
ಅಸಹಾಯಕ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿ ನೆರವಿಗೆ ನಿಲ್ಲುವ ಶಕ್ತಿಧಾಮ, ಅಮ್ಮನ ಮನೆ, ಅಮ್ಮನ ಮಡಿಲು ಸಂಸ್ಥೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಅವುಗಳ ಸಾಲಿಗೆ ಹೊಸ ಸೇರ್ಪಡೆ ‘ತಂಗಿ ಮನೆ’. ಆದರೆ ಮೇಲೆ ತಿಳಿಸಿದ ಮನೆಗಳಿಗೂ ಇದಕ್ಕೂ ಹೆಸರಿನಲ್ಲಿ ಮಾತ್ರ ಹೋಲಿಕೆ! ಈ ತಂಗಿಮನೆಯ ಉದ್ದೇಶ ಮತ್ತು ಕಾರ್ಯವೈಖರಿ ತುಂಬಾ ಭಿನ್ನ.
ಇದು, ತಿಂಗಳ ಋತುಚಕ್ರದ ಸಮಸ್ಯೆಗಳನ್ನು ಎದುರಿಸುವಲ್ಲಿ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಗೌರಿಬಿದನೂರಿನ ಸರ್ಕಾರಿ ಎಸ್.ಎಸ್.ಇ.ಎ. ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ನೆರವಿನ ತಾಣ. ತರಗತಿ ಸಮಯದಲ್ಲೇನಾದರೂ ಋತುಸ್ರಾವ ಶುರುವಾದರೆ ವಿದ್ಯಾರ್ಥಿನಿಯರು ಭಾರಿ ಮುಜಗರ ಪಡುತ್ತಾರೆ. ಯಾಕಾದರೂ ಕಾಲೇಜಿಗೆ ಬಂದೆನೋ ಎಂದು ಹಳಹಳಿಸುತ್ತಾರೆ. ಸ್ಯಾನಿಟರಿ ಪ್ಯಾಡ್ ತಮ್ಮ ಬಳಿ ಇದ್ದರೂ ಅದನ್ನು ಬದಲಾಯಿಸಲು, ಹೊಟ್ಟೆನೋವು ಶುರುವಾದರೆ, ಸುಸ್ತಾದರೆ ವಿಶ್ರಾಂತಿ ತೆಗೆದುಕೊಳ್ಳಲು ಪ್ರತ್ಯೇಕ ಕೋಣೆಯಾಗಲೀ ಮರೆಯಾಗಲೀ ಇರುವುದಿಲ್ಲ.
ಈ ದಿನಗಳಲ್ಲಿ ದೈಹಿಕ ತೊಂದರೆಗಳ ಜೊತೆಗೆ ಮಾನಸಿಕ ಕಿರಿಕಿರಿಯೂ ಜೊತೆಯಾಗುವುದರಿಂದ ವಿಶ್ರಾಂತಿಯ ಅಗತ್ಯ ಇರುತ್ತದೆ. ಎಷ್ಟೋ ಸರ್ಕಾರಿ ಶಾಲೆ– ಕಾಲೇಜುಗಳಲ್ಲಿ ಸರಿಯಾದ ತರಗತಿ ಕೊಠಡಿಯೇ ಇರುವುದಿಲ್ಲ. ವಾಸ್ತವ ಹೀಗಿರುವಾಗ, ಅಲ್ಲಿ ಇಂಥದ್ದೊಂದು ಪ್ರತ್ಯೇಕ ಕೋಣೆಯನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಆದರೆ ಪ್ರಾಂಶುಪಾಲ ಜಿ.ವಿ.ಶ್ರೀನಿವಾಸ್ ಅವರ ಪ್ರಯತ್ನ ಮತ್ತು ಬೆಂಗಳೂರು ಮೂಲದ ‘ನೀಡುವ ಹೃದಯ ಫೌಂಡೇಷನ್’ ಸಹಕಾರದೊಂದಿಗೆ ಕಾಲೇಜಿನ ನೆಲಮಹಡಿಯ ರೂಮೊಂದರಲ್ಲಿ ತಂಗಿಮನೆ ಅಥವಾ ‘ಪಿಂಕ್ ರೂಂ’ ಆರಂಭಗೊಂಡಿದೆ.
‘ಪೀರಿಯಡ್ಸ್‌ನ ದಿನಗಳಲ್ಲಿ ಹೊಟ್ಟೆನೋವು ಶುರುವಾದರೆ ಮನೆಗೆ ಫೋನ್ ಮಾಡಿ ಯಾರನ್ನಾದರೂ ಕರೆಸಿಕೊಂಡು ಅವರ ಜೊತೆಗೆ ಮನೆಗೆ ತೆರಳಬೇಕಾಗುತ್ತಿತ್ತು. ಅವರು ತಮ್ಮ ಕೆಲಸ ಬಿಟ್ಟು ನಮ್ಮನ್ನು ಕರೆದೊಯ್ಯಲು ಬರುತ್ತಿದ್ದರು. ಈಗ ತಂಗಿಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶವಿದೆ. ಮನೆಯವರಿಗೂ ಈಗ ನಿಶ್ಚಿಂತೆ’ ಎನ್ನುತ್ತಾಳೆ ಪ್ರಥಮ ಪಿಯು ವಿದ್ಯಾರ್ಥಿನಿ ಕೋಕಿಲ.
