ತಲೆ ಮೇಲೆ ಗಿರಗಿಟ್ಲೆಯಂತೆ ಹೆಲಿಕಾಪ್ಟರ್ ಫ್ಯಾನು ತಿರುಗುತ್ತಿತ್ತು. ನೋಡನೋಡುತ್ತಲೇ ವಿಜಯಪುರದ ನೆತ್ತಿಯ ಮೇಲೆ ಹಾರುತ್ತಿದ್ದೆವು. ಆ ಪೈಲಟ್‌ಗೆ ನಾನು ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವರು ಸಮಾಧಾನದಿಂದ ಉತ್ತರಿಸುತ್ತಲೇ ನಮ್ಮ ಯಾನ ಮುಗಿಸಿದ್ದರು. ನವರಸಪುರ ಉತ್ಸವದಲ್ಲಿ ಕೈಗೊಂಡ ಈ ಹೆಲಿಕಾಪ್ಟರ್ ಯಾನ ನನ್ನಲ್ಲಿ ಕನಸನ್ನು ಬಿತ್ತುತ್ತ ಹೋಗಿತ್ತು. ಮೇಲೆ ಹೋದಂತೆಲ್ಲ, ಆಳವಾಗಿ ಮನದೊಳಗೆ ಹಾರುವ ಕನಸು ಬೇರೂರತೊಡಗಿತ್ತು.
ಅದಾದ ಏಳು ವರ್ಷಗಳ ನಂತರ ನಾನು ವಿಮಾನದಲ್ಲಿ ಹತ್ತಿದ್ದೆ; ತರಬೇತಿಗಾಗಿ. ಮೊದಲ ಸಲ ಹತ್ತಿ ಇಳಿಯುವವರೆಗೂ ನಾನು ಮುಗುಳ್ನಗುತ್ತಲೇ ಇದ್ದೆ. ಜೊತೆಗಿದ್ದ ಪೈಲಟ್ ಕಲ್ಪನಾ ಅವರು ಕೇಳಿದರು, ‘ಮಜಾ ಆ ರಹಾ ಹೈ’. ನಾನು ನಗುತ್ತಲೇ ಹೇಳಿದೆ ‘ಹೌದು, ಬಹುತ್’ ಅಂತ. ಮತ್ತೆ ಭೂ ಸ್ಪರ್ಶ ಮಾಡುವವರೆಗೂ ನಗುತ್ತಲೇ ಇದ್ದೆ.
‘ನಗುಮೂಡಿಸಿದೆ ಈ ಬಾನಂಗಳ, ಭುವಿಯ ಸ್ಪರ್ಶಿಸುವವರೆಗೂ, ನನ್ನೊಳಗಿನ ಭಾವ, ಭಾವಲಹರಿಯ ಹೇಳುವುದೇನು, ಗಾಳಿ ಸೀಳಿ, ಬಾನ ಏರಿ ಕಿಟಕಿಯಿಂದಿಣುಕಿದೆ.. ಓಹ್.. ದೇವರೆ, ನಾನು ಭೂಮಿಗೆದುರಾಗಿ ಇಳಿಯುತ್ತಲಿರುವೆ, ಕಾಕ್‌ಪಿಟ್‌ನಲ್ಲಿ ಅದೆಷ್ಟು ಸುರಕ್ಷಿತ, ನಾನಿಲ್ಲಿಗೇ ಸೇರಿದವಳು’ ಎಂಬರ್ಥದ ಕವಿತೆಯೊಂದು ನನ್ನೊಳು ಮೂಡಿತು.
ಮೊದಲ ಹಾರಾಟದಲ್ಲಿ ನಮ್ಮ ದೇಹ ಹೇಗೆ ಸ್ಪಂದಿಸುತ್ತದೆ, ಮಾನಸಿಕವಾಗಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನೋಡುತ್ತಾರೆ. ನಾನು ಇಡೀ ಹಾರಾಟ ಮುಗಿಯುವವರೆಗೂ ಶಾಂತಚಿತ್ತಳಾಗಿದ್ದೆ. ತಲೆ ಸುತ್ತು, ವಾಂತಿ ಅಂಥದ್ದೇನೂ ಆಗಲಿಲ್ಲ. ನಾನು ಹುಟ್ಟಿರುವುದೇ ಹಾರಾಡಲು ಅಂತ ಆವತ್ತೇ ಖಾತ್ರಿ ಆಯಿತು.
