ಶಾಲಾ-ಕಾಲೇಜು ಸಮಯದಲ್ಲಿ ಓದು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಸೌಮ್ಯ ಮದುವೆಯಾದ ಮೇಲೆ ಅವಳ ಬದುಕಿನ ದಿಕ್ಸೂಚಿಯೇ ಬದಲಾಗಿತ್ತು. ಇಪ್ಪತ್ತು ವರ್ಷಗಳಿಂದ ಆಕೆ ತನ್ನ ಕುಟುಂಬದ ಒಳಿತಿಗಾಗಿ ಶಕ್ತಿ ಮೀರಿ ತನ್ನನ್ನೇ ಒಪ್ಪಿಸಿಕೊಂಡಳು. ಗಂಡ-ಮಕ್ಕಳು, ಅತ್ತೆಮಾವನಿಗೆ ಏನೂ ಕೊರತೆಯಾಗದಂತೆ ಅವರ ಸಮಯ ಸಂದರ್ಭಕ್ಕೆ ಸದಾ ಗಟ್ಟಿಯಾಗಿ ನಿಂತಳು. ಇವುಗಳ ನಡುವೆ ಅವಳ ಆಸೆ, ಆಕಾಂಕ್ಷೆಗಳು ಎಂದೋ ಗಾಳಿಗೆ ತೇಲಿ ಹೋಗಿವೆ.
ಬರುಬರುತ್ತಾ ತನಗೇನು ಬೇಕು ಎನ್ನುವುದನ್ನೆ ಮರೆತಂತೆ ಕಾಣುತ್ತಾಳೆ ಸೌಮ್ಯ. ಇತರಿಗಾಗಿ ಬದುಕುವ ಅವಳು ಆಗಾಗ್ಗೆ ಒಳಗೊಳಗೆ ತನಗಾಗಿ ಬದುಕುತ್ತಿಲ್ಲವಲ್ಲ ಎಂದು ಪರಿತಪಿಸಿದ್ದೂ ಉಂಟು.
ಇದು ತನ್ನ ಬದುಕಿನ ಬಗ್ಗೆ ಒಂದಿಷ್ಟು ಯೋಚಿಸದೇ ಇರುವ ಬಹುತೇಕ ಹೆಣ್ಣುಮಕ್ಕಳ ಕಥೆ. ಇಲ್ಲಿ ಸೌಮ್ಯವೆಂಬುದು ಅನ್ವರ್ಥ ರೂಪಕವಷ್ಟೆ. ತನಗಾಗಿ ಸಮಯ ಕೊಟ್ಟುಕೊಳ್ಳಲು ಗೊತ್ತಿಲ್ಲ. ತನಗೆ ಏನು ಬೇಕು ಎನ್ನುವುದನ್ನು ಮರೆತಂತೆ ಕಾಣುತ್ತಾರೆ.
ವೃತ್ತಿ ಹಾಗೂ ಮನೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಸಾರ್ಥಕತೆ ಅನುಭವಿಸಿದ ಹೆಣ್ಣುಮಕ್ಕಳನ್ನು ಕಂಡು ಅವರಂತಾಗಬೇಕು ಎಂದು ನಿರ್ಧರಿಸುತ್ತಾಳೆ ಇದೇ ಸೌಮ್ಯ. ಹಾಗೆ ನಿರ್ಧರಿಸಿದ ಕ್ಷಣದಿಂದ ತಿಂಗಳಿಗೊಮ್ಮೆ ಸಿನಿಮಾ, ರೆಸ್ಟೋರೆಂಟ್ ಎಂದು ಗೆಳತಿಯರೊಡನೆ ಸುತ್ತಾಡಲು ಹೊರಡುತ್ತಾಳೆ. ತನ್ನಿಷ್ಟದ ಚಿತ್ರಕಲೆ, ಸಂಗೀತಾಭ್ಯಾಸವನ್ನೂ ಶುರುವಿಟ್ಟುಕೊಳ್ಳುತ್ತಾಳೆ. ಸೌಮ್ಯಳ ಈ ಬದಲಾವಣೆಯನ್ನು ಸಹಿಸದ ಕುಟುಂಬ ಸದಸ್ಯರೇ ಅವಳನ್ನು ಸ್ವಾರ್ಥಿ ಎಂದು ಜರಿಯುತ್ತಾರೆ.
