ADVERTISEMENT

ಸಾಧಕಿಯರ ಗುರುತಿಸಿ, ಸತ್ಕರಿಸಿದ ಪತ್ರಿಕೆಯ ಕಾರ್ಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 23:45 IST
Last Updated 16 ಮಾರ್ಚ್ 2024, 23:45 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ನಂಬಿಕೆಗೆ ಅರ್ಹವಾದ ಪತ್ರಿಕೆ ‘ಪ್ರಜಾವಾಣಿ’: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಒಂದು ದಿನಪತ್ರಿಕೆ 75 ವರ್ಷದ ಪಯಣ ಯಶಸ್ವಿಯಾಗಿ ಪೂರ್ಣಗೊಳಿಸುವುದು ಸುಲಭದ ಮಾತಲ್ಲ. ಇಷ್ಟು ಸುದೀರ್ಘ ಕಾಲದಿಂದ ಪತ್ರಿಕೆ ಯಶಸ್ವಿಯಾಗಿ ಮುನ್ನಡೆದಿದೆ ಎಂದರೆ ಅದಕ್ಕೆ ಓದುಗರ ನಂಬಿಕೆ ಮತ್ತು ವಿಶ್ವಾಸವೇ ಕಾರಣ. ಪ್ರಜಾವಾಣಿ ನಂಬಿಕೆಗೆ ಅರ್ಹವಾದ ದಿನಪತ್ರಿಕೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶ್ಲಾಘಿಸಿದರು.

‘ರಾಜಕಾರಣದಲ್ಲಿ ನಾವು ಪ್ರತಿನಿಧಿಸುವ ಪಕ್ಷಗಳು ಬೇರೆ ಬೇರೆಯಾಗಿದ್ದರೂ ಸಮಾಜಸೇವೆ ಮುಖ್ಯ. ತುಳಿತಕ್ಕೆ ಒಳಗಾದವರಿಗೆ ನ್ಯಾಯ ನೀಡಬೇಕು ಎಂಬುದೇ ನಮ್ಮ ಆಶಯ. ನಾವು ಭ್ರೂಣದಲ್ಲಿದ್ದಾಗಲೇ ಹೋರಾಟ ಆರಂಭವಾಗುತ್ತದೆ. ಮಹಿಳೆಗೆ ಧೈರ್ಯ ಹೆಚ್ಚು. ನಾವು ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಅಗತ್ಯ ಮತ್ತು ಅನಿವಾರ್ಯ’ ಎಂದು ಅವರು ತಿಳಿಸಿದರು.

‘ನಾವು ಅಧಿಕಾರ ಸಿಕ್ಕಾಗ ಹಿಗ್ಗಬಾರದು. ಜನರ ಬವಣೆ ಅರ್ಥ ಮಾಡಿಕೊಳ್ಳಬೇಕು. ಒಬ್ಬ ಮಹಿಳೆ ಬೆಳಿಗ್ಗೆ ದೈನಂದಿನ ಕೆಲಸ ಮಾಡಿ, ನರೇಗಾ ಕೆಲಸಕ್ಕೆ ಹೋಗುತ್ತಾಳೆ. ಮನೆ ಮತ್ತು ಹೊರಗಿನ ಕೆಲಸದ ಜೊತೆ ಜವಾಬ್ದಾರಿ ಸಹ ನಿಭಾಯಿಸುತ್ತಾಳೆ.ನಾನು ಸಹ ಕಷ್ಟದ ಹಾದಿಯಲ್ಲೇ ಬೆಳೆದು ಬಂದವಳು. ಹೀಗಾಗಿ ಬಿಡುವಿದ್ದಾಗ, ನರೇಗಾ ಯೋಜನೆಯಡಿ ನಡೆಯುವ ಕಾಮಗಾರಿ ಸ್ಥಳಕ್ಕೆ ಹೋಗಿ ಕಾರ್ಮಿಕರ ಸಂಕಷ್ಟ ಆಲಿಸುತ್ತೇನೆ. ಅವಮಾನ, ಸನ್ಮಾನಗಳನ್ನೆಲ್ಲ ಎದುರಿಸುತ್ತ, 26 ವರ್ಷ ಶ್ರಮಿಸಿ ಈಗ ಸಚಿವೆಯಾಗಿದ್ದೇನೆ’ ಎಂದು ಅವರು ತಿಳಿಸಿದರು.

ADVERTISEMENT

‘ಸಮಾಜದಲ್ಲಿ ಸಾಧನೆ ಮಾಡಿದ, ಎಲೆಮರೆ ಕಾಯಿಗಳಂತೆ ಕೆಲಸ ಮಾಡುತ್ತಿರುವ ಮಹಿಳೆಯರನ್ನು ‘ಪ್ರಜಾವಾಣಿ ಸಾಧಕಿಯರು’ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂಬ ಕೋರಿಕೆ ಬಂದಾಗ, ಯಾರಿಗೂ ಕಾಣದ ಮತ್ತು ಉಳಿದವರಿಗೆ ಸ್ಪೂರ್ತಿ ನೀಡುವಂತಹ ಮಹಿಳೆಯರನ್ನು ಆಯ್ಕೆ ಮಾಡುವುದು ನಮ್ಮ ಧ್ಯೇಯವಾಗಿತ್ತು. ಈ ಕೆಲಸವನ್ನು ನಾವು ಯಾವುದೇ ಅಡಚಣೆ ಇಲ್ಲದೇ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಸಾಧಕಿಯರನ್ನು ಗುರುತಿಸಿ, ಪ್ರೋತ್ಸಾಯಿಸಿದ್ದು ಶ್ಲಾಘನೀಯ: ಚೆಲ್ಲೂರ್‌