ವಿಜಯಪುರದ ಯುವತಿಯೊಬ್ಬಳು, ಪಿಯುಸಿ ಮುಗಿಸಿ ಪದವಿ ಓದಬಹುದಾಗಿತ್ತು. ಆದರೆ ನನ್ನ ಕನಸಿಗೆ ನೀರೆರೆಯಲು ನನ್ನಮ್ಮ ನನ್ನ ಹಿಂದೆ ನಿಂತಿದ್ದರು. ಅಪ್ಪಾಜಿ ಶುಲ್ಕ ಭರಿಸಲು ತಯಾರಾಗಿದ್ದರು. ಪಿಯುಸಿ ಮುಗಿದ ತಕ್ಷಣ ಕಾರ್ವರ್ ಏವಿಯಷನ್ಸ್ ಕೇಂದ್ರಕ್ಕೆ ಸೇರಿಕೊಂಡೆ. ನನಗಾಗ ಹದಿನೇಳು ವರ್ಷ. ಕಠಿಣ ತರಬೇತಿ ಅದು. ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಿತ್ತು. ಬೆಳಗಿನ ಜಾವ, ಸಂಜೆಯ ನಂತರ ಹಾರಾಟದ ಕ್ಲಾಸುಗಳಿದ್ದರೆ, ಇಡೀ ದಿನ ಥಿಯರಿಗಳಾಗುತ್ತಿದ್ದವು. ಹೈರಾಣಾಗದಂತೆ ಇರಬೇಕಿತ್ತು. ಹೊಸ ಉತ್ಸಾಹ ಮತ್ತು ವಿಶ್ವಾಸದಿಂದ ದಿನವಿಡೀ ತರಬೇತಿಯಲ್ಲಿ ಪಾಲ್ಗೊಳ್ಳಬೇಕಿತ್ತು.
ಆಸಕ್ತಿ ಒಂದಿದ್ದರೆ ಎಲ್ಲವೂ ಸರಳವಾಗುತ್ತದೆ. ಕಾಕ್‌ಪಿಟ್‌ನಲ್ಲಿ ಕುಳಿತ ತಕ್ಷಣ ಗಾಳಿಸೀಳುವ ಶಕ್ತಿ ಅದೆಲ್ಲಿಂದ ಬರುತ್ತಿತ್ತೋ ಗೊತ್ತಿಲ್ಲ. ನಮ್ಮಮ್ಮ ಅಪ್ಪಾಜಿ ಇಬ್ಬರೂ ಪ್ರಗತಿಪರರು. ಯಾವತ್ತೂ ನನ್ನ ಆಸೆಯನ್ನು ಕಡೆಗಣಿಸಲಿಲ್ಲ. ಅವರ ಮಹತ್ವಾಕಾಂಕ್ಷೆ ನನ್ನ ಬಲವಾಗಿ ಬದಲಾಗುತ್ತಿತ್ತು. ಒಮ್ಮೆ ಏರ್‌ಪೋರ್ಟ್‌ನ ಲಾಂಜ್‌ನಲ್ಲಿ ನನ್ನಮ್ಮ ಕಾಯುತ್ತಿದ್ದರು. ಆಗ ಪೈಲಟ್ ಮತ್ತು ವಿಮಾನಯಾನ ಸಿಬ್ಬಂದಿ ನಡೆದು ಬರುವಾಗ ಎಲ್ಲರೂ ಅವರಿಗೆ ಗೌರವ ನೀಡುವುದು ನೋಡಿದರು. ಅದಾಗಲೇ ಅವರೂ ನಿರ್ಧರಿಸಿ ಆಗಿತ್ತು. ಅವರ ಮಡಿಲ ಮಗು ಸಮೈರಾ ಗಗನದಲ್ಲಿ ಹಾರಾಡಬೇಕು ಎಂದು.