ಇರಬೇಕು ಒಳ್ಳೆಯ ಸ್ವಾರ್ಥ:
ತನಗಾಗಿ ಅಲ್ಪಮಟ್ಟಿಗೆ ಸಮಯ ಮೀಸಲಿಡುವುದು ಸ್ವಾರ್ಥ ಹೇಗಾದೀತು?. ಇತರರಿಗೆ ತೊಂದರೆಯಾಗದಂತೆ, ತನ್ನ ಸುಖವನ್ನು ಧ್ಯೇಯವಾಗಿಟ್ಟುಕೊಂಡು ಸ್ವಲ್ಪ ಸಮಯವಾದರೂ ಬದುಕುವುದು ಒಳ್ಳೆಯ ಸ್ವಾರ್ಥ ತಾನೆ. ಆರೋಗ್ಯಕರ ಹಾಗೂ ಅನಾರೋಗ್ಯಕರ ಸ್ವಾರ್ಥಗಳ ನಡುವೆ ಭಿನ್ನತೆ ಇದೆ ಎಂದು ಸ್ಕಾಟ್ ಬ್ಯಾರಿ ಕಾಫ್‌ಮ್ಯಾನ್ ಎನ್ನುವ ಮನಃಶಾಸ್ತ್ರಜ್ಞ ಹೇಳಿದ್ದಾರೆ.
ಕೌಟುಂಬಿಕ ಜವಾಬ್ದಾರಿಗಳ ನಡುವೆ ಸ್ವಂತ ಸಮಯಕ್ಕೆ ಹೆಣ್ಣುಮಕ್ಕಳು ಎರಡನೆಯ ಸ್ಥಾನ ನೀಡಿರುತ್ತಾರೆ. ಹಾಗಾಗಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗುವುದು ಸಹಜ. ಎಲ್ಲರನ್ನೂ ಪ್ರೀತಿಸುವ, ನಿಭಾಯಿಸುವ ಭರದಲ್ಲಿ ನಮ್ಮನ್ನೇ ಪ್ರೀತಿಸಿಕೊಳ್ಳಲು, ಕಾಳಜಿ ಮಾಡಲು ಮರೆತುಹೋಗಿರುತ್ತೇವೆ. ‘ನಮ್ಮನ್ನು ನಾವು ಪ್ರೀತಿಸುವುದು ಸ್ವಾರ್ಥವಲ್ಲ. ಅದು ಅತ್ಯವಶ್ಯಕ’.
ಜವಾಬ್ದಾರಿಗಳ ಮೂಟೆಯನ್ನು ಎಷ್ಟು ಬೇಕೋ ಅಷ್ಟು ಹೊತ್ತು, ಆಯಾಸ ಎನಿಸಿದಾಗ ಆ ಮೂಟೆಯನ್ನು ಇತರರಿಗೆ ದಾಟಿಸಿ ತುಸು ವಿರಾಮ ಪಡೆಯುವುದರಲ್ಲಿ ತಪ್ಪಿಲ್ಲ. ಅತಿಯಾದ ಭಾರ ಎನಿಸಿದಾಗ, ಆಗುವುದೇ ಇಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ‘ಆದರ್ಶ ತಾಯಿ, ಸೊಸೆ, ಮಗಳು’ ಹೀಗೆ ಈ ಎಲ್ಲ ಭಾರಗಳನ್ನು ಹೊರವುದಕ್ಕಿಂತ, ಪ್ರಾಯೋಗಿಕವಾಗಿ ಬದುಕುವುದು ತುಂಬಾ ಮುಖ್ಯ. ಯಾವುದಕ್ಕೆ ಯಾವಾಗ ಎಷ್ಟು ಆದ್ಯತೆ ಕೊಡಬೇಕು? ಪಶ್ಚಾತ್ತಾಪವಿಲ್ಲದೇ ಮಕ್ಕಳನ್ನು ಎಷ್ಟು ಚೆನ್ನಾಗಿ ಬೆಳೆಸುತ್ತಾ, ತಾನೂ ಬೆಳೆಯಬಹುದು ಎಂಬುದರ ಕಡೆಗೆ ಗಮನಕೊಡುವುದು ಒಳಿತು. ಬದುಕಿನಲ್ಲಿ ಸ್ಪಷ್ಟತೆ ಇದ್ದಾಗ, ಧೈರ್ಯವೊಂದು ಜತೆಗಿದ್ದರೆ ಎಂಥ ವಯಸ್ಸಿನಲ್ಲಿಯೂ ಯಾವುದೇ ಕೌಶಲವನ್ನು ಕಲಿಯಬಹುದು. ಹೊಸತನ್ನು ಕಲಿಯುವುದು ಕೂಡ ನಮಗೆ ನಾವು ಕೊಟ್ಟುಕೊಳ್ಳುವ ವಿಶೇಷ ಉಡುಗೊರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.