದ ದಿನಗಳು ಮುಗಿದುಹೋಗುತ್ತವೋ ಎಂಬ ಭಯ ನಮ್ಮನ್ನು ಕಾಡುತ್ತಿರುತ್ತದೆ. ಇದನ್ನು ಸರಿಪಡಿಸುವುದಕ್ಕೆ ನೀವು ಈ ಎಲ್ಲ ಪ್ರಯತ್ನಗಳನ್ನು ಮಾಡಬಹುದು:
1. ಕಠಿಣ ಪರಿಸ್ಥಿತಿ ಎದುರಿಸಲು ಮಾನಸಿಕವಾಗಿ ತಯಾರಾಗಿ. ಪ್ರತಿ ಸಮಸ್ಯೆಯನ್ನೂ ಹೇಗೆ ಬಗೆಹರಿಸಬಹುದು ಎಂದು ಯೋಚಿಸಿ.
2. ಭವಿಷ್ಯದಲ್ಲಿ ಬರಬಹುದಾದ ಕಷ್ಟದ ಕುರಿತು ಈಗಿನಿಂದಲೇ ಚಿಂತಿಸುವ ಬದಲು, ಈ ಹಿಂದೆ ಎದುರಿಸಿದಂತೆ ಮುಂದೆಯೂ ಎದುರಿಸಿದರಾಯಿತು ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಿ.
3. ಇತರರ ಜೀವನದಲ್ಲಿ ನಡೆಯುವ ಘಟನೆಗಳನ್ನು ನಿಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳಬೇಡಿ. ಯಾಕೆಂದರೆ, ಒಂದೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೆಲವರು ಉತ್ತೀರ್ಣರಾಗುತ್ತಾರೆ, ಇನ್ನೊಂದಷ್ಟು ಜನ ಅನುತ್ತೀರ್ಣರಾಗುತ್ತಾರೆ. ಅವರವರ ಜೀವನದ ಸಂಕಷ್ಟಗಳಿಗೆ ಕೆಲವೊಮ್ಮೆ ಅವರೇ ಕಾರಣರಾಗಿರಬಹುದು.
4. ಜೀವನದಲ್ಲಿ ಕಷ್ಟಗಳು ಬರುವುದೇ ಅವನ್ನು ಎದುರಿಸುವ ಕ್ಷಮತೆ ಇರುವವರಿಗೆ ಎಂಬುದನ್ನು ಮರೆಯಬೇಡಿ.
ವರನಟ ಡಾ. ರಾಜ್‌ಕುಮಾರ್ ಅವರ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿಹೋಗದು’ ಗೀತೆಯ ಒಳಾರ್ಥವನ್ನು ಗ್ರಹಿಸಿ. ಆಗ ಪರಿಸ್ಥಿತಿಗಳು ಯಾವೆಲ್ಲ ರೀತಿಯಲ್ಲಿ ಬೀಳಿಸಲು ಪ್ರಯತ್ನಿಸಿದರೂ ನೀವು ಉರುಳಿಹೋಗುವುದಿಲ್ಲ. ಬದಲಾಗಿ, ಸ್ವಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ. ಇಷ್ಟಾದರೂ ಹಿಂದೆ ಆಗಿರುವಂತಹ ನೋವಿನ ಗಾಯವನ್ನು ಮರೆಯಲು ನಿಮಗೆ ಸಾಧ್ಯವಾಗದಿದ್ದರೆ ಮನೋಚಿಕಿತ್ಸೆಯ ಮೂಲಕ ಅದನ್ನು ವಾಸಿ ಮಾಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.