ಪ್ರತಿಸಲ ತರಬೇತಿ ಹಾರಾಟದಲ್ಲಿ ಪಾಲ್ಗೊಂಡಾಗಲೂ ಕಾಕ್‌ಪಿಟ್‌ನಲ್ಲಿ ಕುಳಿತ ಗಳಿಗೆಯಿಂದಲೇ ವಿಮಾನವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತಿತ್ತು. ಯಾವ ಸಂಕೇತ ಏನು ಹೇಳುತ್ತದೆ? ಜೊತೆಗಿರುವವರಿಗೆ ಸಂಕೇತ ಭಾಷೆಯಲ್ಲಿ ಏನು ಹೇಳಬೇಕು? ಹೇಗೆ ಹೇಳಬೇಕು? ಇವೆಲ್ಲವನ್ನೂ ಕಲಿಯುತ್ತಿದ್ದೆ. ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆಯಲು ಒಟ್ಟು ಆರು ಪತ್ರಿಕೆಗಳನ್ನು ಪಾಸು ಮಾಡಬೇಕು. ಮೊದಲ ವರ್ಷವೇ ಐದು ಪತ್ರಿಕೆಗಳನ್ನು ಪಾಸು ಮಾಡಿದೆ. ಇನ್ನೊಂದು ಟೆಕ್ನಿಕಲ್ ಪತ್ರಿಕೆ ಬರೆಯಲು ಹದಿನೆಂಟು ವರ್ಷ ಪೂರೈಸಿರಬೇಕು. ಹದಿನೆಂಟು ವರ್ಷದವಳಾದ ಕೂಡಲೇ ಆ ಪತ್ರಿಕೆಯನ್ನೂ ಪಾಸು ಮಾಡಿದೆ. ಹದಿನೆಂಟು ಮುಗಿಯುವುದರೊಳಗೆ ಕಮರ್ಷಿಯಲ್ ಪೈಲಟ್ ಪರವಾನಗಿ ಕೈಗೆ ಸಿಕ್ಕಿತು. 200 ಗಂಟೆಗಳ ಹಾರಾಟದ ಅನುಭವ. ಆರು ಪತ್ರಿಕೆಗಳನ್ನೂ ಮೊದಲ ಪ್ರಯತ್ನದಲ್ಲಿಯೇ ಮುಗಿಸಿ ಯಶಸ್ಸು ಪಡೆದೆ.
ನನ್ನ ಯಶಸ್ಸಿನ ಹಿಂದೆ ಏವಿಯೇಷನ್ ತರಬೇತಿ ಕೇಂದ್ರಗಳ ಪರಿಶ್ರಮ ಇದೆ. ಅವರು ನಿರಂತರವಾಗಿ ನಮ್ಮನ್ನು ಹುರಿದುಂಬಿಸುತ್ತಿದ್ದರು. ಯಾವುದೂ ಕ್ಲಿಷ್ಟವೆನಿಸದಂತೆ ಕಲಿಸುತ್ತಿದ್ದರು. ಅತ್ಯಂತ ಕಿರಿಯ ಕ್ಯಾಪ್ಟನ್‌ಗಳಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ತಪೇಶ್ ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ನನಗೆ ಹಾರಾಟದ ತರಬೇತಿ ನೀಡುತ್ತಿದ್ದ ಕ್ಯಾಪ್ಟನ್ ಮೋನಿಕಾ ಚೌಧರಿ, ಕ್ಯಾಪ್ಟನ್ ಮಾಧವ್ ಸಿಂಗ್ ಅವರ ಪಾತ್ರವೂ ಮಹತ್ತರದ್ದಾಗಿದೆ. ಯಾವ ಕ್ಷಣದಲ್ಲಿಯೂ ನಮ್ಮ ಸಮಚಿತ್ತವನ್ನು ಕಾಪಿಡಲು ಹಲವಾರು ಸೂತ್ರಗಳನ್ನು ಅವರು ಹೇಳಿಕೊಟ್ಟರು. ಅಪ್ಪ ಅಮ್ಮನ ಒತ್ತಾಸೆ, ಅಜ್ಜ ಅಜ್ಜಿಯ ಪ್ರೋತ್ಸಾಹದ ಜೊತೆಗೆ ತರಬೇತಿ ಕೇಂದ್ರದ ಸಿಬ್ಬಂದಿ ಮತ್ತು ನಮ್ಮ ಮೆಂಟರ್ ಆಗಿದ್ದವರೆಲ್ಲರ ಉತ್ಸಾಹ ನನ್ನನ್ನು ಬಾನಿನಂಗಳದಲ್ಲಿ ರೆಕ್ಕೆ ಬಿಚ್ಚುವಂತೆ ಮಾಡಿತು.
