
'ಸೀರೆ' ದಕ್ಷಿಣ ಏಷ್ಯಾದ, ವಿಶೇಷವಾಗಿ ಭಾರತದ ಪ್ರಮುಖ ಸಾಂಪ್ರದಾಯಿಕ ಉಡುಪು. ಎಷ್ಟೇ ಫ್ಯಾಶನ್, ಟ್ರೆಂಡಿ ಉಡುಗೆಗಳು ಬಂದರೂ ಇದು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಇದು (ಸೀರೆ) ಫ್ಯಾಷನ್‌ಗೂ ಮೀರಿ ಸಾಂಸ್ಕೃತಿಕ ಹೆಮ್ಮೆಯನ್ನು ಪ್ರತಿನಿಧಿಸುವ ಒಂದು ಉಡುಪಾಗಿದೆ. ಇದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತಿವರ್ಷ ಡಿ.21ರಂದು 'ವಿಶ್ವ ಸೀರೆ' ದಿನವನ್ನಾಗಿ ಆಚರಿಸಲಾಗುತ್ತದೆ.
ಸೀರೆಗಳ ಮಹತ್ವ ತಿಳಿಸಲು ಮತ್ತು ನೇಕಾರ ಸಮುದಾಯವನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ.
ಸಾಮಾಜಿಕ ಕಾರ್ಯಕರ್ತರಾದ ಸಿಂಧೂರ ಕವಿತಿ ಮತ್ತು ನಿಸ್ತುಲಾ ಹೆಬ್ಬಾರ್ ಅವರು ಸೀರೆಗಳ ಸಂಕೀರ್ಣ ಕರಕುಶಲತೆ ಮತ್ತು ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಸಲುವಾಗಿ 2020ರಲ್ಲಿ ಈ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಈ ಉಪಕ್ರಮ ಸಾಮಾಜಿಕ ಮಾಧ್ಯಮ ಮತ್ತು ಫ್ಯಾಷನ್ ಸಮುದಾಯದ ಗಮನ ಸೆಳೆಯಿತು.
ವಿಶ್ವ ಸೀರೆ ದಿನದ ಮಹತ್ವ
ಸಾಂಸ್ಕೃತಿಕ ಪರಂಪರೆಗೆ ಗೌರವ: ಸೀರೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತ. ದೇಶದ ಸಂಪ್ರದಾಯ, ಸೊಬಗು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಲು ಈ ದಿನ ಒಂದು ಅವಕಾಶವನ್ನು ಒದಗಿಸುತ್ತದೆ.
ಕೈಮಗ್ಗಗಳನ್ನು ಉತ್ತೇಜಿಸುವುದು: ದೇಶದ ಜವಳಿ ಉದ್ಯಮದ ಅವಿಭಾಜ್ಯ ಅಂಗವಾದ ಕೈಮಗ್ಗ ನೇಯ್ಗೆಯ ಕಲೆಯನ್ನು ಉತ್ತೇಜಿಸುವುದು ಮತ್ತು ಸಂರಕ್ಷಿಸುವುದು ವಿಶ್ವ ಸೀರೆ ದಿನದ ಪ್ರಮುಖ ಉದ್ದೇಶ.
ನೇಕಾರ/ ಕುಶಲ ಕರ್ಮಿಗಳನ್ನು ಗೌರವಿಸುವುದು: ಈ ದಿನ ಪ್ರತಿ ಸೀರೆಯ ತಯಾರಿಕೆಯ ಹಿಂದಿರುವ ನೇಕಾರರು ಮತ್ತು ಕುಶಲಕರ್ಮಿಗಳ ಪ್ರಯತ್ನವನ್ನು ಗೌರವಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.