‘ಪೀರಿಯಡ್ಸ್ ದಿನಗಳಲ್ಲಿ ಕಾಲೇಜಿನಿಂದ ಮನೆಗೆ ಹೋಗಿಬಿಡುತ್ತಿದ್ದುದರಿಂದ ಕ್ಲಾಸ್‌ಗಳು ಮಿಸ್ ಆಗುತ್ತಿದ್ದವು. ಇನ್ನು ಮುಂದೆ ಹಾಗೆ ಆಗೋದಿಲ್ಲ’ ಎನ್ನುತ್ತಾಳೆ ದ್ವಿತೀಯ ಪಿಯು ವಿದ್ಯಾರ್ಥಿನಿ ಸುಪ್ರಜಾ.
‘ಇನ್ನು ಮುಂದೆ ಮುಟ್ಟಿನ ದಿನಗಳಲ್ಲಿ ತರಗತಿಗೆ ರಜೆ ಹಾಕುವುದಿಲ್ಲ, ತೊಂದರೆಯಾದರೆ ತಂಗಿಮನೆ ಇದೆಯಲ್ಲ’ ಎಂದು ಗೆಲುವಿನಿಂದ ನುಡಿಯುತ್ತಾಳೆ ಇನ್ನೊಬ್ಬ ವಿದ್ಯಾರ್ಥಿನಿ ಚಂದ್ರಕಲಾ.
ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ವಿಶ್ರಾಂತಿ ಕೋಣೆ ಮತ್ತು ಬೇಕಾದ ಪರಿಕರಗಳಿರುತ್ತವೆ. ನಿರಾಳವಾಗಿ ಕೂರಲು ಮತ್ತು ಮಲಗಿ ವಿಶ್ರಾಂತಿ ಪಡೆಯಲು ಬೇಕಾದ ಆಸನಗಳು, ಬಟ್ಟೆ ಬದಲಾಯಿಸಲು ತೆರೆಯ ವ್ಯವಸ್ಥೆ ಇರುತ್ತದೆ. ವಸತಿ ಕಾಲೇಜುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೇಲಿನ ವ್ಯವಸ್ಥೆಗಳ ಜೊತೆಗೆ ಆರೋಗ್ಯ ಸಹಾಯಕರು ಇಲ್ಲವೇ ವೈದ್ಯರನ್ನೇ ನೇಮಿಸಿರುತ್ತವೆ. ಕೆಲವು ಕಡೆ ತುರ್ತು ಚಿಕಿತ್ಸಾ ವ್ಯವಸ್ಥೆ ಮತ್ತು ಆಂಬುಲೆನ್ಸ್ ಸೌಲಭ್ಯಗಳಿರುತ್ತವೆ. ಆದರೆ ಗೌರಿಬಿದನೂರಿನ ಸರ್ಕಾರಿ ಕಾಲೇಜು ಈ ದಾರಿಯಲ್ಲಿ ಸಮರ್ಥ ಮತ್ತು ಆಶಾದಾಯಕ ಹೆಜ್ಜೆ ಇಟ್ಟಿದೆ.
ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸುವ ಉದ್ದೇಶವಿರುವ ಮನಸ್ಸುಗಳು ಒಂದುಗೂಡಿ ಕೆಲಸ ಮಾಡಿದರೆ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಆತ್ಮವಿಶ್ವಾಸ ಮೂಡುತ್ತದೆ. ಸರ್ಕಾರಿ ಕಾಲೇಜಿನ ಈ ಪ್ರಯತ್ನ ಎಷ್ಟೋ ಖಾಸಗಿ ಕಾಲೇಜುಗಳಿಗೂ ಮಾದರಿಯಾಗಬಲ್ಲದು.
ಏನೆಲ್ಲಾ ಇವೆ?
ತಂಗಿಮನೆಯಲ್ಲಿ ಮಂಚ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಕುಡಿಯುವ ನೀರಿನ ವ್ಯವಸ್ಥೆ ತೆರೆ ಕಲ್ಪಿಸುವ ಸ್ಟ್ಯಾಂಡ್ ಕರ್ಟನ್ ಹೊಟ್ಟೆನೋವು ನಿವಾರಕ ಮಾತ್ರೆಗಳು ಹಾಟ್‌ವಾಟರ್ ಪ್ಯಾಕ್... ಹೀಗೆ ಋತುಸ್ರಾವದ ದಿನಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಸಲಕರಣೆ ಮತ್ತು ಸೌಲಭ್ಯಗಳಿವೆ.