ಮಂಜುಳಾ ಚೆಲ್ಲೂರ್‌

‘ನ್ಯಾಯ ಎಂಬ ಪದ ನ್ಯಾಯಾಲಯಕ್ಕೆ ಸೀಮಿತವಾಗಿಲ್ಲ. ಸಮಾಜದ ಪ್ರತಿ ಕಾರ್ಯ, ಚಟುವಟಿಕೆಯಲ್ಲೂ ನ್ಯಾಯ ಇರುವಂತೆ ನೋಡಿಕೊಳ್ಳಬೇಕು. ನ್ಯಾಯವಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನೂ ಗೌರವಿಸಿ, ಪ್ರೋತ್ಸಾಹಿಸುವುದು ಸಹ ನ್ಯಾಯ. ಇಂತಹ ದೊಡ್ಡ ನ್ಯಾಯಯುತ ಕಾರ್ಯವನ್ನು ‘ಪ್ರಜಾವಾಣಿ’ ಪತ್ರಿಕೆ ಮಾಡಿದ್ದು ಶ್ಲಾಘನೀಯ’ ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಹೇಳಿದರು.

‘ನಾವು ಪುರುಷರ ಜೊತೆ ಸಮಾನಂತರವಾಗಿ ಹೋರಾಟ ಮಾಡಬೇಕು. ಅವರಂತೆಯೇ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಹುಮ್ಮಸ್ಸು ನಮ್ಮಲ್ಲಿ ಇರುತ್ತದೆ. ಆದರೆ, ನಾವು ಹೆಣ್ಣು ಎನ್ನುವುದನ್ನು ಮರೆಯುತ್ತೇವೆ. ನಾವು ಯಾವಾಗಲೂ ಇತರರಿಗೆ ಮಾದರಿಯಾಗಬೇಕು. ಮಹಿಳೆಯರ ಸ್ಥಾನಕ್ಕೆ ಬೆಲೆ ಕಟ್ಟಲಾಗದು. ಸಮಾಜಕ್ಕೆ ಶಕ್ತಿ ನೀಡಿ, ದಾರಿ ತೋರಬೇಕು. ಉನ್ನತ ದಾರಿಯಲ್ಲಿ ನಡೆದು ಉನ್ನತ ಸಮಾಜ ಕಟ್ಟಬೇಕು. ಆಗ ದೇಶವೇ ಚಂದ ಕಾಣುತ್ತದೆ’ ಎಂದು ಹೇಳಿದರು.

ಮಹಿಳೆಯ ಸಾಧನೆಗೆ ಮಿತಿ ಇಲ್ಲ: ತಾರಾ ಅನೂರಾಧಾ

ತಾರಾ ಅನುರಾಧಾ

ಮಹಿಳೆಯಾಗಿ ಹುಟ್ಟುವುದೇ ದೊಡ್ಡ ಸಾಧನೆ. ಹಲವು ಸಂಕಷ್ಟ, ಸವಾಲು, ಏರುಪೇರುಗಳ ನಡುವೆ ಎಲ್ಲವನ್ನೂ ನಿಭಾಯಿಸುತ್ತ ಬದುಕು ಕಟ್ಟಿಕೊಳ್ಳಬೇಕು. ಹಲವು ಹಂತಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಸಾಧನೆ ಮಾಡುತ್ತ ಮಹಿಳೆ ಬದುಕು ಕಟ್ಟಿಕೊಳ್ಳುತ್ತಾಳೆ ಎಂಬುದೇ ಹೆಮ್ಮೆಯ ವಿಷಯ’ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ತಾರಾ ಅನೂರಾಧಾ ಹೇಳಿದರು.

‘ನಾಡಿನ ವಿವಿಧೆಡೆ ಇರುವ ಸಾಧಕಿಯರನ್ನು ಗುರುತಿಸುವುದು ಸವಾಲಿನಿಂದ ಕೂಡಿತ್ತು. ಅಷ್ಟೇ ಖುಷಿಯು ನೀಡಿತು. ಸಾಧಕಿಯರ ಬದುಕು, ಅವರ ಜೀವನಮೌಲ್ಯ ನಮಗೆ ಪ್ರೇರಣೆ ನೀಡಿದೆ. ಯಾವುದೇ ಪ್ರತಿಫಾಪೇಕ್ಷೆ ಬಯಸದೇ ಶ್ರಮಿಸುತ್ತಿರುವ ವಿವಿಧ ಸ್ತರಗಳ ಮಹಿಳೆಯರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಅವರು ತಿಳಿಸಿದರು.

‘ಪ್ರಜಾವಾಣಿ’ ಪತ್ರಿಕೆಯು ಕುಟುಂಬದ ಸದಸ್ಯವಾಗಿದೆ. ಪತ್ರಿಕೆಯು ತಾತನ ಕಾಲದಿಂದಲೂ ಓದುತ್ತಿರುವೆ. ತಾಯಿಗಿಂತ ಸಾಧಕಿಯರಿಲ್ಲ. ಮಹಿಳೆಯ ಸಾಧನೆಗೆ ಯಾವುದೇ ಮಿತಿ ಎಂಬುದು ಇಲ್ಲ. ಯಾರು ಸ್ತ್ರೀಯನ್ನು ನೆನಪಿಸಿಕೊಳ್ಳುತ್ತಾರೋ, ಅಲ್ಲಿ ತಾಯಿ ನೆಲೆಸಿರುತ್ತಾರೆ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ. ಈ ಕಾರ್ಯಕ್ರಮ ಸದಾ ಮುಂದುವರಿಯಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.