ನನ್ನಮ್ಮನನ್ನು ಮೊದಮೊದಲು ಎಲ್ಲರೂ ದೂರುವವರೇ ಆಗಿದ್ದರು. ಇದ್ದೊಬ್ಬ ಮಗಳನ್ನು ದೆಹಲಿಗೆ ಕಳುಹಿಸುವ ಧೈರ್ಯವಾದರೂ ಹೇಗೆ ಬಂತು? ಇಲ್ಲೇ ಓದಿಸಬಾರದೆ? ಜಾಣೆ ಅವಳು. ಎಂಜಿನಿಯರಿಂಗ್ ಇಲ್ಲವೇ ಎಂಬಿಬಿಎಸ್ ಮಾಡಿಕೊಳ್ಳುತ್ತಿದ್ದಳು ಎಂದೆಲ್ಲ ಹೇಳುತ್ತಿದ್ದರು.
ನನ್ನ ಕನಸನ್ನು ಅಪ್ಪ ಅಮ್ಮ ನನಸಾಗಿಸಿದರು. ಇನ್ಮುಂದಿನ ಕೋರ್ಸಿಗೆ ತಯಾರಿ ನಡೆಸಿರುವೆ. ಹಾಗೆಯೇ ಈ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿವೆ. ಆಯ್ಕೆ ನನ್ನ ಕೈಯಲ್ಲಿಯೇ ಇದೆ. ಹಾರಾಡುವಾಗಲೆಲ್ಲ ಒಂದೇ ಹಾಡು ಗುನುಗುತ್ತೇನೆ. ‘ಮೇರಿ ಹೀರ್ ಆಸ್ಮಾನಿ’ ಅಂತ (ಈ ಬಾನಂಗಳವೇ ನನ್ನ ಹೀರ್, ನನ್ನ ಪ್ರೇಯಸಿ)
ಸಮೈರಾ 9ನೇ ತರಗತಿಯಲ್ಲಿದ್ದಾಗಲೇ ಅವಳ ಕನಸು ಏನೆಂದು ಗೊತ್ತಾಗಿತ್ತು. ಪಿಯುಸಿ ಮುಗಿದ ನಂತರ ಭಾರತದಲ್ಲಿ ಎಲ್ಲೆಲ್ಲಿ ಹಾರಾಟದ ತರಬೇತಿ ಕೇಂದ್ರಗಳಿವೆ ಎಂದು ಹುಡುಕಿದ್ದೆ. ಅವಳು ಏನೇ ಓದಿದರೂ ಜೀವನದ ಕಾಲು ಭಾಗ ಅದರಲ್ಲಿಯೇ ಕಳೆಯಬೇಕಿತ್ತು. 25 ವರ್ಷಗಳವರೆಗೂ ಓದಿನಲ್ಲಿಯೇ ಬದುಕು ಕಳೆದುಹೋಗುತ್ತದೆ. ನಂತರ ಮದುವೆ, ಮಕ್ಕಳು ಇದ್ದಿದ್ದೇ. ಅವಳ ಆಸಕ್ತಿ, ಅವಳ ಕುತೂಹಲ, ಅವಳ ಪ್ರೀತಿಯ ಈ ಹಾರಾಟವನ್ನು ಕಲಿಯುವುದು ಯಾವಾಗ? ಮುಂದುವರಿಯುವುದು ಯಾವಾಗ? ಎಂಬ ಎಲ್ಲ ಪ್ರಶ್ನೆಗಳಿಗೂ ಅವಳ ಪ್ರೀತಿಯೇ ಅವಳ ವೃತ್ತಿಯಾಗಲಿ ಎಂದೆನಿಸಿತು.