ಇತರೆಡೆಯೂ ನೆರವಿಗೆ ಸಿದ್ಧ
ಕರ್ನಾಟಕದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಬಾಲಕಿಯರ ಶಾಲಾ- ಕಾಲೇಜುಗಳಲ್ಲಿ ಪಿಂಕ್ ರೂಂ ವ್ಯವಸ್ಥೆ ಕಲ್ಪಿಸಲು ನಮ್ಮ ಸಂಸ್ಥೆ ಸದಾ ಸಿದ್ಧವಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಕಂಡು ಮಾತನಾಡಿದ್ದೇನೆ. ವರ್ಷಕ್ಕೆ ಎರಡು ಶಾಲೆಗಳಲ್ಲಿ ಈ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. 2022ರಿಂದ ಇಲ್ಲಿಯವರೆಗೆ ಈಗಾಗಲೇ ಕೋಲಾರ ಜಿಲ್ಲೆಯ ಐದು ಕಡೆ (ಮದನಹಳ್ಳಿ ಕ್ರಾಸ್ ಕುರುಗಲ್ ಅಮನಲ್ಲೂರುಕ್ಯಾಲನೂರು ಮತ್ತು ಗೌರಿಬಿದನೂರು) ತಂಗಿಮನೆ ಪ್ರಾರಂಭಿಸಿದ್ದೇವೆ. ನನಗೆ ಉದ್ಯೋಗ ಕಲ್ಪಿಸಿರುವ ಪ್ಲೇಸಿಂಪಲ್ ಗೇಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ರೂಪದಲ್ಲಿ ಈ ಕೆಲಸ ನಡೆಯುತ್ತಿದೆ. ನಮ್ಮ ಸಂಸ್ಥೆಯ ಕೆಲಸ ನೋಡಿ ಒರಾಕಲ್ ಕಂಪನಿಯು ಚೆನ್ನೈನ ಶಾಲೆಯೊಂದರಲ್ಲಿ ಪಿಂಕ್ ರೂಂ ಸ್ಥಾಪಿಸಿದೆ. ಇಂಥ ವ್ಯವಸ್ಥೆ ಪ್ರಾರಂಭಿಸಿದಾಗಿನಿಂದ ವಿದ್ಯಾರ್ಥಿನಿಯರ ಹಾಜರಾತಿ ಹೆಚ್ಚಿದೆ ಎಂಬ ಮಾಹಿತಿ ಪ್ರಾಚಾರ್ಯರಿಂದ ತಿಳಿದುಬಂದಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವ ಈ ವ್ಯವಸ್ಥೆ ಬೇಕೆಂದು ಯಾರೇ ಮುಂದೆ ಬಂದರೂ ಅವರಿಗೆ ಸಹಕರಿಸಲಾಗುವುದು. – ಅಂಥೋನಿ ಸಜೀತ್, ನೀಡುವ ಹೃದಯ ಫೌಂಡೇಶನ್
ಕಾಲೇಜಿನಲ್ಲಿ 500 ವಿದ್ಯಾರ್ಥಿನಿಯರಿದ್ದಾರೆ. ಋತುಚಕ್ರದ ಸಮಯದಲ್ಲಿ ವಿದ್ಯಾರ್ಥಿನಿಯರ ಗೈರುಹಾಜರಿ ಜಾಸ್ತಿ ಇರುತ್ತಿತ್ತು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮನೆಗೆ ತೆರಳಿಬಿಡುತ್ತಿದ್ದರು. ಈಗ ಪಿಂಕ್ ರೂಮ್ ಶುರುವಾದಾಗಿನಿಂದ ಸ್ವಲ್ಪ ವಿಶ್ರಾಂತಿ ಪಡೆದು ಪುನಃ ತರಗತಿಗೆ ಬರುತ್ತಾರೆ ಇದರಿಂದ ಹೆಣ್ಣುಮಕ್ಕಳ ಅಧ್ಯಯನದ ಪ್ರಗತಿಗೆ ತುಂಬಾ ಸಹಾಯವಾಗಿದೆ.– ಸುಮಾ ಆರ್., ‘ತಂಗಿಮನೆ’ಯ ಉಸ್ತುವಾರಿ ವಹಿಸಿಕೊಂಡಿರುವ ಅಧ್ಯಾಪಕಿ ಸರ್ಕಾರಿ ಎಸ್ಎಸ್ಇಎ ಪದವಿ ಪೂರ್ವ ಕಾಲೇಜು ಗೌರಿಬಿದನೂರು
ಪಿಂಕ್ ರೂಮ್ ಶುರುವಾದಾಗಿನಿಂದ ಅದರ ಬಳಕೆ ಸರಿಯಾಗಿ ಆಗುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ವಿದ್ಯಾರ್ಥಿನಿ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಬೇಕಾದ ವ್ಯವಸ್ಥೆ ಮಾಡಿಕೊಟ್ಟ ನೀಡುವ ಹೃದಯ ಫೌಂಡೇಶನ್ ಸಹಯೋಗಕ್ಕೆ ನಾನು ಆಭಾರಿ.– ಶ್ರೀನಿವಾಸ್ ಜಿ.ವಿ. ಪ್ರಾಚಾರ್ಯ ಸರ್ಕಾರಿ ಎಸ್ಎಸ್ಇಎ ಪದವಿ ಪೂರ್ವ ಕಾಲೇಜು ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.