ಬೇರೆ ಕೋರ್ಸುಗಳಿಗೆ ಸೇರಿಸಿದರೂ ಇಷ್ಟೇ ಖರ್ಚು. ಮತ್ತೆ ಕೋರ್ಸು ಮುಗಿಸಿ, ವೃತ್ತಿಯಲ್ಲಿ ನೆಲೆಗಾಣಬೇಕಾದರೆ ಮಧ್ಯವಯಸ್ಸು ತಲುಪುತ್ತಾರೆ. ಈ ಮಧ್ಯೆ ಅವರು ಸ್ವಪ್ರೀತಿಯನ್ನೇ ಮರೆತುಬಿಡುತ್ತಾರೆ. ನಮ್ಮೆಲ್ಲರ ಬದುಕಿನಲ್ಲಿ ನಮಗಾಗಿ ತುಸು ಸಮಯಬೇಕು ಎಂದೆನಿಸುವಾಗಲೇ ಜವಾಬ್ದಾರಿಗಳನ್ನು ಹಾಸಿ ಹೊದ್ದಿರುತ್ತೇವೆ. ಹೆಣ್ಣುಮಕ್ಕಳಲ್ಲಿ ಕನಸುಗಳನ್ನು ಬಿತ್ತುವ ನಾವೇ ಹೊಂದಾಣಿಕೆಯನ್ನು ಕಲಿಸಿಕೊಡಬೇಕೆ ಎಂಬ ಪ್ರಶ್ನೆ ನನ್ನನ್ನು ಇರಿಯಿತು.
ಮನೆಯಲ್ಲಿ ಎಲ್ಲರ ಮನವೊಲಿಸಿದೆ. ನನ್ನತ್ತೆ ಮಾವನವರಂತೂ ಈ ಕೋರ್ಸು, ವೃತ್ತಿ ಅವಕಾಶ ಇವೆರಡೂ ನಮಗೇನೂ ಗೊತ್ತಿಲ್ಲ, ಆದರೆ ನಿನ್ನ ಮೇಲೆ ವಿಶ್ವಾಸವಿದೆ. ನಿನ್ನ ನಂಬಿಕೆಯ ಮೇಲೆ ವಿಶ್ವಾಸವಿದೆ. ಎಲ್ಲರೂ ಮಾಡುವುದು ಮಕ್ಕಳಿಗಾಗಿಯೇ ಎಂದು ಒಪ್ಪಿದಾಗ, ಮಗುವನ್ನು ದೂರದ ದೆಹಲಿಗೆ ಬಿಟ್ಟು ಬಂದೆವು. ಬಂಧುಗಳೆಲ್ಲರನ್ನು ಮುಗುಳ್ನಗುತ್ತಲೇ ಎದುರಿಸಿದೆ. ಕೆಲವರು ಅನುಮಾನಿಸಿದರು. ಸಮೈರಾಗೆ ಆ ಕೋರ್ಸ್ ಮುಗಿಸಲು ಸಾಧ್ಯವೇ ಎಂದು ಕೊಂಕು ನುಡಿಯುತ್ತಿದ್ದರು. ಈ ವರ್ಷ ಅವರೇ ಸಮೈರಾ ಜೊತೆಗೆ ಸೆಲ್ಫಿ ತೆಗೆದುಕೊಂಡು ಹಂಚಿದರು. ಸಿಹಿಯುಣಿಸಲು ಬಂದರು.
‘ಈ ಯಶಸ್ಸಿನ ಖುಷಿಯನ್ನು ಅನುಭವಿಸಿ, ಬೇಗನೆ ಮರೆತುಬಿಡು. ಮುಂದಿನ ಸಾಧನೆಗೆ ಸಜ್ಜಾಗು’ ಎಂದು ಸಮೈರಾಗೆ ಹೇಳಿರುವೆ. ನಮ್ಮ ಮಕ್ಕಳಿಗೆ ಕಲಿಸಬೇಕಿರುವುದು ಬೇಗ ಸ್ವಾವಲಂಬಿಗಳಾವುದನ್ನು. ಸ್ವಪ್ರೀತಿ ಮತ್ತು ಸ್ವಕಾಳಜಿಗೂ ಮಹತ್ವ ನೀಡಬೇಕು. ಅವೆಲ್ಲವೂ ಈ ವೃತ್ತಿಯಲ್ಲಿ ಸಮೈರಾಗೆ ಸಿಕ್ಕೇಸಿಗುತ್ತವೆ ಎನ್ನುವ ಭರವಸೆ ಇದೆ.
ನಿರೂಪಣೆ: ರಶ್ಮಿ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.